Nov 5, 2011

"ಮತ್ತೆ ಸಿಗುವೆಯಾ ಒಮ್ಮೆ, please"

ಸ್ಕೂಲ್ ನಲ್ಲಿ ಮುಂದಿನ ವರ್ಷಕ್ಕೆ ಅಡ್ಮಿಷನ್ ಆದ್ಮೇಲೆ ಅಪ್ಪ-ಅಮ್ಮನ ಸತಾಯ್ಸಿ, ಜಗಳ ಮಾಡಿ ಹೊಸ note ಬುಕ್, ಟೆಕ್ಸ್ಟ್ ಬುಕ್, ಪೆನ್ನು, ಪೆನ್ಸಿಲ್, ಕಂಪಾಸ್ ಬಾಕ್ಸ್, ಹೊಸ ಸ್ಕೂಲ್ ಬ್ಯಾಗು, ಟಿಫನ್ ಬಾಕ್ಸ್ . . . .ಒಂದ ಎರಡ ಖರೀದಿ ಮಾಡೋದು! . . .ಮತ್ತೆ ಅದೇನ್ ತಮಾಷೆ ಮಾತ!
'ಇನ್ನು ಟೈಮಿದೆ, ಆಮೇಲೆ ತೊಗೊಂದ್ರಾಗುತ್ತೆ ಬಿಡೋ' ಅನ್ನೋ ಮಾತು ಕಿವಿಗೆ ಬೀಳ್ತಾನೆಯಿರ್ಲಿಲ್ಲ. ಒಟ್ನಲ್ಲಿ ಬೇಗ ತೊಗೊಂಡು ಫ್ರೆಂಡ್ಸ್ ಗೆ ಹೇಳ್ಬೇಕು. ಅವನು ಯಾವ ಸ್ಟಿಕ್ಕರ್ ಅಂಟಿಸಿದಾನೆ, ಇವನತ್ರ ಯಾವ್ದಿದೆ. ನನ್ನತ್ರ ಇರೋದು ಅವರಿಗಿಂತ ಚೆನ್ನಾಗಿದೆಯಾ ? ಇಲ್ವಾ, ಹಾಗಾದ್ರೆ ಮತ್ತೆ ಅಪ್ಪ-ಅಮ್ಮನಿಗೆ ಜೋತು ಬೀಳು.
ಅಪ್ಪ-ಅಮ್ಮನ ಜೊತೆ ದಾರೀಲಿ ಹೋಗ್ತಾಯಿದ್ರೆ, ಅಂಗಡಿಲಿ ಏನೇನ್ ಕಾಣುತ್ತೆ ಎಲ್ಲಾದುಕ್ಕು ಕೈ ತೋರಿಸಿ - 'ಅದು ಅದು ಅಮ್ಮ ಅದು' ಅನ್ನೋದು. 'ಇನ್ನೊಂದ್ಸಲ ಬಂದಾಗ ತೊಗೊಳೋಣ' ಅಂದ್ರೆ ಮುಗೀತು ದಾರಿಯುದ್ದಕ್ಕೂ 'ಕಣ್ಣೀರ ಧಾರೆ' ಮತ್ತು ಎರಡು ಕೈಯಲ್ಲಿ ಒಂದೊಂದು ಚಾಕೊಲೆಟ್ ! ಒಂದು ಅಮ್ಮನ ಸೀರೆಗೆ ಅಥವಾ ಅಪ್ಪನ ಶರ್ಟಿಗೆ !! ಅರ್ಧ ನೆಲಕ್ಕೆ !! ಅರ್ಧ ನಮ್ಮ ಬಾಯಿಗೆ !! ಹೌದಲ್ವಾ ?

