Sep 28, 2011

"ಅಪ್ಪ-ಅಮ್ಮ & SEX"


ನಮಗಂತೂ ಆಗಲಿಲ್ಲ ಮಕ್ಕಳಾದರು ಓದಲಿ. ಚೆನ್ನಾಗಿ ಓದಲಿ. ಓದಿ ಜ್ಞಾನ ಸಂಪಾದನೆ ಮಾಡ್ಲಿ. ಒಳ್ಳೆ ಮನುಷ್ಯ ಆಗ್ಲಿ. ನಮಗ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಮಗಳ ವಿದ್ಯಾಭ್ಯಾಸಕ್ಕೆ ಯಾವ್ದು ಆಡ್ದಿಯಾಗ್ಬಾರ್ದು. ಹೀಗೆ ಇದೆ ರೀತಿಯ ಹಲವಾರು ಆಸೆಗಳಿರುವ ಸಾಮಾನ್ಯ ಮದ್ಯಮ ವರ್ಗದ ತಂದೆ ತಾಯಿಗಳಂತೆ, ಅವರು ಕೂಡ. ತಮ್ಮ ಅದೆಷ್ಟೋ ಆಸೆ, ಕನಸುಗಳನ್ನ ಬಲಿಕೊಟ್ಟು ಓದಿಸಿದರು. ಮಗಳು ಈಗ ಬೆಂಗಳೂರಿನಲ್ಲಿ ಇಂಜೀನಿಯರ್ . "ಹುಡುಗೀನ ಯಾಕ ಓದಸ್ತೀರ ಮದುವೆ ಮಾಡಿ" ಆನ್ನೋ ಮಾತಿಗೆ ಗಮನ ಕೊಡದೆ ಮಗಳನ್ನ ಕಾಲೇಜಿಗೆ ಸೇರಿಸಿದ ಅವಳ, ಅಪ್ಪ-ಅಮ್ಮ ಎಂಬ ಆ ಎರಡು ಜೀವಗಳಿಗೆ ಅದೆಂಥದೋ ಹೇಳಲಾಗದ ಸಂಬ್ರಮ. ಅದೆಷ್ಟು ಕಷ್ಟ ಪಟ್ಟಿದ್ದವು ಆ ಜೀವಗಳು. ಬೆಂಗಳೂರಿನಿಂದ ಸರಿ ಸುಮಾರು 470 km ದೂರದ ಊರು ಅವರದು. ತಂದೆ-ತಾಯಿ ಇಬ್ಬರಿಗೂ ಬೆಂಗಳೂರು ಆಕಸ್ಮಿಕ ಮತ್ತು ಅಪಚಿತ.

ಆ ಊರಿನ ಮೊದಲ ಇಂಜೀನಿಯರ್ ಅವಳು, ಕಾಲೇಜಿನ ಕ್ಯಾಂಪಸ್ ಇಂಟರ್ವೀವ್ ನಲ್ಲೆ ಒಂದು ಕಂಪನಿಗೆ ಸೆಲೆಕ್ಟ್ ಆಗಿದ್ದಳು. ಡಿಗ್ರೀ ಕಂಪ್ಲೀಟ್ ಆದಮೇಲೆ ಸ್ವಲ್ಪ ದಿನ ಊರಲ್ಲಿ ಅಪ್ಪ-ಅಮ್ಮ ನೊಂದಿಗಿದ್ದು ಈಗ್ಗೆ ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಳೆ - ಕಂಪನಿಯವರು joining date ಕೊಟ್ಟಿದಾರೆ. ಹುಡುಗಿಯರ paying guest ನಲ್ಲಿದಾಳೆ. ಕಂಪನಿಯಲ್ಲಿ ಇನ್ನೂ ಟ್ರೈನಿಂಗ್ ನಡೀತಾಯಿದೆಯಾದ್ದರಿಂದ ಸಂಬಳ ಸ್ವಲ್ಪ ಕಡಿಮೆ ಅದರಲ್ಲೇ ಸ್ವಲ್ಪ ಮನೆಗೆ ಕೊಡ್ತಾಯಿದಾಳೆ. ಅಪ್ಪ-ಅಮ್ಮನಿಗೋ ಮಗಳು ದುಡಿದು ನೂರು ರುಪಾಯಿ ಕೊಟ್ಟರು ಅವರ ಸಂತೋಷಕ್ಕೆ ಪಾರಾವೆಯಿರುವುದಿಲ್ಲ. ಮಗಳು ಕೊಡುವ ಕೆಲವು ಸಾವಿರ ರೂಪಾಯಿಗಳನ್ನ ತಾಯಿ ಅದೆಷ್ಟು ಬಾರಿ ಮುಟ್ಟಿ ಕಣ್ಣಿಗೊತ್ತಿಕೊಂಡು ಕಣ್ಣೀರಾದರೋ ಏನೋ - ತೀರದ ಆನಂದ ಭಾಷ್ಪ. ತಂದೆಗೆ ಏನನ್ನೋ ಸಾಧಿಸಿದ ಸಮಾಧಾನ. ದೂರದಲ್ಲೆಲ್ಲೋ, ಮಗಳು ಕೊಟ್ಟ ಹಣದಲ್ಲಿ ಮಗಳಿಗೇ ಸಣ್ಣ ಪುಟ್ಟ ಚಿನ್ನದ ಒಡವೆ ಖರೀದಿಸುವ ಕನಸು ಕಾಣುವ ತಾಯಿ. ಇನ್ನೂ ಮದುವೆ ತಯಾರಿ ಮಾಡ್ಕೊಬೇಕು ಅಂತ ವಿಚಾರ ಮಾಡೋ ತಂದೆ. . . .

