May 23, 2013

"ತಾರೆಗಳಂತೆ ಚೆಲ್ಲಾಪಿಲ್ಲಿಯಾದ ಪರಮ ಭಕ್ತನ ಪ್ರಾರ್ಥನಾ ಗೀತೆ"

ನಿನ್ನ ದೀರ್ಘ ಆಲಿಂಗನದ ಬ್ರಮೆಯಲ್ಲಿ ನಾನು
ಕಡಲಲೆಗಳ ಏರು-ಇಳಿವುಗಳಿಗೆ ಮುತ್ತಿಟ್ಟು ಮುಂದೆ ಸಾಗುವ ದೋಣಿ
ಕಿನಾರೆಯ ಬೆಚ್ಚನೆಯ ಮರಳಿಗೆ ನಿನ್ನೆದೆಯ ಶಾಕ
ನಿನ್ನ ಕಣ್ಣ ಹೊಳಪಿಗೆ ಬೆಳಗಬಹುದೇನೋ ಇನ್ನೊಂದು ಲೋಕ


ಪರಿಮಳದ ಹೊಸ ಪರಿಭಾಷೆ ನೀನು
ನಿತ್ಯ ಪ್ರೀತಿಯ ನಿಸರ್ಗ ನೀನು
ಅಕ್ಷರಲೋಕದ ಹೊಸ ಆವಿಷ್ಕಾರ ನೀನು
ಪ್ರೇಮಕವಿಗಳ
ಎದೆಯಲ್ಲಿ ನಗುವ ಚೆಲ್ಲಿ ಕುಳಿತವಳು ನೀನು

ನೀನೇ ಸುಂದರಿ, ನೀನೆ ವಿಸ್ಮಯ
ಎದೆಯ ತುಂಬಾ ಮಾತಿದ್ದರೂ ಆಡದ ಮೌನ ನೀನು
ನೀನೇ ಸತ್ಯ,
ನೆಲದ ಮೈಯ ತೊಳೆಯಲು ಮಳೆಯ ಕರೆವ ಕರೆಯೋಲೆ ನೀನು
ನಗುವನ್ನೇ ಅಲಂಕರಿಸಿಕೊಂಡೆ ನೀನು

ಹೂವಿನೆದೆಯ ಮಕರಂದ ನೀನು 
ಕನಸಿಗೂ ಮಾತು ಕೊಟ್ಟ ಭಾಷೆ ನೀನು

ಕಾಮನ ಬಿಲ್ಲಿಗೆ ಬಣ್ಣ ಬಳಿಯುವ ಕುಂಚ ನೀನು 


ನನ್ನ ಭಕ್ತಿಗೆ ಒಲಿಯದಿದ್ದರೂ ಸರಿ

ತಿರಸ್ಕರಿಸಬೇಡ,
ಮೆಚ್ಚಿಸಿಕೊಂಡ ಧನ್ಯತೆಯ ಆನಂದ ದುಬಾರಿ
ಆದರೆ, ತಿರಸ್ಕರಿಸಲ್ಪಡುವ ಕಲ್ಪನೆಯೇ ಆಘಾತಕಾರಿ
  
 =====
 =====

May 9, 2013

"ಆಕೀ,ಗೋರಿ ಮ್ಯಾಗಿನ ಹಳದಿ ಹೂವು"


ಚೆಲ್ವಿನ ಮಾತಿಗೆ ಮನಸು 
ಮಳ್ಯಾಗ ತೋದ ಮಣ್ಣಾತ 
ಚಿಗರೋಡ್ಯಾಕ ಸಜ್ಜಾತ 

ಚಂದನ ಮಾತಿನ ಮತ್ತೇ ಮತ್ತು
ಬರೀ ಮಾತಿಗದೇನು ಗೊತ್ತು
ಹಗಲು ನುಂಗಿ ನಗೋ ಚಂದ್ರಾಮನ ತಂಗಿ ಮಾತು
ಸೊಗಸಿಗೆ ಹೆಸರು ಇನ್ನೊಂದಾತು

ಬಂದ ಬಂದಾಕಿನ ಎದಿ ಚಿವುಟಿ 
ಒಳಗ ನಕ್ಕೋತ ಕುಂತ್ಳು 
ಗರ್ಭಗುಡ್ಯಾಗ ದೇವಿ ಕುಂತಂಗ
ಬೆಳಕಿನಂತಾಕಿಗೆ ಗಾಳಿಗಾರಿ ಹೋಗೋ ದೀಪ ಯಾಕ ಬೇಕು ?
ನಾ ಮುತ್ತಿನಾರತಿ ಮಾಡಿದ್ರ  ಸಾಕು

ಆ ನಗಿನ ನಗಿ, ನನಗಾಗಿ
ನಾ ಕರಗಿ ಹೋಗ್ಬಕು ಅಂತಾ ನಗಿ
ಮುಗಲು ಹರದ ಬಿದ್ದಂತಾ ಮಳಿ ಬಂತು
ಮಳ್ಯಾಗ ತೋದ ಚಿನ್ನದಂತಾ ಮೈಯಿ
ಥಂಡಿ ರಾತ್ರಿ, ಕ್ವಾಣ್ಯಾಗ ಕೆಂಡ ನಿಗಿ ನಿಗಿ 

ಅಕಿದು, ಆಟನ ಆಟ
ಹಾವು -ಏಣಿ ಆಟ
ಚದುರಂಗದಾಟದಾಗ ನುಗ್ಗಿ ಬರೋ ರಾತ್ರಿರಾಣಿ ಜಾತಕ
=====
=====