'ಸ್ಕೂಲಿಂದ ಬರ್ತಿದಾನೋ, ಗದ್ದೆ ಕೆಸರಲ್ಲಿ ಉರುಳಾಡಿ ಬರ್ತಿದಾನೋ, ನನ್ನ ಮಗ' ಅಂತ ಅಮ್ಮ confuse ಆಗ್ಬೇಕು ಅಷ್ಟು ಕ್ಲೀನಾದ ಸ್ಕೂಲ್ ಯುನಿಫಾರ್ಮ್. ಬೆಳಗ್ಗೆ ಕ್ಲೀನ್ & ಟೈಡಿ, ಸಂಜೆ ಡರ್ಟಿ & ಡರ್ಟಿ! ಮನೆಗೆ ಬಂದ ತಕ್ಷಣ ತಿನ್ಲಿಕ್ಕೆ ಏನಾದ್ರೂ ಸ್ವೀಟ್ ಇರಲೇಬೇಕು, ಸ್ಕೂಲ್ ಗೆ ಹೋಗಿ ಬರೋದೆ ಒಂದು ದೊಡ್ಡ ಕೆಲಸ ಆಲ್ವಾ ?, ಅದಕ್ಕೆ ಯಾವಾಗಲು ಅಡುಗೆ ಮನೇಲಿರೋ ಡಬ್ಬೀಲಿ ಏನಾದ್ರೂ ಸ್ವೀಟ್ ಇದ್ದೇ ಇರ್ತಿತ್ತು. ಅಟ್ ಲೀಸ್ಟ್, ಕೊಬ್ರಿ-ಬೆಲ್ಲ ಮಿಕ್ಸ್ ಮಾಡಿ; ಮಾಡಿದ ಉಂಡೆಗಳು ಇರ್ತಿದ್ವು. This tradition still exist.

ದಿನ ಮಲೋಗೋ ಟೈಮಿಗಿಂತ ಬೇಗ ಮಲಗಿದ್ರೆ, ನಾನು ಮಲಗಿರುವಾಗ್ಲೆ ಅಮ್ಮ ಬಂದು ಬಟ್ಟೆ ಬಿಚ್ಚಿ ಏನಾದ್ರೂ ಜಗಳ ಮಾಡಿ ಪೆಟ್ಟು ಬಿದ್ದಿದಿಯಾ ? ಪರಚಿಕೊಂಡು ಗಾಯ ಆಗಿದಿಯಾ? ಅಂತ ಚೆಕ್ ಮಾಡೋಳು. ಹಾಗೇನಾದ್ರೂ ಆಗಿದ್ರೆ ಅರಿಶಿನ ಲೇಪನ, ಅದು ಅಮ್ಮನ ಆ ಕ್ಷಣದ ಟ್ರೀಟ್ ಮೆಂಟ್. ಊಟ ಮಾಡದೆ ಮಲಗಿದ್ರೆ, ಅನ್ನ, ಹಾಲು & ಮೊಸರು ಹದವಾಗಿ ಕಲಸಿ ಮೆದು ಮಾಡಿ, ನನ್ನನ್ನ ತೊಡೆ ಮೇಲೆ ಮಲಗಿಸಿಕೊಂಡು ಬಾಯಿಗಿಡುತ್ತಿದ್ದಳು ಅಮ್ಮ. ನಾನಂತೂ ನಿದ್ದೆಗಣ್ಣಲ್ಲೇ ಗುಳುಂ ಗುಳುಂ.

ದಿನಾ ಸ್ಕೂಲಿಗೆ ಹೋಗೋವಾಗ ಅಪ್ಪ ಎರಡು ಅಥವಾ ಐದು ರುಪಾಯಿ ಕೊಡ್ತಿದ್ರು, ಒಮ್ಮೊಮ್ಮೆ ಹತ್ತು ರುಪಾಯಿ - ಅವತ್ತಂತೂ ಹಬ್ಬ. ಸ್ಕೂಲ್ ಪಕ್ಕ ಐಸ್ ಕ್ರೀಮ್ ಪಾರ್ಲರ್ ಇತ್ತು, ಮತ್ತಿನ್ನೇನು ಬೇಕು?
ಅಪ್ಪ, ಯಾವ್ದೋ ಕೆಲಸದ ಸಲುವಾಗಿ ಸ್ಕೂಲ್ ಕಡೆ ಬಂದಾಗ ಮೀಟ್ ಮಾಡೋಕೆ ಬರೋರು. ಸ್ಕೂಲ್ ನ 'ಆಯಾ' (Care taker) ಆಂಟಿ ಕ್ಲಾಸ್ ಗೆ ಬಂದು 'ನಾಗರಾಜ್ ತಂದೆ ಬಂದಿದಾರೆ' ಅಂತ ಹೇಳ್ತಾಯಿದ್ಲು, ನಾನಂತೂ ಫುಲ್ ಖುಷ್; ಅಪ್ಪಿ-ತಪ್ಪಿ ಅದು ಕನ್ನಡ ಪಿರಿಯಡ್ ಇದ್ರಂತೂ ಇನ್ನೂ ಖುಷಿ. ಕನ್ನಡ ಮೇಡಂ, ಭಯಂಕರ - ನಾವು ಏನೇ ತಪ್ಪು ಮಾಡಿದ್ರು ಅವರೇ ಫಸ್ಟ್ & ಫಾಸ್ಟ್ ಪನಿಷ್ಮೆಂಟ್ ಕೊಡೋರು,ಯಾಕಂದ್ರೆ ಅವರೇ ಕ್ಲಾಸ್ ಇನ್ಚಾರ್ಜ್! ಆಮೇಲೆ ಪ್ರಕರಣದ ಗಂಭೀರತೆ ಆಧರಿಸಿ ಗ್ರೌಂಡ್ ಫ್ಲೋರ್ ನಲ್ಲಿರೋ ಪ್ರಿನ್ಸಿಪಲ್ ಕ್ಯಾಬಿನ್ನಿನ ಮುಂದೆ ಸಾಲಾಗಿ ನಿಲ್ಲಿಸೋರು. 'ಮುಂದೈತೆ ಮಾರಿ ಹಬ್ಬ' ಅನ್ನೋ ರೀತಿಲಿ ನಾವು ಒಬ್ಬರ ಮುಖ ಒಬ್ಬರು ನೋಡ್ತಾಯಿದ್ವಿ. ಧೈತ್ಯ ದೇಹಿ ಕ್ರಿಶ್ಚಿಯನ್ ಮೇಡಂ, school ಪ್ರಿನ್ಸಿ. ನಮ್ಮ ಕೈ ತಿರುಗಿಸಿ, ಕಟ್ಟಿಗೆ ರೂಲರ್ ನಿಂದ ಬಾರ್ಸ್ತಾಯಿದ್ರೆ ನಮಗೆ ನಕ್ಷತ್ರ ಕಾಣುತ್ತಿದ್ದವು.

