Feb 27, 2010

ಅವಳ ನೆನಪು

ನನ್ನ ಮರೆತ ಅವಳ ನೆನಪುಗಳನ್ನು,
ಮರೆತು ಬಿಟ್ಟಿದ್ದೆನೆಂದು ಮರೆತಿದ್ದೆ..

ಮರೆತು ನಿನ್ನೆ ಮತ್ತೆ ನೆನಪಿಸಿಕೊಂಡೆ...

ಮನಸಿಗೆ ಏನೂ ಗೊತ್ತಾಗದೆಂದು,
ಶರಾಬು ಸುರಿದು ಸುಟ್ಟುಬಿಟ್ಟೆ ..

ಹಾಳಾದ ಮನಸು..!

ನೆನಪುಗಳ ಸುಟ್ಟಬೂದಿ
ವಿಭುತಿಯಂತೆ ಭಾಸವಾಗುತ್ತಿದೆ... !!


Feb 7, 2010

"ತುಂಬು ಹೃದಯದಿಂದ...."

ನನ್ನ ಎರಡು ಹನಿಗವನಗಳನ್ನ ಪ್ರಕಟಿಸಿದ 'ಸಿಂಪ್ಲಿ ಸಿಟಿ' ಪೇಜ್ ನ ಮಣಿಕಾಂತ್ ಸರ್ ಅವರಿಗು ಹಾಗು 'ವಿಜಯಕರ್ನಾಟಕ' ದಿನಪತ್ರಿಕೆ ತಂಡಕ್ಕೂ ಈ ನನ್ನ ದಿನವನ್ನ ಖುಷಿಯಿಂದಿರುವಂತೆ ಮಾಡಿದ್ದಕ್ಕೆ ತುಂಬು ಹೃದಯದಿಂದ ಥ್ಯಾಂಕ್ಸ್.

=====
=====

Feb 6, 2010

ನಾನು ನಿರುತ್ತರ .....!

ಅವತ್ತು ರಜಾ ದಿನ, ಬಹಳ ದಿನಗಳ ನಂತರ ಮುದ್ದು ಮಗನನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂಡಿಸಿಕೊಂಡು ಹೊರಟೆ. ಸಮಯ ಮಧ್ಯಾನ ೧೨ ಗಂಟೆ..

ಸುಮಾರು ದೂರ ಹೋದ ನಂತರ, ಪೊಲೀಸರು ತಡೆ ಹಿಡಿದರು. ಎಲ್ಲ ದಿಕ್ಕಿನಲ್ಲೂ...


ಯಾರೋ, ದೊಡ್ಡ (?) ಮನುಷ್ಯ ಬರಬೇಕಿತ್ತು. ಛೆ,,! ಸ್ವಲ್ಪ ಬೇಗ ಬಂದಿದ್ರೆ ಆರಾಮಾಗಿ ಹೋಗಬಹುದಿತ್ತಲ್ಲ,,! ಮನಸ್ಸಲ್ಲೇ ನನಗೆ ನಾನೇ ಹೇಳಿದೆ. ಹತ್ತು ನಿಮಿಷ ಆಯ್ತು, ದೊಡ್ಡ ಮನುಷ್ಯನ ಪತ್ತೆ ಇಲ್ಲ. ಒಮ್ಮೆ ಹಿಂದೆ ತಿರುಗಿ ನೋಡಿದೆ, ಇರುವೆಯ ಸಾಲಿನಂತೆ ಕಂಡವು ಗಾಡಿಗಳು, ಕೊನೆಯಲ್ಲಿ ಕಾಣಿಸಿದ್ದು ಲಾರಿ ಬಹುಶ ಅದರ ಹಿಂದೇನು ಇದ್ದವೇನೋ ಇನ್ನಷ್ಟು..

ಮತ್ತೆ ಹತ್ತು ನಿಮಿಷ ಕಳೆದವು,ಇ ದೊಡ್ಡ ಮನುಷ್ಯನ ಸುಳಿವಿಲ್ಲ. ಚಳಿಗಾಲದ ದಿನ ಅಷ್ಟೇನೂ ಶಕೆ ಇರ್ಲಿಲ್ಲ, ಆದರು ಜನ ಕುದಿಯುತಿದ್ದರು ಒಳಗಿನ ಬಿಸಿಗೆ...!


