Dec 5, 2010

ತನ್ನ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಗುರುತಿಸಿಕೊಂಡ ಕನ್ನಡದ ಪ್ರಸಿದ್ದ ಬರಹಗಾರ "ಶ್ರೀಕೃಷ್ಣ ಆಲನಹಳ್ಳಿ"ಯವರು (ಜನನ: ೩-೪-೧೯೪೭ ನಿಧನ: ೪-೧-೧೯೮೯) ಕವಿತೆ-ಕತೆ-ಕಾದಂಬರಿ ಈ ಮೂರು ಪ್ರಕಾರಗಳಲ್ಲೀ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ಕಾಡು, ಭುಜಂಗಯ್ಯನ ದಶಾವತಾರಗಳು ಮತ್ತು ಪರಸಂಗದ ಗೆಂಡೆತಿಮ್ಮ ಮರೆಯಲು ಹೇಗೆ ತಾನೇ ಸಾಧ್ಯ ಅಲ್ಲವೆ? ಅಂತೊಬ್ಬ ಸಾಹಿತಿಯ ಕವಿತೆ ಇದೋ ನಿಮಗಾಗಿ . . . .

"ಊಟಕ್ಕೆ ಕೂತಾಗ"

ಊಟಕ್ಕೆ ಕೂತೆ- ಥಟ್ಟನೆ
ಸುರಿದ ಅನ್ನ- ಬೆಳ್ಳಗೆ
ಮಲ್ಲಿಗೆಯಂತೆ ನೋಡುನೋಡುತ್ತ
ಯಾಕೋ ಕಪ್ಪಾದಂತೆ
ಕೂತೆ- ಕ್ಷಣ
ತಪ್ಪು ಮಾಡಿದ ಹಾಗೆ

ಹೆಂಡತಿ ಕೇಳಿದಳು: 'ಯಾಕೆ?'- ಮಾತಾಡಲಿಲ್ಲ
'ಎಷ್ಟು ಬೆಳ್ಳಗಿದೆ ಅನ್ನ- ನಮ್ಮ ಗದ್ದೆಯದೆ ಭತ್ತ' ಅಂದಳು
'ಹೌದೆ' ಅಂದೆ.

ಕಣ್ಣು ತುಂಬಿತು ಗದ್ದೆ- ಉತ್ತಿ
ಬಿತ್ತಿ, ಕಳೆ ತೆಗೆದು

ಬೆಳೆದು ತೂಗಿದ ಬಂಗಾರದ ತೆನೆಗಳು
ಜೊತೆಗೆ ಕೆಸರಲ್ಲಿ ದುಡಿದವರ
ನೋವು ತುಂಬಿದ ಕಪ್ಪು ಮುಖಗಳು.

Nov 20, 2010

"ಮಗನಾಗೋ ಮುಕುಂದ"

ಮನ ಮಡಿಯಾಗಿಸಿ
ಜೇಡಿಮಣ್ಣಲಿ ನಿನ್ನ ಬಂಧಿಸಿರುವೆ, ಪೂಜಿಸಲಲ್ಲೋ
ಮುದ್ದಿಸಲು ಮಗನೆ

ನನ್ನ ಸೆರಗೆಳೆದು
ಬೆಣ್ಣೆಗಾಗಿ ಕೈ ಚಾಚಲು ಬಾರೋ
ಕಾಡಿ-ಬೇಡಿ ಹುಸಿಮುನಿಸ
ಕಣ್ಣೀರ ತರಲು ಬಾರೋ

ನಡುಮನೆಯಲ್ಲಿ ಬೆಣ್ಣೆ
ಮುಚ್ಚಿಟ್ಟಿರುವೆ, ಕದಿಯಲು
ಕಳ್ಳ ಹೆಜ್ಜೆಯಲಿ ಬಾರೋ
ಬಂದಾರು ಬಾರೋ ಹಾಲುಗೆನ್ನೆಯ ಕಂದ

ರಗಳೆಯಾಗಲಿ
ಚೆಲ್ಲಾಟವಾಗಲಿ ಏನಾದರಾಗಲಿ,
ನಿನ್ನದೇ ಗೆಲುವಾಗಲಿ ಬಾರೋ
ನನ್ನೆದೆಯಲಿ ಹಾಲ್ಗಡಲ ಜಿನುಗಿಸಲು
ಒಡಲಿಗೆ ಚಿಗುರಾಗಿ ಜಾರೋ

ಹಠ ಬಿಟ್ಟು,
ಬಾಯ್ತುಂಬ ಅಮ್ಮಾ ಎಂದು ಕರೆಯೋ
ಮಣ್ಣ ಮುಕುಂದ,
ಮುದ್ದು ಮುಕುಂದ

=====
=====

Nov 5, 2010

"ಬಿಸಿಲ ಹನಿ"

ಹಬ್ಬದಂತೆ ಮೂಡುತ ಬಾಗುವ
ಬಣ್ಣದಬಿಲ್ಲ ನೋಡಿ ಕುಣಿದು ಕುಪ್ಪಳಿಸುವ
ಮನದಲ್ಲಿ ಬರೀ ಬಣ್ಣಗಳ ಚಿತ್ತಾರ.
ಮತ್ತೊಮ್ಮೆ ಮೂಡುವುದೇ ?- ಕೊನೆಯಿಲ್ಲದ ಕಾತರ.
ಬಣ್ಣಗಳ ಬಣ್ಣನೆಯಲ್ಲಿ, ಅಲ್ಪಾಯುಷ್ಯದ ಮಳೆಗೆ ಮೆಚ್ಚುಗೆಯಿಲ್ಲ
ಅಸಲಿಗೆ ಅದರ ಪರಿವಿಲ್ಲ.

ಬಣ್ಣದೊಡಲ ಬಗೆದಾಗ
ಕಲ್ಪನೆಗೂ ಮೀರಿದ ಹನಿಯ
ಹೊಸ ಲೋಕ ತೆರೆಯುವುದು, ತೋರುವುದು.

ಹುಚ್ಚು ಮಳೆಯಿದು
ಬಂದೆರೆಷ್ಟು, ಬಿಟ್ಟರೆಷ್ಟು- ಕೊಂಕಾಡುತಿದೆ ಬಣ್ಣ ನೋಡುವ ಕಣ್ಣು.
ಜೋರಾಗಿ ಹುಯ್ದರೆ ಮಾತ್ರ ಮಳೆಯೇ
ಬಿಸಿಲಮಳೆಗೆ ಬೆಲೆಯಿಲ್ಲವೇ ?


ಪ್ರತಿಸಲವೂ ಮಣ್ಣಿನಾಳದಲ್ಲಿ ಬಂದಿರುವಿಕೆಯನ್ನ
ಮೂಡಿಸುವಲ್ಲಿ ಸೋಲುವುದು.
ಬಿಸಿಲಮಳೆ ಸೋಲಿಗೆ ಹೆದರಿಲ್ಲ ಇದುವರೆಗೂ
ಸತತ ಪ್ರಯತ್ನವದರ ಜಾಯಮಾನ

ಹೋಗುವ ಮೊದಲು
ಅಂತ್ಯವಿಲ್ಲದ ಹಾಳೆಯ ಮೇಲೆ
ಬಣ್ಣ ತಂದು ಸಹಿಮಾಡುವುದು.
ನೋಡುವ ಕಣ್ಣುಗಳಲ್ಲಿ ಉಳಿದಿದ್ದು ಬಣ್ಣಗಳು ಮಾತ್ರ.

ತಿರಸ್ಕಾರಗೊಂಡ ಹನಿಯ
ಬೇಸರದುಸಿರ ಕೇಳಿ
ಸಮಾಧಾನಪಡಿಸಿದವರೆಷ್ಟೋ ?
ಸಿಹಿ ಹನಿಗಾಗಿ ನಾಲಿಗೆ ಚಾಚಿದವರೆಷ್ಟೋ ?
ಅಂಗಳದಲ್ಲಿ ಮನಸಾರೆ ಕಾದು ನಿಂತು
ಹಗುರ ಹನಿಗಳಲ್ಲಿ ಪುಳಕಗೊಂಡು ನೆನೆದವರೆಷ್ಟೋ ?

=====
=====

Oct 30, 2010

"ಕನ್ನಡದ ಹೂಬಾಣ"

[2008 ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ದೊರಕಿದಾಗ, ನಾನು ಇಂಜಿನಿಯರಿಂಗ್ ಓದುತ್ತಿದ್ದ ಕಾಲೇಜಿನ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಕೆಲವು ಸಾಲುಗಳನ್ನ ಬರೆದಿದ್ದೆ. ಈಗ ಅದನ್ನ ನಿಮ್ಮ ಮುಂದಿಡುತ್ತಿದ್ದೇನೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಷಯಗಳು, ಸದಾ ನಗುವಿರಲಿ ]

ದಶಕಗಳ ಪರಿಶ್ರಮದಿಂದ
ದೊರಕಿದೆ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ

ಈ ನೀರು,ಭೂಮಿ
ಗಾಳಿ, ಆಕಾಶ ನಮ್ಮದೇ
ಕನ್ನಡಮ್ಮ ನಿನಗೆ ತುಂಬು ಹೃದಯದಿಂದ ನಮನ.

ಕಾಪಾಡಿಕೊಳ್ಳಬೇಕಿದೆ
ನಮ್ಮ ಕನ್ನಡ ಭಾಷೆಯನ್ನ, ಬನ್ನಿ
ಅದಕ್ಕಾಗಿ ಜೊತೆಯಾಗಿ ಸಂಬ್ರಮಿಸೋಣ, ದುಡಿಯೋಣ.

ಎಲ್ಲರ ಮನಸಿಗೆ ಸುಮಧುರ
ಗಾಯವನ್ನುಂಟುಮಾಡಲಿ,
ಕನ್ನಡದ ಹೂಬಾಣ
ಕನ್ನಡದ ಹೂಬಾಣ

=====
=====

Oct 21, 2010

"ಪ್ರೇಮಕಾವ್ಯ"

ಅದೆಲ್ಲೋ ಕುಳಿತು
ಅದೆಲ್ಲೋ ನಿಂತು
ನಿನ್ನ ಏಕಾಂತ ಗರ್ಭವತಿಯಾದಾಗ
ನೀ ಕಂಡ ಕನಸುಗಳನ್ನ, ನಾ ಹೇಗೆ ತಾನೇ ಬಲ್ಲೆ.

ಅದೆಷ್ಟು ಸುಂದರವಾಗಿರಬೇಕು ನೀನು ಚೆಲುವೆ
ನಿನ್ನ ಬರಹವೇ ವರ್ಣಿಸಲಾಗದಷ್ಟು ಚೆಂದವಾಗಿದೆಯಲ್ಲೆ.

ಭಾವನೆಗಳ ಗಟ್ಟಿತನಕೆ,
ವಾಸ್ತವಕೆ ಹತ್ತಿರವಿರುವ ನಿನ್ನ ಕನಸುಗಳಿಗೆ
ಬೆಲೆ ಕಟ್ಟಲು ಸೋತಿರುವೆ ನಾನಿಲ್ಲಿ.

ನೀ ಬರೆದ ಪ್ರತಿ ಪ್ರೆಮಪತ್ರವೂ
ಮಹಾಪ್ರೇಮಕಾವ್ಯವಾಯಿತು ಎದೆಯಲ್ಲಿ.

ಕಾದು ಕುಳಿತಿರುವೆ
ಮತ್ತೊಂದು ಪ್ರೇಮಕಾವ್ಯದ ನಿರೀಕ್ಷೆಯಲ್ಲಿ . . . .

=====
=====

Oct 11, 2010

"ಮಳೆಗೊಂದು ಮಾತು"

ಸುರಿವ ಮಳೆಯೇ ಸಾಕು
ಏಕೆ ನಿನ್ನೀ ಹಠ ?
ನೀನೆಷ್ಟೇ ಸುರಿದರು ನನ್ನ ತಣಿಸಲಾರೆ,
ಗಾಯವನ್ನ ಗುಣಪಡಿಸಲಾರೆ.

ಭೋರ್ಗರೆದ ಮಳೆಯಿಂದ
ಹಳೆಯ ಮನೆಗಳೆಲ್ಲ ಕುಸಿದಂತೆ
ನೋವಿನ ಮನೆ ಕುಸಿಯದು.
ಮರ-ಗಿಡಗಳ ಬದುಕಿಸಲು
ಸುರಿದು ನೀನು, ಕಾಡ್ಗಿಚ್ಚನ್ನು ಆರಿಸಬಹುದು.
ದಿವ್ಯ ತಿರಸ್ಕಾರದಿಂದ, ಮನದಲಿ
ಹೊತ್ತಿ ಉರಿಯುತಿರುವ ಜ್ವಾಲೆಯ ನೀ ಆರಿಸಲಾರೆ.

ಮಳೆಯೇ,
ನೀನು ರೈತನ ಕಷ್ಟ ಮರೆಮಾಡಬಹುದು,
ನನ್ನ ಕಣ್ಣಂಚಿನ ನೋವು ಮರೆಮಾಡಬಹುದು.
ನನ್ನ ಹೃದಯದೊಳಗೆ ಕಾಣದಿರುವ ಕಣ್ಣೀರ ನೀ
ಅನುಭವಿಸಲಾರೆ, ಮರೆಮಾಡಲಾರೆ.
ದಯಮಾಡಿ ಸುಮ್ಮನಾಗು

ಸತತವಾಗಿ ಸುರಿದು
ನಾನೇ ಉರಿಸಿ, ಆರಿಸಿ ಎಸೆದ
ಸಿಗರೇಟಿನ ತುಂಡುಗಳನ್ನ,
ಕಾಗದದ ದೋಣಿಯಂತೆ ತೇಲಿಸಬಹುದು.
ಆಸೆಗಳು ನುಚ್ಚುನೂರಾದ ಎದೆಯೊಳಗೆ
ನಿರಂತರವಾಗಿ ಕುದಿಯುವ ಲಾವರಸವಿದೆ !
ನೀನೆಷ್ಟೇ ಸುರಿದರೂ, ಏನೂ ಆಗದು.

ಮಳೆಯೇ ನಿನ್ನದು
ಪಲಿತಾಂಶವಿರದ ಪ್ರಯತ್ನ.
ನಿನಗೆ, ನನ್ನದೊಂದು ವ್ಯಂಗ್ಯನಗು.
ಇನ್ನು ನಿನ್ನಿಷ್ಟ.

=====
=====

Sep 30, 2010

ಜಿಂದಗಿ ಬಡೀ ಹೋನಿ ಚಾಹಿಯೇ, ಲಂಬೀ ನಹಿ..!