ಒಮ್ಮೊಮ್ಮೆ ಅಪ್ಪ ಕೆಳಗಡೆ ನನಗೋಸ್ಕರ ಕಾಯ್ತಾ ನಿಂತು ಯಾರದೋ ಜೊತೆ ಮಾತಾಡುವಾಗಾ, ನಾನು ಸ್ಕೂಲಿನ ಎರಡನೇ ಫ್ಲೋರ್ ನಿಂದ 'ಅಪ್ಪಾಜಿ . . . .ಅಪ್ಪಾಜಿ' ಅಂತ ಅವರು ನನ್ನ ನೋಡೋವರ್ಗೂ ಕೂಗ್ತಾಯಿದ್ದೆ, ನಂತರ, ಒಂದೇ ಉಸಿರಲ್ಲಿ ಗ್ರೌಂಡ್ ಫ್ಲೋರ್ ಗೆ ಬರೋದು. ಬೇರೆ ಯಾರಾದ್ರು ನೋಡಿದ್ರೆ ಫಸ್ಟ್ ಟೈಮ್ ಅಪ್ಪನ್ನ ನೋಡ್ತಿದೀನಿ ಅನ್ಕೋಬೇಕು.
ಮನೇಲಿ ಅಪ್ಪನ ಷರ್ಟ್ ನಿಂದ ಎರಡು ರುಪಾಯಿ ಎಗರಿಸಿ ಮೆಲ್ಲಗೆ ಬಾಗಿಲು ವರೆಗೆ ಹೋಗಿ 'ಅಪ್ಪಾಜಿ, ಎರಡು ರುಪಾಯಿ ತೊಗೊಂದಿದಿನಿ' ಅಂದು ಓಡು ಓಡು ಅಂಗಡಿ ಮುಟ್ಟೋ ವರೆಗೂ ಓಡು.

ನಾನು ತುಂಬಾ ನಿದ್ದೆ ಮಾಡ್ತಾಯಿದ್ದೆ ಅದಕ್ಕೆ ಶನಿವಾರ ಅಂದ್ರೆ ನನಗೆ ಆಗ್ತಿರ್ಲಿಲ್ಲ. ಬೆಳಗ್ಗೆ ಬೇಗ ಏಳಬೇಕು, ರೆಡಿಯಾಗಿ ಬಸ್ಸಿನಲ್ಲಿ ಹತ್ತು ಕಿಲೋಮೀಟರು ದೂರ ಹೋಗ್ಬೇಕು ಸ್ಕೂಲ್ ಗೆ. ನಾನು ಶನಿವಾರ ಎದ್ದಾಗಿನಿಂದ ರೇಡಿಯಾವರ್ಗೂ ಅಳ್ತಾಯಿದ್ದೆ. ಸ್ನಾನ ಮಾಡೋವಾಗ ಅಳ್ತಾಯಿದ್ರೆ 'ಯಾಕೋ' ಅಂದ್ರೆ 'ಸುಮ್ನೆ' ಅಂತಿದ್ದೆ !! ಹಾಗೆ ನಾನು ಐದನೇ ಕ್ಲಾಸಿನ ವರೆಗೆ ಅತ್ತಿದಿನಿ! ದಿನ ಅಮ್ಮ ತಿಂಡಿ ರೆಡಿ ಮಾಡಿದ್ರೆ, ಅಪ್ಪ ಡ್ರೆಸ್ ತೊಡಿಸಿ ತಲೆಗೆ ಎಣ್ಣೆ ಹಚ್ಚಿ ನೀಟಾಗಿ ಬಾಚ್ತಾಯಿದ್ರು.