ಇಷ್ಟೊತ್ತು ಆಫ ಆಗಿರದ ಕೆಲವು ಇಂಜಿನ್ ಗಳು ಇಗ ಆಫ ಆದವು..!
ಅಲ್ಲೊಬ್ಬ ಸೆಂಟರ್ ಸ್ಟ್ಯಾಂಡ್ ಹಾಕಿ ಆರಾಮಾಗಿ ಗಾಡಿ ಮೇಲೆ ಕೂತಿದ್ದ, ಅವರು ಯಜಮಾನರು ತಮ್ಮ ಹಳೆ 'ಹಮಾರ ಬಜಾಜ್' ಮೇಲೆ ಎರಡು ಕೈ ಕಟ್ಟಿ, ಯಾರಿಗೋ ಹೊಡೆಯುವಂತೆ ನೋಡುತ್ತಿದ್ದರು..
ಪಕ್ಕದಲ್ಲಿ ನಿಂತಿದ್ದ ಸಾಹೇಬರು ಕಷ್ಟ ಪಟ್ಟು ಸೆಂಟರ್ ಸ್ಟ್ಯಾಂಡ್ ಹಾಕಿ, 'ಫೂಟ್ ಪಾತ್' ಪಕ್ಕದಲ್ಲಿದ್ದ ಮರಕ್ಕೆ 'ನೀರುಣಿಸಿ ' ಬಂದರು....!

'ಅಪ್ಪ' ಎಲ್ಲರು ಯಾಕೆ ನಿಂತಿದಾರೆ,,? ಅಷ್ಟೊತ್ತು ಸುಮ್ಮನಿದ್ದ ಮಗ ಕೇಳಿದ..
ಯಾರೋ ' ವಿ.ಆಯ.ಪಿ "ಹೋಗ್ಬೇಕು ಪುಟ್ಟ ಅದಕ್ಕೆ...
'ವಿ. ಆಯ. ಪಿ' ...? ಮಗ ಕೇಳಿದ.
'ವೆರಿ ಇಮ್ಪೋ..................

ಅಷ್ಟರಲ್ಲಿ ಅದೆಲ್ಲಿತ್ತೋ ಬುರ್ರ್ರ ಬುರ್ರ ,,,,,,,,,, ಅಂತ ಜೋರಾಗಿ ಶಬ್ದ ಮಾಡುತ್ತಾ, ಸಂದಿ ಸಂದಿ ನುಗ್ಗಿ, ಬಂತೊಂದು 'ಬ್ಲಾಕ್ ಪಲ್ಸೆರ್' ..
ಸಣ್ಣ ಗೆ ಗಾಳಿಯು ನುಗ್ಗದಂತೆ ತಬ್ಬಿ ಕೂತಿದ್ದಳು ಅವನ ಗರ್ಲ್ ಫ್ರೆಂಡ್.. ಎಲ್ಲರ ಕಣ್ಣು ಇವರ ಮೇಲೆ...!!

ಅವನು ತನ್ನ ಹೆಲ್ಮೆಟ್ ತೆಗೆದು ಕನ್ನಡಿಗೆ ನೇತು ಹಾಕಿದ , ಅವರ ಮಾತುಗಳು ಶುರು ಆದವು ಕೆನ್ನೆ ಕೆನ್ನೆ ತಾಕುತ ..

ಬಿಸಿಲಲ್ಲಿ ಬಿಸಿ ಬಿಸಿ, ಫುಲ್ ಬ್ಯುಸಿ... !!
ಎಲ್ಲರು ಅವರತ್ತ ಧ್ಯಾನ ಮಗ್ನರಾಗಿದ್ದರು, ಪಟಕ್ಕನೆ ಆ ಹುಡುಗಿ ತನ್ನ ಹುಡುಗನ ಕಿವಿಗೆ ಕಚ್ಚಿ ಬಿಡೋದಾ.....!!!?

'ಅಪ್ಪ.........