ಹೌದು
, "ಜೀವನ ದೊಡ್ಡದಾಗಿರಬೇಕು, ಉದ್ದ ಅಲ್ಲಾ..!"
ಈ ಸಾಲು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯ ಬಹುದು..


ಮತ್ತೊಮ್ಮೆ ಮಗದೊಮ್ಮೆ ಓದಿದರೆ, ಕೇಳಿದರೆ, ಖಂಡಿತ ಅರ್ಥ ಆಗುತ್ತೆ..!!


ಸುಮ್ನೆ ಯೋಚನೆ ಮಾಡಿ, ನಿಮಗೆ ಒಂದು ವಾರದಿಂದ 'ನೆಗಡಿ',,
ಏನೇ ಮಾತ್ರೆ ತೊಗೊಂಡ್ರು, ಮತ್ತೊಂದು ಮಾಡಿದರು ಮೂಗಿನ ಜಲಪಾತ ನಿಲ್ತಾಯಿಲ್ಲ ..!

ನೆಗಡಿ ಬೇಡ, ಬೆನ್ನು ಇಲ್ಲಾ ಸೊಂಟ ನೋವು, ಹೋಗ್ಲಿ ಅವು ಯಾವೂ ಬೇಡಾ..
ಬೆಳಿಗ್ಗೆ ಇಂದ ಕತ್ತು ನೋವು, ಎಡ-ಬಲ, ಮೇಲೆ-ಕೆಳಗೆ, ಏನ ಮಾಡಿದ್ರು ನೋವು ನೋವು..!!


ಈ ಸಮಯದಲ್ಲಿ,
ನೀವು-ನಾವು ಕೊಡುವ ಒಂದು ಸಾಮಾನ್ಯವಾದ ಹೇಳಿಕೆ: "ಏನೇ ಬರಲಿ, ಈ ನೆಗಡಿ ಮಾತ್ರ ಬರಬಾರ್ದಪ್ಪ.."
ಅಯ್ಯೋ, "ಏನ್ ಬೇಕಾದ್ರೂ ತಡಕೊಬಹುದು, ಆದ್ರೆ ಈ ಕತ್ತು ನೋವು ಬೇಡಪ್ಪ ಬೇಡಾ.."


ಅಸಲಿಗೆ ನಮ್ಮ ಸಮಸ್ಯೆ ಏನಂದ್ರೆ ನಾವು ಕಷ್ಟಗಳಿಗೆ ಎದೆ ಒಡ್ಡಲು ತಯಾರಿಲ್ಲ ..!!
ಹಾಗೇನೆ , "ಕಷ್ಟ ನಮಗೆ ಬಂದಾಗ ಮಾತ್ರ ಕಷ್ಟ ..!!"
ಬೇರೆಯವರ ಕಷ್ಟ -ನೋವಿನ ಅರಿವು ನಮಗೆ ಅಷ್ಟಕಷ್ಟೇ ..!!!


ಒಮ್ಮೆ ಯೋಚಿಸಿ ..!
ಮನುಷ್ಯನಿಗೆ , ಇಂತದ್ದೆ ದಿನ ಅಥವಾ ಇಂತಿಷ್ಟು ದೀನಗಳೊಳಗೆ ಮ್ರತ್ಯು ನಿಶ್ಚಿತ ಅಂತ
ಗೊತ್ತಾದಾಗ
ಅವನ /ಳ ಮನಸ್ತಿತಿ
ಹೇಗಿದ್ದೀತು ..!?
ಆ ಮನುಷ್ಯ ನಾವೇ ಆಗಿದ್ದರೆ ..?
ಏನ್ ಮಾಡ್ತಿವಿ ..?? ಏನು ಮಾಡಬಹುದು ..?



ಅವನೊಬ್ಬನಿದ್ದ ,,,
"ಎಲ್ಲ್ಲೇ ಇರು ಹೇಗೆ ಇರು , ಎಂದೆದಿಗೂ ನೀ ನಗುತಲಿರು "
ನಿನ್ನ ಸುತ್ತಲಿರುವರನ್ನು ನಗಿಸುತಲಿರು .."
ಇದು ಅವನ ಸಿದ್ಧಾಂತ ..!


ಅವನು ಹೇಳುತಿದ್ದ ಮತ್ತೊಂದು ಮಾತು ,
"ನಾಳಿನ ಕಷ್ಟಗಳ ನೆನೆದು ಈ ಕ್ಷಣ , ಈ ದಿನದ ಕೊಲೆ ಮಾಡೋದು .."
ನಮ್ಮ ಅತೀ ದೊಡ್ಡ ತಪ್ಪು..! ಅದು ಪಾಪ ..!



ದಿನಗಳೆದಂತೆ ಕರಗುವ ದೇಹ..
ಸಾಯಲಿಕ್ಕೆ ವರ್ಷಗಳಿದ್ದರೇನು, ದಿನಗಳಿದ್ದರೇನು. ..?
"ಸಾವು ಅನ್ನೋದು ಕ್ಷಣ ಮಾತ್ರ",
"ಬದಲಿಗೆ ಪ್ರತೀ ಕ್ಷಣ ಅದ್ಭುತವಾಗಿ ಕಳೆದರೆ ಹೇಗೆ..?
ಒಂದೊಂದು ಕ್ಷಣ ಒಂದು ಜೀವನ ಆದ್ರೆ ಹೇಗೆ ..?"



ಉಸಿರಿರುವ ತನಕ ಸಾವಿಲ್ಲ.. ಉಸಿರಿಲ್ಲದ ಮೇಲೆ ನಾವೇ ಇಲ್ಲ ..!!



ಹೀಗಿರಬೇಕಾದ್ರೆ, ಹೆದರಿಕೆ ಯಾವುದು..? ಕಷ್ಟ-ನೋವು ಅಂದ್ರೆ ಯಾವುದು..?


ಹೀಗೆಲ್ಲ ಹೇಳುತ್ತಿದ್ದ ಅವನು ಆರು ತಿಂಗಳಿನೋಳಗಡೇ ಸಾಯುವನಿದ್ದ..!!
ಅದೂ ಅವನಿಗೂ ಹೊತ್ತಿತು..!!


ಅವನಿಗಿದ್ದದ್ದು ಕ್ಯಾನ್ಸರ್..!!


ಆ ರೋಗದ ಮೇಲು ಅವನಿಗೆ ಬೇಜಾರಿಲ್ಲ ..!
ಬದಲಿಗೆ, ಅದರ ವೈಜ್ಞ್ಯನಿಕ ಹೆಸರು ಕೇಳಿ ಖುಷಿ ಪಡುತ್ತಿದ್ದ..!!
ತನ್ನ ರೋಗ ಗುಣಪಡಿಸಲಾಗದ ವೈದ್ಯರ ಮೇಲೆ ಅನುಕಂಪ ಇತ್ತು ಅವನಿಗೆ.



ಯಾರೋ ಅಪರಿಚಿತನಿಗೆ ಬೆನ್ನು ತಟ್ಟಿ, ಮಾತಾಡಿಸಿ, ತಲೆ ತಿಂದು ಪರಿಚಯ ಮಾಡಿಕೊಳ್ಳುತ್ತಿದ್ದ..
ಅವನಿಗೆ "ನನ್ನವರು" ಅನ್ನುವವರು ಯಾರು ಇರ್ಲಿಲ್ಲ, ಅದಕ್ಕೂ ಅವನಿಗೆ ಬೇಜಾರಿಲ್ಲ..!



ಹಾಗಂತ ಅವನಿಗೆ ದುಃಖ ಇರ್ಲಿಲ್ಲ ಅನ್ನೋದು ಸುಳ್ಳು..!
ಅವನಿಗೂ ದುಃಖ ಗಳಿದ್ದವು, ಅವನೊಬ್ಬ ಭಗ್ನ ಪ್ರೇಮಿ..!!
ಆದರೆ,
ಯಾರಿಗೂ ತನ್ನ ನೋವು ಹೇಳುತ್ತಿರಲಿಲ್ಲ..
ದುಃಖ ಹಂಚಿಕೊಳ್ಳುವ ವಿಷಯದಲ್ಲಿ ಅವನು ಬಲು ಸ್ವಾರ್ಥಿ..!!



ತನ್ನ ಕೊನೆಯ ದಿನಗಳನ್ನು 'ಮುಂಬಯಿ' ಯಲ್ಲಿ ಕಳೆಯಬೇಕು, ಹೊಸ ಗೆಳೆಯರೊಡನೆ ಇರಬೇಕು ಅನ್ನೋದು ಅವನ ಇಚ್ಛೆ..!
ಅವನು ಹಾಗೆ ಮಾಡಿದ..



ಮುಂಬಯಿ ಅವನಿಗೆ ಹಿಡಿಸಿತು,
ಅಲ್ಲಿ ಅವನಿಗೆ ತಾಯಿ, ತಂಗಿ, ಅತ್ತಿಗೆ , ಗುರು, ಗೆಳೆಯರು.. ಸಿಕ್ಕರು.
ತಾನು ಸಾಯುವ ಮೊದಲು ಗೆಳೆಯನಿಗೆ ಹುಡುಗಿ ನೋಡಿದ..
ಆದರೆ ಅವನ ಮದುವೆ ನೋಡಲಾಗಲಿಲ್ಲ..!


"ಒಂದು ಮಿಂಚಿನಂತೆ ಬಂದು ಹೋದ"
ಒಂದು ದೊಡ್ಡ ಬೆಳಕ ಚೆಲ್ಲಿ..!!


ಅವನ ಹೆಸರು,
"ಆನಂದ್"


******



೧೯೭೦ ರಲ್ಲಿ ತೆರೆ ಕಂಡ ಹಿಂದಿ ಚಿತ್ರ "ಆನಂದ್"
ರಾಜೇಶ್ ಖನ್ನಾ, ಮಾಡಿದ ಪಾತ್ರವೇ ಆನಂದ್ ..
ಅಮಿತಾಬ್ ಬಚ್ಚನ್ ಆವಾಗ ಸಹ ಕಲಾವಿದ..!


ಅದರ ನಿರ್ದೇಶಕ "ಹ್ರಿಶಿಕೇಶ್ ಮುಖರ್ಜೀ" ಪ್ರೀತಿಯ "ಹ್ರಿಶಿದಾ"
ಇಂದು ಅವರ ಜನ್ಮ ದಿನ..!

ಸೆಪ್ಟೆಂಬರ್ ೩೦, ೧೯೨೨ ಕೊಲ್ಕತ್ತಾ ದಲ್ಲಿ ಜನಿಸಿದ, 'ಹ್ರಿಶಿದಾ'.
'ರಸಾಯನ
ಶಾಸ್ತ್ರ' ವಿಷಯದಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದು, ಕೆಲ ಕಾಲ, "ಗಣಿತ ಹಾಗು ವಿಜ್ಞ್ಯಾನ' ಪಾಠ ಮಾಡಿದರು.



ಮೊದಲಿಗೆ "ಬಿಮಲ್ ರೋಯ್" ಜೊತೆ ಸೇರಿ ಸಿನಿಮ ಕೆಲಸ ಕಲಿತಿದ್ದು.. ಅವರು ಮೊದಲು ಮಾಡಿದ್ದು ಕ್ಯಾಮರಾಮೆನ್ ಕೆಲಸ.. ಜೊತೆಗೆ 'ಸಂಕಲನಕಾರ'.


ಮೊದಲ ಸಿನಿಮ, 'ಮುಸಾಫಿರ್' ೧೯೫೭ ರಲ್ಲಿ ತೆರೆಕಂಡಿತು, ಆದರೆ ಹೆಸರು ಮಾಡಲಿಲ್ಲ..


೧೯೫೯ ರಲ್ಲಿ 'ರಾಜ್ ಕಪೂರ್' ನಟಿಸಿದ 'ಅನಾಡಿ' ಅವರ ಎರಡನೇ ಸಿನಿಮ.
ಅದು ದೊಡ್ಡ ಹೆಸರು ಮಾಡಿತು..
'ಅನಾಡಿ' ಚಿತ್ರದ "ಜೀನಾ ಇಸೀ ಕಾ ನಾಮ್ ಹೈ" ಅದ್ಭುತವಾದ ಹಾಡು..!!



"ಆನಂದ, ಮಿಲಿ, ಚುಪ್ಕೆ ಚುಪ್ಕೆ, ಗೋಲ್ಮಾಲ, ಗುಡ್ಡಿ, ಬಾವರ್ಚಿ, ಅಭಿಮಾನ್,,,, ಆಗಿನ ದೊಡ್ಡ ಹಿಟ್ ಚಿತ್ರಗಳು.
ಒಟ್ಟು ೪೨ ಚಿತ್ರದ ನಿರ್ದೇಶನ ಮಾಡಿದ್ದು."
ಕಿರಿತೆರೆಯಲ್ಲೂ ಅವರ ಕೊಡುಗೆ ಇದೆ..!!



"ಫಿಲಂ ಫೇರ್, ರಾಷ್ಟ್ರ ಪ್ರಶಸ್ತಿ, ದಾದ ಸಾಹೇಬ್ ಫಾಲ್ಕೆ, ಪದ್ಮ ವಿಭೂಷಣ. ಪುರಸ್ಕ್ರತರು."


ಮಧ್ಯಮ ವರ್ಗದ ಕುಟುಂಬಗಳ ಕತೆ, ಗಂಡ-ಹೆಂಡತಿ, ಹಾಸ್ಯ, ಜೀವನ..
ಹೀಗೆ ಎಲ್ಲಾ ತರದ 'ಅದ್ಭತ' ಎನಿಸುವ ಚಿತ್ರ ಕೊಟ್ಟ "ಹ್ರಿಶಿದ"
೨೦೦೬ ಅಗುಸ್ಟ್ ೨೭ ರಂದು ಮುಂಬೈ ಯಲ್ಲಿ ನಿಧನ ರಾದರು.


ಇಂದು ಅವರ ಜನ್ಮದಿನದ ಪ್ರಯುಕ್ತ ಈ ಲೇಖನ.

"ಆನಂದ್" ಒಂದು ಅದ್ಭ್ತವಾದ ಚಿತ್ರ.. ಬದುಕು ಬದಲಿಸಿದ, ಬದಲಿಸುವ ಚಿತ್ರ..
ಅದೆಷ್ಟು ಸಾರಿ ನೋಡಿದೆನೋ, ಪ್ರತೀ ಸಾರಿ ನೋಡಿದಾಗ, ನಾನು ಹೊಸದಾಗಿದ್ದೇನೆ..
ಆನಂದ್, ಜೀವನಾಮೃತ .. ..!!