ಒಮ್ಮೆ ರಜೆಯಲ್ಲಿ ದೊಡ್ಡಮ್ಮ ಹೇಳಿದ್ರು - 'ಅಡುಗೆ ಮಾಡಿದವರು ತುಂಬಾ ಕಷ್ಟಪಟ್ಟು, ಪ್ರೀತಿಯಿಂದ ಅಡುಗೆ ಮಾಡಿರ್ತಾರೆ, ಅವರಿಗೆ ಖುಷಿಯಾಗೋ ತರಾ ಊಟ ಮಾಡ್ಬೇಕು', ಹಸಿವು ಮಾಡಿಕೊಂಡು ಇರಬೇಡ ಅಂತ ಅಮ್ಮ ಹೇಳಿದ್ರೆ, ಊಟದಲ್ಲಿ ಅದೂ ಬೇಡ ಇದು ಬೇಡ ಅನ್ಬಾರ್ದು, ಎಲ್ಲಿಗಾದ್ರೂ ಹೊರಟರೆ ಸ್ವಲ್ಪ ಹೆಚ್ಚು ಹಣಯಿರ್ಬೇಕು. students ಹತ್ರ ಯಾವಾಗಲು ಪೆನ್ನು, ಪೇಪರ್, ವಾಚ್ & ಒಂದು ಚಿಕ್ಕ ಬಾಚನಿಕೆಯಿರ್ಬೇಕು ಅಂತ ಹೇಳ್ತಾರೆ ಅಪ್ಪ.

ಮೊಬೈಲ್ ನಲ್ಲಿ ಟೈಮ್ ನೋಡಬಹುದು, ಚಿಕ್ಕ ಬಾಚಣಿಕೆಗಳು ನನ್ನ ಕೂದಲನ್ನ ಮಣಿಸೋಕೆ ಕಷ್ಟ ಪಡ್ತವೆ, ಅದಕ್ಕೆ ನನ್ನತ್ರ ಅವೆರಡಿಲ್ಲ. ಪೆನ್ನು-ಪೇಪರ್ ನನ್ನತ್ರ ಮೊದಲಿಂದಲೂ ಉಳಿದಿಕೊಂಡಿವೆ, ಯಾವಾಗಲು ಇರ್ತವೆ. ಹಾಗಾಗಿ ನನ್ನ ಈ ಬ್ಲಾಗ್ ಹೆಸರು 'ಪೆನ್ನುಪೇಪರ್'. ಅಪ್ಪ-ಅಮ್ಮ ಜೋತೆಯಿಲ್ದೆ ಅಜ್ಜಿ ಮನೆಗೆ ಹೊರಟರೆ, ಇರುವ ಹಣವನ್ನ ಒಂದೇ ಕಡೆ ಇಟ್ಕೋಳ್ಳೋಕೆ ಅಪ್ಪ ಬಿಡ್ತಾಯಿರ್ಲಿಲ್ಲ. ಸ್ವಲ್ಪ ಶರ್ಟಿನ ಜೇಬಲ್ಲಿ, ಸ್ವಲ್ಪ ಚಡ್ಡಿಯ ಜೇಬಲ್ಲಿ ಇಟ್ಕೊಬೇಕು. ಒಂದ್ಕಡೆ ಇರೋ ಹಣ ಕಳ್ದೊದ್ರೆ ಇನ್ನೊಂದು ಕಡೆ ಇರುತ್ತಲ್ಲ, ಹೆಂಗೆ ?