ಅಕ್ಕಾ..... ಅಣ್ಣಾ..... ಕಿವಿ........ !!!! ನನ್ನ ಮಗನೂ ಅವರನ್ನು ನೋಡಿದ...!!!
ಮಗನ ಕೆನ್ನೆ ಮತ್ತೊಂದೆಡೆ ತಳ್ಳಿದೆ... ಹಂಗೆ ಗಾಡಿ ತಳ್ಳಿ ಎರಡು ಹೆಜ್ಜೆ ಮುಂದೆ ಬಂದೆ.

ಅಬ್ಬಾ......
ಮನಸೂ ಯಾಕೋ ಎರಡು ಸೆಕೆಂಡ್ ಮೌನ ವಾಯಿತು..

ವಾಹ್ಹ್,,,!! ಎಂಥ ಲೈನು.. !! ಅಲ್ಲೇ ಪಕ್ಕದಲ್ಲಿ ನಿಂತಿದ್ದ್ದು ಆಟೋ..
ಆಟೋ ಹಿಂದೆ ಬರೆದ ಲೈನ್, " ದಮ್ಮ ಇದ್ರೆ ಫಾಲೋ ಮಾಡು, ದಿಲ್ ಇದ್ರೆ ಲವ್ ಮಾಡು" ....!!!!!
ತುಂಬಾ ಖುಷಿ ಆಯ್ತು , ಹಾಗೇನೆ ಮನಸು ನೆನಪಿನ ಪೆಟ್ಟಿಗೆಗೆ ಜಾರಿತು..

ಆವಾಗ ಇವಾಗ ಓದಿದ ಆಟೋ ಅಣಿ ಮುತ್ತುಗಳು ನೆನಪಾದವು,

"ದೇವರ ಹೆಸರು, ತಂದೆ ತಾಯಿ ಆಶಿರ್ವಾದ್, ಮಕ್ಕಳ ಹೆಸರು,
ತಮ್ಮ ಪ್ರೀತಿಯ ನಟನ, ಸಿನಿಮಾ ಹೆಸರು..!

ತುಂಬಾ ಮಜಾ ಮಜಾ ಅಣಿ ಮುತ್ತುಗಳು..
" ಲವ್ ಮಾಡಿದ್ರೆ, ಲವ್ ಸ್ಟೋರಿ.. ಕೈ ಕೊಟ್ಟರೆ, ಕ್ರೈಂ ಸ್ಟೋರಿ..."
"ದುಡ್ಡು ದೊಡ್ಡಪ್ಪ ವಿದ್ಯೆ ಅವರಪ್ಪ "

ತುಂಬಾ ಇಷ್ಟ ಆಗಿದ್ದು, " ಪ್ರಕೃತಿಯ ಪ್ರಿತಿಸಿದರೆ ಹಸನ್ಮುಖಿ.. ಇಲ್ಲದಿದ್ದರೆ ಜ್ವಾಲಾಮುಖಿ.... " !!!

ಚಿಕ್ಕವರಿದ್ದಾಗ, ಅಪ್ಪನ ಹಳೆ ಸ್ಕೂಟರ್ ಸ್ಟೆಪ್ನಿ ಕವರ್ ಮೇಲೆ, ನನ್ನ ಹೆಸರು ಬರೆದಿದ್ದು... ಎಲ್ಲಾ ನೆನಪಾದವು...!!

ಹಂಗೆ ಸ್ವಲ್ಪ ಮುಂದೆ ಹೋದೆ, ಡ್ರೈವರ್ ಸಾಹೇಬರು ಬೀಡೀ ಸುಡುತ್ತ ಕೂತಿದ್ದರು...
ಆಟೋ ಗಾಜಿನ ಮೇಲೆ ಬರೆದಿದ್ದು ಉಲ್ಟಾ ಕಾಣುತಿತ್ತು , ಹಾಗೇನೆ ಓದಲು ಪ್ರಯತ್ನಿಸಿದೆ,
ಶ್ರೀ......... ಸ್ವಾಮಿ ಕೃಪೆ " ಪೂರ್ತಿ ಗೊತ್ತಾಗಲಿಲ್ಲ....

