Jan 26, 2011

"ಚರಿತ್ರೆ"

ಗುರಿ ಮುಟ್ಟಲು ಘರ್ಜಿಸುತ್ತ ಬೆಳಕಿನಂತೆ ಸಾಗುತ್ತಿದ್ದ ನನ್ನ, ನೇರವಾಗಿ ನೋಡದೆ
ಮುಂಗುರುಳ ತೆರೆಯ ಓರೆನೋಟಕೆ ಮೊರೆಹೋದೆ ನೀನು.
ಸಂಚಿಗೆ ನನ್ನ ಗುರಿ ಬಲಿಯಾಯಿತು
ಬೂದಿ ಬಳಿದ ನಿಗಿ ನಿಗಿ ಕೆಂಡ ತಣ್ಣಗಾಯಿತು - ಕಣ್ಣ ಸೆರೆಯಲ್ಲಿ.

ಕೇಕೆ ಹಾಕುತ ತಕಥೈ ತಕಥೈ ಎಂದಾಡಿತ್ತು
ಗೆಲುವಿನ ನಗೆ ಬೀರಿತ್ತು ಮತ್ತದೇ ಓರೆನೋಟ
ಉಳಿಯಿತು ಮುಟ್ಟದ ಗುರಿಯ ನರಳುವ ನೆರಳು -
ಕಾಮಪ್ರಜ್ಞೆಯ ಪಲಾನುಭವಿಯಲ್ಲಿ.

ಗುರಿ ಸಾಧನೆಗೆ ಘರ್ಜಿಸಿ ಮತ್ತೆ ಹೆಜ್ಜೆ ಇಟ್ಟೊಡನೆ
ಧಿಗ್ಗನೆದ್ದು ನಿಲ್ಲುವ - ಬಾಡಿದ ಹೂ,
ಅವಸರಕೆ ಹಾಸುವವರಾರೆಂದು ಮಡಿಚಲು ಮನಸಾಗದೆ ಬಿಟ್ಟ ಹಾಸಿಗೆ,
ಆಮ್ಲಜನಕ ಸುಳಿಯದಂತೆ ಒತ್ತಿಸಿಕೊಂಡ ತುಟಿ
ಇತ್ಯಾದಿ ಇತ್ಯಾದಿಗಳೇ ಪಿಂಡಾರಿ.

ಸಾಕು ಸರಿಸು ಮುಂಗುರುಳ ತೆರೆಯ,
ಒರೆನೋಟದ ಕರೆಯಾ
ಮತ್ತೆ ಮತ್ತೆ ಕೆಣಕದಿರು, ಎಲ್ಲವನು ಮರೆತು ನಿನ್ನಲ್ಲಿಗೆ
ಸ್ಥಳಾಂತರಿಸುವ ಹಾರ್ಗುದುರೆ - ಮೋಹ

ಚಿತ್ತ ಕಲಕದಂತೆ ಸ್ವಲ್ಪ ಮರೆಯಾಗು
ಇಲ್ಲವೇ ಸಿಂಹ ಘರ್ಜನೆಗೆ ಜೊತೆಯಾಗು
ಪ್ರೋತ್ಸಾಹದ ಕಡಲಾಗು - ಮೋಹಿಸದಿರು ಗುರಿ ಮುಟ್ಟುವವರೆಗೂ.

ಗುರಿಘರ್ಭದೊಳಗೆ ಘಮ ಘಮಿಸುವ ಸುಮವರಳಿ ನಿಂತಿದೆ
ತಂದು ಮೂಡಿಸುವೆ ಸಜ್ಜಾಗು
ಗುರಿಪಥದಿ ಹೆಜ್ಜೆಯಿಡುವ ಮುನ್ನ
ಕಡೆಯದಾಗಿ ಕೇಳುತಿರುವೆ : ಸತ್ಯ ಹೇಳು
ನನ್ನೋಳಗೆಕೆ ಇಳಿದೆ ಮಾಯೆ ?
ಹುಟ್ಟಲಿರುವ ಶಾಕುಂತಲೆಯ ತಾಯೆ.

