Feb 19, 2013



"ಇಲ್ಲದಿರುವ ಜೀವಕ್ಕೆ ಅಕ್ಷರಗಳಿಲ್ಲದ ಹೆಸರಿಡುವ ಆಸೆ"

ಅಕ್ಷರಗಳಿಗೆ ಸಿಗದ ನಿನ್ನ ಕರೆಯಲು, 
ಒಂದು ಹೆಸರಿಡಬೇಕು, ಹೆಸರು ಹೆಸರಾಗಲು ಸ್ವಲ್ಪ ಅಕ್ಷರಗಳು ಬೇಕು 
ನಿನ್ನ ಚೆಲುವಿಗೆ ಒಲವಿಗೆ
ಮನಸಲ್ಲೇ ನಿನಗಿತ್ತ ಹೆಸರು ಹಳತೆನಿಸುವುದೇಕೆ ? 
ಇದು ಬೇಡ ಇನ್ನೊಂದಿತ್ತರಾಯಿತು ಅಂದುಕೊಂಡು ಪ್ರೀತಿಸಿದರೆ ಸಾಕೆ?

ಒಮ್ಮೆ ನನ್ನತ್ತ ನೋಡಿ ಮತ್ತೆ ಅಲೆಗಳನ್ನ ಕಣ್ಣಲ್ಲಿ ತುಂಬಿಕೊಳ್ಳುತ್ತಾ 
ನಿನಂದಿದ್ದಿಷ್ಟೇ - ಆಕಸ್ಮಿಕ ಪ್ರಣಯಕ್ಕೆ ಹೆಸರು ಬೇಕೇ ?

ನಾನು ಸುಮ್ಮನಾದೆ, ನಿನ್ನೊಳಗೆ ಒಂದಾದೆ 
ಸಂಬ್ರಮದ ರಾತ್ರಿ ಕಳೆದು ಚುಮು ಚುಮು ಮುಂಜಾವು 

ಕಣ್ಣು ಕಂಡಷ್ಟು ದೂರಕ್ಕೆ ತಿರುಗಾಡಿದವು, ಯಾರು ಇಲ್ಲ 
ಕಿವಿಗೆ ನನ್ನದೇ ನೋವುಗಳ ಆಕ್ರಂದನ ಬಿಟ್ಟು ಬೇರೇನೂ ಕೇಳಲಿಲ್ಲ 
ಕಡಲ ಕಿನಾರೆ ಹಾಸಿಗೆಯಾಗಿದ್ದಷ್ಟೇ ನೆನಪು 
ಎಚ್ಚರವಾದಾಗ ನಾನೊಬ್ಬನೇ 

ತಣ್ಣನೆ ಗಾಳಿ  ಬೀಸಿತು ಮತ್ತೆ ಕಣ್ಣು ಮುಚ್ಚಿದೆ 
ನಿನ್ನ ನಶೆಗೆ ಮನಸು ಎಚ್ಚರವಾಗಿತ್ತು, ನಿನ್ನನ್ನೇ ದೇನಿಸುತ್ತಿತ್ತು  
ಎದ್ದು ಹೋದ ನಿನ್ನ ಮತ್ತೆ ಕರೆಯಬೇಕು ಮಾತಾಡಬೇಕು 
ನಿನ್ಯಾರೆಂದು ತಿಳಿಯಬೇಕು 

ಎಲ್ಲವನ್ನ ಹೇಳಿಕೊಳ್ಳುವರನ್ನ ಕೇಳಲು ನನಗೆ ಮನಸಿಲ್ಲ 
ಹೀಗೆ ಏನು ಹೇಳದೆ ಎದ್ದು ಹೋದ ನಿನ್ನ ತಿಳಿವವರೆಗೆ ಸಮಾಧಾನವಿಲ್ಲ 
ಒಟ್ಟಾರೆ ನಿನ್ನ ಕರೆಯಬೇಕು, ಪ್ರೀತಿಸಬೇಕು
ಆದರೆ ಕರೆಯಲು ಹೆಸರು ಬೇಕು 
ಹೆಸರು ಹೆಸರಾಗಲು ಸ್ವಲ್ಪವಾದರೂ ಅಕ್ಷರಗಳು ಬೇಕು 
ಆದರೆ ನೀನು ಅಕ್ಷರಗಳಿಗೆ ಸಿಗುವುದೆಯಿಲ್ಲವಲ್ಲ -ನೀನ್ಯಾರು ?

=====
=====