ಕೆಳಗೆ, ಉದ್ದ ತಿಲಕವಿರುವ 'ಶಂಕರ್ ನಾಗ್' ಫೋಟೋ..!
'ನಲಿವ ಗುಲಾಬಿ ಹೂವೆ......'
ನನಗರಿವಿಲ್ಲದಂತೆ, ಗುನುಗಿದೆ....!!


'ಅಪ್ಪ'... ದೊಡ್ಡ ಮನುಷ್ಯ ಅಂದ್ರೆ ಯಾರು,,,?
ಎಷ್ಟು ದೊಡ್ಡವರು..? ನೋಡಕೆ ಹೆಂಗಿರ್ತಾರೆ,,,?
'ಹುಲ್ಕ್' ಗಿಂತ ದೊಡ್ಡವರಾ,, ? ಹನುಮಾನ್ ದೇವರುಥರ ನಾ...?
ಮಗನ ಪ್ರಶ್ನೆಗೆ ಏನಂಥ ಉತ್ತರಿಸಲಿ ತಿಳಿಯಲಿಲ್ಲ ...!!

ಅವರು 'ರಾಜಕಾರಣಿ' ಅಂದೇ...
ಅಃ..?
ಅಂದ್ರೆ ಕ್ಲಾಸ್ ಬಾಯ್ / ಕ್ಲಾಸ್ ಹೆಡ್ ಅಂತಾರಲ್ಲ,, ಹಂಗೆ... ಇವರು ಎಲ್ಲರಿಗು ಹೆಡ್...
ಎಲ್ಲರಿಗೂ.....?
ಎಸ್.. !
ಅವರಿಗೆ ಯಾರು ಹೆಡ್ ಮಾಡಿದ್ರು....!? ಹೆಂಗೆ ಮಾಡಿದ್ರು....!!!! ??

ತಕ್ಷಣ ಬಾಯಿಗೆ ಬೀಗ ಹಾಕಿದಂಗೆ ಆಯ್ತು, ಮಾತು ಹೊರಡಿಲಿಲ್ಲ... ಏನಂಥ ಹೇಳಲಿ...
ಹೇಗೆ ಹೇಳಲಿ... !!!!!

ಅಷ್ಟರಲ್ಲಿ, ಅವನು ಸೆಂಟರ್ ಸ್ಟ್ಯಾಂಡ್ ಹಾಕಿ ಕೂತಿದ್ದವನು, ನಾಲ್ಕು ದಿಕ್ಕಿಗೂ ಕೇಳಿಸುವಂತೆ ಕಿರುಚುತಿದ್ದ, ಮೊಬೈಲ್ ನಲ್ಲಿ ...!!
"ಅವನ....ನ....
ಅವರ.....ನ...
ಮುಕ್ಕಾಲು ಗಂಟೆ ಇಂದ ನಿಂತಿದೀನಿ, ಅವನ್ಯಾವನೋ 'ಬೊ....... ಮಗ, ಬರಬೇಕಂತೆ... ಇನ್ನು ಬಂದಿಲ್ಲ.
ಎಲ್ಲಿ ಏನ್ 'ಹ.......ನೋ..... 'ಸು.....ಗ......."""

'ಮಾಜಿ ಪ್ರಧಾನಿಗಳ ಭಾಷೆಯಲ್ಲಿ, ದೊಡ್ಡ ಮನುಷ್ಯನ ಬಗ್ಗೆ, ಸ್ಯಾನೆ..... ಹೊಗಳುತಿದ್ದ....!!!!! "
ಎಲ್ಲರು ಅವನ ಬೆನ್ನಿಗೆ ಶುರು ಹಚಿಕೊಂಡರು...!

ಅರೆ, ಇವಳೇ ಲ್ಲಿಂದ ಬಂದಳು ನೋಡೇ ಇಲ್ಲ ....
'ಸ್ಕೂಟಿ ಮೇಲೆ ಬ್ಯೂಟಿ' !!
ಆಟೋ ಅಣಿ ಮುತ್ತಿನ ನೆನಪಿನಲ್ಲಿ ಇವಳ ಕಾಣಲೇ ಇಲ್ಲ...
ಅಂದಗಾತಿ,,,,,, ದೊಡ್ಡ ರಿಂಗ್ ಕಿವಿಗೆ ನೇತಾಡ್ತಾ ಇದ್ವು ....
ಹೆಡ್ ಫೋನ್ ಹಾಕೊಂಡು ಹಾಡು ಕೇಳ್ತಿದಾಳೆ, ಅನ್ಕೊಲ್ಲುವಷ್ಟ್ರಲ್ಲಿ......