ಅಪ್ಪ-ಅಮ್ಮನ ಪ್ರೇರಣೆಯ ಮೇರೆಗೆ ಕ್ಲಾಸ್ ಬಂಕ್ ಮಾಡಿ ಸಿನಿಮಾ, ಒಮ್ಮೊಮ್ಮೆ ಅಪ್ಪ-ಅಮ್ಮ ಸಿನಿಮಾ ಥಿಯೇಟರ್ ಹತ್ರ ಕಾಯ್ತಾಯಿರ್ತಿದ್ರು ನಾನು ಕ್ಲಾಸ್ ಬಂಕ್ ಮಾಡಿ ಹೋಗ್ತಾಯಿದ್ದೆ. (ಇದು ತುಂಬಾ ಕಡಿಮೆ ಫ್ಯಾಮಿಲಿಯಲ್ಲಿ ನಡೆಯುತ್ತೆ). What a family ? ನನ್ನ ಸ್ಕೂಲಿನ attendance book ನೋಡಿದ್ರೆ ನಾನು absent ಆಗಿರೋದು almost all ಶುಕ್ರವಾರ.

ತಯಾರಿ ಮಾಡಿಕೊಳ್ಳದೆ essay competition ನಲ್ಲಿ ಭಾಗವಹಿಸಿ, ಏನು ಬರೆಯದೆ ಖಾಲಿ ಪೇಪರ್ ಕೊಟ್ಟು ಬಂದು ಅಮ್ಮನ ಜೊತೆ ಜಗಳ ಮಾಡಿದೆ. ಒಂದು ವಾರ ಬಳಸಿ ನನಗೆ ಇದು ಬೇಡ, ಬೇರೆ 'ಷೂ' ಬೇಕು ಅಂತ ಹಠ ಹಿಡಿದೆ. ಕರಾಟೆ ಕ್ಲಾಸ್ ಮುಗಿಸಿ ಬರುವಾಗ ಸುಸ್ತಾಗಿ ನಿದ್ದೆ ಮಾಡ್ತಾ ಮಾಡ್ತಾ ಊರಿನ ಸ್ಟಾಪ್ ನಲ್ಲಿ ಇಳಿಯದೆ ಬೇರೆ ಯಾವುದೋ ಊರಲ್ಲಿ ಎಚ್ಚರವಾಗಿ ಅಲ್ಲಿಯ ಅಪ್ಪನ ಫ್ರೆಂಡ್ ಮನೇಲಿ ರಾತ್ರಿ ಉಳಿದುಕೊಂಡಿದ್ದೆ , ಅವರ ಮನೆಯಿಂದ ಫೋನು ಮಾಡಿದಾಗಲೇ ನನ್ನ ಹುಡುಕಾಟ ನಿಂತಿದ್ದು. ಅಪ್ಪನ ಫ್ರೆಂಡ್ ಮನೇಲಿ ಅವತ್ತು non-veg ಊಟ, ನಾನು ಅವತ್ತಿಗೆ ಪಕ್ಕ ವೆಜ್ .ಅವರು ನನಗೋಸ್ಕರ ಅನ್ನ-ಮೊಸರು ಕಲೆಸಿ ಕೊಟ್ಟಿದ್ರು.

ನಾನು veg & non-veg ಆಗಿದ್ದು ಇಂಜಿನಿಯರಿಂಗ್ ಮೂರನೇ ವರ್ಷದ ಶುರುವಿನಲ್ಲಿದ್ದಾಗ ನಲ್ಲಿದ್ದಾಗ, ಈಗ ವರ್ಷಕ್ಕೆ ಒಂದು - ಒಂದುವರೆ ಕೋಳಿ ಕೊಲೆಯಾಗುತ್ತೆ ನನ್ನಿಂದ.ಕಲ್ಚರಲ್ ಪ್ರೋಗ್ರಾಮ್ ನಲ್ಲಿ ಭಾಗವಹಿಸುವುದರಲ್ಲಿ ಉತ್ಸಾಹ. ಯಾಕೋ ಏನೋ ಟ್ಯುಶನ್ ಕ್ಲಾಸ್ ಅಂದ್ರೆ ಅಸಹ್ಯ. ಅಪ್ಪ-ಅಮ್ಮ ಹೋಗು ಅಂತ ಒತ್ತಾಯ ಮಾಡಲಿಲ್ಲವಾದರು ಕೆಲವೊಂದು ಕಡೆ ಅಡ್ಮಿಶನ್ ಮಾಡಿಸಿದೆ ಹೋಗಿದ್ದು ಅಷ್ಟರಲ್ಲೇ ಇದೇ, ಅಪ್ಪನ ದುಡ್ಡು ಮಗನ ಜಾತ್ರೆ!