. . . . .ಆದರೆ ದುರಂತ
ಇಂಜೀನಿಯರಿಂಗ್ 3 ನೇ ವರ್ಷದ ಕೊನೆಯಲ್ಲಿ ಕಂಪನಿಯೊಂದಕ್ಕೆ ಸೆಲೆಕ್ಟ್ ಆದ ಆ ಹುಡುಗಿ ನಂತರ ಬದಲಾಗಿದ್ದಳು. ಕೋತಿಗೆ ಹೆಂಡ ಕುಡಿಸಿದಂತಾಯ್ತು. ಜೋರು ಜೋರು ಪಾರ್ಟಿಗಳು ಶುರುವಾದವು, ಪ್ರತಿ ಕಂಪನಿಯಲ್ಲಿ ಸೆಲೆಕ್ಟ್ ಆದವರೆಲ್ಲ ಕೊಡುವ ಪಾರ್ಟಿ. ಮತ್ತೊಮ್ಮೆ ತೀರ ಆತ್ಮೀಯರಿಗೆ ಒಂದು ಪಾರ್ಟಿ.ಪಾರ್ಟಿಗಳಲ್ಲಿ ಬೇರೆ ಬೇರೆ ರೀತಿಯ ಮೋಜು ಮಸ್ತಿಗಳು ಇಷ್ಟವಾದವು, ಯೌವನ ನೆತ್ತಿಗೇರಿತು ಹಾಗೆ ಚಟಗಳು ಮೈಯಿಗೇರಿದವು. ಬೆಂಗಳೂರಿಗೆ ಬಂದಿರುವ ಆ ಹುಡುಗಿ ಇನ್ನೂ ಕಂಪನಿಗೆ join ಆಗಿಲ್ಲ ! ಆ ಹುಡುಗಿ, ladies paying guest ನಲ್ಲಿ ಇಲ್ಲ !! ಬೆಂಗಳೂರಿನಲ್ಲಿ ಒಬ್ಬ ಹುಡುಗನ ರೂಮಿನಲ್ಲಿದಾಳೆ !!! ಮನೆಯಲ್ಲಿ ತಂದೆ-ತಾಯಿಗೆ ಸುಳ್ಳು ಹೇಳಿ ಬಂದಿದ್ದಾಳೆ. ಡಿಸೆಂಬರ್ ನಲ್ಲಿ ಕಂಪನಿಯವರು ಜಾಯ್ನಿಂಗ್ ಡೇಟ್ ಕೊಟ್ಟಿದಾರೆ ಆದ್ರೆ ಇವ್ಳು ಬಂದಿರೋದು ಜುಲೈ ನಲ್ಲಿ ! no news about any crash course or something like that.

ಅದೆಷ್ಟೋ ಜನರ ಕೈ-ಕಾಲು ಹಿಡಿದು ಅಮಾಯಕ ತಂದೆ-ತಾಯಿ ಓದಿಸಿದ್ದರು. ತಮ್ಮ ಜೀವನದ ಆಶಾಕಿರಣ ಅಂತ ಭಾವಿಸಿರುವ ನಿಷ್ಕಲ್ಮಶ ಮನದ ಜೀವಗಳ ಮುದ್ದಿನ ಮಗಳ ಮೈ ಚಟಕ್ಕೆ ಬಿದ್ದುಬಿಟ್ಟಿದೆ - ಕಾಮಾತುರಣಂ ನ ಭಯಂ ನ ಲಜ್ಜಾ. ಪ್ರತಿ ಸಲ ಕಾಮಕ್ರೀಡೆ ಮುಗಿದ ಮೇಲೆ ಆ ಹುಡುಗ ಸೋಸಿಯಲ್ ನೆಟ್ವರ್ಕ್ ನಲ್ಲಿ ಬೇರೆಯ ರೀತಿಯಲ್ಲಿ ಅಪ್ಡೇಟ್ ಮಾಡ್ತಾನೆ ಈ ಹುಡುಗಿ ಅದನ್ನ ಲೈಕ್ ಮಾಡ್ತಾಳೆ. ಆ ಹುಡುಗಿ ಮನೆಗೆ ಕೊಡುವ ಹಣ ಆ ಹುಡುಗನದ್ದೆ !! ತಮ್ಮಿಬ್ಬರ ಈ ಕಳ್ಳ ವ್ಯವಹಾರ ತಮ್ಮ ಕಾಲೇಜಿನ ಕೆಲವರಿಗೆ ತಿಳಿದಿದೆ ಅಂತಲೂ ಅವರಿಗೆ ಗೊತ್ತು, ಆದರೂ ಯಾವ ಭಯ,ಸಂಕೋಚ ಅವರಿಗಿಲ್ಲ. ಹೆತ್ತವರ ಅಮಾಯಕತೆ, ಮುಗ್ಧತೆಯನ್ನ ದುರುದ್ದೇಶಕ್ಕೆ ಬಳಸಿಕೊಂಡವರು ಯಾರಿಗೆ ತಾನೇ ಹೆದರ್ತಾರೆ. 'ಇದು ತಪ್ಪಲ್ವಾ ?' ಅಂತ ಕೇಳಿದ್ರೆ 'ಅವಳಿಗೆ ಏನ್ ಬೇಕೊ ಅದನ್ನ, ನಾ ಕೊಡ್ತಿನಲ್ಲ ಮಗ' ಅಂತಾನೆ ಆ ಹುಡುಗ. ಮದುವೆ ಬಗ್ಗೆ ಕೇಳಿದ್ರೆ, ಅಂಥದೊಂದು ಇದಿಯಾ ಅನ್ನುವ ಹಾಗೆ ಮುಖ ನೋಡ್ತಾರೆ. ಇದನ್ನ ಓದಿದ ಮೇಲೆ ಆ ಹುಡುಗಿ, ಏನೂ ತಿಳಿಯದ 'ಮಾಸೂಮ್' ಅಂತೂ ಅಲ್ಲ ಅನ್ನೋದು ನಿಮಗೂ ಮನವರಿಕೆಯಾಗಿದೆ ಅನ್ಕೊಂಡಿದಿನಿ. so, They are not cheating on each other but, just ENJOYING together.