" ನೋ ಯಾ...........
ಆಯಂ ನಾಟ್ ಎಟ್
ಆಯ ಡೋಂಟ್ ನೋ ,
ವ್ಹೆನ್ ವಿಲ್ಲ್ ದಿಸ್ ಬ್ಲಡಿ ಮ್ಯಾನ್ ವಿಲ್ ಗೋ......!!! "

ಹಾ..... !!!!!
ಅವಳ ಮಾತು , ಅವಳ ಉಡುಪಿ ನಂತೆ ,, ಟೂ.... ಹಾಟ್..!

'ಅಪ್ಪಾ..... ' ಮಗ ಜೋರಾಗಿ ಹೇಳಿದ... ಯಾರು ಅವರಿಗೆ ದೊಡ್ಡೋರು ಮಾಡಿದ್ದೂ,,,?
ಮಗ ಜೋರು ಮಾಡಿದ....
ಮತ್ತೆ ಮೌನ, ಏನಂತ್ ಹೇಳ್ಬೇಕು..
ವೋಟು ಹಾಕಿ ಎಲೆಕ್ಟ್ ಮಾಡಿದಿವಿ ಅಂತ ಹೇಳಲೇ,,,,!!?
ನೀನು, ವೋಟು ಹಾಕಿದಿಯ...? ಅಂತ ಕೇಳ್ದ್ರೆ...?
ಎಲ್ಲರು ಅವನಿಗೆ ಹಾಕಿದರ...? ಹೆಂಗೆ,,,?

ಏನು ಹೇಳಲಿ... ?
ಇ ಹೊಲಸು ರಾಜಕೀಯದ ಬಗ್ಗೆ, ಇ ವ್ಯವಸ್ತೆ ಬಗ್ಗೆ...!!!!

ಮತ್ತೆ ಮತ್ತೆ ಪ್ರಶ್ನೆ ಹಾಕಿದ್ರೆ....!?

ಹೌದು, ನಾನು ವೋಟು ಮಾಡಿದಿನ,,,?
ನನ್ನ ಹತ್ರ ವೋಟರ ಆಯ್ಡಿ ನೆ ಇಲ್ಲಾ... !!!

ಮುಂದೆ ಮಗ ದೊಡ್ದವನಾದ್ ಮೇಲೆ ಅನ್ನು ಏನೇನೋ ಪ್ರಶ್ನೆ ಕೇಳ್ತಾನೆ.. !

ನಿಮ್ ಕಾಲ್ದಿಂದನೆ, "ಭ್ರಷ್ಟಾಚಾರ ಶುರು ಆಗಿದ್ದು, ಎಲ್ಲಾ ನಿಮ್ಮಿಂದ.... ನಿಮ್ಮ ವಯಸ್ಸ್ನೋರು ಎಲ್ಲರ ತಪ್ಪು..."
ಅಯ್ಯೋ ದೇವರೆ , ಏನಿದು....!?
ಕ್ಷಣ ಹೊತ್ತು ಯೋಚನೆ ಮಾಡಿದೆ .... !!!
ಕೈ, ಬೆವರಲು ಶುರು ಆಗಿದೆ, ಯಾಕೆ,,,? ಗೊತ್ತಿಲ್ಲ...

ಮಗ, ದೊಡ್ಡವ್ನಾದ್ ಮೇಲೆ ಎಲ್ಲ ಅರ್ಥ ಮಾಡ್ಕೋಬಹುದು, ಇಲ್ಲ ಅಂದ್ರೆ...!?
ಛೆ ಛೆ, ಅವನು ಅರ್ಥ ಮಾಡ್ಕೋತಾನೆ ,
ಅವನೂ ಬುದ್ದಿವಂತ...!!!!!

ಮಗನಿಗೆ ಏನು ಹೇಳಬೇಕು ಅಂತ ಕೊನೆಗೂ ನನಗೆ ತಿಳಿಯಲಿಲ್ಲ...