***

ಇವತ್ತಿಗೆ ೨೦ ವರ್ಷ ಆಯ್ತು, ಅವನು ಹೋಗಿ.. ಅಣ್ಣ "ಶಂಕ್ರಣ್ಣ", ಶಂಕರ್ ನಾಗ್.
"ಒಂದಾನೊಂದು ಕಾಲದಲ್ಲಿ, ಗಂಡುಗಲಿ.. ಕನಸುಗಾರ, ಅವನ ವೇಗ ಅದಕ್ಕೆ ಅವನೇ ಸಾಟಿ.. ಒಂದು ಮುತ್ತಿನ ಕತೆಯ ಕೊಟ್ಟು, ಜನುಮ ಜನುಮದ ಅನುಭಂದ ದಲ್ಲಿ, ಹೊಸ ಜೀವನ ನಡೆಸೆಂದ, ಗೀತಾಳ ಸಂಜು, ಮಿಂಚಿನ ಓಟಗಾರ, 'ಆಕ್ಸಿಡೆಂಟ್' ನಲ್ಲಿ ಹೋಗಿಬಿಟ್ಟ.. ನಮ್ಮೆಲ್ಲರ 'ಶಂಕರ್ ನಾಗ್"





"ಬದುಕು-ಸಾವು ಎಲ್ಲ ದೇವರ ಇಚ್ಛೆ..
ಅವನ ಲಿಖಿತ, ಯಾರು ಬದಲಿಸಲಾಗದು..
ಜೀವನದ ನಾಟಕದಲ್ಲಿ ಬಂದು ಹೋಗುವ ಪಾತ್ರಧಾರಿಗಳು ನಾವು,
ಯಾವ ಪಾತ್ರ ಎಲ್ಲಿ, ಹೇಗೆ, ಎಷ್ಟು, ಅದು ಅವನಂತೆ ಹೇಳಲಾಗದು..!"



***


ಹಲವು ಅದ್ಭುತವಾದ ಚಿತ್ರಗಳ ಕೊಟ್ಟ, ತಮ್ಮ ಚಿತ್ರಗಳಿಂದ ನಮ್ಮೆಲ್ಲರ ಬದುಕಿನಲ್ಲಿ ಬಂದ
"ಹ್ರಿಶಿಕೇಶ್ ಮುಖರ್ಜೀ - ಶಂಕರ್ ನಾಗ್" ಅವರಿಗೆ
ನನ್ನ ನಮನಗಳು..




Sep 16, 2010

"ಖಾಲಿ ಏಕೆ ಕುಳಿತೆ ?"

ಖಾಲಿ ಏಕೆ ಕುಳಿತೆ ?
ಕಾಡುತಿಲ್ಲವೆ ಹೊಸ ಕವಿತೆ
ಆಸೆಯ ಭಾವ,
ಭಾವಂತರಂಗದ ಕನಸುಗಳು
ಪ್ರಸವಿಸಲಿಲ್ಲವೇ ಕವಿತೆ ?
ಹುಟ್ಟಿ ಬರಲಿ ಲೋಕಪೂಜಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ತಿದ್ದಿ ತೀಡುವುದು ಅನುಭವದ ಹಣತೆ
ದಿವ್ಯ ಶಿಲ್ಪಿಯ ಬೆಳಕಿಗೆ
ಹರಳುಗಟ್ಟುವುದು ಕವಿತೆ
ಹಸಿವಿಗೆ ಶಬ್ಧಾಮೃತ ಕವಿತೆ
ಉಲ್ಲಾಸದ ಸೂರ್ಯ ರಶ್ಮಿ ಕವಿತೆ
ಖಾಲಿ ಏಕೆ ಕುಳಿತೆ ?

ಕಪ್ಪು ಬಿಳುಪು ಛಾಯಾಚಿತ್ರ
ಸಾರುವ ಭಾವ ಕವಿತೆ
ಸೌದರ್ಯ ಸಿರಿಯ ಸೆರೆಹಿಡಿವ
ಕಣ್ಣೊಳಗೆ ಭಾಷೆ ಸೋಲುವ ಕವಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ಪ್ರೇಮಸುಮದ ಘಮ ಕವಿತೆ
ಮೌನ ಆಡಲಾಗದ ಕವಿತೆ
ಮುತ್ತಾಗುವುದು ಸ್ಪರ್ಶ ಕವಿತೆ
ಭಕ್ತಿ ಕಾಣದ ಕವಿತೆ
ಹಡೆದವಳು ಕಣ್ತೆರೆದೊಡನೆ ಕಾಣುವ ದೇವತೆ
ಖಾಲಿ ಏಕೆ ಕುಳಿತೆ ?
ಪೂರ್ವಾಗ್ರಹಗಳಿಲ್ಲದೆ ಕಾಣು
ಎಲ್ಲೆಲ್ಲಿಯೂ ಕವಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ಪುಟಿದೇಳುವ ಕವಿತೆಗೆ
ದನಿಯಾಗು, ಶಬ್ಧವಾಗು
ಒಂದಾದಮೇಲೊಂದು ಮೊಳಕೆಯೊಡೆಯಲಿ ಕವಿತೆ
ಖಾಲಿ ಏಕೆ ಕುಳಿತೆ ?
ಬದುಕು ಹರಿವ ಕವಿತೆ
ಖಾಲಿ ಏಕೆ ಕುಳಿತೆ ?
ಖಾಲಿ ಏಕೆ ಕುಳಿತೆ ?

=====
=====

Sep 3, 2010

ಹೀಂಗ ಆದ್ರ ಹ್ಯಾಂಗ್...?


ನನಗ ಈ software ಮಂದಿ ಅರ್ಥ ಆಗುವಲ್ರು.
ನನ್ನ ಭಾಳ್ ಮಂದಿ ದೊಸ್ತ್ರು, ಈ software ನಾಗ ಕೆಲ್ಸಾ ಮಾಡ್ತಾರ,
ಖರೆ ಅಂದ್ರ ಅವರು ಅಲ್ಲಿ ಏನ್ ಮಾಡ್ತಾರ ಹ್ಯಾಂಗ ಮಾಡ್ತಾರ..?
ನನಗ ತಿಳಿವಲ್ದು..!!


ನನ್ನ ೬ ವರ್ಷದ ದೋಸ್ತ, ಸದ್ಯದ ರೂಮೇಟ್, ಅಣ್ಣ ನಂತಹ ಗೆಳೆಯ ಮೂರೂ ವರ್ಷದಿಂದ ಒಂದು ದೊಡ್ಡ ಕಂಪನ್ಯಾಗ ಕೆಲ್ಸಾ ಮಾಡತಾನ,
ಒಂದ ಮಾತ್ ಏನಂದ್ರ, ಅವನೀಗ ಏನು ಸೋಕಿ ಇಲ್ಲ, ಅಗ್ದಿ ಸರಳ ಜೀವನ,,
ಅಂವಾ ಒಬ್ಬ ರೈತನ ಮಗ..
ನನಗ ಅವಾಗ ಅವಾಗ ವಿಚಿತ್ರ ಕಾಣತನ,
ಅವನ ಕೆಲಸ ಏನ್ ಅಂತ ನಾ ಹೆಚ್ಚ ಕೆಳಿಕ್ಕ ಹೋಗಿಲ್ಲ..
ಮುಂಜಾನಿ ೭ ಗಂಟೆಗೆ ಹೋದ ಅಂದ್ರ ಮತ್ತ ನಮ್ಮ ಮಸಡಿ ನಾವು ನೋಡೋದು ರಾತ್ರಿ ೯ ಕ್..
ಒಮ್ಮೆ ಒಮ್ಮೆ ೯:೩೦/ ೧೦ ಗಂಟೆನೂ ಆಗತೈತಿ..
ಶನಿವಾರ - ರವಿವಾರ ಬತ್ತ ಅಂದ್ರ,
" ಭಾಳ ವರ್ಷಕ್ಕ ತವರಿಗ ಹೊಂಟ ಹೆಣ್ಣಿನ ಮುಖದಾಗಿನ ಆನಂದ್ "


ಆದ್ರ ನಾ ಇಲ್ಲಿ ಹೇಳಿಕ್ಕ ಹೊಂಟಿದ್ದ ಏನಂದ್ರ, ಸ್ವಲ್ಪ ದಿನ ಹೀಂದ ನಾ ಅವನ ಜೋಡಿ ಒಂದು ದೊಡ್ಡ ಅಂಗಡಿ ಹೋಗಿದ್ದೆ..
ಅಲ್ಲಿ ಅಂವಾ ರೊಕ್ಕ ಕೊಡು ಬದಲಿ, ಗಣಪತಿ ಹಬ್ಬಕ್ಕ/ ದೇವರು ಚಂದ ಬರೆಯು ಪಟ್ಟಿ ಬಂಡಲ್ ಇದ್ದಂತ ಒಂದು ಬಂಡಲ್ ಇಂದ ನಾಲ್ಕು ಚೀಟಿ ಹರದು ಕೊಟ್ಟ..!
ನನಗ ಅದು ಏನು ಗೊತ್ತಿಲ್ಲ..!


ಹೊರಗ ಬಂದು ಸ್ವಲ್ಪ ತಡಾ ಆದ ಮ್ಯಾಲ..
ಅಣ್ಣ ನೀ ಅವಾಗ್ಲೇ ಆ ದುಕಾನ್ ದವನಿಗೆ ಚೀಟಿ ಕೊಟ್ಟೆಲ್ಲಾ.. ಅದು ಏನು..!?
"Meal Pass " ಅಂದ..
ನನಗ ಏನು ಗೊತ್ತಾಗ್ಲಿಲ್ಲ ಅಂತ ಅವನಿಗ್ ಗೊತ್ತಾಗಿ, ನಾ ಮುಂದೆ ಕೇಳು ಮೊದಲ ಅವನೇ ಸುರು ಮಾಡಿ ವಿವರಿಸಿ ಹೇಳ್ದ..

ನನಗೆ ವಿಚಿತ್ರ..!!


"
ಅಲ್ಲೋ ಮಾರಾಯ ರೊಕ್ಕ ಕೊಟ್ಟ ಚೀಟಿ ತೊಗೊಳೋದು, ಮತ್ತ ಆ ಚೀಟಿ ರೊಕ್ಕ ಬದಲಿ ಕೊಡೋದು" ಸುಮ್ನೆ ಹೈರಾಣ ಅಲ್ಲ..?
" ಅದರ ಬದಲಿ ಸುಮ್ನೆ ರೊಕ್ಕ ಕೊಟ್ರ ಮಾತ್ ಮುಗಿತಲ್ಲಾ.." ನಾ ಹೇಳ್ದೆ.


ಅದಕ್ಕ ಅಂವಾ ಮತ್ತೊಂದಿಷ್ಟ ವಿವರಿಸಿ, ಬಿಡಿಸಿ ಹೇಳ್ದ..


ಅಲ್ಲಾ ನೀವ್ ಮಂದಿ ಎಷ್ಟ ತಲೀ ಓಡುಸ್ತಿರಿ,,,?
ಹಂಗ " ಅಗ್ದಿ ಆರಂ ಬೇಕು ಅನೌರು " ..!!
ಆರಂ ಅನ್ನೋದು ಎಲ್ಲರಿಗೂ ಬೇಕು,
ಆದ್ರ ನೀವ್ ಮಂದಿ ಭಾಳೇ ಆರಂ ಕೆಳ್ತೀರಪ್ಪ..! ಅದು ಏನ್ ಮಾಡ್ತಿರೋ..?


ನಾ ಏನೇ ಹೇಳ್ದ್ರು, ಸ್ವಲ್ಪ ವಾದ ಮಾಡಿ, ಸ್ವಲ್ಪ ನಕ್ಕು, ವಿವರಣೆ ಕೊಡ್ತಾ ಹೋದ ಅಣ್ಣ..
ಅಲ್ಲೇ ಸಮೀಪದ ಹೋಟೆಲ್ಲಿಗ ಉಟಕ್ಕ್ ಹೋದ್ವಿ..


ಊಟ ಆದ ಮ್ಯಾಲ ಮತ್ತ ನಾ ಸುರು ಮಾಡದೆ,,
ಈಗ ಎಲ್ಲ ಕಡೀ ಕಾರ್ಡ್ ಸಿಸ್ಟಮ್ ಆಗೈತಿ,

Online payment.. Income Tax, Electricity,
Phone Bill, Water Bill, Film/Bus/Train/Flight Ticket..
ಎಲ್ಲ ಕ್ರೆಡಿಟ್ / ಡೆಬಿಟ್ ಕಾರ್ಡ್..


ಅದಕ್ಕ ಅಣ್ಣ ಅಂದ, ಹೌದು ಅದೆಲ್ಲ ನಮ್ಮ ನಿಮ್ಮ ಅನುಕೂಲಕ್ಕೆ.
ಅದರಿಂದ ಎನೇನ ಲಾಭ ಐತಿ ಅಂತ ವನ್ದಿಷ್ಟ ಉದಾಹರಣೆ ಕೊಟ್ಟ.
ನಾ ಬಿಡಬೇಕಲ್ಲ..! ?

ನೀವು ಮುಂದ ಮುಂದ ಹೆಂಗ ಮಾಡ್ರಿ ಅಂದ್ರ,
' ದೇವರ ಹುಂಡಿಗ' ರೊಕ್ಕ ಹಾಕು ಬದಲು, ' ಕಾರ್ಡ್ ಸಿಸ್ಟಮ್' ಮಾಡ್ರೀ...
ಅದೂ ಕೆಲವು ಕಡೆ ಇದೆ, ಮುಂದೆ ಎಲ್ಲ ಕಡೆ ಆಗುತ್ತೆ. ಅಂದ..!!

ಹಾಂ.!
ಹಂಗಂದ್ರ, ಇನ್ನೊಂದಿಷ್ಟು ಅದಕ್ಕ ಸೇರಸ್ರಿ..

ಹಾಲಿನ ರೊಕ್ಕ, ಸಣ್ಣ ಕಿರಾಣಿ ಅಂಗಡಿ, ಕಟ್ಟಿಂಗ್ ದುಕಾನ,
ಚಪ್ಲಿ ದುಕಾನ್, ಬೀಡಾ ಅಂಗಡಿ, ಮನೀ ಬಾಡಗಿ,
ಮಕ್ಕಳ ಸಾಲಿ/ ಟ್ಯುಶನ್ ಫೀಸ್,,,

ವ್ಯವಸಾಯ ಮಾಡೋ ರೈತರಿಗೂ ಒಂದೊಂದು ಕಾರ್ಡ್ ಕೊಡ್ರಿ.. ಅಕ್ಕಿ, ಜೋಳ, ರಾಗಿ,,,
ಎಲ್ಲದಕ್ಕೂ ಮತ್ತ "ಪ್ರೀ ಪೈಡ್/ ಪೋಸ್ಟ್ ಪೈಡ್ ಮಾಡ್ರಿ...!