ದೊಡ್ಡ ದುರಂತ . . . .
ಈವರೆಗೆ ನೀವು ಓದಿದ್ದು ಕಾಲ್ಪನಿಕ ಕಥೆಯಲ್ಲ.

ಪ್ರಶ್ನೆಗಳು ::
1) 22 ವರ್ಷ ಪ್ರೀತಿ, ವಾತ್ಸಲ್ಯ, ಮಮಕಾರ, ಕಾಳಜಿ, ವಿದ್ಯಾಭ್ಯಾಸ, ಊಟ, ಬಟ್ಟೆ, ಹಣ ಎಲ್ಲಕ್ಕಿಂತ ಮುಖ್ಯವಾಗಿ ಜನ್ಮ ಕೊಟ್ಟ ಅಪ್ಪ-ಅಮ್ಮನಿಗೆ ಈ ಮಟ್ಟದ ನಯವಂಚನೆ, ನಂಬಿಕೆ ದ್ರೋಹ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ ?
2) ಅಪ್ಪ-ಅಮ್ಮನ ವಾತ್ಸಲ್ಯದ ಬಿಸುಪಿಗಿಂತ ಹಾಸಿಗೆಯ ಮೇಲಿನ SEX ಹೆಚ್ಚು ಸುಖ,ಶಾಂತಿ, ನೆಮ್ಮದಿ ನೀಡುತ್ತಾ ?
3) ಕೇವಲ ಎರಡು ವರ್ಷಗಳ ಹಿಂದೆ ಪರಿಚಯವಾದವರ ಪ್ರೇಮ, ಮೈಥುನ; ತಂದೆ-ತಾಯಿಯೊಂದಿಗೆ ಐದು ತಿಂಗಳು(ಜುಲೈ -- ಡಿಸೆಂಬರ್) ಇರಲಾರದಷ್ಟು ಕೆರಳಿಸುತ್ತವಾ ? ಅಥವಾ, ತಂದೆ-ತಾಯಿ ಬೇಡವಾಗಿಬಿಡುತ್ತಾರಾ ?
4) ಟ್ರೈನಿಂಗ್ ನಲ್ಲಿ ಕಡಿಮೆ ಸಂಬಳ ಅಂತ ಹೇಳಿದ ಮಗಳು ಯಾವುದರ ಟ್ರೈನಿಂಗ್ ನಲ್ಲಿದ್ದಾಳೆ, ಇದೆ ಟ್ರೈನಿಂಗ್ ಆದ್ರೆ ನಂತರದ ವೃತ್ತಿ ?
5) ಊರ ತುಂಬಾ ತಮ್ಮ ಮಗಳು ಕಂಪನಿಯಲ್ಲಿ ದುಡಿದು ಹಣ ಕಳಿಸಿದಾಳೆ ಅಂತ ಹೇಳಿಕೊಳ್ಳುವ ತಂದೆ-ತಾಯಿಗಿದು ತಿಳಿದರೆ ಅವರು ಏನಾಗ್ತಾರೆ ?
6) now we are in relationship ಅಂತ ಹೇಳುವ ಇವರದು ಇದೇನು ಹಾದರವಾ ? ಆತ್ಮವಂಚನೆಯಾ ? ಟೈಮ್ ಪಾಸ್ ?ಅಥವಾ, ಯಾಮಾರಿ ಅಪ್ಪಿ-ತಪ್ಪಿ ಇದಕ್ಕೆ LOVE ಅಂತಾರ?
7) ನಿಜ ಹೇಳಿ, ಇಂಥವರು ಮದುವೆಯಾಗಿ ನೆಟ್ಟಗೆ ಸಂಸಾರ ಮಾಡ್ತಾರೆ ಅಂತ ನಿಮಗನ್ನಿಸುತ್ತಾ ? (ನನಗಂತೂ ಇಲ್ಲ)
8) ಮುಂದೆ ಈ ಹುಡುಗ, ಹುಡುಗಿಯನ್ನ ಮದುವೆಯಾಗೋ ಯಾವುದೋ ಹುಡುಗಿ, ಹುಡುಗನ ಪಾಡೇನು ?
9) ನಮ್ಮನ್ನ ಹೆತ್ತವರು ನಮ್ಮೊಂದಿಗೆ ಸಮಯ ಕಳೀಬೇಕು ಅಂತ ಕಾಯ್ತಿರ್ತಾರೆ, ಕಾಲೇಜ್ ನಲ್ಲಿ ನಡೆದ ಸಣ್ಣ ಸಣ್ಣ ಘಟನೆಗಳನ್ನ ಹೇಳುವಾಗ ಬೆರಗುಗಣ್ಣಿನಿಂದ ಕೇಳ್ತಾರೆ; ಇವು ನಮಗೆ ನೆನಪಾಗಲ್ವಾ ?
10) ಯಾವ ನೆಲದವರು ನಾವು ? ಎಲ್ಲಿರುವೆವು ? ಎಲ್ಲಿಗೆ ಹೊರಟಿರುವೆವು ? ಅಸಲಿಗೆ ಯಾರು ನಾವು ?