ಅಷ್ಟರಲ್ಲಿ, ಇ ದೊಡ್ಡ ಮನುಷ್ಯ ತನ್ನ ಕೆಂಪು ಘುಟದ ಕಾರಿನಿಂದ ಎಲ್ಲರತ್ತ ಕೈ ಮಾಡುತ, ಭರ್ರ್ರ್ರ್ ನೆ ಹೋದ......

***
ಅವನು ಹೋಗಿದ್ದೆ ತಡ, ಎಲ್ಲಾ ದಿಕ್ಕಿನಲ್ಲಿದ್ದ ಗಾಡಿಗಳು ಒಮ್ಮೆಲೇ ಸ್ಟಾರ್ಟ್ ಆದವು,,,
ಆ ಜೋರಾದ ಇಂಜಿನ್ ಗಳ ಶಬ್ದದಲ್ಲಿ , ಮಗನ ಮಾತು ಕಳೆದು ಹೋಯಿತು,,,
ಸೈಲೆಂಸೆರ್ ಉಗುಳುತ್ತಿದ್ದ ಹೊಗೆಯಲ್ಲೀ, ಅವನ ಪ್ರಶ್ನೆಗಳು ಲೀನ ವಾದವು....!!!!

ನಾನು, ನಿರುತ್ತರ......!!!!!

***












Feb 1, 2010

"ಸರಣಿ ಕೊಲೆ"


ರವೆಲ್ಲ ಬೋಳಾಗಿ ಮತ್ತೆ ಎರಡನೆ ಬಾರಿ ಚಿಗುರಿತ್ತು, ಭೂಮಿಯ ಬಿಸಿ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು.

ಒಂದು ದಿನ ಅದೆಂತಹ ವಿಚಿತ್ರ, ಬೆಂಗಳೂರಿನ ರಿಂಗ್ ರೋಡಿನಲ್ಲಿ ಜನರ ಸದ್ದುಇಲ್ಲ, ಅಸಲಿಗೆ ಕಣ್ಣಿಗೆ ಕಾಣುವಷ್ಟು ದೂರದವರೆಗೆ ಎಡ-ಬಲಗಳಲ್ಲಿ ಒಂದೇಒಂದು ವೆಹಿಕಲ್ ಇಲ್ಲ ! ! !

ಅದೇ ರಸ್ತೆಯ ತಕ್ಕ ಮಟ್ಟಿನ ದೊಡ್ಡ ಮರದ ಕೆಳಗೆ ಭೇಟಿ ಮಾಡಬೇಕೆಂದು ಡಿಸಯ್ದ್ ಮಾಡಿದ್ರು ಅವರಿಬ್ಬರು ! ಒಂದು ವರ್ಷದ ಹಿಂದೆ!

ಅವನು ಬರ್ ಬರ್ರ ಅಂತ ಜೋರಾಗಿ ಬಂದ, ಯಾರು ಇಲ್ಲದ ರೋಡ್ ನೋಡಿ ಅವನ ಬೈಕಿನ ಸೌಂಡ್ ಗೆ ಆತಂಕವಾಯ್ತು. ಇವತ್ತು ಬೆಂಗಳೂರು ಬಂದ್ ಇರಬಹುದಾ? ಸೌಂಡ್ ತನ್ನ ಪಾಡಿಗೆ ತಾನು ಸುಮ್ಮನಾಯಿತು. ಇಲ್ಲ ಇಲ್ಲ ನಮ್ಮಿಬ್ಬರ ಭೇಟಿಗೆ ಇದು ಪೂರ್ವ ಸಿದ್ದತೆ ಇರಬಹುದು ಎಂದು ಒಳೊಳಗೆ ಕಳ್ಳ ನಗೆ ನಕ್ಕ.