ಅಣ್ಣ ಒಮ್ಮ ನನಗ ನೋಡಿ, ಸಣ್ಣಗೆ ನಕ್ಕ, ಸ್ವಲ್ಪ ಸರೀ ಅನಸ್ಲಿಲ್ಲ ನನಗ..
ಆ ನಗುವು ನನಗ ಒಂತರ ಸಿಟ್ಟು ತರಸ್ತು..


ಕಡೀಗ ' Public Toilet' ನು ಬಿಡಬ್ಯಾಡ್ರಿ..

ಒಂದಕ್ಕ ಹೋದ್ರ ಇಷ್ಟು, ಸಂಡಾಸ್ ಹೋದ್ರ ಇಷ್ಟು..
ಅದರಾಗ್ 'ಮಂತ್ಹ್ಲಿ ಸ್ಕೀಮ್, ಹಂಗ ಮೂರೂ/ಆರು/ವರುಷದ ಚಂದಾದಾರರಾಗಿ.. "
ಅಂತ ಹಾಕ್ರಿ..!!


ಅದು ಒಂದ ದಿನ ಬರುತ್ತೆ.. !!
ಕಣ್ಣಲ್ಲಿ ಕಣ್ಣಿಟ್ಟು ಅಷ್ಟೇ ನಾ..? ಮುಂದೆ ಕೇಳು..


ಅಲ್ಲೇ ಇದ್ದ " ಹಳೇ ಪೇಪರ್ " ದುಕಾನ್ ನೋಡಿ, ಗಂಭೀರವಾಗಿ ಹೇಳ್ದೆ..
ಅಣ್ಣ, " ನಿಮ್ಮ ಮಂದಿ ಗ , ಹಳೇ ಪೇಪರ್ ಮಾರೋ 'ಫೆಸಿಲಿಟಿ ' ಹ್ಯಾಂಗಿರಬೇಕು ಅಂದ್ರ..


"..... group of old papers" Pvt limited.


for more details visit
www.----.com
OR
"call our 24/7 toll free no 1800 --- --- "


Give 10kg of old papers and get 11kg paper's price..


Take 10kg of old paper and get 1 kg absolutely free..!


Cash back offer, --% profit, door delivery........


ಮತ್ತ ಅಲ್ಲಿಗೆ ಬಿಡಬ್ಯಾಡ್ರಿ..
ನಾವು ಇಂತಿಂತ "ಪೇಪರ್" ಜೋಡಿ " ಟೈ ಅಪ್ " ಮಾಡಿವಿ..
ನೀವು ಆ ಪೇಪರ್ ತೊಗೊಂಡ್ರ ನಿಮಗ ವರ್ಷಕ್ಕ ಇಷ್ಟ 'ರಿಯಾಯತಿ'
ಮತ್ತ ನಾವು ಆ ಪೇಪರ್ ಗ ಜಾಸ್ತಿ ರೊಕ್ಕ ಕೊಡ್ತೀವಿ...!!


"ಅಣ್ಣ, ಇವೂ ಮಾಡ್ರಿ... ಬಿಡಬ್ಯಾಡ್ರಿ...!"


ನೋಡೋ..
ಆಗುತ್ತೆ..! ನೀ ಇಷ್ಟೊತ್ತು ಹೇಳ್ದೆ ಅಲ್ಲ ,
ಅದಕ್ಕೂ ಒಂದು ಕಾಲ ಬರುತ್ತೆ.. !!
ಚಿಕ್ಕ ಪುಟ್ಟ ಅಂಗಡಿ ಇಂದ, ರಸ್ತೆ ಪಕ್ಕ ಮಾರೋ 'ಬೋಂಡ /ಬಜ್ಜಿ ' ಅಂಗಡಿ ಇಂದ,
ಸಾರ್ವಜನಿಕ ಶೌಚಾಲಯಕ್ಕು.. ಬರುತ್ತೆ..!



ದೇವಸ್ತಾನಕ್ಕೆ ಅಂದಿಯಲ್ಲ..?

ದೇವಸ್ತಾನ ಅಲ್ಲ, ಮನೆಯಲ್ಲಿ ಆಗುವ ಚಿಕ್ಕ-ಪುಟ್ಟ ಕಾರ್ಯಕ್ರಮ,
ಮದುವೆ ಗೆ ಕಾಣಿಕೆ ಆಗಿ ದುಡ್ಡು ಕೊಡತಾರಲ್ಲಾ...?
ಅಲ್ಲಿಗೂ "ಕ್ರೆಡಿಟ್ /ಡೆಬಿಟ್ ಕಾರ್ಡ್ ಬರ್ತಾವೆ..!


ಬಿಲ್ಲಿನಿಂದ ಬಿಟ್ಟ ಬಾಣಿನ ಹಂಗ ಇತ್ತು, ಅವನ ಉತ್ತರ .. !


ಸ್ವಲ್ಪ ಹೊತ್ತು ನನಗ ಏನ್ ಹೇಳ್ಬೇಕು, ಏನ್ ಕೇಳಬೇಕು ಗೊತ್ತಾಗ್ಲಿಲ್ಲಾ.!
ಸುಮ್ನ ಅವನೀಗ ನೋಡಿ ಕೇಳ್ದೆ.. " ಮತ್ತ ಬಿಕ್ಷುಕರು..?"

ಗೊತ್ತಿಲ್ಲ ಅನ್ನೋ ಅರ್ಥ ಬರಂಗ..
ತುಟಿ ಒತ್ತಿ ಹಿಡಿದು, ಎರಡು ಹುಬ್ಬು ಒಮ್ಮೆಲೇ ಮ್ಯಾಲ ಮಾಡದ..!!


ನಾ ಸಣ್ಣಗ ಅನ್ಕೊಂಡೆ
ಅವರಿಗೊಂದೊಂದು "ಕಾರ್ಡ್ ಮಶೀನು" ಅಂತ ನಮ್ಮ ಸರಕಾರ ಕೊಟ್ಟರ,,,
ಆಶ್ಚರ್ಯ ಇಲ್ಲ ಬೀಡು..?


ಕಡೀಗ ನನ್ನ ತಲ್ಯಾಗ ಉಳದಿದ್ದ್ ಒಂದೇ,


"
ಇದೆಲ್ಲ ನಮ್ಮ ವಿಕಾಸಕ್ಕೋ, ವಿನಾಶಕ್ಕೋ..?"
ನಮ್ಮ ಜೀವನ ಎಲ್ಲಿ ಹೊಂಟೈತಿ...?



ಹೀಂಗ ಆದ್ರ ಹ್ಯಾಂಗ್...?

Aug 23, 2010

"ಪ್ರೀತಿಯ ರಾತ್ರಿ"

ಪ್ರೀತಿಯ ಕುಲುಮೆಯಲ್ಲಿ,
ಹುಸಿಮುನಿಸು ತಿಳಿಯದಂತೆ ಸೋಕಿಹೋಗುವ
ಆಗಂತುಕ.
ಕನ್ನಡಿಯಲಿ ಕಂಡ ಪ್ರತಿಬಿಂಬವೇ ಒಂದರೆಕ್ಷಣ
ಅಪರಿಚಿತ.
ಒಲವ ಸೆಳೆತಕೆ ಸೋತ ಮನಸಿಗೆ
ತಂಗಾಳಿ ಹೊತ್ತು ತರುವ ರಾತ್ರಿ
ವರ್ಣಿಸಲಾಗದ ಪ್ರಾಣ ಸ್ನೇಹಿತ.

=====
=====

Jul 31, 2010

"ಕಿಟಕಿಯಂಚಲ್ಲಿ"

ಕಿಟಕಿಯಿಂದ ಏನೇನೂ
ಕಾಣುತ್ತಿಲ್ಲವೆಂದು !
ಹತಾಶೆಯಿಂದ ಕಿಟಕಿಯನ್ನ
ಜೋರಾಗಿ ಮುಚ್ಚಿದೆ.

ಕಿಟಕಿ ಬಾಗಿಲು ಬೀಸಿದ ಗಾಳಿಗೆ,
ಖಾಲಿ ಪುಸ್ತಕದ ಹಾಳೆ ತಾನಾಗಿ ತೆರೆದುಕೊಂಡಿತು .
ಅಲ್ಲಿ, ತಾಜಾ ಹೂವಿನ ಪರಿಮಳವಿತ್ತು.
ಹೊಸ ಮುನ್ನುಡಿಗೆ ಕಾಯುತ್ತಿತ್ತು.

ತಕ್ಷಣ ನನ್ನೊಳಗೆ ಬೀಸಿದ ತಂಗಾಳಿಗೆ
ಕಿಟಕಿ ತೆರೆಯಿತು.
ನನ್ನ ನೋಟ ಬದಲಾಗಿತ್ತು.
ಆಕಾಶವೆಲ್ಲ ಚೆಂದದ ಚಿತ್ತಾರವೆನಿಸಿತು.
ಯಾವುದೋ ಹಕ್ಕಿ ಕತ್ತಲಲ್ಲೂ ಗೂಡು ಕಟ್ಟುವ ತವಕದಲ್ಲಿತ್ತು.
ಕಿಟಕಿಯಂಚಲ್ಲಿ ಹೊಸ ಕನಸೊಂದು ಮೆಲ್ಲಗೆ ನನ್ನಾವರಿಸಿಕೊಂಡಿತು.

=====
=====

Jul 16, 2010


"ಯಾರು  ನಾವು"


ಯಾರು ಧ್ರೋಹಿಗಳು
ಯಾರು ಮೋಸಗಾರರು
ಯಾರು ಹಿತಶತ್ರುಗಳು
ಯಾರು ನಯವಂಚಕರು
ನಮಗಾಗುತಿಲ್ಲ ಮನವರಿಕೆ
ಅಪರಾಧಿ ಹೋದರು ಮರಳಿ ಮಣ್ಣಿಗೆ .
ನಮ್ಮಲ್ಲಿ  ಬರೀ  ಕೊನೆಯಿರದ ತನಿಖೆ ತನಿಖೆ . . . .

ಆಶವಾದಿಯ ನಿಷ್ಕಲ್ಮಶ ರಾಷ್ಟ್ರದ ಕನಸು ಕಣ್ಮರೆಯಾಗುತಿದೆ.
ಕ್ರಾಂತಿಯ ಕನವರಿಕೆ ಪಾಪದ ಸುಳಿಯಲ್ಲಿ ಸಿಲುಕಿದೆ.
 ಪವಿತ್ರ ಕನವರಿಕೆಯೊಂದು ಕನಸಲ್ಲಿ ತೊದಲು ನುಡಿಯಾಡಲು ಸಹ  ತಡವರಿಸಿದೆ.
ಯಾರ ಭಯಕೋ ಏನೋ , ಭಾರತಾಂಬೆ ಬರಡಾಗುತಿಹಳು.

=====
=====

Jul 2, 2010

ಪಕ್ಕು ಮಾಮ...


೧)
ಗೆಳೆಯನಿಗೆ ಹುಷಾರಿಲ್ಲ, ರಾತ್ರಿ ಮನೆಗೆ ಲೇಟಾಗಿ ಬರುವೆ ಎಂದು ಆಶಾ ಅಕ್ಕನಿಗೆ ಹೇಳಿಹೋದ 'ಪಕ್ಕು ಮಾಮ' ..
'ಚಿಯರ್ ಗರ್ಲ್ಸ್' ಹಿಂದೆ ಕುಣಿಯುತ್ತ, ಟೀವಿಯಲ್ಲಿ 'ಲೈವ್' ಆಗಿ ಸಿಕ್ಕಿಬಿದ್ದ ..!


***

೨)
ಹೆಂಡತಿ ತವರಿಗೆ ಹೋದ ಖುಷಿಯಲ್ಲಿ, ಆರಾಮಾಗಿ ಟೀವಿ ನೋಡುತ್ತಾ ಕುಳಿತಿದ್ದ 'ಪಕ್ಕು ಮಾಮ' ಏನೋ ಹೊಳೆದಂತಾಗಿ, ಗೆಳೆಯನಿಗೆ ಫೋನ್ ಮಾಡಿ ಹೇಳಿದ.. " ಬೇಗ ಎಫ್ ಟೀವಿ ಹಾಕು ಮಾರಾಯ, ಒಳ್ಳೆ ಪ್ರೊಗ್ರಾಮ್.. ಕಿಂಗ್ ಫಿಷೆರ್ ಕ್ಯಾಲೆಂಡರ್ ದು .. "
ಆ ಕಡೆಯಿಂದ : ಅಪ್ಪ ಮಲಗಿದ್ದಾರೆ, ಥ್ಯಾಂಕ್ಸ್ ಫಾರ್ ದಿ ಇನ್ಫಾರ್ಮಶನ್, ಗುಡ್ ನೈಟ್ ಅಂಕಲ್.. ಎಂದು ಗೆಳೆಯನ ಮಗ ಫೋನ್ ಇಟ್ಟ.. !


***

೩)
ಬೇಸಿಗೆ ರಜೆಯಲ್ಲಿ ಮಗನಿಗೆ 'personality developement ' ಕ್ಲಾಸಿಗೆ ಸೇರಿಸಲು ಹೋದ 'ಪಕ್ಕು ಮಾಮ' ಮಗನ 'ಮಿಸ್' ಜೊತೆ ಮಾತಾಡುವಾಗ ಸಂಕೊಚಪಟ್ಟ.
ಹೊರಗೆ ಬಂದು, ಛೆ... ಎಂತ ಮಾಡಿದೆ,,? ಮಿಸ್ ಮುಂದೆ ಯಾಕೆ ಅಷ್ಟು ಸಂಕೋಚ..?
ತನ್ನ ಮೇಲೇನೆ ಸಿಟ್ಟು ಮಾಡಿಕೊಂಡು ಮರುಗಿದ..
ಎರಡು ನಿಮಿಷ ಯೋಚಿಸಿ, ಒಂದು ನಿರ್ಧಾರಕ್ಕೆ ಬಂದ..!
ತಾನು 'develope ಮಾಡ್ಕೊಬೇಕು, personality ನಾ ..
ಎಂದು "SPA " ಅತ್ತ ಹೊರಟ.... !!!