ನಟರಾಜ್ ಪೆನ್ಸಿಲ್ಲು, ರೆನಾಲ್ದ್ಸ್ ಪೆನ್ನು, ವಿದ್ಯಾ ಲೇಖಕ್ ನೋಟ್ ಬುಕ್, ಫ್ರೀ ಯಾಗಿ ಕೊಡುತ್ತಿದ್ದ ಸ್ಟಿಕ್ಕರ್ಸ್, ಖರೀದಿಸಿದ ಸ್ಟಿಕ್ಕರ್ಸ್, no exam fear, no result fear . . . . but, every day home work ? - oh my god. it was more than fear.
ಚಿನ್ನಿ-ದಾಂಡು, ಗೋಲಿ, ಗಿಳ್ಳಪಟ್ಟ, ಕೇರಂ, ಚೆಸ್, ಬುಗುರಿ, ಗಾಳಿಪಟ, ಮಣ್ಣಿನಲ್ಲಿ ಮಾಡಿದ ಟ್ರ್ಯಾಕ್ಟರ್ ಗೆ ಬಳಸಿ ಬಿಸಾಡಿದ ಮೆಡಿಸಿನ್ ಬಾಟಲಿಯ ರಬ್ಬರ್ ಮುಚ್ಚಳಗಳೇ ಚಕ್ರ, ಹಳೆಯ, ಹಂಚದೆ ಉಳಿದ ಲಗ್ನ ಪತ್ರಿಕೆಗಳಿಂದ ಮಾಡಿದ ಫ್ಯಾನು, ಲಗೋರಿ, ಕಾಟನ್ ಕ್ಯಾಂಡಿ / ಬೊಂಬಾಯಿ ಮಿಠಾಯಿ, ಬರ್ಪಿ / ಐಸ್ ಕ್ರೀಮ್, ಪೇಪರ್ ದೋಣಿ, ಜಗಳ - ಉಪ್ಪು ಉಪ್ಪು ಕಣ್ಣೀರು, ಹೆದರಿಕೆ, ಮೊಂಡುತನ, ಭಂಡ ಧೈರ್ಯ, etc . .etc, ಎಲ್ಲಗಳ ವಿಚಿತ್ರ ಕಾಂಬಿನೇಶನ್ ಗೆ ಬಾಲ್ಯ ಅನ್ನಬಹುದು.

ಹುಣಸೆ ಹಣ್ಣು, ಮಾವಿನ ಕಾಯಿ ಎಗರಿಸುವ ಸಂಬ್ರಮ, ಆ ಕಡೆಯಿಂದ ಒಬ್ಬ ಫ್ರೆಂಡ್ ಮರಕ್ಕೆ ಕಲ್ಲೆಸದದ್ದು ಬಂದು ನನ್ನ ಮುಖಕ್ಕೆ ಅಪ್ಪಳಿಸಿದಾಗ ಮೂಗಿನಲ್ಲಿ ರಕ್ತ ಕಾರಂಜಿ, ರಜೆಗೆ ಅಜ್ಜಿ ಮನೆಗೆ ಹೋದಾಗ ಅಲ್ಲಿಯ ಫ್ರೆಂಡ್ಸ್ ಜೊತೆ ಜೇನು ಬಿಡಿಸಲು ಹೋಗಿ ಮುಖಕ್ಕೆ ಜೇನು ಹುಳು ಕಚ್ಚಿಸಿಕೊಂಡು ಮುಖ ಊದಿಸಿಕೊಂಡು ಅಜ್ಜಿ ಜೊತೆ ಜಗಳ ಮಾಡಿ ಜೇನು ತರಿಸಿಕೊಂಡು ತಿಂದು ಸಾಧನೆ ಮಾಡಿದ್ದು. ಹಬ್ಬಕ್ಕೆ ಅಡುಗೆ ಮಾಡಿಯಾದ ಮೇಲೆ ಎಲ್ಲರು ಹೊರಗಡೆ ಹೋದಾಗ ಸ್ಟೌವಿನ ಮೇಲೆ ಸುಮಾರು ಒಂದೂವರೆ ಲೀಟರ್ ಕಾದ ಅಡುಗೆ ಎಣ್ಣೆ ಇತ್ತು, ನಾನು ಹಪ್ಪಳ ಮಾಡ್ತೀನಿ ಅಂತ ಹೋಗಿ ಇಡೀ ಎಣ್ಣೆಯನ್ನ ಎಡಗಾಲಿನ ಮೇಲೆ ಚೆಲ್ಲಿಕೊಂಡು ಮನೆ ತುಂಬಾ ಭರತನಾಟ್ಯ ಮಾಡಿದ್ದೆ. ನನ್ನ ಕಾಲು ಹಪ್ಪಳದ ತರಾ ಸುಟ್ಟಿತ್ತು. ನಾಗರಾಜ್ ಹೋಗಿ ಕೆಲವು ತಿಂಗಳು 'ಹಪ್ಪಳರಾಜ' ಆಗಿದ್ದೆ. ಈಗಲೂ ಸ್ಟೌವ್ ಮೇಲೆ ಎಣ್ಣೆ ಇದ್ರೆ 'ದೂರ ಇರು' ಅಂತಾಳೆ ಅಮ್ಮ. ಆದ್ರೆ, ಬೆಂಗಳೂರಿನ ಮನೆಯಲ್ಲಿ ನಾನೇ ಹೆಡ್ ಕುಕ್ !!