=====
=====

Jan 6, 2011

ಒಂಬತ್ತು ದಿನದಲ್ಲಿ ಒಂಬತ್ತು ತಿಂಗಳ ಕತೆ...!
ಅವ್ವಾರ್ ಆರಾಮ್ರಿ..? ಹೀ ಅಂತ ನಕ್ಕು, ಸುರ್ರ್ ಅಂತ ಕೊನೆ ಗುಟುಕು ಚಹಾ ಕುಡಿದ ಮಾಮ.
ಅವನ ಹೆಸರು ತುಂಬಾ ಜನಕ್ಕೆಗೊತ್ತಿಲ್ಲ, ಎಲ್ರಿಗೂ ಮಾಮ.
ತುಂಬಾ ವರ್ಷಗಳಿಂದ ಅಲ್ಲಿ ಕಾವಲುಗಾರ, ಅದು ಆಸ್ಪತ್ರೆ.
ಆರಾಮ್, ಅಂತ ತಲೆ ಆಡಿಸುತ್ತ ಇವನು ಆಸ್ಪತ್ರೆ ಒಳಗೆ ಹೊರಟ.
ಅಲ್ಲೇ ನಿಲ್ಲು, ಅಂತ ಕಣ್ಣಲ್ಲೇ ಸನ್ನೆ ಮಾಡಿದ್ಲು, ನೆಲ ವರೆಸುತ್ತಿದ್ದ ಆಯಿ..!
೨೬ ವರ್ಷದಿಂದ ಅವಳು ಆಸ್ಪತ್ರೇಲಿ ಕೆಲಸಮಾಡ್ತಿದಾಳೆ. ಅವಳ ಹೆಸರೂ ತುಂಬಾ ಜನಕ್ಕೆ ಗೊತ್ತಿಲ್ಲ. ಅವಳನ್ನು ಕಂಡರೆ ಏನೋ ಪ್ರೀತಿ, ಎಲ್ಲರಿಗು.


ನೆಲ ಒಣಗಿದ ಮೇಲೆ ೧೦ ನೆ ವಾರ್ಡಿನತ್ತ ಹೊರಟ . ಚಹಾ ಕುಡಿತ ಕುಳಿತಿದ್ದ ಅಮ್ಮನ ಕಂಡು ಖುಷಿ ಆಯ್ತು, ಆಪರೇಶನ್ ಆಗಿಮೂರನೆ ದಿನಕ್ಕೆ ಎದ್ದು ಕುಳಿತದ್ದು ನೋಡಿ, ಏನ್ ಗಟ್ಟಿ ಇದ್ದಿವಾ..? ಅಂತ ನಕ್ಕು ಅಮ್ಮನ ಪಕ್ಕ ಕುಳಿತ. ಮಗನ ನೋಡಿ ಅಮ್ಮನಿಗೆ ಆನಂದ.

ನಾಷ್ಟಾ ಮಾಡಿದಿ ಇಲ್ಲೋ,,? ಹಾಲು ಕಾಯಿಸಿ ಇಲ್ಲೋ, ಹೂವಿನ ಗಿಡಕ್ಕ ನೀರ್ ಹಾಕಿ ಬಂದ್ಯಲ್ಲ....? ಹೀಗೆ ಮನೆಯ ಬಗ್ಗೆಪ್ರಶ್ನೆ ಶುರು ಮಾಡಿದ ಅಮ್ಮನಿಗೆ .. ನಾ ಎಲ್ಲ ಮಾಡ್ತೀನಿ ಅವಾ, ನೀ ಮನಿ ಕಾಳಜಿ ಮಾಡಬ್ಯಾಡ.. ಆರಾಮ್ ಮಾಡು.
ಅಷ್ಟರಲ್ಲಿ,
'ಡಾಕ್ಟರ್ ಬಾಯಿ ಹೊಂಟರ, ಗಂಡಸರು ಹೊರಗ ಬರ್ರಿ' ಅಂತ ನರ್ಸಮ್ಮ ಹೇಳಿ ಹೋದಳು.
ಬೆಳಿಗ್ಗೆ ಮೊದಲ ಚೆಕ್ ಅಪ್ ಗಂಟೆಗೆ.