***


)
ಮೇಷ್ಟ್ರು: ವಾಟ್ ಇಸ್ ಟೀನ್ ಏಜ್..?

ನಾಗು: (ಅಮಾಯಕ ದನಿಯಲ್ಲಿ )
ಸರ್, ಕ್ವಾಟರ್ ಮೊದಲು ನೈಂಟಿ..
ನೈಂಟಿ ಗಿಂತ ಮೊದಲು, ಬೀರ್ ಬಾಟಲ್ ..
ಬಾಟಲ್ ಗಿಂತ ಮುಂಚೆ ಟಿನ್ ಬೀರ್..
'ಟಿನ್' ಕುಡಿಯುವ ಕಾಲಾವಧಿಯನ್ನು, ಟೀನ್ ಏಜ್ ಎನ್ನುವರು..!!


ಪಕ್ಕು ಮಾಮ (ಜಾಣ ಹುಡುಗ):
'ಟೀ' ಡಬಲ್ '' 'ಏನ್' 'ಎ' 'ಜಿ' ''.. ಟೀನ್ ಏಜ್.
ಟೀನ್ ಏಜ್ ಎಂದರೆ ...

ಹುಡುಗ 'ಯಂಗ್ ಏಜ್' ನಲ್ಲಿ
ಹುಡುಗಿ ಜೊತೆ 'ಎಂಗೇಜ್' ಆಗಿರುವುದು..!!


***


)
ಆಗತಾನೆ 'ತ್ರೀ ಇಡಿಯಟ್ಸ್' ನೋಡಿ ಬಂದ ,
ನಾಗು , ವಿನಾಯಕ (ಅಮಾಯಕ) ಮತ್ತು ಪಕ್ಕು ಮಾಮ..

ನಾಗು : ಪ್ರಕಾಶು ನಮ್ಮ ಅಮಾಯಕನ ತಲೆ
ಆಹಾ ಏನ್ ತಲೆ.. " ತೊಳೆದ ಕನ್ನಡಿ "

ವಿನಾಯಕ : ಹಂಗಂದ್ರೆ ನಿಮ್ಮದು..?
"ಕೊಳೆಯಾಗಿರೋ ಕನ್ನಡಿ ನಾ..? "

ಪಕ್ಕು ಮಾಮ: ಇಬ್ಬರದು ಸರಿ ಎಂದು..
ನನ್ನ ತಲೇನೆ ಪರವಾಗಿಲ್ಲ,
'ಮುಂದೆ ಸೂರ್ಯೋದಯ... ಹಿಂದೆ ಅರ್ಧ-ಚಂದ್ರೋದಯ'


***





[ ಗೆಳೆಯರೇ; ನಿಮಗೆಲ್ಲ 'ಇಟ್ಟಿಗೆ ಸೆಮೆಂಟ್' ನ ಪ್ರಕಾಶ್ ಹೆಗ್ಡೆ - ಪ್ರಕಾಶ್ ಅಣ್ಣ ಗೊತ್ತು.. ಆದರೆ ನನಗೆ ಅವರು 'ಪ್ರಕಾಶ್ ಮಾಮ' .. ' ಹೆಸರೇ ಬೇಡ'.. ಪುಸ್ತಕದಿಂದ ಪರಿಚಯ ಆಗಿದ್ದು.. ಮೊದಲಸಲ ಮಾತಾಡಿದಾಗ 'ಮಾಮ' ಅಂದೇ.. ಯಾಕೆ..? ಗೊತ್ತಿಲ್ಲ.! ಇವತ್ತು ನನಗೆ ನಾಗರಾಜ್ ನಿಗೆ ಅವರು ಮಾಮ.. "ಪಕ್ಕು ಮಾಮ" ..
ಪ್ರೀತಿಯಿಂದ,
ಅನಿಲ್ ಬೇಡಗೆ (A-NIL: anilbedge@gmail.com)
ನಾಗರಾಜ್.ಕೆ (NRK: rajahridaya@gmail.com) ]



Jun 22, 2010

"ತೀರದ-ಹನಿ"

ಬೆಟ್ಟದ ತುತ್ತತುದಿಯಲಿ
ಅರಳಿ ನಿಂತ ಹೂವಿನಂಚಲಿ
ಜಾರಲು ಕಾದಿರುವ ತಣ್ಣನೆ ಹನಿ,
ನೀನು.
ನಿನ್ನ ಮುಂಗುರುಳಿಗಂಟಿದ
ಹನಿಗಾಗಿ ಕಾದಿರುವೆ
ದಾಹ ತೀರದ
ಸಾಗರ ತೀರ,
ನಾನು.

=====


May 6, 2010


"ಕಾಣದ ನೋವು"

ಬರೆಸಿಕೊಳ್ಳುವ ಹಾಳೆ ಕೇಳಿತು,
ಬರೆವ ಕವಿಗೊಮ್ಮೆ !
ಮರದುಸಿರ ನಿಲ್ಲಿಸಿ
ಕೊರೆದು ಅರೆದು ತರೆವಾರಿ ಕತ್ತರಿಸಿ ನಗುವಾಗ,
ಮರದಳಲು ನಿನಗೆ ಕೇಳಲಿಲ್ಲವೇ ?
ಎಲ್ಲರ ಮನದಾಳಕಿಳಿವ ಕವಿಯೇ .
ನಿನ್ನ ಪ್ರತಿ ಅಕ್ಷರವೂ ನನ್ನೆದೆ ಇರಿವಾಗ,
ಮಾನವೀಯ ಮೌಲ್ಯ ಎತ್ತಿ ಹಿಡಿವ ಕವಿತೆ
ಬರೆದೆ ಎನ್ನುವ ಹೆಮ್ಮೆಯಲಿ ನೀನಿರುವಾಗ,
ನನ್ನೆದೆಯ ರಕ್ತದ ಕಲೆ ನಿನಗೆ ಕಾಣಲಿಲ್ಲವೇ ?

ಮೃದು ಕವಿ ನಕ್ಕು ನುಡಿದ:
ಎಲ್ಲವೂ ಅನುಭವಿಸಬೇಕಾದ ಅನಿವಾರ್ಯತೆ.
ಹಾಳೆಯಕಣ್ಣಲ್ಲಿ ಕಣ್ಣಿಟ್ಟು ನೋಡಿದ ಕವಿಗೆ
ಹೊಳೆಯಿತು ಹೊಸ ಕವಿತೆ.

=====
=====

Apr 27, 2010

ವರ್ಷಾ..

ಆಹಾ ..

ಬಿರುಬೇಸಿಗೆಯಲ್ಲಿ ಮಳೆಯ ಪ್ರಭಾವ.. ಸಂಜೆ ಆದಂತೆ ಜೋರು ಜೋರು ಗಾಳಿ, ತುಂತುರು ಮಳೆ..
ಉಳಿದಹೊತ್ತು, ಬೆವರ ಮಳೆ ...
ಆದರೆ ಗೆಳತಿ, ಮನಸೆಲ್ಲ ಮುಂಗಾರು ಮಳೆ..!!
ಎಲ್ಲ ಹನಿಗಳ ಲೀಲೆ..

ನೆನಪಿದಿಯ..? ನಮ್ಮಿಬ್ಬರ ಮೊದಲ ಭೇಟಿ. ಆ ಮಳೆಗಾಲದ ದಿನ, ಶಾಲೆ ಬಿಟ್ಟ ವೇಳೆ ಮುಖ ಮುಚ್ಚುವಂತೆ ಕೊಡೆ ಹಿಡಿದು ಓಡಿ ಬರುವಾಗ ಒಬ್ಬರಿಗೊಬ್ಬರು ಡ್ಯಾಶ್ ಹೊಡೆದದ್ದು...!!
ಗುನು ಗುನು ಅಂತ ನನ್ನ ಬೈಕೊಂಡು ಹೋಗಿ ಮರದಡಿಗೆ ನಿಂತಿದ್ದು..
ಬಾಲ್ಯದ ಆ ಮಳೆಗಾಲ ಎಷ್ಟೊಂದು ಚೆನ್ನ..


"ವೋ ಕಾಗಜ್ ಕಿ ಕಷ್ತಿ, ವೋ ಬಾರೀಶ್ ಕ ಪಾನಿ.."


ಕೊಡೆ ಇದ್ದರು, ಮಡಚಿಟ್ಟು... ರೈನ್ ಕೋಟ್ ಬಿಚ್ಚಿ..
ಓ ಓ ಓ ... ವೋ... ಅಂತ ಕೂಗಿಕೊಂಡು ಕುನಿದಾಡ್ತಾ ಆ ಮಳೆಯಲ್ಲಿ ನೆನೆಯೋದು ಮಜಾ ರೆ ಮಜಾ..
ತಲೆಯಲ್ಲ ವದ್ದೆ ಆಗಿ, ಸ್ಕೂಲ್ ಉನಿಫಾರ್ಮ್ ಕೆಸರಿಕರನವಾದದ್ದು
ಅಮ್ಮ ಬೈಕೊಂಡು ಬೈಕೊಂಡು ತಲೆ ವರಸಿದ್ದು..
ಕೊಡೆ ಕಳೆದಾಗ, ತಲೆ ಮೇಲೆ ಎರಡು ಕೊಟ್ಟಿದ್ದು....
ಆ ಹಾ.. ಸವಿ ಸವಿ ನೆನಪು..
ಮನದಲ್ಲಿ ಹಸಿ ಹಸಿ..

ಅವೆಲ್ಲ ಆಗಿ ಎಷ್ಟು ವರುಷಗಳಾದವು ,, ಎಷ್ಟು ಮಳೆಗಾಲ ಕಳೆದವು..
ಕೆಲ ವರುಷಗಳ ಅಗಲಿಕೆ, ಮತ್ತೆ ಮಳೆಗಾಲದ ಸಂಜೆ ಭೇಟಿ, ನೆನಪುಗಳ ಮೋಡದಲ್ಲಿ ಮನಸುಗಳು ತೇಲಾಡಿದ್ದು..
ನಮ್ಮಿಬ್ಬರ ಪ್ರೀತಿ....!!!!!!


ಹಾ..! ಆ ಸಂಜೆ ಪಾನಿಪುರಿ ತಿಂದು ಇನ್ನೇನು ಹೋರದಬೇಕು ಅನ್ನೋದ್ರಲ್ಲಿ ತುಂತುರು ಸುರಿದ ಮಳೆ..
ಮೊದಲೆಲ್ಲಾ, ಮಳೆ ಅಂದ್ರೆ ಕೆಸರು... ಶ್ಹೀ ಶ್ಹೀ.. ನೆನೆದರೆ ಆಕ್ಷ್ಹೀ.. ಅನ್ನೋಳು.. ಅವತ್ತು ಹೇಗೆ ನೆನೆದೆ, ಕುಣಿದೆ,,
ಚಪ್ಪಲಿ ಕೈಯಲ್ಲಿ ಹಿಡಕೊಂಡು ನಡೆದದ್ದು.. ನಿಲ್ಲದ ನಿನ್ನ ಆ ಚಿಕ್ಕ ಚಿಕ್ಕ ಗುಂಡಿಯಲ್ಲಿನ ಜಿಗಿತ...

ಮಳೆ ಜೋರಾದಾಗ, ಅಲ್ಲೇ ಇದ್ದ ಟೀ ಅಂಗಡಿಯ ಶೆಡ್ದಲ್ಲಿ ನಿಂತು ನಿನ್ನ ಕುದಲೋಮ್ಮೆ ಸೊಂಯ್ಯನೆ ತಿರುಗಿಸಿದ್ದು...
ಆಹಾ ಆಹಾ,, ಅವತ್ತು ನನ್ನ ನಾನು ಕಷ್ಟ ಪಟ್ಟು ಕಂಟ್ರೋಲ್ ಮಾಡಿದ್ದು...!!!
ಶೆಡ್ಡಿನ ಸಂದಿಯಿಂದ ಸರಿಯುತ್ತಿದ್ದ ಹನಿಗಳಿಗೆ ಕೈ ಒಡ್ಡಿ ನನ್ನ ಮುಖಕ್ಕೆ ಎರಚಿದ್ದು..

ಒಂದು ಮಾತು, ಅವತ್ತಿನ ನಿನ್ನ ಚೆಲುವಿನ ಬಗ್ಗೆ ಎನ್ಹೆಳಲಿ..
ನೀನು ಇಷ್ಟೇ ಸರಿಸಿದ್ದರು ನಿನ್ನ ಮುಖಕ್ಕೆ ಅಂತು ಕೊಂಡೆ ಇದ್ದ ಆ ಕೂದಲ ಗುಂಪು..
ನಿನ್ನ ಹಣೆ, ಕಣ್ಣ ರೆಪ್ಪೆ ಮುದ್ದಿಸುತ್ತಿದ್ದ ಇನ್ನೊಂದು ಕೂದಲ ಗುಂಪು..
ಕಿವಿಯ ತುದಿ, ಮೂಗಿನ ತುದಿಗೆ ಜೋತು ಬಿದ್ದ ನೀರ ಹನಿ..!
ಬೆವರ ಹನಿಗಳು ಮುತ್ತಿಟ್ಟಂತ ಕಾಣುತಿದ್ದ ನಿನ್ನ ಹಣೆ..,
ನೀಲಿ ಬಣ್ಣದ ಓಲೆ.. ಒಂದು ಒಲೆಗೆ ಸುತ್ತಿಕೊಂಡ ಕೂದಲು..
ಆಕಾಶ ನೀಲಿ ಚುಡಿ...
ಚಂದಿರನಿಗೆ ಚುಕ್ಕಿ ಇಟ್ಟ ಹಾಗೆ ನಿನ್ನ ನಯನ...
ಆ ಕೆಂದುಟಿ...
ಅಬ್ಬಾ... !!!


"ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಗ್ನ್ಯ"


ಅಸಲಿಗೆ ನಮ್ಮಿಬ್ಬರದು ಎಂಥ ಸಮಾಗಮ..?
ನನ್ನದು.. ಲೆತು, ವೆಲ್ದಿಂಗು, ಗ್ರಿಲ್ಲಿಂಗು, ದ್ರಿಲ್ಲಿಂಗು...!!
ನಿನ್ನದು.. ಸ್ಕೆತೊಸ್ಕೊಪು, ಎಕ್ಸ್ ರೆ, ಸ್ಕಾನಿಂಗು ....!!
ಹಾ.. !!