ಹೀಗೆ ನನಗೆ ನಾನೇ ಪ್ರಶ್ನೆ ಹರವಿಕೊಂಡು ಉತ್ತರ ಕೊಡುವ ಪ್ರಯತ್ನ ಮಾಡುತ್ತಾ, ತುಂಬಾ ಬೇಜಾರಾಗಿ ಇದ್ಯಾಕೆ ಹಿಂಗ್ ಮಾಡ್ತು ಹುಡುಗಿ ಅಂತ ಯೋಚಿಸ್ತಿರುವಾಗಲೇ. ಚಕ್ಕನೆ ಹೆಸರೊಂದು ಮಿಂಚಿದಂತಾಯ್ತು, ಅದು ಕೂಡ ಹುಡುಗಿಯ ಹೆಸರೇ - 'ಐರೊಮ್ ಚಾನು ಶರ್ಮಿಲ'. ಆಕೆ Iron lady of Manipur. ತನ್ನ 28 ನೇ ವಯಸ್ಸಿನಿಂದ Armed Forces (Spacial Powers)Act, 1958 (AFSA) ವಿರುದ್ದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ ಶರ್ಮಿಲ. ಈಗ ಆಕೆಗೆ 39 ವರ್ಷ ವಯಸ್ಸು, ಅಂದ್ರೆ ಕಳೆದ ಹನ್ನೊಂದು ವರ್ಷಗಳಿಂದ ಶರ್ಮಿಲ ಉಪವಾಸವಿದ್ದಾಳೆ. ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ 'Hunger striker' ಈವರೆಗೂ ಊಟ ಇಲ್ಲ, ನೀರು ಇಲ್ಲ. ಶರ್ಮಿಲ ಅವರ ಮೂಗಿಗೆ ಒಂದು ಪೈಪ್ ಇರುತ್ತೆ ಆ ಪೈಪ್ ಮೂಲಕ ದಿನ ಸ್ವಲ್ಪ ಹಣ್ಣಿನ ರಸ ಹನಿಹನಿಯಾಗಿ ಆಸ್ಪತ್ರೆಯವರು ಕೊಡ್ತಾರೆ. 11 ವರ್ಷಗಳಿಂದ ಶರ್ಮಿಲ ಅವರ ಮೂಗಿನ ಪೈಪ್ ಆಕೆಯ ದೇಹದ ಒಂದು ಭಾಗವೇನೋ ಎಂಬಷ್ಟರಮಟ್ಟಿಗೆ ಒಗ್ಗಿಹೋಗಿದೆ. ಊಟ ಮೂಗಿನ ಮೂಲಕ ಅದೂ ಸ್ವಲ್ಪ ಹನಿ ಹಣ್ಣಿನ ರಸ ಅಷ್ಟೇ - Oh My God. ತನ್ನ ಜನರ ಸಲುವಾಗಿ ತನ್ನ ಜೀವನವನ್ನೇ ಮುಡಿಪಾಗಿತ್ತು ಅವಿರತ ಹೋರಾಡುತ್ತಿರುವ 'ಶರ್ಮಿಲ' ಅವರ ಆತ್ಮಸ್ಥೈರ್ಯಕ್ಕೆ ನಮೋನ್ನಮಃ.

=====
=====

Sep 4, 2011

". . . . ಮತ್ತದೇ ನೆನಪು . . . ."

'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು' ಹಾಗಂತಲೇ ಶುರುವಾಗುತ್ತಿತ್ತು ಮಾತು.
ಆ ದಿನಕ್ಕಿಂತ ಒಂದು ವಾರ ಮೊದ್ಲೇ ಒಬ್ಬ ಸ್ಟುಡೆಂಟ್ ಇಷ್ಟು ಹಣವನ್ನ ಕೊಡ್ಬೇಕು ಅಂತ ಕ್ಲಾಸ್ ನ ಸ್ಟುಡೆಂಟ್ representative announce ಮಾಡಿರ್ತಿದ್ದ. ಸರಿ, ಎಲ್ಲರು ಕೊಟ್ಟಾದಮೇಲೆ; ಮೊದಲೇ ಅಂದುಕೊಂಡ ಹಾಗೆ ಬಣ್ಣ ಬಣ್ಣದ paper cuttings, ಥರ್ಮೊಕೊಲ್, ಗಮ್ ಮತ್ತು decorationಗೆ ಬೇಕಾದ ಎಲ್ಲಾ ವಸ್ತುಗಳು ತರುವ ಕೆಲಸ.

ಪ್ರತಿ ದಿನ ಸಂಜೆ ಗುಂಪು ಗುಂಪಾಗಿ ಮಾರ್ಕೆಟ್ ಗೆ ಹೋಗಿ ನಮಗೆ ಬಂದಷ್ಟು ಚೌಕಾಸಿ ಮಾಡಿ ಆ ವಸ್ತುಗಳನ್ನ ತರ್ತಾಯಿದ್ವಿ . ನಾವು ಹೇಗೆ ಖರೀದಿ ಮಾಡ್ತಾಯಿದ್ವಿ ಅನ್ನೋದನ್ನ ನೆನಸಿಕೊಂಡ್ರೆ ಈಗ್ಲೂ ನಗು ಬರುತ್ತೆ. 'ಏ, ನಮ್ಮನೆ ಹತ್ರ ಅದು ಸಿಗುತ್ತೆ ಅಲ್ಲೇ ತೊಗೊಳೋಣ', 'ಏ ಇದು ನನ್ನ ಅಂಕಲ್ ಹತ್ರ ಇದೆ ನಾನೇ ತರ್ತೀನಿ ಬಿಡು' ಇಂತಹ ಮಾತುಗಳಲ್ಲಿ ವ್ಯಾಪಾರ ಮುಗೀತಿತ್ತು. ಒಂದು ವಸ್ತು ತರಲಿಕ್ಕೆ ಹೋದ್ರೆ ಎಂಟು-ಹತ್ತು ಜನ ಹೋಗ್ತಾಯಿದ್ವಿ. ಮಾರ್ಕೆಟ್ ನಲ್ಲಿ ಸಿಗೋದನ್ನ ಬಿಟ್ಟು ಅದೇ ವಸ್ತುವನ್ನ ಎಲ್ಲೋ ಗೆಳೆಯನ ಮನೆ ಹತ್ರ ಇರೋ ಚಿಕ್ಕ ಅಂಗಡಿಯಲ್ಲಿ ಖರೀದಿ. ಹುಡುಗಿಯರದು ಅಲಂಕಾರಕ್ಕೆ ಬೇಕಾದ ಬಣ್ಣ ಬಣ್ಣದ ರಂಗೋಲಿ ಪುಡಿ, ಸೀರೆಗಳನ್ನ ಮನೆಯಿಂದ ತರುವ department.
'ನೀನು ನಿರೂಪಣೆ ಮಾಡು, ಮಾಡ್ತಿಯ ತಾನೇ ?'