ಹೊರಗೆ ಬಂದು ಸುಮ್ಮನೆ ಕುಳಿತ ಅವನ ಮನದೊಳಗೆ ಏನೇನೋ ಗೊಂದಲ, ತಾಯಿ ಬಗ್ಗೆ ಏನೋ ಚಿಂತೆ..!
ಅಪ್ಪ-ಅಮ್ಮ-ತಮ್ಮ, ಎಲ್ಲರ ನೆನಪು ಮಾಡಿಕೊಂಡ, ಮನದ ಪರದೆಯ ಮೇಲೆ ಬಾಲ್ಯದ ದಿನಗಳ 'ಫ್ಲ್ಯಾಶ್ ಬ್ಯಾಕ್'. ಕಳೆದ ಒಂದುವಾರದಿಂದ ಇದ್ದ ದುಗುಡ, ಅಮ್ಮನ ಗಾಬರಿ, ಅಜ್ಜಿಯ ಅಳು, ಅಪ್ಪನ-ತಮ್ಮನ ಮೌನ..
ಒಮ್ಮೆಲೇ ಕಣ್ಣಂಚಲಿ ಬಂದ ಹನಿ..!! ಮೌನ ಮೌನ..!!


***


ಯಾಕ್ ಬಿಡಲ್ಲ..? ನನ್ನ ಮಗಳ ಜೋಡಿ ನಾ ಬರಬಾರದು ಅಂದ್ರ ..?
ಏನ್ ಮನುಷ್ಯರಾದಿರಿ ನೀವು..??

ಕೆಳಗಡೆ ಇಂದ ಬಂತು ಜೋರು ಧ್ವನಿ..! ಹೋಗಿ ನೋಡಿದರೆ, ತನ್ನ ಮಗಳಿಗೆ 'ಚೆಕ್ ಅಪ್' ಮಾಡಿಸಲು ಬಂದ ಮಧ್ಯವಯಸ್ಕ ತಂದೆ, ತನ್ನನ್ನು ಒಳಗೆ ಬಿಡ್ತಿಲ್ಲ ಅಂತ ಅಲ್ಲಿದ್ದ ಸಿಸ್ಟರ್ ಮೇಲೆ ಕುಗ್ತಿದ್ದ.
ಅಷ್ಟರಲ್ಲಿ ಬಂದ ಅವನ ಅಳಿಯ, ಮಾಮ ಇದು 'ಹೆಣ್ಮಕ್ಳು ದವಾಖಾನಿ' ಅದ.
ಗಂಡಸರಿಗ
ಒಳಗ ಬಿಡಲ್ಲ, ಯಾಕ್ ಗಾಬರಿ ಆತಿರಿ..?
ತನ್ನ ಮಗಳ ಬಗ್ಗೆ ಇದ್ದ ಪ್ರೀತಿ ಕಾಳಜಿ ನೋಡಿ ಅಲ್ಲಿದ್ದ ಹೆಂಗಸರು ಖುಷೀಯಿಂದ ನಗಲು ಶುರು ಮಾಡಿದರು, ಇವನಿಗೋ ಎಲ್ಲರ 'ತಲಿ ಕೆಟ್ಟದ' ಏನ್ ಮನುಷ್ಯರಾದಿರಿ..!?


ಹೊರಗೆ ಬಂದ ಮಗಳ ಮುಖದಲ್ಲಿ ನಾಚಿಕೆ, ಖುಷಿ.. ಅವಳಿಗೆ, ಮೂರೂ ತಿಂಗಳು..!!

ಗಾಬರಿ ಇಂದ ಕೂತಿದ್ದ ತಂದೆಯ ಮುಖದಲ್ಲಿ ದೊಡ್ಡ ನಗು, ಅಲ್ಲಿದ್ದವರೆಲ್ಲ ಮತ್ತೆ ನಕ್ಕರು, ಅವನೂ ನಕ್ಕ..!ದೂರದಲ್ಲಿ ಕುಳಿತು ಇದನ್ನೆಲ್ಲಾ ಗಮನಿಸುತ್ತಿದ ಇವನಿಗೆ, ಕ್ಷಣ ಆನಂದ. ಏನೋ ಸಂತಸ.. ಮತ್ತೆ ಮೌನ..!