ಮೈ ಡಿಯರ್ ಹನಿ,
ಹನಿ ಹನಿಗಳಿಂದ ಹಳ್ಳ ಅಂತಾರೆ..
ನಾನು ಮೆಡಿಕಲ್ ಸೇರಿಲ್ಲ, ಮನೆಯಲ್ಲಿ ಮದುವೆಗೆ ಒಪ್ಪಿಗೆ ಕೊಡ್ತಾರೋ ಇಲ್ಲವೋ ಎಂದು ನೀನು ಸೀರಿಯಸ್ ಆಗಿ ಇಟ್ಟ ಕಣ್ಣೀರ ಹನಿ,,,
ಒಪ್ಪಿಗೆ ಕೊಟ್ಟಾಗ ಆನಂದ ಭಾಷ್ಪ..
ನಿನ್ನ ಹಣೆಗೆ ಮೊದಲ ಹೂ ಮುತ್ತು ಕೊಟ್ಟಾಗ , ನಿನ್ನ ಕಣ್ಣಂಚಲಿ ಬಂದ ಆ ಮುತ್ತು ಹನಿ..!
ಪಾನಿಪುರಿ ತಿನ್ನೋವಾಗ ನಿನ್ನ ಕೇಳ ತುಟಿಗೆ ನೇತಾಡುತ ನನ್ನ ಗಂಟಲ ಒಣಗಿಸುವ ಆ ಹನಿ,,,,!!!


ಹೆಜ್ಜೆನಿನಂತೆ ಸುರಿಯುವ ಪುಟ್ಟ ಕಂದಮ್ಮಗಳ ಜೊಲ್ಲ ಹನಿ..

ಮಳೆಗೂ ನಮಗೂ ಎಂಥ ಸಂಭಂದವೋ..?
ಇನ್ನು ಬೆರಳೆಣಿಕೆಯ ದಿನಗಳಲ್ಲಿ ನಮ್ಮ ಮದುವೆ....!!

ಆ ದಿನವು ಮಳೆ ಬಂದರೆ ಎಷ್ಟು ಚೆನ್ನ..
ಹಸಿ ಹಸಿ.. ಬಿಸಿ ಬಿಸಿ.. !!

ಮತ್ತೊಂದು ಮಾತು,,
ನಮ್ಮ ಮಗಳ ಹೆಸರು......
" ವರ್ಷಾ "

***

( ಇದು ಎರಡು ವರ್ಷಗಳ ಹಿಂದೆ ಬರೆದದ್ದು. ನಾಗ {NRK} ಬರೆದ 'ಶುರು ಆಯ್ತಲ್ರಿ' ಓದಿ ನೆನಪಾಯಿತು )

Apr 14, 2010

"ಶುರುವಾಯ್ತಲ್ಲರೀ . . ."

ರೋಡಿನಲಿ ಹಾರಡಿಕೊಂಡು ಬೀಳುವ ಹಳದಿ ಹೂಗಳು
ಒಡಲುಕ್ಕಿ ಹರಿಯುವ ಚರಂಡಿಗಳು
ಅಕ್ಕ ಪಕ್ಕ ಸಿಕ್ಕ ಸಿಕ್ಕ ಮರ,ಮನೆಗಳ ಕೆಳಗೆ ಪಿಳಿ ಪಿಳಿ ಕಣ್ಣು ಬಿಡುವ ಗಂಡು ಹೆಣ್ಣು.
ಬೋಂಡ ಬಜ್ಜಿಯ ಕರೆಯೋಲೆ ಆಹಾ ಆಹಾ

ಚಹಾದ ಘಮ ಘಮ, ಸಿಗರೇಟಿನ ಘಾಟು

ಮನೆಯಂಗಳದಲಿ
ಮುಗಿಲಿಗೆ ಬಾಯೊಡ್ಡಿ, ಕೈ ರೆಕ್ಕೆ ಮಾಡಿಕೊಂಡು ಗಿರ ಗಿರ ತಿರುಗುವ ಪುಟ್ಟ ಪುಟ್ಟಿ
ರಾತ್ರಿ ಬರುವ ಕರೆಗೆ, ಸಂಜೆಯಿಂದಲೆ ಮೊಬೈಲನ್ನ ತಬ್ಬಿಕೊಂಡ ರೆಪ್ಪೆಗಂಟಿದ ಹನಿ
ಪದೆ ಪದೆ ಹಾಸಿಗೆಯಲಿ ಮುದುಡಿಕೊಳ್ಳುವ ಮದುವೆ ಸಿಶ್ಚಯವಾದ ಹುಡುಗ ಹುಡುಗಿ
'ಮಗ, ಅರ್ಜೆಂಟ್ ಆಗಿ ಒಂದು ಹುಡುಗಿನ ಲವ್ ಮಾಡ್ಬೇಕನಿಸ್ತಿದೆ ' ಅನ್ನೋ ಸ್ನೇಹಿತ
ಅಂತು ಇಂತೂ ಮಳೆಗಾಲ ಶುರುವಾಯ್ತು.


=====
=====

Apr 7, 2010

"ನಿನ್ನ ಹೆಸರೇನು ?"



ಒಂಟಿ ಬಿಸಿಹೃದಯದ ಅಂತರಾಳದಲ್ಲಿ

ಆಗೊಮ್ಮೆ ಈಗೊಮ್ಮೆ ಸುಂಯ್ಯನೆ ಬೀಸುವ ತಂಪಿಗೆ,

ಬಯಸಿ ಹಡೆಯುವ ಬಯಕೆಯೇ !

ಯಾರು ನೀನು ?

ನನ್ನೊಳಗಿರುವ ನಿನಗೊಂದು ಹೆಸರಿಲ್ಲವೇ ?

ಯಾರಾದರು ಕೇಳಿದರೆ ಹೇಳಬೇಡವೆ ?

ಅದಾವ ನಿನ್ನ ಸ್ಪರ್ಶವದು ?

ನನಗೆ ತಿಳಿಯದಂತೆ

ನನ್ನ ಅಂತರ್ಮುಖಿಯನ್ನಾಗಿಸುವುದು !

ಸಾಗರ ನೋಡುವ ಕಣ್ಣೊಳಗೆ

ನೋಟವಿರದೆ !

ನೋಟವೆಲ್ಲ ಎದೆಯಲೆಗಳಲಿ

ತೆಲಾಡುವುದು.

ಬೆಳ್ಳಕ್ಕಿಗೆಳಿ ಬೆಳ್ಳನೆ ಉಂಗುರ ತೊಡಿಸುವೆ.

ಹೊಳೆದಂಡೆಯಲಿ, ಪಾಪಸಕಳ್ಳಿ ಹಣ್ಣ

ಮುಳ್ಳು ತೆಗೆದು ತಿನ್ನಿಸುವೆ.

ತಿಳಿ ನೀಲಿ ಕಣ್ಣಿನ

ಕೆಂಪು ಲಂಗದ ಹೂವೆ.

ನೀನು ಯಾರೇ ?

ನನ್ನೊಳಗಿರುವ ನಿನಗೊಂದು ಹೆಸರಿಲ್ಲವೇನೆ ?

ಯಾರಾದರು ಕೇಳಿದರೆ ನಾನು

ಹಸಿ ನಾಚಿಕೆ ನಗುವಿನಲ್ಲಿ

ನಿನ್ನ ಹೆಸರ ಹೇಳಬೇಡವೆ ?


=====
=====

Feb 27, 2010

ಅವಳ ನೆನಪು

ನನ್ನ ಮರೆತ ಅವಳ ನೆನಪುಗಳನ್ನು,
ಮರೆತು ಬಿಟ್ಟಿದ್ದೆನೆಂದು ಮರೆತಿದ್ದೆ..

ಮರೆತು ನಿನ್ನೆ ಮತ್ತೆ ನೆನಪಿಸಿಕೊಂಡೆ...

ಮನಸಿಗೆ ಏನೂ ಗೊತ್ತಾಗದೆಂದು,
ಶರಾಬು ಸುರಿದು ಸುಟ್ಟುಬಿಟ್ಟೆ ..

ಹಾಳಾದ ಮನಸು..!

ನೆನಪುಗಳ ಸುಟ್ಟಬೂದಿ
ವಿಭುತಿಯಂತೆ ಭಾಸವಾಗುತ್ತಿದೆ... !!


Feb 7, 2010

"ತುಂಬು ಹೃದಯದಿಂದ...."

ನನ್ನ ಎರಡು ಹನಿಗವನಗಳನ್ನ ಪ್ರಕಟಿಸಿದ 'ಸಿಂಪ್ಲಿ ಸಿಟಿ' ಪೇಜ್ ನ ಮಣಿಕಾಂತ್ ಸರ್ ಅವರಿಗು ಹಾಗು 'ವಿಜಯಕರ್ನಾಟಕ' ದಿನಪತ್ರಿಕೆ ತಂಡಕ್ಕೂ ಈ ನನ್ನ ದಿನವನ್ನ ಖುಷಿಯಿಂದಿರುವಂತೆ ಮಾಡಿದ್ದಕ್ಕೆ ತುಂಬು ಹೃದಯದಿಂದ ಥ್ಯಾಂಕ್ಸ್.

=====
=====

Feb 6, 2010

ನಾನು ನಿರುತ್ತರ .....!

ಅವತ್ತು ರಜಾ ದಿನ, ಬಹಳ ದಿನಗಳ ನಂತರ ಮುದ್ದು ಮಗನನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂಡಿಸಿಕೊಂಡು ಹೊರಟೆ. ಸಮಯ ಮಧ್ಯಾನ ೧೨ ಗಂಟೆ..

ಸುಮಾರು ದೂರ ಹೋದ ನಂತರ, ಪೊಲೀಸರು ತಡೆ ಹಿಡಿದರು. ಎಲ್ಲ ದಿಕ್ಕಿನಲ್ಲೂ...


ಯಾರೋ, ದೊಡ್ಡ (?) ಮನುಷ್ಯ ಬರಬೇಕಿತ್ತು. ಛೆ,,! ಸ್ವಲ್ಪ ಬೇಗ ಬಂದಿದ್ರೆ ಆರಾಮಾಗಿ ಹೋಗಬಹುದಿತ್ತಲ್ಲ,,! ಮನಸ್ಸಲ್ಲೇ ನನಗೆ ನಾನೇ ಹೇಳಿದೆ. ಹತ್ತು ನಿಮಿಷ ಆಯ್ತು, ದೊಡ್ಡ ಮನುಷ್ಯನ ಪತ್ತೆ ಇಲ್ಲ. ಒಮ್ಮೆ ಹಿಂದೆ ತಿರುಗಿ ನೋಡಿದೆ, ಇರುವೆಯ ಸಾಲಿನಂತೆ ಕಂಡವು ಗಾಡಿಗಳು, ಕೊನೆಯಲ್ಲಿ ಕಾಣಿಸಿದ್ದು ಲಾರಿ ಬಹುಶ ಅದರ ಹಿಂದೇನು ಇದ್ದವೇನೋ ಇನ್ನಷ್ಟು..

ಮತ್ತೆ ಹತ್ತು ನಿಮಿಷ ಕಳೆದವು,ಇ ದೊಡ್ಡ ಮನುಷ್ಯನ ಸುಳಿವಿಲ್ಲ. ಚಳಿಗಾಲದ ದಿನ ಅಷ್ಟೇನೂ ಶಕೆ ಇರ್ಲಿಲ್ಲ, ಆದರು ಜನ ಕುದಿಯುತಿದ್ದರು ಒಳಗಿನ ಬಿಸಿಗೆ...!


ಇಷ್ಟೊತ್ತು ಆಫ ಆಗಿರದ ಕೆಲವು ಇಂಜಿನ್ ಗಳು ಇಗ ಆಫ ಆದವು..!
ಅಲ್ಲೊಬ್ಬ ಸೆಂಟರ್ ಸ್ಟ್ಯಾಂಡ್ ಹಾಕಿ ಆರಾಮಾಗಿ ಗಾಡಿ ಮೇಲೆ ಕೂತಿದ್ದ, ಅವರು ಯಜಮಾನರು ತಮ್ಮ ಹಳೆ 'ಹಮಾರ ಬಜಾಜ್' ಮೇಲೆ ಎರಡು ಕೈ ಕಟ್ಟಿ, ಯಾರಿಗೋ ಹೊಡೆಯುವಂತೆ ನೋಡುತ್ತಿದ್ದರು..
ಪಕ್ಕದಲ್ಲಿ ನಿಂತಿದ್ದ ಸಾಹೇಬರು ಕಷ್ಟ ಪಟ್ಟು ಸೆಂಟರ್ ಸ್ಟ್ಯಾಂಡ್ ಹಾಕಿ, 'ಫೂಟ್ ಪಾತ್' ಪಕ್ಕದಲ್ಲಿದ್ದ ಮರಕ್ಕೆ 'ನೀರುಣಿಸಿ ' ಬಂದರು....!

'ಅಪ್ಪ' ಎಲ್ಲರು ಯಾಕೆ ನಿಂತಿದಾರೆ,,? ಅಷ್ಟೊತ್ತು ಸುಮ್ಮನಿದ್ದ ಮಗ ಕೇಳಿದ..
ಯಾರೋ ' ವಿ.ಆಯ.ಪಿ "ಹೋಗ್ಬೇಕು ಪುಟ್ಟ ಅದಕ್ಕೆ...
'ವಿ. ಆಯ. ಪಿ' ...? ಮಗ ಕೇಳಿದ.
'ವೆರಿ ಇಮ್ಪೋ..................

ಅಷ್ಟರಲ್ಲಿ ಅದೆಲ್ಲಿತ್ತೋ ಬುರ್ರ್ರ ಬುರ್ರ ,,,,,,,,,, ಅಂತ ಜೋರಾಗಿ ಶಬ್ದ ಮಾಡುತ್ತಾ, ಸಂದಿ ಸಂದಿ ನುಗ್ಗಿ, ಬಂತೊಂದು 'ಬ್ಲಾಕ್ ಪಲ್ಸೆರ್' ..
ಸಣ್ಣ ಗೆ ಗಾಳಿಯು ನುಗ್ಗದಂತೆ ತಬ್ಬಿ ಕೂತಿದ್ದಳು ಅವನ ಗರ್ಲ್ ಫ್ರೆಂಡ್.. ಎಲ್ಲರ ಕಣ್ಣು ಇವರ ಮೇಲೆ...!!

ಅವನು ತನ್ನ ಹೆಲ್ಮೆಟ್ ತೆಗೆದು ಕನ್ನಡಿಗೆ ನೇತು ಹಾಕಿದ , ಅವರ ಮಾತುಗಳು ಶುರು ಆದವು ಕೆನ್ನೆ ಕೆನ್ನೆ ತಾಕುತ ..