ಹೀಗೆ ಎಲ್ಲಾ ಕೆಲಸವನ್ನ ಹಂಚಿಕೊಂಡು ಶ್ರದ್ದೆಯಿಂದ ಮಾಡಿಯಾದ ಮೇಲೆ ಆ ದಿನ ಬರುತ್ತಿತ್ತು, ಆ ಮಾತು ಕೂಡ : 'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು'. standing in-front of principal is always tough job. ಗುಂಪಾಗಿ ಎಲ್ಲರು ಪ್ರಿನ್ಸಿಪಾಲ್ ರೂಮ್ ಹತ್ರ ಹೋಗಿ ನಿಂತು 'ಏ ನೀ ಹೋಗು' , 'ಏ ನೀನೆ ಹೋಗೋ' ಅಂತ ಗುಸು ಗುಸು ಅಂತಿದ್ವಿ.

ಕೆಲವೊಬ್ಬರು ಸ್ವಲ್ಪ ಗಟ್ಟಿ ಧೈರ್ಯ ಮಾಡಿ ಪ್ರಿನ್ಸಿಪಾಲ್ ರೂಮಿನ ಮುಂದೆ ನಿಂತು
'ಮೇ ಐ ಕಮ್ ಮ್ಯಾಮ್ / ಸರ್' ಅನ್ನುವಷ್ಟರಲ್ಲಿ ಜೀವ ಹಾರಿ ಹೋದ ಅನುಭವ.
'ಯೆಸ್' ಅದೇ ಗಂಭೀರ ದನಿ. ಒಳಗೆ ಹೋದ ಮೇಲೆ ಯಾರಿಗೂ ಉಸಿರು ಅಷ್ಟು ಸಲೀಸಾಗಿ ಹೊರ ಬರುತ್ತಿರಲಿಲ್ಲ. ಹೊರಗೆ ನಿಂತವರಿಗೆ ಆ ರೂಮಿನಿಂದ ಏನೋ ವಿಸ್ಮಯ ಹೊರಬರಲಿದೆಯೇನೋ ಅನ್ನುವಷ್ಟು ಕಾತುರ.
ಪ್ರಿನ್ಸಿಪಾಲ್ ಕೇಳೋದು 'ಏನ್ರೋ?'
'ನಾಳೆ. . . ನಾಳೆಗೆ ಕ್ಲಾಸ್ ರೂಮ್ decorate ಮಾಡ್ಬೇಕು. ಅದಕ್ಕೆ, '
'ಅದಕ್ಕೆ ?'
'ಕ್ಲಾಸ್ ರೂಮ್ ಕೀ ಬೇಕಿತ್ತು'
ಯಾವ ಕ್ಲಾಸ್, ಯಾವ ಸೆಕ್ಷನ್, ಯಾರು ಕ್ಲಾಸ್ ಟೀಚರ್ ಎಲ್ಲಾ ಕೇಳಿದ ಮೇಲೆ 'ಓಕೆ' - permission granted.
ಅವತ್ತಿನ ದಿನದ requestನ್ನ ಯಾರೇ ಪ್ರಿನ್ಸಿಪಾಲ್ ಆಗಿದ್ರು ಅವ್ರು 'ನೋ' ಅನ್ನಲ್ಲ. ಆದರೂ ನಮಗೆ ಪ್ರತಿ ವರ್ಷ ಪ್ರಿನ್ಸಿಪಾಲ್ ರೂಮ್ ಮುಂದೆ ನಿಂತಾಗ ಹೆದರಿಕೆ ಆಗುತಿತ್ತು ಅನ್ನೋದು ಸುಳ್ಳಲ್ಲ.


ಎಲ್ಲಾ ಹುಡುಗ ಹುಡುಗಿಯರು ಸೇರಿ ಕ್ಲಾಸ್ ರೂಮಿನ ಅಲಂಕಾರ ಮಾಡಲು ಶುರು ಮಾಡುತ್ತಿದ್ದೆವು, ಏಳು ಗಂಟೆಯ ನಂತರ ಅದೇ ಊರಿನವರು ಮನೆಗೆ ಹೋಗ್ತಾಯಿದ್ರು. ನಾವು ಹಾಸ್ಟೆಲ್ ಹುಡುಗರು- ನೈಟ್ ಡ್ಯುಟಿ. ಮಧ್ಯರಾತ್ರಿವರೆಗೂ ಅಲಂಕಾರ: ಪಕ್ಕದ ಕ್ಲಾಸ್ ರೂಮಿನವರು ಏನ್ ಮಾಡ್ತಿದಾರೆ, ಎಷ್ಟು ಕೆ.ಜಿ ಕೇಕ್ ಆರ್ಡರ್ ಮಾಡಿದಾರೆ . . .ಇಂತವುಗಳ ಬಗ್ಗೆ discussion ಕೂಡ ನಡೆಯುತ್ತಿತ್ತು. decoration ಎಲ್ಲಾ ಮುಗೀತು ಅಂದುಕೊಳ್ಳುವಷ್ಟರಲ್ಲಿ 'ಬ್ಲ್ಯಾಕ್ ಬೋರ್ಡ್ ಮೇಲೆ ಬಣ್ಣದ ಚಾಕ್ ಪೀಸ್ ಗಳಿಂದ design ಮಾಡ್ಬೇಕು, sayings ಬರೀಬೇಕು, class teacher ಹೆಸರು ಬರೀಬೇಕು'. ಅಯ್ಯೋ ಮುಗೀತು ಅಂದ್ರೆ ಇನ್ನೂ ಕೆಲಸ ಇದೆ. 'ಬೇಗ ಮಲಗ್ರೋ ಬೆಳಗ್ಗೆ ಬೇಗ ಮಾರ್ಕೆಟ್ ಗೆ ಹೋಗಿ ಹೂವು ತರ್ಬೇಕು, ಬೇಕರಿಯಿಂದ snacks, ಕೇಕ್ ತರ್ಬೇಕು'.