ಹೊರಗೆ ಬಂದು ನೋಡಿದರೆ, ಕ್ಷಣ ಅವಾಕ್ಕ್ ಆದ, ಎನ್ ಇಷ್ಟೊಂದು ಜನ..?
ಅವ್ವಾರ್ ಆರಾಮ್ರಿ..? ಮತ್ತೆ ಕೇಳಿದ ಮಾಮ.!


ಏನ್ ಜನ ಆಗ್ಯಾರಪ್ಪೋ..? ಎಲ್ಲ ಕಡಿ ಮಂದಿ ಮಂದಿ..
ಎಲ್ಲ
ಹ್ವಾದ್ರು 'ರಶ್ ರಶ್ ಮಂದಿ'.!?
ಬಾಣತನಕ್ಕನು 'ರಶ್ ರಶ್ ಮಂದಿ', ಅಂತ ಪಕ್ಕದಲ್ಲಿ ಕುತವನಿ ಹೇಳಿದ ಮಾಮ.
ಅವ್ನು
, ಪಚಕ್ಕನೆ ಬಾಯಲ್ಲಿದ್ದ ಎಲೆ ಅಡಿಕೆ ಉಗುಳಿ, ಧೋತರ ಚುಂಗಿನಿಂದ ಬಾಯಿ ಒರೆಸಿ,
ಏನ್
ಅಂತ ಮಾತಾಡ್ತಿಯೋ,
"
ವರ್ಸಿಗೆ ಶಂಬರ್ (ನೂರು) ಮದೀ ಆಗ್ತಾವ ಮತ್ತ ಬಾಣತನ ಆಗಬ್ಯಾಡದು..?" ಅಂತ ಕೇಳಿ, ಜೋರು ನಗಲು ಶುರು ಮಾಡಿದ..!ನೋಡ್ತಾ ನೋಡ್ತಾ ದಿನ ಮುಗಿತು.
ದೀನ
ಬೆಳಿಗ್ಗೆ, ಮಧ್ಯಾನ ಮನೆಯಿಂದ ತಿಂಡಿ-ಊಟ ತರೋದು,
ಅಮ್ಮನ
ನೋಡಲು ಬರುವ, ನೆಂಟರು-ಬೀಗರು, ಪರಿಚಯದವರು.. ಅವರೊಡನೆ ಅಪ್ಪ ಮಾತಾಡೋದು, ದಿನದಿಂದ ದಿನಕ್ಕೆ ಅಮ್ಮನ ಆರೋಗ್ಯ ಬೇಗ ಸುಧಾರ್ಸ್ತ ಇರೋದು ನೋಡಿ ಸಮಾಧಾನ.


ಇದರ ಮಧ್ಯೆ ಆಸ್ಪತ್ರೆಗೆ ಬರುವ ಜನರ ಮೇಲೆ, ಇವನ ಗಮನ..!
ಎಂತೆಂತಹ ಜನ, ಅವರ ಭಾವನೆಗಳು, ಖುಷಿ, ದುಃಖ.. ಇದೆಲ್ಲ ನೋಡಿ ಇವನು ಯಾವುದೋ ವಿಚಾರ, ಮನದಲ್ಲಿ ಹರಡಿಕೊಂಡು ಕುಳಿತಿದ್ದ..


***

ತನ್ನ ಮೊಮ್ಮಗಳೆಡೆಗೆ ತ್ತೊಮ್ಮೆ ನೋಡಿದ ಅಜ್ಜಿ, ಯಾಕೆವ್ವ..?
ಯಾಕ್ ಹೀಂಗ್ ಕುಂತಿ..?
ನಿನ್ನ ಗಂಡನ ಮನೆವ್ರು ಏನ್ ಕಡಿಮಿ ಮಾಡ್ಯಾರ..?

ಹೀಂಗ್ ಕಣ್ಣಾಗ್ ನೀರ್ ತರಬ್ಯಾಡೆವ್ವ, ಅಂತ ತನ್ನ ಸೆರಗಿನಿಂದ ಮೊಮ್ಮಗಳ ಕಣ್ಣೀರ ಒರೆಸಲು ಹೋದ ಅಜ್ಜಿ, ತನ್ನ ಅಳು ತಡೆಯದಾದಳು..!!