ಬಿಸಿಲಲ್ಲಿ ಬಿಸಿ ಬಿಸಿ, ಫುಲ್ ಬ್ಯುಸಿ... !!
ಎಲ್ಲರು ಅವರತ್ತ ಧ್ಯಾನ ಮಗ್ನರಾಗಿದ್ದರು, ಪಟಕ್ಕನೆ ಆ ಹುಡುಗಿ ತನ್ನ ಹುಡುಗನ ಕಿವಿಗೆ ಕಚ್ಚಿ ಬಿಡೋದಾ.....!!!?

'ಅಪ್ಪ.........

ಅಕ್ಕಾ..... ಅಣ್ಣಾ..... ಕಿವಿ........ !!!! ನನ್ನ ಮಗನೂ ಅವರನ್ನು ನೋಡಿದ...!!!
ಮಗನ ಕೆನ್ನೆ ಮತ್ತೊಂದೆಡೆ ತಳ್ಳಿದೆ... ಹಂಗೆ ಗಾಡಿ ತಳ್ಳಿ ಎರಡು ಹೆಜ್ಜೆ ಮುಂದೆ ಬಂದೆ.

ಅಬ್ಬಾ......
ಮನಸೂ ಯಾಕೋ ಎರಡು ಸೆಕೆಂಡ್ ಮೌನ ವಾಯಿತು..

ವಾಹ್ಹ್,,,!! ಎಂಥ ಲೈನು.. !! ಅಲ್ಲೇ ಪಕ್ಕದಲ್ಲಿ ನಿಂತಿದ್ದ್ದು ಆಟೋ..
ಆಟೋ ಹಿಂದೆ ಬರೆದ ಲೈನ್, " ದಮ್ಮ ಇದ್ರೆ ಫಾಲೋ ಮಾಡು, ದಿಲ್ ಇದ್ರೆ ಲವ್ ಮಾಡು" ....!!!!!
ತುಂಬಾ ಖುಷಿ ಆಯ್ತು , ಹಾಗೇನೆ ಮನಸು ನೆನಪಿನ ಪೆಟ್ಟಿಗೆಗೆ ಜಾರಿತು..

ಆವಾಗ ಇವಾಗ ಓದಿದ ಆಟೋ ಅಣಿ ಮುತ್ತುಗಳು ನೆನಪಾದವು,

"ದೇವರ ಹೆಸರು, ತಂದೆ ತಾಯಿ ಆಶಿರ್ವಾದ್, ಮಕ್ಕಳ ಹೆಸರು,
ತಮ್ಮ ಪ್ರೀತಿಯ ನಟನ, ಸಿನಿಮಾ ಹೆಸರು..!

ತುಂಬಾ ಮಜಾ ಮಜಾ ಅಣಿ ಮುತ್ತುಗಳು..
" ಲವ್ ಮಾಡಿದ್ರೆ, ಲವ್ ಸ್ಟೋರಿ.. ಕೈ ಕೊಟ್ಟರೆ, ಕ್ರೈಂ ಸ್ಟೋರಿ..."
"ದುಡ್ಡು ದೊಡ್ಡಪ್ಪ ವಿದ್ಯೆ ಅವರಪ್ಪ "

ತುಂಬಾ ಇಷ್ಟ ಆಗಿದ್ದು, " ಪ್ರಕೃತಿಯ ಪ್ರಿತಿಸಿದರೆ ಹಸನ್ಮುಖಿ.. ಇಲ್ಲದಿದ್ದರೆ ಜ್ವಾಲಾಮುಖಿ.... " !!!

ಚಿಕ್ಕವರಿದ್ದಾಗ, ಅಪ್ಪನ ಹಳೆ ಸ್ಕೂಟರ್ ಸ್ಟೆಪ್ನಿ ಕವರ್ ಮೇಲೆ, ನನ್ನ ಹೆಸರು ಬರೆದಿದ್ದು... ಎಲ್ಲಾ ನೆನಪಾದವು...!!

ಹಂಗೆ ಸ್ವಲ್ಪ ಮುಂದೆ ಹೋದೆ, ಡ್ರೈವರ್ ಸಾಹೇಬರು ಬೀಡೀ ಸುಡುತ್ತ ಕೂತಿದ್ದರು...
ಆಟೋ ಗಾಜಿನ ಮೇಲೆ ಬರೆದಿದ್ದು ಉಲ್ಟಾ ಕಾಣುತಿತ್ತು , ಹಾಗೇನೆ ಓದಲು ಪ್ರಯತ್ನಿಸಿದೆ,
ಶ್ರೀ......... ಸ್ವಾಮಿ ಕೃಪೆ " ಪೂರ್ತಿ ಗೊತ್ತಾಗಲಿಲ್ಲ....

ಕೆಳಗೆ, ಉದ್ದ ತಿಲಕವಿರುವ 'ಶಂಕರ್ ನಾಗ್' ಫೋಟೋ..!
'ನಲಿವ ಗುಲಾಬಿ ಹೂವೆ......'
ನನಗರಿವಿಲ್ಲದಂತೆ, ಗುನುಗಿದೆ....!!


'ಅಪ್ಪ'... ದೊಡ್ಡ ಮನುಷ್ಯ ಅಂದ್ರೆ ಯಾರು,,,?
ಎಷ್ಟು ದೊಡ್ಡವರು..? ನೋಡಕೆ ಹೆಂಗಿರ್ತಾರೆ,,,?
'ಹುಲ್ಕ್' ಗಿಂತ ದೊಡ್ಡವರಾ,, ? ಹನುಮಾನ್ ದೇವರುಥರ ನಾ...?
ಮಗನ ಪ್ರಶ್ನೆಗೆ ಏನಂಥ ಉತ್ತರಿಸಲಿ ತಿಳಿಯಲಿಲ್ಲ ...!!

ಅವರು 'ರಾಜಕಾರಣಿ' ಅಂದೇ...
ಅಃ..?
ಅಂದ್ರೆ ಕ್ಲಾಸ್ ಬಾಯ್ / ಕ್ಲಾಸ್ ಹೆಡ್ ಅಂತಾರಲ್ಲ,, ಹಂಗೆ... ಇವರು ಎಲ್ಲರಿಗು ಹೆಡ್...
ಎಲ್ಲರಿಗೂ.....?
ಎಸ್.. !
ಅವರಿಗೆ ಯಾರು ಹೆಡ್ ಮಾಡಿದ್ರು....!? ಹೆಂಗೆ ಮಾಡಿದ್ರು....!!!! ??

ತಕ್ಷಣ ಬಾಯಿಗೆ ಬೀಗ ಹಾಕಿದಂಗೆ ಆಯ್ತು, ಮಾತು ಹೊರಡಿಲಿಲ್ಲ... ಏನಂಥ ಹೇಳಲಿ...
ಹೇಗೆ ಹೇಳಲಿ... !!!!!

ಅಷ್ಟರಲ್ಲಿ, ಅವನು ಸೆಂಟರ್ ಸ್ಟ್ಯಾಂಡ್ ಹಾಕಿ ಕೂತಿದ್ದವನು, ನಾಲ್ಕು ದಿಕ್ಕಿಗೂ ಕೇಳಿಸುವಂತೆ ಕಿರುಚುತಿದ್ದ, ಮೊಬೈಲ್ ನಲ್ಲಿ ...!!
"ಅವನ....ನ....
ಅವರ.....ನ...
ಮುಕ್ಕಾಲು ಗಂಟೆ ಇಂದ ನಿಂತಿದೀನಿ, ಅವನ್ಯಾವನೋ 'ಬೊ....... ಮಗ, ಬರಬೇಕಂತೆ... ಇನ್ನು ಬಂದಿಲ್ಲ.
ಎಲ್ಲಿ ಏನ್ 'ಹ.......ನೋ..... 'ಸು.....ಗ......."""

'ಮಾಜಿ ಪ್ರಧಾನಿಗಳ ಭಾಷೆಯಲ್ಲಿ, ದೊಡ್ಡ ಮನುಷ್ಯನ ಬಗ್ಗೆ, ಸ್ಯಾನೆ..... ಹೊಗಳುತಿದ್ದ....!!!!! "
ಎಲ್ಲರು ಅವನ ಬೆನ್ನಿಗೆ ಶುರು ಹಚಿಕೊಂಡರು...!

ಅರೆ, ಇವಳೇ ಲ್ಲಿಂದ ಬಂದಳು ನೋಡೇ ಇಲ್ಲ ....
'ಸ್ಕೂಟಿ ಮೇಲೆ ಬ್ಯೂಟಿ' !!
ಆಟೋ ಅಣಿ ಮುತ್ತಿನ ನೆನಪಿನಲ್ಲಿ ಇವಳ ಕಾಣಲೇ ಇಲ್ಲ...
ಅಂದಗಾತಿ,,,,,, ದೊಡ್ಡ ರಿಂಗ್ ಕಿವಿಗೆ ನೇತಾಡ್ತಾ ಇದ್ವು ....
ಹೆಡ್ ಫೋನ್ ಹಾಕೊಂಡು ಹಾಡು ಕೇಳ್ತಿದಾಳೆ, ಅನ್ಕೊಲ್ಲುವಷ್ಟ್ರಲ್ಲಿ......

" ನೋ ಯಾ...........
ಆಯಂ ನಾಟ್ ಎಟ್
ಆಯ ಡೋಂಟ್ ನೋ ,
ವ್ಹೆನ್ ವಿಲ್ಲ್ ದಿಸ್ ಬ್ಲಡಿ ಮ್ಯಾನ್ ವಿಲ್ ಗೋ......!!! "

ಹಾ..... !!!!!
ಅವಳ ಮಾತು , ಅವಳ ಉಡುಪಿ ನಂತೆ ,, ಟೂ.... ಹಾಟ್..!

'ಅಪ್ಪಾ..... ' ಮಗ ಜೋರಾಗಿ ಹೇಳಿದ... ಯಾರು ಅವರಿಗೆ ದೊಡ್ಡೋರು ಮಾಡಿದ್ದೂ,,,?
ಮಗ ಜೋರು ಮಾಡಿದ....
ಮತ್ತೆ ಮೌನ, ಏನಂತ್ ಹೇಳ್ಬೇಕು..
ವೋಟು ಹಾಕಿ ಎಲೆಕ್ಟ್ ಮಾಡಿದಿವಿ ಅಂತ ಹೇಳಲೇ,,,,!!?
ನೀನು, ವೋಟು ಹಾಕಿದಿಯ...? ಅಂತ ಕೇಳ್ದ್ರೆ...?
ಎಲ್ಲರು ಅವನಿಗೆ ಹಾಕಿದರ...? ಹೆಂಗೆ,,,?

ಏನು ಹೇಳಲಿ... ?
ಇ ಹೊಲಸು ರಾಜಕೀಯದ ಬಗ್ಗೆ, ಇ ವ್ಯವಸ್ತೆ ಬಗ್ಗೆ...!!!!

ಮತ್ತೆ ಮತ್ತೆ ಪ್ರಶ್ನೆ ಹಾಕಿದ್ರೆ....!?

ಹೌದು, ನಾನು ವೋಟು ಮಾಡಿದಿನ,,,?
ನನ್ನ ಹತ್ರ ವೋಟರ ಆಯ್ಡಿ ನೆ ಇಲ್ಲಾ... !!!

ಮುಂದೆ ಮಗ ದೊಡ್ದವನಾದ್ ಮೇಲೆ ಅನ್ನು ಏನೇನೋ ಪ್ರಶ್ನೆ ಕೇಳ್ತಾನೆ.. !

ನಿಮ್ ಕಾಲ್ದಿಂದನೆ, "ಭ್ರಷ್ಟಾಚಾರ ಶುರು ಆಗಿದ್ದು, ಎಲ್ಲಾ ನಿಮ್ಮಿಂದ.... ನಿಮ್ಮ ವಯಸ್ಸ್ನೋರು ಎಲ್ಲರ ತಪ್ಪು..."
ಅಯ್ಯೋ ದೇವರೆ , ಏನಿದು....!?
ಕ್ಷಣ ಹೊತ್ತು ಯೋಚನೆ ಮಾಡಿದೆ .... !!!
ಕೈ, ಬೆವರಲು ಶುರು ಆಗಿದೆ, ಯಾಕೆ,,,? ಗೊತ್ತಿಲ್ಲ...

ಮಗ, ದೊಡ್ಡವ್ನಾದ್ ಮೇಲೆ ಎಲ್ಲ ಅರ್ಥ ಮಾಡ್ಕೋಬಹುದು, ಇಲ್ಲ ಅಂದ್ರೆ...!?
ಛೆ ಛೆ, ಅವನು ಅರ್ಥ ಮಾಡ್ಕೋತಾನೆ ,
ಅವನೂ ಬುದ್ದಿವಂತ...!!!!!

ಮಗನಿಗೆ ಏನು ಹೇಳಬೇಕು ಅಂತ ಕೊನೆಗೂ ನನಗೆ ತಿಳಿಯಲಿಲ್ಲ...

ಅಷ್ಟರಲ್ಲಿ, ಇ ದೊಡ್ಡ ಮನುಷ್ಯ ತನ್ನ ಕೆಂಪು ಘುಟದ ಕಾರಿನಿಂದ ಎಲ್ಲರತ್ತ ಕೈ ಮಾಡುತ, ಭರ್ರ್ರ್ರ್ ನೆ ಹೋದ......

***
ಅವನು ಹೋಗಿದ್ದೆ ತಡ, ಎಲ್ಲಾ ದಿಕ್ಕಿನಲ್ಲಿದ್ದ ಗಾಡಿಗಳು ಒಮ್ಮೆಲೇ ಸ್ಟಾರ್ಟ್ ಆದವು,,,
ಆ ಜೋರಾದ ಇಂಜಿನ್ ಗಳ ಶಬ್ದದಲ್ಲಿ , ಮಗನ ಮಾತು ಕಳೆದು ಹೋಯಿತು,,,
ಸೈಲೆಂಸೆರ್ ಉಗುಳುತ್ತಿದ್ದ ಹೊಗೆಯಲ್ಲೀ, ಅವನ ಪ್ರಶ್ನೆಗಳು ಲೀನ ವಾದವು....!!!!

ನಾನು, ನಿರುತ್ತರ......!!!!!

***












Feb 1, 2010

"ಸರಣಿ ಕೊಲೆ"


ರವೆಲ್ಲ ಬೋಳಾಗಿ ಮತ್ತೆ ಎರಡನೆ ಬಾರಿ ಚಿಗುರಿತ್ತು, ಭೂಮಿಯ ಬಿಸಿ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು.