summer ನಲ್ಲಿ ತುಂಗ-ಭದ್ರ ನದಿಯ ನೀರು ಕಡಿಮೆ, ರಭಸ ಕಡಿಮೆ ನಾವು ಅಂಬೋ ಅಂತ ಬೀಳ್ತಾಯಿದ್ವಿ, ಮನೆಯಿಂದ ಐದು ನಿಮಿಷ ನಡೆದರೆ ಸಾಕು ಕಾಲು ನದಿಯಲ್ಲಿರುತ್ತೆ. ಆಗಾಗ ಕೆಲವು ವೀಕೆಂಡ್ ಅಪ್ಪನ ಜೊತೆ ಗದ್ದೆಯ ಮರದಡಿಯಲ್ಲಿ lunch, ಗದ್ದೆಯ ನೀರಿನ ಪಂಪ್ ನಲ್ಲಿ ಸ್ನಾನ. ಸ್ಕೂಲ್ ನಲ್ಲಿ ಪಿಕ್ ನಿಕ್ ಹೊರಟರೆ ನನ್ನ ಕ್ಯಾರಿಯರ್ ನ ಒಂದು ಡಬ್ಬಿಯಲ್ಲಿ ಕೇಸರಿಬಾತ್, ಇನ್ನೊಂದರಲ್ಲಿ ಚಿತ್ರಾನ್ನ. ನಾನು ಬ್ರೆಡ್ಡು-ಜಾಮ್, ಕೇಕ್ ,ಚಿಪ್ಸ್,ಸಮೋಸ, ಪಿಜ್ಜಾ, ಬಿಸ್ಕೆಟ್ ಗಳನ್ನ ನನ್ನ ಕ್ಯಾರಿಯರ್ ನಲ್ಲಿ ಇಟ್ಕೊಂಡೇಯಿಲ್ಲ. ಅಮ್ಮ ಅವುಗಳಿಗೆ importance ಕೊಡ್ಲೇಯಿಲ್ಲ.

ಈಗ ಊಟ ಮಾಡದೆ ಮಲಗಿದರೆ, ಅಮ್ಮ- 'ಊಟ ಮಾಡು ಏಳು' ಅಂದ ತಕ್ಷಣ ಎಚ್ಚರ ಆಗಿಬಿಡುತ್ತೆ, ಅರೆಬರೆ ನಿದ್ದೆಯಲ್ಲಿ ಅಮ್ಮನ ತೊಡೆಯ ಮೇಲೆ ಮಲಗಿ ಅನ್ನ ಗುಳುಂ ಗುಳುಂ ಮಾಡೋ ಅವಕಾಶ ಮತ್ತಿನ್ಯಾವಾಗ ? ಅಪ್ಪ ಈವಾಗ ಐದು, ಹತ್ತು ರುಪಾಯಿ ಕೊಡೋದೆಯಿಲ್ಲ, ಬದುಕು ಎಷ್ಟು ಕ್ರೂರಿ ಅನ್ನಿಸೋದೇ ಆಗ. 'ಮತ್ತೆ ಸಿಗುವೆಯಾ ಒಮ್ಮೆ, ಪ್ಲೀಸ್' ಬಾಲ್ಯಕ್ಕೆ ಹೀಗೆ ಕೇಳೋದು ಅವಾಗ್ಲೇ. ಅಥವಾ ಇಂಥವೇ ಕೆಲವು ಸಂದರ್ಭಗಳಲ್ಲಿ, what do you say?