ತನ್ನ ಮಗಳ ಮಗಳು ಬಸುರಿ, ದಿನ ತನ್ನ ಮಗಳು ಬದುಕಿಲ್ಲ..
ತನ್ನ ಮಗಳು ಅಜ್ಜಿ ಆಗೋ ಮೊದಲೇ ಹೋದಳು ಅಂತ ಅಜ್ಜಿಯ ದುಖ,
ನಾನು ತಾಯಿ ಆಗಿದ್ದ ಆನಂದ ನೋಡಕ್ಕೆ ನನ್ನ ತಾಯಿ ಇಲ್ಲ ಅಂತ ಮಗಳ ದುಖ..!!
***


ತನ್ನ ತಾಯಿ ಇದ್ದ ವಾರ್ಡಿನ ಪಕ್ಕದ ವಾರ್ಡಿನಲ್ಲಿ, ನಿನ್ನೆ ಇಂದ ಹಬ್ಬದ ವಾತಾವರಣ.
ಹೊರಗಡೆ ಕೂತಿದ್ದ ಇವನು, ಅಲ್ಲಿನ ವಾತಾವರಣ ಗಮನಿಸುತ್ತಿದ್ದ.

ಅಣ್ಣ, ಅಂತ ಬಂದ ಅವಳು ಬಾಗಿಲಿನಲ್ಲಿ ನಿಂತವನನ್ನು ತಬ್ಬಿಕೊಂಡು ಅಳಲು ಶುರು ಮಾಡಿದಳು..! ವ್ಯಕ್ತಿಯ ಕಣ್ಣು ಒದ್ದೆ..!
ಅಣ್ಣ, ನೀ ಅಪ್ಪ ಆದಿಯಲ್ಲೋ, ನಾ ಸೋದರತ್ತೆ,, ಮತ್ತೆ ತಬ್ಬಿ ಕೊಂಡಳು. 'ಆನಂದ ಭಾಷ್ಪ'.
'
ಮದುವೆ ಆಗಿ ಹನ್ನೆರಡು ವರ್ಷಕ್ಕೆ' ಅವಳಣ್ಣ ತಂದೆ ಆಗಿದ್ದ, ಅವಳ ಸಂತಸಕ್ಕೆ ಪಾರವಿರಲಿಲ್ಲ..!***


ಎಲ್ಲಿ ಅವ್ವ..?
ಬಾಗಿಲಲ್ಲಿ
ನಿಂತ ತನ್ನ ಅತ್ತೆಯನ್ನು ಕೇಳಿದ.
ಅವನ ಮುಖದಲ್ಲೊಂದು, ಗಾಬರಿ..!
ಅವರು
ಹ್ವಾದ್ರು.! ಅಂತ ಹೇಳಿದ ಅವನ ಅತ್ತೆ ಕಣ್ಣಿರು ಒರೆಸುತ್ತಾ ಒಳ ಹೋದಳು.

ತನ್ನ ಹೆಂಡತಿಗೆ ನಾಲ್ಕನೇ ಹೆರಿಗೆ,
ನಾಲ್ಕನೆಯದು
'ಹೆಣ್ಣೇ' ..!!
ಹೆಣ್ಣು ಅಂತ ಕೇಳಿದ ಅವನ ತಾಯಿ ಮತ್ತು ತಂಗಿ, ಮಗುವಿನ ಮುಖ ನೋಡದೇ ಹೊರಟು ಹೋಗಿದ್ದರು..!
ಇವನ ಮುಖದಲ್ಲಿ 'ಅಸಹಾಯಕ' ಭಾವನೆ..!!


***


ಒಂದು 'ಹೊಂಡ ಆಕ್ಟಿವ' ಮೇಲೆ ಬಂದ ಇಬ್ಬರು ಇವರೆಲ್ಲಿ ? ಇನ್ನು ಬಂದಿಲ್ಲ.!
ಅಂತ
ಒಬ್ಬರಿಗೊಬ್ಬರು ಕೇಳುತ್ತ, ಅವರು ಬರ್ತರಅಲ್ಲಿತನಕ ಇಲ್ಲೇ ಚಹಾ ಕುಡಿಯೋನ್ ಬರ್ರಿ ಅಂತ ಪಕ್ಕದ ಟೀ ಸ್ಟಾಲ್ ಮುಂದೆ ನಿಂತು ಮಾ
ತಿಗೆ ಶುರು ಹಚ್ಚಿದರು.

