Dec 29, 2014

ನಾನೂ ಒಂದು ಕವಿತೆ



ಆಸೆಪಟ್ಟು ಬರೆದು 
ಬರೆದಾದ ಮೇಲೆ
ಬೆಲೆ ಸಿಗಲಾರದೇನೊ ಅಂದುಕೊಂಡು-
ಬರೆದವನೇ ನನ್ನ ಮುದುಡಿ ಬಿಸಾಡಿದ
ನಾನೊಂದು ಸಂಸ್ಕಾರವಿಲ್ಲದ ಕವಿತೆ
ಈಗ ಮೈಗೆ ಮೈ ಅಂಟಿಕೊಂಡ ಹಾಳೆಯೇ ಶಾಶ್ವತ
ಶಾಹಿಯ ಆಯುಷ್ಯವಿರುವತನಕ
ಹಾಳೆಯ ಅನುಕಂಪವಿರುವತನಕ

ಯಾರು ಕಾಣರು ನನ್ನ
ಯಾರು ಕೇಳರು ನನ್ನ
ನಾನೊಂದು ಇದ್ದು ಇಲ್ಲದ ದನಿ
ಅಕ್ಷರಶಃ ಎಲ್ಲವೂ ಇದ್ದು ಏನೂ ಇಲ್ಲದಾದ ಕರ್ಣನಂತೆ

ನಾನೆಂದೂ ನನ್ನ ಬಯಸಲಿಲ್ಲ
ನಾನು ನನ್ನ ಹಾಗೇ ಇರಲು ಬರೆದನೇ ಬಿಡಲಿಲ್ಲ
ತಿದ್ದಿದ ತೀಡಿದ ಮತ್ತೇನನ್ನೋ ಬರೆದು ಕವಿತೆಯೆಂದ

ಯಾವ ಹಂಗಿಗೂ ಜೋತುಬೀಳದೆ
ತಿದ್ದುಪಡಿಗೆ ಒಳಪಡದೆ
ಅಸ್ತಿತ್ವವಿಲ್ಲದ ನಾನು
ಹೇಗೆ ಹುಟ್ಟಿದೇನೊ ಹಾಗೆ ಇರುವ ನಾನು
ಪ್ರತಿಯೊಬ್ಬನ ಪ್ರತಿಸಲದ ಹಾಳೆಯ ಮೇಲಿನ ಮೊದಲ ಆಲಾಪ

ಎಂದಿಗೂ, ಯಾವ ರೀತಿಯಲ್ಲೂ ಪ್ರಕಟವಾಗದ ನಾನು

ಒಂದು ಮನದ ಹಸಿ ಹಸಿ ಪ್ರತಿಬಿಂಬ 
ನನಗೆ ಸಂಸ್ಕಾರ ಸಿಕ್ಕರೆ ಕವಿತೆ

ಅಲ್ಲಿಯವರೆಗೂ ನಾನು ಸಂಸ್ಕಾರವಿಲ್ಲದ ಕವಿತೆ


=====
=====