ಈ ಎಲ್ಲಾ ಗಲಿಬಿಲಿ, ಸಂತಸ, ಹರಟೆ, amateur ಆದ ವ್ಯಾಪಾರ, ಪಕ್ಕದ ಕ್ಲಾಸ್ ನವರ ಜೊತೆ competition ಗಳ ದಾಟಿಕೊಂಡು 'ಬೆಳಕಿನೊಂದಿಗೆ' ಬಂದುಬಿಡುತ್ತೆ ಆ ದಿನ "September 5". ಅದೊಂದು ವಿದ್ಯಾರ್ಥಿ ಜೀವನದ ಮರೆಯಲಾಗದ ಪ್ರೀತಿಯ ದಿನ "ಶಿಕ್ಷಕರ ದಿನ". ಪ್ಲೇ ಗ್ರೌಂಡಿನಲ್ಲಿ 'HAPPY TEACHERS DAY' ಅಂತ ಜೋರಾಗಿ ಕೂಗುವುದರೊಂದಿಗೆ(ಕಿರುಚುವುದರೊಂದಿಗೆ) ಶುರುವಾಗುತ್ತಿತ್ತು ಸಂಬ್ರಮ. ಅಷ್ಟು ಜೋರಾಗಿ ಗ್ರೌಂಡಿನಲ್ಲಿ ಕಿರುಚಿದರೂ ಪ್ರಿನ್ಸಿಪಾಲ್ ಒಮ್ಮೆಯೂ ಬೈದಿಲ್ಲ. ಸುಮ್ನೆ ನಿಂತು ನೋಡಿ, ನಕ್ಕು ಹೋಗುತ್ತಿದ್ದರು, ಅದೇ ಬೇರೆ ದಿನ ಆಗಿದ್ರೆ, ಬೇರೆ ಏನಾದ್ರೂ ಕಿರುಚಿದ್ರೆ ? (ಯಪ್ಪಾ, ಬದುಕೋದು ಉಂಟೆ ?)


ಅವತ್ತಿನ ದಿನದ ಸಂಬ್ರಮವೇ ಸಂಬ್ರಮ . . . ಮೊದಲು auditorium ನಲ್ಲಿ ಕಡಿಮೆ ಅಂದ್ರು ಎರಡು ತಾಸುಗಳ ಕಾರ್ಯಕ್ರಮ ಶಾಲೆಯ ಎಲ್ಲರು ಅಲ್ಲಿರ್ತಾರೆ. ನಂತರ ಅವರವರ ಕ್ಲಾಸ್ ನಲ್ಲಿ celebration, ಕ್ಲಾಸ್ ಟೀಚರಿಂದ ಕೇಕ್ ಕತ್ತರಿಸುವ ಘಳಿಗೆಯಂತೂ ಎಲ್ಲರ ಕಣ್ಣಲ್ಲಿ ಚಕ್ ಚಕ್ ಅಂತ ಕ್ಲಿಕ್ ಆಗ್ತಿತ್ತು(9th standard ವರೆಗೆ ನಮ್ಮ ಹತ್ರ ಕ್ಯಾಮರ ಇರ್ಲಿಲ್ಲ). ಅದೃಷ್ಟಕ್ಕೆ 10th standard celebration ಫೋಟೋಸ್ ನನ್ನತ್ರ ಇವೆ. ಕೆಲವರು ಶಾಲೆಯ ಬಗ್ಗೆ, ಟೀಚರ್ಸ್ ಬಗ್ಗೆ ಒಪಿನಿಯನ್ ಹೇಳ್ತಾಯಿದ್ರು, ನಂತರ ಕೆಲ ಟೀಚರ್ಸ್ ಮಾತಡ್ತಾಯಿದ್ರು ಕೊನೆಗೆ ಕ್ಲಾಸ್ ಟೀಚರ್ (ಎಲ್ಲರವು positive opinion). ನಮಗೆ subject handle ಮಾಡಿದ ಟೀಚರ್ಸ್ ಗೆ ನೆನಪಿನ / ಗೌರವದ ಕಾಣಿಕೆಯಾಗಿ ಪುಸ್ತಕಗಳನ್ನ ಕೊಡ್ತಾಯಿದ್ವಿ. ಆ ನಡುವೆ ಪ್ರಿನ್ಸಿಪಾಲ್ ಎಲ್ಲಾ ಕ್ಲಾಸ್ ಗಳನ್ನ ವಿಸಿಟ್ ಮಾಡ್ತಾಯಿದ್ರು. ಆಹಾ, ಖುಷಿಯೋ ಖುಷಿ.


ನಾವು ಹಾಸ್ಟೆಲ್ ಹುಡುಗರು ವಾರ್ಡನ್ ಗಳಿಗೆ ವಿಶ್ ಮಾಡಿ, ರಾತ್ರಿ ಊಟದ ಮುಂಚಿನ ಪ್ರಾರ್ತನೆಯ ಕೊನೆಗೆ ಅವರಿಗೆ 'ಥ್ಯಾಂಕ್ಸ್' ಹೇಳ್ತಾಯಿದ್ವಿ (ನಮ್ಮನ್ನ ವರ್ಷಾನುಗಟ್ಟಲೆ ಸಹಿಸಿಕೊಂಡಿದ್ದಕ್ಕೆ).
ಎಷ್ಟು ಚೆಂದದ ದಿನಗಳವು, ನನ್ನಲ್ಲಿ ಇನ್ನೂ ಹಸಿ ಹಸಿ . . . ನೆನೆದರೆ ಈಗಲೂ ಕಣ್ಣುಗಳು ಮೆಲ್ಲಗೆ ಹಸಿ.