ಬೈಕ್ ಇಳಿದು ಮರವನ್ನೊಮ್ಮೆ ಎದುರು ನಿಂತು ಪ್ರೀತಿಸಿದ, ಬೆನ್ನು ಅವಳ ಮನೆ ಕಡೆಗಿತ್ತು. ಸಂಜೆ ಸೂರ್ಯ ಮರವನ್ನ ಸೀಳಿಕೊಂಡು ಇವನ ಮುಖದ ಮೇಲೆ ಬೀಳುತ್ತಿದ್ದ. ಹಳೆಯ ಘಟನೆಗಳನ್ನ ನೆನೆಯುತ್ತಿದ್ದ, ನಗುತ್ತಿದ್ದ, ಯೋಚಿಸುತ್ತಿದ್ದ ಮತ್ತು ಅವಳಿಗಾಗಿ ಕಾಯುತ್ತಿದ್ದ . ಮರ ಅವನ ಪ್ರೇಮದ ಸಾಕ್ಷಿಯಾಗಿತ್ತು. ಮರದ ನೆರಳಿನಲ್ಲಿ ನಿಂತು ಅವಳ ನೋಡಲು ಶಬರಿಯಂತೆ ಕಾಯುತ್ತಿದ್ದ ವರ್ಷದ ಹಿಂದೆ. ಅದೇನಾಯಿತೋ ಏನೋ ಅವಳಿಗೆ ಇವನು ಇಷ್ಟ ಆಗಲಿಲ್ಲ, ತಿರಸ್ಕಾರಕ್ಕೆ ಕಾರಣವೂ ಇಲ್ಲ.

ಯೋಚನೆಯಲ್ಲಿರುವಾಗಲೇ ಹಕ್ಕಿಯೊಂದು ಬಂದು ಇವನಿಗೆ ಹತ್ತಿರವಿರುವ ರೆಂಬೆಯ ತುದಿಯಲ್ಲಿ ಕೂತಿತು. ತನ್ನವಳು ಬಂದಳೇ ಎಂದು ತಿರುಗಿ ನೋಡಿದ ಯಾರು ಇಲ್ಲ, ಆಸೆಗೆ ನಿರಾಸೆಯಾಯಿತು. ಮರದೆಡೆ ನೋಡಿ ಹಕ್ಕಿಯನ್ನೊಮ್ಮೆ ನೋಡಿದ.

ಪರ್ ಫ್ಯುಂ ಪರಿಮಳ ಮೆಲ್ಲಗೆ ಬರಲಾರಂಭಿಸಿತು ತಿರುಗಿ ನೋಡಿದ ಅವಳ ನಡಿಗೆ ರಸ್ತೆ ದಾಟಿ ಇವನತ್ತಲೇ ಬರುತ್ತಿತ್ತು, ಜಿಬ್ರ ಕ್ರಾಸ್ ದೂರದಲ್ಲಿ ಮಲಗಿತ್ತು.
ಹಕ್ಕಿ ಹಾರಿಹೋಯಿತು.

ಅವಳ ಕಂಡೊಡನೆ ಬೈಕು ನಿಂತುಕೊಂಡಲ್ಲಿಯೇ ನೂರು ಕಿಲೋ ಮೀಟರ್ ಸ್ಪೀಡಿನಲ್ಲಿ ತೇಲಾಡಿತು.

ಅವಳು ತಾನಾಗಿ ಬಂದಿಲ್ಲ, ದಿನಕ್ಕಾಗಿ ಪರಿತಪಿಸಿಯೂ ಇಲ್ಲ, ತಾವಿಬ್ಬರು ಯಾವ ಕಾರಣಕ್ಕಾಗಿ ಭೇಟಿಯಾಗಬೇಕೆಂದು ನೆನಪಿರಲಿಲ್ಲ, ಪ್ರೀತಿಗೆ ಷರತ್ತುಗಳನ್ನ ಹಾಕಿದ ಹುಡುಗಿಗೆ.

ಫೋನು ಮಾಡಿ ಎಲ್ಲವನ್ನ ನೆನಪು ಮಾಡಿಕೊಟ್ಟು ಬರಹೇಳಿದ್ದ, ದಿನಕ್ಕಾಗಿ ತಪಸ್ಸು ಮಾಡಿದ್ದ ಆಸೆಯ ಕಣ್ಣುಗಳ ಕನಸಿನ ಹುಡುಗ. ಇವನಲ್ಲಿ ಅನುಮಾನವಿತ್ತು, ಆತಂಕವಿತ್ತು ಹೆಚ್ಚಾಗಿ ತನ್ನ ಪ್ರೀತಿಯ ಬಗ್ಗೆ ನಂಬಿಕೆಯಿತ್ತು.