'ಹಾ ಅನ್ನೋದ್ರವಳಗ ದಿನ ಹೊತಾವ್ ನೋಡ್ರಿ,
ಮೊನ್ನೆ
ಮೊನ್ನೆ ಸಾಲಿಗ ಹೊಗ್ತಿದ್ವು ಇವತ್ತು ಅವರಿಗ ಮಕ್ಳು ಆಗು ಟೈಮ್ ಬಂತುನೋಡ್ರಿ..'

ಅಂತ ಅತೀ ಆನಂದದಿಂದ ಮಾತಾಡ್ತಿದ್ದವ್ರು ಬೀಗರು.

ಅವರಲ್ಲೊಬ್ಬನ ಮಗ, ಇನ್ನೊಬ್ಬನ ಮಗಳು ದಂಪತಿಗಳು.
ಅವರ
ಮಕ್ಕಳು ಹಾಗು ಮನೆಯವರು, ಹಿಂದೆ ಕಾರ್ ನಲ್ಲಿ ಬರ್ತಿದ್ರು.
ತಮ್ಮ ಮಕ್ಕಳ ಬಾಲ್ಯದ, ಶಿಕ್ಷಣದ ಬಗ್ಗೆ,

ಅವರು ಮಾಡುವ ಕೆಲಸದ ಬಗ್ಗೆ ಇಬ್ಬರಲ್ಲೂ ಒಂದು ಸಾರ್ಥಕ ಭಾವನೆ.

ಇಬ್ಬರ 'ಅಂಡರ್ಸ್ಟ್ಯಾಂ
ಡಿಂಗ್' ಅದ್ಭುತ..!!

ಒಬ್ಬರ ಮೇಲೆ ಒಬ್ಬರಿಗಿದ್ದ ಪ್ರೀತಿ-ಗೌರವ ಅಮೇಜಿಂಗ್..!!


ಕಾರಿನಿಂದ ಇಳಿದವರ ಮೊಗದಲ್ಲಿ ನವೋಲ್ಲಾಸ,
ಅವರಿಬ್ಬರು
'ನವ ದಂಪತಿಗಳಂತೆ' ನಾಚುತ್ತಿದ್ದರು..
ಅವಳು ತನ್ನ ತಾಯಿ ಹಾಗು ಅತ್ತೆ ಜೊತೆ ಆಸ್ಪತ್ರೆ ಒಳಗೆ ಹೋದರು,
ಮೂವರು ಗಂಡಸರೆಲ್ಲ ಹೊರಗಡೆ ಹರಟೆ ಹೊಡೆಯುತ್ತನಿಂತು ಬಿಟ್ಟರು..

ಸ್ವಲ್ಪ ಸಮಯದಲ್ಲೇ,
ಹುಡುಗನ
ತಾಯಿ 'ಬೀಗರೇ, ಕುಬುಸ(ಸೀಮಂತ) ತಯ್ಯಾರಿ ಶುರು ಮಾಡ್ರಿ' ಅಂತ ಬಂದಳು,
ಅವಳು ತನ್ನ ಗಂಡನ ಎದೆ ಮೇಲೆ ನಾಚಿಕೆಯಿಂದ ಮುಖ ಮುಚ್ಚಿಕೊಂಡರೆ,

"ನಾವು ಮುದುಕರಾದ್ವಿ" ಅಂತ ಇಬ್ಬರು ಬೀಗರು ತಬ್ಬಿಕೊಂಡರು..!

ವಾವ್.. ರಿಯಲಿ ಅಮೇಜಿಂಗ್..!!