ನಮ್ಮಂತ ಸೀನಿಯರ್ಸ್ ನಮ್ಮಂತ ಜೂನಿಯರ್ಸ್ ಸಲುವಾಗಿ , ಹಾಸ್ಟೆಲ್ ಬಿಲ್ಡಿಂಗ್ ನ ಕಬ್ಬಿಣದ ಗೇಟ್ ನಲ್ಲಿ '+' ಆಕಾರದಲ್ಲಿದ್ದ ಎರಡು ಸರಳುಗಳನ್ನ ಕಿತ್ತು ಕಿಂಡಿ ಮಾಡಿದ್ರು !! ಅದರ ಮೂಲಕ ಒಬ್ಬೊಬ್ಬರೇ ಹೊರ ಬಂದು, ಆದಷ್ಟು ಕತ್ತಲಲ್ಲೇ ಮೆಲ್ಲಗೆ ಓಡುತ ಹೋಗಿ (ಸೆಕ್ಯುರಿಟಿ ಕಣ್ಣಿಗೆ ಬೀಳದೆ) ಕಂಪೌಂಡ್ ಜಿಗಿದು ಸಿನಿಮಾ ನೋಡಿದ್ದು, ಗಲ್ಲಿ ಗಲ್ಲಿ ತಿರುಗಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡಿದ್ದು. ಹಾಸ್ಟೆಲ್ ನಲ್ಲಿ ಇಡುತ್ತಿದ್ದ ಒಬ್ಬ ಗಣಪನ ಮುಂದಿದ್ದ ದೀಪ ಆರದಂತೆ ಕಾಯಲು ಕನಿಷ್ಠ 15 ಜನ, 5 ದಿನ ಶಾಲೆಗೆ ಚಕ್ಕರ್ ಹೊಡೆದದ್ದು. NCC ಡ್ರೆಸ್ ನಲ್ಲಿ ಫೋಟೋ ತೆಗೆಸಿಕೊಂಡದ್ದು, ಗೋವಾ ದಲ್ಲಿನ 14 ದಿನದ ನ್ಯಾಷನಲ್ ಟ್ರೆಕ್ಕಿಂಗ್ ಕ್ಯಾಂಪ್ .


ಹಾಸ್ಟೆಲ್ ನಲ್ಲಿ ನಾವು ಸ್ಟ್ರೈಕ್ ಮಾಡ್ತಿದ್ದದು ವಿಚಿತ್ರವಾಗಿತ್ತು : ಒಂದು ದಿನ ಎಲ್ಲರು ಇವತ್ತು ಬರೀ ಚಪಾತಿ ತಿನ್ಬೇಕು ಅಥವಾ ಬರೀ ಅನ್ನ ತಿನ್ಬೇಕು ಆಗ ಅದು shortage ಆಗುತ್ತೆ ಮತ್ತೆ ನಾಳೆ ಹಾಗಂತ ಪ್ರಿನ್ಸಿಪಾಲ್ ಗೆ ಕಂಪ್ಲೇಂಟ್ ಮಾಡೋದು. ಹೀಗೆ ಅಡುಗೆ ಭಟ್ಟರಿಗೆ ನಮ್ಮ ಅಸಮದಾನವನ್ನ ಮನವರಿಕೆ ಮಾಡುತ್ತಿದ್ದೆವು. ಕೆಲವೊಮ್ಮೆ ಹುಣ್ಣಿಮೆಯ ದಿನ 'ಬೆಳದಿಂಗಳ ಊಟ' ಇರುತ್ತಿತ್ತು - ಹಾಸ್ಟೆಲ್ ಮುಂದಿನ ಗ್ರೌಂಡಿನಲ್ಲಿ ಗುಂಪು ಗುಂಪಾಗಿ ಕೂತು ಒಂದೇ ತಟ್ಟೆಯಲ್ಲಿ ಊಟ. ಒಮ್ಮೆ ರಾತ್ರಿ ಸಿನಿಮಾ ನೋಡಲು ಹೋದಾಗ ವಾರ್ಡನ್ ಮಧ್ಯರಾತ್ರಿ attendance ತೊಗೊಂಡಿದ್ರು - needless to say we were punished. ನಾವು ವರ್ಷದ ಕೊನೆಯಲ್ಲಿ 'ಹಾಸ್ಟೆಲ್ ಡೇ' celebrate ಮಾಡ್ತಿದ್ವಿ with lot of cultural / funny activities. school ಕಿಡಕಿಯ ಸುಮಾರು ಐವತ್ತಕ್ಕೂ ಹೆಚ್ಚು ಗ್ಲಾಸ್ ಗಳನ್ನ ವಿನಾಕಾರಣ ಒಡೆದು ಹಾಕಿದಾಗ, ಪ್ರಿನ್ಸಿಪಾಲ್, ನಮ್ಮ ಮನೆಗೆ ಫೋನ್ ಮಾಡುವುದಾಗಿ ಹೆದರಿಸಿ, ನಮ್ಮನ್ನ suspend ಮಾಡುವ ಮಟ್ಟಿಗೆ ಯೋಚನೆ ಮಾಡಿದ್ದು ಆಗ ಹಾಸ್ಟೆಲ್ ವಾರ್ಡನ್ ದೇವರಂತೆ ಬಂದು ನಮ್ಮನ್ನ ಕಾಪಾಡಿದ್ದರು - Apology letter ಬರೆದದ್ದು ಆಯಿತು.

