Nov 20, 2010

"ಮಗನಾಗೋ ಮುಕುಂದ"

ಮನ ಮಡಿಯಾಗಿಸಿ
ಜೇಡಿಮಣ್ಣಲಿ ನಿನ್ನ ಬಂಧಿಸಿರುವೆ, ಪೂಜಿಸಲಲ್ಲೋ
ಮುದ್ದಿಸಲು ಮಗನೆ

ನನ್ನ ಸೆರಗೆಳೆದು
ಬೆಣ್ಣೆಗಾಗಿ ಕೈ ಚಾಚಲು ಬಾರೋ
ಕಾಡಿ-ಬೇಡಿ ಹುಸಿಮುನಿಸ
ಕಣ್ಣೀರ ತರಲು ಬಾರೋ

ನಡುಮನೆಯಲ್ಲಿ ಬೆಣ್ಣೆ
ಮುಚ್ಚಿಟ್ಟಿರುವೆ, ಕದಿಯಲು
ಕಳ್ಳ ಹೆಜ್ಜೆಯಲಿ ಬಾರೋ
ಬಂದಾರು ಬಾರೋ ಹಾಲುಗೆನ್ನೆಯ ಕಂದ

ರಗಳೆಯಾಗಲಿ
ಚೆಲ್ಲಾಟವಾಗಲಿ ಏನಾದರಾಗಲಿ,
ನಿನ್ನದೇ ಗೆಲುವಾಗಲಿ ಬಾರೋ
ನನ್ನೆದೆಯಲಿ ಹಾಲ್ಗಡಲ ಜಿನುಗಿಸಲು
ಒಡಲಿಗೆ ಚಿಗುರಾಗಿ ಜಾರೋ

ಹಠ ಬಿಟ್ಟು,
ಬಾಯ್ತುಂಬ ಅಮ್ಮಾ ಎಂದು ಕರೆಯೋ
ಮಣ್ಣ ಮುಕುಂದ,
ಮುದ್ದು ಮುಕುಂದ

=====
=====

Nov 5, 2010

"ಬಿಸಿಲ ಹನಿ"

ಹಬ್ಬದಂತೆ ಮೂಡುತ ಬಾಗುವ
ಬಣ್ಣದಬಿಲ್ಲ ನೋಡಿ ಕುಣಿದು ಕುಪ್ಪಳಿಸುವ
ಮನದಲ್ಲಿ ಬರೀ ಬಣ್ಣಗಳ ಚಿತ್ತಾರ.
ಮತ್ತೊಮ್ಮೆ ಮೂಡುವುದೇ ?- ಕೊನೆಯಿಲ್ಲದ ಕಾತರ.
ಬಣ್ಣಗಳ ಬಣ್ಣನೆಯಲ್ಲಿ, ಅಲ್ಪಾಯುಷ್ಯದ ಮಳೆಗೆ ಮೆಚ್ಚುಗೆಯಿಲ್ಲ
ಅಸಲಿಗೆ ಅದರ ಪರಿವಿಲ್ಲ.

ಬಣ್ಣದೊಡಲ ಬಗೆದಾಗ
ಕಲ್ಪನೆಗೂ ಮೀರಿದ ಹನಿಯ
ಹೊಸ ಲೋಕ ತೆರೆಯುವುದು, ತೋರುವುದು.

ಹುಚ್ಚು ಮಳೆಯಿದು
ಬಂದೆರೆಷ್ಟು, ಬಿಟ್ಟರೆಷ್ಟು- ಕೊಂಕಾಡುತಿದೆ ಬಣ್ಣ ನೋಡುವ ಕಣ್ಣು.
ಜೋರಾಗಿ ಹುಯ್ದರೆ ಮಾತ್ರ ಮಳೆಯೇ
ಬಿಸಿಲಮಳೆಗೆ ಬೆಲೆಯಿಲ್ಲವೇ ?


ಪ್ರತಿಸಲವೂ ಮಣ್ಣಿನಾಳದಲ್ಲಿ ಬಂದಿರುವಿಕೆಯನ್ನ
ಮೂಡಿಸುವಲ್ಲಿ ಸೋಲುವುದು.
ಬಿಸಿಲಮಳೆ ಸೋಲಿಗೆ ಹೆದರಿಲ್ಲ ಇದುವರೆಗೂ
ಸತತ ಪ್ರಯತ್ನವದರ ಜಾಯಮಾನ

ಹೋಗುವ ಮೊದಲು
ಅಂತ್ಯವಿಲ್ಲದ ಹಾಳೆಯ ಮೇಲೆ
ಬಣ್ಣ ತಂದು ಸಹಿಮಾಡುವುದು.
ನೋಡುವ ಕಣ್ಣುಗಳಲ್ಲಿ ಉಳಿದಿದ್ದು ಬಣ್ಣಗಳು ಮಾತ್ರ.

ತಿರಸ್ಕಾರಗೊಂಡ ಹನಿಯ
ಬೇಸರದುಸಿರ ಕೇಳಿ
ಸಮಾಧಾನಪಡಿಸಿದವರೆಷ್ಟೋ ?
ಸಿಹಿ ಹನಿಗಾಗಿ ನಾಲಿಗೆ ಚಾಚಿದವರೆಷ್ಟೋ ?
ಅಂಗಳದಲ್ಲಿ ಮನಸಾರೆ ಕಾದು ನಿಂತು
ಹಗುರ ಹನಿಗಳಲ್ಲಿ ಪುಳಕಗೊಂಡು ನೆನೆದವರೆಷ್ಟೋ ?

=====
=====