ಸ್ಕೂಲ್ ನಲ್ಲಿ ಇದ್ದಂತ ಎಲ್ಲಾ ಪದ್ಯಗಳಲ್ಲಿ, ಯಾವ ಪದ್ಯ ಮತ್ತು ಆ ಪದ್ಯದ ಲೇಖಕಿ ಈ ಎರಡು ಸ್ಪಷ್ಟವಾಗಿ ನೆನಪಿರೋದು ಅಂದ್ರೆ ಅದು ಒಂದೇ. ಬಹುಶಃ ಆ ಪದ್ಯವನ್ನ ಮತ್ತು ಲೇಖಕಿಯನ್ನ ನಾನು ಯಾವತ್ತಿಗೂ ಮರೆಯಲಾರೆ. ಆ ಪದ್ಯ ಯಾವುದು ಅಂದ್ರಾ ? 'ಸುಭದ್ರಕುಮಾರಿ ಚೌಹಾನ್' ವಿರಚಿತ 'ಮೇರಾ ನಯಾ ಬಚಪನ್' ನೀವು ಓದಿಲ್ಲ ಅಂದ್ರೆ ಖಂಡಿತವಾಗಿ ಓದಿ. ಇಂಟರ್ ನೆಟ್ ನಲ್ಲಿ ಸಿಗುತ್ತೆ.

ಬೆಂಗಳೂರಿನಲ್ಲಿ ಮೋಡ ಕವಿದ ಹವಾಮಾನ, ತುಂತುರು ಮಳೆ, ಮುಸುಲಧಾರೆ. ಹುಡುಕಿದರೂ ಒಂದು ಕಾಗದದಲ್ಲಿ ಮಾಡಿದ ದೋಣಿ ತೇಲಿ ಬರಲಿಲ್ಲ. ಹೀಗಾಗಿ ಒಮ್ಮೆಲೇ ಚಡ್ಡಿ ದಿನಗಳು ನೆನಪಾದವು. ಅದೆಷ್ಟು, ಪುಟ್ಟ ಪುಟ್ಟ ದೋಣಿಗಳು ತೇಲಿದವೋ, ಮಳೆಗೆ ನೆಂದು ಒಂದೇ ಸಂಜೆ ಅದೆಷ್ಟು ಸಲ ಬಟ್ಟೆ ಬದಲಿಸಿದೆವೋ.

ಮಳೆಯ ಸಂಜೆ ಅಂಗಳಲ್ಲಿ ಕೈ ಚಾಚಿ ಗಿರ ಗಿರ ತಿರುಗುವಂತೆ ಮಾಡಿದ, ಕಾಗದ ದೋಣಿಯ ದಿನಗಳ ನೆನಪುಗಳು; ನೆನಪಿನ ದೋಣಿಯಲಿ ಶಾಶ್ವತ, ನೀವೆನಂತೀರ ? ನನ್ನ ಕಾಗದ ದೋಣಿಯ ಕೆಲವು ನೆನಪುಗಳನ್ನ random order ನಲ್ಲಿ ಹೇಳಿದ್ದೇನೆ . . ಓದಿ ನಿಮ್ಮ ಬಾಲ್ಯ ನೆನಪಾದರೆ, ಬೈಟು ಕಾಫಿ ಕುಡಿಯೋಣ. ಬಿಲ್ ನಿಮ್ದೆ! ಓಕೆನಾ ?

ಒಟ್ಟಾರೆ ಹೇಳ್ಬೇಕು ಅಂದ್ರ ಚಡ್ಡಿ / ಲಂಗದ ದಿನಗಳೇ ಹಾಂಗ, ಮರೆತೇನೆಂದರೆ ಮರೆಯಲಿ ಹ್ಯಾಂಗ?
ಇದನ್ನ ಬರೆಯುವಾಗ ಮೊದಲಿಂದಲೂ ಕೊನೆವರೆಗೂ ನನ್ನೊಂದಿಗೆ ಇಬ್ಬರು ಮಹನೀಯರಿದ್ದರು, 'ಸುಧರ್ಶನ್ ಫಾಕಿರ್' ಮತ್ತು 'ಜಗಜಿತ್ ಸಿಂಗ್'. ಸುಧರ್ಶನ್ ಬರೆದಿದ್ರು ಜಗಜಿತ್ ಹಾಡ್ತಾಯಿದ್ರು,

"ಏ ದೌಲತ್ ಭಿ ಲೇಲೋ ಏ ಶೌಹರತ್ ಭಿ ಲೇಲೋ
ಭಲೇ ಚೀನ್ ಲೊ ಮುಜಸೇ ಮೇರಿ ಜವಾನಿ
ಮಗರ್ ಮುಜ್ಕೋ ಲೌಟಾದೋ ಬಚಪನ್ ಕ ಸಾವನ್
ಓ ಕಾಗಜ್ ಕೀ ಕಷ್ತಿ ಓ ಬಾರಿಷ್ ಕ ಪಾನಿ"

=====
=====