Exams ಹತ್ರಯಿದ್ದಾಗ ರಾತ್ರಿ ಪ್ಲೇ ಗ್ರೌಂಡಿನ ಲೈಟಿನ ಬೆಳಕಿನಲ್ಲಿ ಓದೋದು - 'ವಿಶ್ವೇಶಯ್ಯ, ಅಂಬೇಡ್ಕರ್ ಹಿಂಗೆ ಓದಿದ್ದು' ಅಂತ ನಾವು ನಾವೇ ಅಂದುಕೊಂಡು ನಗ್ತಿದ್ವಿ. ಬೆಳಗ್ಗೆ ಆರು ಗಂಟೆಗೆ, PT ಸರ್ ಬಂದು ಎಚ್ಚರಿಸಲು ರೂಮಿನ ಬಾಗಿಲು ಮುರಿದು ಹೋಗುವಂತೆ ಬಾರಿಸುತ್ತಿದ್ರು - ನಾವು ಒಮ್ಮೊಮ್ಮೆ ಎಚ್ಚರವಾಗಿದ್ರೂ ಬಾಗಿಲು ತೆರೀತಾಯಿರ್ಲಿಲ್ಲ (PT ಸರ್ ಬಂದು ಎಚ್ಚರಿಸೋದು exam time offer !!). ರೂಮಿನ ಬಾಗಿಲನ್ನ ಸ್ವಲ್ಪವೇ ಸ್ವಲ್ಪ ತೆರೆದು ಒಳಗಡೆಯಿಂದ ಕದದ ಮೇಲೆ ನಮ್ಮ ಶೂಗಳನ್ನ ಇಡುತ್ತಿದ್ದೆವು, ಯಾರಾದರು ಬಾಗಿಲು ತಳ್ಳಿಕೊಂಡು ಒಳ ಬಂದರೆ ಅವರ ತಲೆ ಮೇಲೆ 'ಶೂ' ಅಭಿಷೇಕ. ಒಮ್ಮೆಮ್ಮೆ ವಾರ್ಡನ್ ಗಳ ತಲೆ ಮೇಲೆ ಬಿದ್ದಿದ್ದವು - ಆಗ ನಮ್ಮ ಗತಿ ಏನಾಗಿರಬಹುದು?
ನೀವು ಊಹೆ ಮಾಡ್ತೀರ ಅನ್ಕೊಂಡಿದೀನಿ . . . . ನಾವು ಮಾಡಿದ್ದು ಒಂದೇ ಎರಡೇ?

ಎಲ್ಲಿದ್ದಾರೋ, ಹೇಗಿದ್ದಾರೋ ತಿಳುವಳಿಕೆ ಹೇಳಿ, ಓದು - ಬರಹ ಕಲಿಸಿಕೊಟ್ಟು,
'may god bless you' - 'wish you all the best for you future' ಅಂತ ಮನಸಿನಿಂದ ಹಾರೈಸಿ ನಮ್ಮನ್ನ ಶಾಲೆಯಿಂದ ಕಳಿಸಿಕೊಟ್ಟ :
ಗುರುಗಳು, ಸಹಿಸಿಕೊಂಡ ವಾರ್ಡನ್ ಗಳು- ಅಡುಗೆ ಭಟ್ಟರು, 'ಈಗ ಬ್ಯಾಡ ಆಮೇಲೆ ಬರ್ರಿ ಪ್ರಿನ್ಸಿಪಾಲ್ ಗರಂ ಆಗ್ಯಾರ' ಅಂತ ಹೇಳಿ ಕಳಿಸುತ್ತಿದ್ದ ಪಿವನ್, ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಬಾಗಿಲು ಬಡಿಯುತ್ತಿದ್ದ ಸೆಕ್ಯುರಿಟಿ ಗಾರ್ಡ್, ರಾತ್ರಿ ಕಂಪೌಂಡಿನ ಹೊರಗೆ ತಳ್ಳುಗಾಡಿಯಲ್ಲಿ ಅಂಗಡಿ ಇಟ್ಟುಕೊಂಡು, ಒಳಗೆ ಇರುತ್ತಿದ್ದ ನಮಗೆ ಪಲಾವ್, ಆಮ್ಲೆಟ್, ಎಗ್ ರೈಸ್ ಪಾರ್ಸಲ್ ಕೊಡುತ್ತಿದ್ದ ಆತನ ಹೆಸರೇನು ? ಇಲ್ಲ ನೆನಪಿಲ್ಲ, ಅಸಲಿಗೆ ನಾವು ಕೇಳಿಯೇ ಇಲ್ಲ. ಎಲ್ಲವನ್ನ ಜೊತೆಗೆ ಸಂಬ್ರಮಿಸಿದ ಗೆಳೆಯರು. ಎಲ್ಲೇ ಇದ್ದರೂ, ಎಲ್ಲರು ಚೆನ್ನಾಗಿರಲಿ.

ಹೇಳುತ್ತಾ ಹೋದರೆ ಇದು ಮುಗಿಯುವ ಮಾತ? ಖಂಡಿತ ಅಲ್ಲ.
ಅಪ್ಪ-ಅಮ್ಮ, ಶಾಲೆಯಲ್ಲಿ ಕಲಿಸಿದ ಟೀಚರ್ಸ್ , ತಿಳಿದೋ - ತಿಳಿಯದೋ ಏನನ್ನೋ ಕಲಿಸಿಕೊಟ್ಟ ಅಪರಿಚಿತರು ಮತ್ತು ಪರಿಚಿತರು ಹಾಗು ದಿನ ದಿನವೂ ಹೊಸದನ್ನ ತೋರಿಸುವ, ಕಲಿಸುವ ಇಷ್ಟು ಚಂದದ ಬದುಕು - ಈ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನದಂದು ಗೌರವದಿಂದ ನಮಿಸುತ್ತೇನೆ.
"ಕಲಿಯುವವರಿಗೆ ತಕ್ಕ ಗುರು ಸಿಗಲಿ - ಗುರುವಿಗೆ ತಕ್ಕ ವಿದ್ಯಾರ್ಥಿ ಸಿಗಲಿ" ಎನ್ನುವುದಷ್ಟೇ ಪ್ರಾರ್ಥನೆ.
(ಅದೆಷ್ಟೋ ಮರೆಯದೆ ಉಳಿದ ನೆನಪುಗಳಲ್ಲಿ ಇದೂ ಒಂದು)
=====
=====