ಒಂದು ದಿನ ಅದೆಂತಹ ವಿಚಿತ್ರ, ಬೆಂಗಳೂರಿನ ರಿಂಗ್ ರೋಡಿನಲ್ಲಿ ಜನರ ಸದ್ದುಇಲ್ಲ, ಅಸಲಿಗೆ ಕಣ್ಣಿಗೆ ಕಾಣುವಷ್ಟು ದೂರದವರೆಗೆ ಎಡ-ಬಲಗಳಲ್ಲಿ ಒಂದೇಒಂದು ವೆಹಿಕಲ್ ಇಲ್ಲ ! ! !

ಅದೇ ರಸ್ತೆಯ ತಕ್ಕ ಮಟ್ಟಿನ ದೊಡ್ಡ ಮರದ ಕೆಳಗೆ ಭೇಟಿ ಮಾಡಬೇಕೆಂದು ಡಿಸಯ್ದ್ ಮಾಡಿದ್ರು ಅವರಿಬ್ಬರು ! ಒಂದು ವರ್ಷದ ಹಿಂದೆ!

ಅವನು ಬರ್ ಬರ್ರ ಅಂತ ಜೋರಾಗಿ ಬಂದ, ಯಾರು ಇಲ್ಲದ ರೋಡ್ ನೋಡಿ ಅವನ ಬೈಕಿನ ಸೌಂಡ್ ಗೆ ಆತಂಕವಾಯ್ತು. ಇವತ್ತು ಬೆಂಗಳೂರು ಬಂದ್ ಇರಬಹುದಾ? ಸೌಂಡ್ ತನ್ನ ಪಾಡಿಗೆ ತಾನು ಸುಮ್ಮನಾಯಿತು. ಇಲ್ಲ ಇಲ್ಲ ನಮ್ಮಿಬ್ಬರ ಭೇಟಿಗೆ ಇದು ಪೂರ್ವ ಸಿದ್ದತೆ ಇರಬಹುದು ಎಂದು ಒಳೊಳಗೆ ಕಳ್ಳ ನಗೆ ನಕ್ಕ.

ಬೈಕ್ ಇಳಿದು ಮರವನ್ನೊಮ್ಮೆ ಎದುರು ನಿಂತು ಪ್ರೀತಿಸಿದ, ಬೆನ್ನು ಅವಳ ಮನೆ ಕಡೆಗಿತ್ತು. ಸಂಜೆ ಸೂರ್ಯ ಮರವನ್ನ ಸೀಳಿಕೊಂಡು ಇವನ ಮುಖದ ಮೇಲೆ ಬೀಳುತ್ತಿದ್ದ. ಹಳೆಯ ಘಟನೆಗಳನ್ನ ನೆನೆಯುತ್ತಿದ್ದ, ನಗುತ್ತಿದ್ದ, ಯೋಚಿಸುತ್ತಿದ್ದ ಮತ್ತು ಅವಳಿಗಾಗಿ ಕಾಯುತ್ತಿದ್ದ . ಮರ ಅವನ ಪ್ರೇಮದ ಸಾಕ್ಷಿಯಾಗಿತ್ತು. ಮರದ ನೆರಳಿನಲ್ಲಿ ನಿಂತು ಅವಳ ನೋಡಲು ಶಬರಿಯಂತೆ ಕಾಯುತ್ತಿದ್ದ ವರ್ಷದ ಹಿಂದೆ. ಅದೇನಾಯಿತೋ ಏನೋ ಅವಳಿಗೆ ಇವನು ಇಷ್ಟ ಆಗಲಿಲ್ಲ, ತಿರಸ್ಕಾರಕ್ಕೆ ಕಾರಣವೂ ಇಲ್ಲ.

ಯೋಚನೆಯಲ್ಲಿರುವಾಗಲೇ ಹಕ್ಕಿಯೊಂದು ಬಂದು ಇವನಿಗೆ ಹತ್ತಿರವಿರುವ ರೆಂಬೆಯ ತುದಿಯಲ್ಲಿ ಕೂತಿತು. ತನ್ನವಳು ಬಂದಳೇ ಎಂದು ತಿರುಗಿ ನೋಡಿದ ಯಾರು ಇಲ್ಲ, ಆಸೆಗೆ ನಿರಾಸೆಯಾಯಿತು. ಮರದೆಡೆ ನೋಡಿ ಹಕ್ಕಿಯನ್ನೊಮ್ಮೆ ನೋಡಿದ.

ಪರ್ ಫ್ಯುಂ ಪರಿಮಳ ಮೆಲ್ಲಗೆ ಬರಲಾರಂಭಿಸಿತು ತಿರುಗಿ ನೋಡಿದ ಅವಳ ನಡಿಗೆ ರಸ್ತೆ ದಾಟಿ ಇವನತ್ತಲೇ ಬರುತ್ತಿತ್ತು, ಜಿಬ್ರ ಕ್ರಾಸ್ ದೂರದಲ್ಲಿ ಮಲಗಿತ್ತು.
ಹಕ್ಕಿ ಹಾರಿಹೋಯಿತು.

ಅವಳ ಕಂಡೊಡನೆ ಬೈಕು ನಿಂತುಕೊಂಡಲ್ಲಿಯೇ ನೂರು ಕಿಲೋ ಮೀಟರ್ ಸ್ಪೀಡಿನಲ್ಲಿ ತೇಲಾಡಿತು.

ಅವಳು ತಾನಾಗಿ ಬಂದಿಲ್ಲ, ದಿನಕ್ಕಾಗಿ ಪರಿತಪಿಸಿಯೂ ಇಲ್ಲ, ತಾವಿಬ್ಬರು ಯಾವ ಕಾರಣಕ್ಕಾಗಿ ಭೇಟಿಯಾಗಬೇಕೆಂದು ನೆನಪಿರಲಿಲ್ಲ, ಪ್ರೀತಿಗೆ ಷರತ್ತುಗಳನ್ನ ಹಾಕಿದ ಹುಡುಗಿಗೆ.

ಫೋನು ಮಾಡಿ ಎಲ್ಲವನ್ನ ನೆನಪು ಮಾಡಿಕೊಟ್ಟು ಬರಹೇಳಿದ್ದ, ದಿನಕ್ಕಾಗಿ ತಪಸ್ಸು ಮಾಡಿದ್ದ ಆಸೆಯ ಕಣ್ಣುಗಳ ಕನಸಿನ ಹುಡುಗ. ಇವನಲ್ಲಿ ಅನುಮಾನವಿತ್ತು, ಆತಂಕವಿತ್ತು ಹೆಚ್ಚಾಗಿ ತನ್ನ ಪ್ರೀತಿಯ ಬಗ್ಗೆ ನಂಬಿಕೆಯಿತ್ತು.

ಬಂದವಳೇ ಅದೆನಂದ್ಲೋ ಏನೋ ಯಾರಿಗೂ ತಿಳಿದಿಲ್ಲ, ಅಸಲಿಗೆ ಅಲ್ಲಿ ಯಾರು ಇರಲಿಲ್ಲ.

ಅವಳು ಬಂದಿದ್ದಳು ಎನ್ನುವ ಗುರುತು ಸಿಗದ ಹಾಗೆ ರೋಡ್ ಕ್ರಾಸ್ ಮಾಡಿ ಹೊರಟು ಹೋದಳು.

ಹಾರಿ ಹೋದ ಹಕ್ಕಿ ಮತ್ತೆ ಬಂದು ಕೂತಿತು, ಇವನು ಅದನ್ನ ನೋಡಲಿಲ್ಲ.
ಕಲ್ಪನೆಯಲ್ಲಿ ಬಂದಂತೆ ಬಂದು ಹೋದ ಅವಳು ಎದೆಗೆ ಸಾವಿರ ಬಾರಿ ಇರಿದು ಹೋಗಿದ್ದಳು.

ಸೂರ್ಯ ಪೂರ್ತಿಯಾಗಿ ಸರಿದಿರಲಿಲ್ಲ ಆದರೆ ಇವನು ಹಾಗೆಂದುಕೊಂಡ, ಬೈಕ್ ಸ್ಟಾರ್ಟ್ ಆಗ್ಲಿಲ್ಲ ಇನ್ನೊಮ್ಮೆ ಕಿಕ್ ಮಾಡಬೇಕು ಅಂತ ಅನ್ನಿಸದೆ ಇವನ ನೆರಳು ಬೈಕ್ ತಳ್ಳಿಕೊಂಡು ಸತ್ತಂತೆ ಚಲಿಸಿತು, ಹಕ್ಕಿಗೆ ಅಳುಬಂದಿತು.

ಅನುಮಾನ ಬಂದಂತೆ ಹಕ್ಕಿ ಅವನು ನಿಂತ ಜಾಗವನ್ನೊಮ್ಮೆ ನೋಡಿತು, ಹೌದು ಅಲ್ಲೇನೋ ಬಿದ್ದಿದೆ ಕರೆಯೋಣವೆಂದು ಇವನತ್ತ ನೋಡಿತು, ಯಾರು ಕಾಣಲಿಲ್ಲ.

ಇಡೀ ರಸ್ತೆಯ ಶಾಂತಿಯನ್ನು ಕೊಲೆಮಾಡುತ ದಡಗ್ ಬದಗ್ ಎನ್ನುತ ಒಂದೇ ಒಂದು ಪಾರ್ಟು ಸರಿಯಿಲ್ಲದ, ಆಯುಷ್ಯ ಮುಗಿದು ಹೋದ ಕಾರ್ಪೋರಶನ್ ಲಾರಿಯೊಂದು ಮರದ ಹತ್ತಿರ ಬಂದು ನಿಂತಿತು.

ಡ್ರೈವರ್ ' ಇಲ್ಲೇನೋ ಸತ್ತು ಬಿದ್ದಿದೆ ಯೆತ್ತಾಕ್ಕೊಲ್ರಲೇ' ಅಂದ

ಅನಾಥ ಶವವೊಂದು ಕಾರ್ಪೋರಶನ್ ಲಾರಿ ಸೇರಿತು.

ಅದೆಷ್ಟೋ ಸಿಗರೇಟಿನ ತುಂಡುಗಳು, ರಮ್ಮು, ವ್ಹಿಸ್ಕಿ, ಬೀರಿನ ಬಾಟಲಿಗಳು ಮಾತಾಡುತ್ತಿದ್ದವು ' ನಾವು ಇಷ್ಟು ದಿನ ಸೇರುತ್ತಿದ್ದದು ಕಡಲ ಪ್ರೀತಿಯ ಹುಡುಗನ ವಿರಹದೆದೆಯಲ್ಲಿ'

ಕುತೂಹಲದಿಂದ ನೋಡುತ್ತಿದ್ದ ಹಕ್ಕಿಗೆ ಮಾತು ಕೇಳಿತು ಅದಕ್ಕೆ ಮನವರಿಕೆಯಾಯಿತು, ಅವಳ ಮಾತಿನಿಂದ ಇವನ ಮನಸ್ಸು ಕೊಲೆಯಾಗಿತ್ತು.

ಹಕ್ಕಿ ಬಿಕ್ಕಳಿಲಾರಂಭಿಸಿತ್ತು. ಕಾರ್ಪೋರಶನ್ನಿನ ಲಾರಿ ಕೊನೆಯ ಪಯಣಕೆ ಸಾಗಿತು ! !
ಹಕ್ಕಿ ಇನ್ನೂ ಅಳುತ್ತಿತ್ತು ಹಾರಿ ಹೋಗಲಿಲ್ಲ.

ಸ್ವಲ್ಪ ಹೊತ್ತಿನಲ್ಲಿ ಹುಡುಗ- ಹುಡುಗಿಯರಿಂದ ತುಂಬಿದ ಕಾಲೇಜು ಬಸ್ಸೊಂದು ಬರ್ರನೆ ಮರದ ಮುಂದೆ ತೂರಿ ಹೋಯಿತು.


ಹಕ್ಕಿ ಎದೆಯೊಡೆದು ಪ್ರಾಣಪಕ್ಷಿ ಹಾರಿ ಹೋಯಿತು. ಇವನ ಮನಸು ಬಿದ್ದಿದ್ದ ಜಾಗದಲ್ಲಿ ಹಕ್ಕಿ ಉರುಳಿ ಬಿತ್ತು.

ಬಸ್ಸಿನಲ್ಲಿ ಅದೆಷ್ಟು ಕೊಲೆಯಾದ ಮನಸುಗಳನ್ನ ನೋಡಿತೋ ಪಾಪ.

ಮರುದಿನ ಹತ್ತು ಗಂಟೆಗೆ ಎರೆಡು ನಿಮಿಷ ಹತ್ತು ಸೆಕೆಂಡು ಬಾಕಿ ಇತ್ತು, ಬೀದಿ ದೀಪ ಇನ್ನೂ ಉರಿಯುತ್ತಿತ್ತು !

ಒಂದು ಹುಡುಗ ಅದೇ ಮರಕ್ಕೆ ವರಗಿ ನಿಲ್ಲಲು ಹತ್ತಿರ ಹೋದ

ವೆಹಿಕಲ್ಲುಗಳ ಹೋಗೆಯಿಂದ, ವಿರಹಿಗಳ ಬಿಸಿಯುಸಿರಿನಿಂದ ಏರುವ ಭೂಮಿಯ ಬಿಸಿಯಿಂದ ಮರವೆಲ್ಲ ಕಪ್ಪಾಗಿತ್ತು.

ಹುಡುಗ ವರಗಿಕೊಳ್ಳದೆ ಅದರ ನೆರಳಲ್ಲಿ ಮರಕ್ಕೆ ಬೆನ್ನು ತೋರಿಸಿ ನಿಂತುಕೊಂಡ, ಬಾಯಿ ತೆರೆದ ಮ್ಯಾನ್ ಹೋಲ್ ನ ವಾಸನೆ ಸಹಿಸಿಕೊಂಡು. ಕಣ್ಣುಗಳಲ್ಲಿ ಸಾವಿರ ಕನಸುಗಳಿದ್ದವು, ತುಟಿಯ ಮೇಲೆ ಆಸೆ ಮಿತಿಯಿಲ್ಲದೆ ಹರಿದಾಡುತ್ತಿತ್ತು.

ಹೊಸ ಹಕ್ಕಿ ಬಂದು ಮರದಲಿ ಕೂತಿತು.

ಮರ ಮತ್ತೊಂದು ಪ್ರೇಮಕಥೆಗೆ, ಅಮಾಯಕ ಮನಸಿನ ಕೊಲೆಗೆ ಪ್ರತ್ಯಕ್ಷ ಸಾಕ್ಷಿಯಾಗಲು ತಯಾರಾಗಿತ್ತು.

=====
=====