***

"ಗೆಳೆಯರೇ, ಕಳೆದ ತಿಂಗಳು ನನ್ನ ತಾಯಿಗೆ 'ಗರ್ಭಕೋಶದ' ಶಸ್ತ್ರ ಚಿಕಿತ್ಸೆ ಆಯ್ತು.
ನನ್ನಮ್ಮ
ದಿನ ಆಸ್ಪತ್ರೆಯಲ್ಲಿದ್ದರು. ಈಗ ಅವರ ಆರೋಗ್ಯ ಸುಧಾರ್ಸ್ತಿದೆ.
ಇದು
ನನ್ನ ಒಂಬತ್ತು ದಿನಗಳ ಅನುಭವ.
ಒಂದು ಹೊಸ ಅನುಭವ..

ಬ್ಲಾಗ್ ಎಂಬುದು ಎಂತಹ ಅದ್ಭುತ ನೋಡಿ..!
ಡಾಕ್ಟರ್
ನನ್ನ ತಾಯಿಯ ಬಗ್ಗೆ ಹೇಳಿದಾಗ ಮನೆಯಲ್ಲಿ ಎಲ್ಲರು ಗಾಭರಿ,
ಗಡ್ಡೆ
ಆಗಿದೆ ಅಂದ ತಕ್ಷಣ, ಕ್ಯಾನ್ಸರ್ ಅನ್ನೋ ಭಯ..!
ನನಗೆ
ಮೊದಲು ನೆನಪಿಗೆ ಬಂದದ್ದು ನಮ್ಮ 'ಕೊಳಲು' ಬ್ಲಾಗಿನ ಡಾ.ಡಿ.ಟಿ.ಕೆ. ಮೂರ್ತಿ ಸರ್.
ಒಂಬತ್ತು ದಿನಗಳ ಕಾಲ ನಾನವರೊಡನೆ ದಿನಕ್ಕೆರಡು ಸಲ ಮಾತಾಡಿದ್ದೇನೆ. ಅವರು ನನ್ನ ತಾಯಿಯ
ಸಮಸ್ಯೆಯ ಬಗ್ಗೆ ವಿವರಿಸಿ ನನಗೆ ಧೈರ್ಯ ನೀಡಿದ್ದು... ನನ್ನಲ್ಲಿ ಶಬ್ದಗಳಿಲ್ಲ, ಅವರಿಗೆ ನನ್ನ ಅನಂತ ನಮನಗಳು.

ಹಾಗೇನೆ, ಫೋನ್ ಮಾಡಿ ನನ್ನ ತಾಯಿಯ ಆರೋಗ್ಯ ವಿಚಾರಿಸಿದ, ಬಾಲು ಸರ್, ಪರಾಂಜಪೆ ಸರ್.. ಎನಾಗಲ್ಲಾ ಅಳಿಮಯ್ಯಾ, ಅಂತ ದಿನ ಫೋನ್ ಮಾಡಿ ನವೋಲ್ಲಾಸ ತುಂಬಿದ ಪ್ರಕಾಶ್ ಮಾಮ.
ಮೇಲ್
ಮಾಡಿದ ಆಜಾದ್ ಸರ್, ಸುಗುಣಕ್ಕ ಹಾಗು ನನ್ನೆಲ್ಲಗೆಳೆಯರಿಗೂ ನನ್ನ
ಅನಂತ ಕ್ರತಜ್ಞ್ಯತೆಗಳು..

ನನ್ನ ತಾಯಿಯನ್ನು ಪರಿಕ್ಷಿಸಿಸಿದ ಡಾಕ್ಟರ್ ಹೇಳುತ್ತಿದ್ದರು,
'ಹೆಣ್ಮಕ್ಳು ಆರೋಗ್ಯದ ಬಗ್ಗೆ ಗಮನ ಕೊಡೋದು ಕಡಿಮೆ' ಅವರಿಗೆ ಗಂಡ, ಮಕ್ಕಳ ಚಿಂತೆ..
ನೀವು
ನಿಮ್ಮವರೆನ್ನುವವರ ಆರೋಗ್ಯದಕಾಳಜಿ ಇರಲಿ.."

ಒಂದು ಹೊಸ ಜೀವ ಜಗತ್ತಿಗೆ ಬರುವ ಮುಂಚೆ ಎಷ್ತೊಂದೆಲ್ಲ ಆಗಿರುತ್ತೆ..!


ಚಿತ್ರ ಕ್ರಪೆ: ಅಂತರ್ಜಾಲ