ಬಂದವಳೇ ಅದೆನಂದ್ಲೋ ಏನೋ ಯಾರಿಗೂ ತಿಳಿದಿಲ್ಲ, ಅಸಲಿಗೆ ಅಲ್ಲಿ ಯಾರು ಇರಲಿಲ್ಲ.

ಅವಳು ಬಂದಿದ್ದಳು ಎನ್ನುವ ಗುರುತು ಸಿಗದ ಹಾಗೆ ರೋಡ್ ಕ್ರಾಸ್ ಮಾಡಿ ಹೊರಟು ಹೋದಳು.

ಹಾರಿ ಹೋದ ಹಕ್ಕಿ ಮತ್ತೆ ಬಂದು ಕೂತಿತು, ಇವನು ಅದನ್ನ ನೋಡಲಿಲ್ಲ.
ಕಲ್ಪನೆಯಲ್ಲಿ ಬಂದಂತೆ ಬಂದು ಹೋದ ಅವಳು ಎದೆಗೆ ಸಾವಿರ ಬಾರಿ ಇರಿದು ಹೋಗಿದ್ದಳು.

ಸೂರ್ಯ ಪೂರ್ತಿಯಾಗಿ ಸರಿದಿರಲಿಲ್ಲ ಆದರೆ ಇವನು ಹಾಗೆಂದುಕೊಂಡ, ಬೈಕ್ ಸ್ಟಾರ್ಟ್ ಆಗ್ಲಿಲ್ಲ ಇನ್ನೊಮ್ಮೆ ಕಿಕ್ ಮಾಡಬೇಕು ಅಂತ ಅನ್ನಿಸದೆ ಇವನ ನೆರಳು ಬೈಕ್ ತಳ್ಳಿಕೊಂಡು ಸತ್ತಂತೆ ಚಲಿಸಿತು, ಹಕ್ಕಿಗೆ ಅಳುಬಂದಿತು.

ಅನುಮಾನ ಬಂದಂತೆ ಹಕ್ಕಿ ಅವನು ನಿಂತ ಜಾಗವನ್ನೊಮ್ಮೆ ನೋಡಿತು, ಹೌದು ಅಲ್ಲೇನೋ ಬಿದ್ದಿದೆ ಕರೆಯೋಣವೆಂದು ಇವನತ್ತ ನೋಡಿತು, ಯಾರು ಕಾಣಲಿಲ್ಲ.

ಇಡೀ ರಸ್ತೆಯ ಶಾಂತಿಯನ್ನು ಕೊಲೆಮಾಡುತ ದಡಗ್ ಬದಗ್ ಎನ್ನುತ ಒಂದೇ ಒಂದು ಪಾರ್ಟು ಸರಿಯಿಲ್ಲದ, ಆಯುಷ್ಯ ಮುಗಿದು ಹೋದ ಕಾರ್ಪೋರಶನ್ ಲಾರಿಯೊಂದು ಮರದ ಹತ್ತಿರ ಬಂದು ನಿಂತಿತು.

ಡ್ರೈವರ್ ' ಇಲ್ಲೇನೋ ಸತ್ತು ಬಿದ್ದಿದೆ ಯೆತ್ತಾಕ್ಕೊಲ್ರಲೇ' ಅಂದ

ಅನಾಥ ಶವವೊಂದು ಕಾರ್ಪೋರಶನ್ ಲಾರಿ ಸೇರಿತು.

ಅದೆಷ್ಟೋ ಸಿಗರೇಟಿನ ತುಂಡುಗಳು, ರಮ್ಮು, ವ್ಹಿಸ್ಕಿ, ಬೀರಿನ ಬಾಟಲಿಗಳು ಮಾತಾಡುತ್ತಿದ್ದವು ' ನಾವು ಇಷ್ಟು ದಿನ ಸೇರುತ್ತಿದ್ದದು ಕಡಲ ಪ್ರೀತಿಯ ಹುಡುಗನ ವಿರಹದೆದೆಯಲ್ಲಿ'

ಕುತೂಹಲದಿಂದ ನೋಡುತ್ತಿದ್ದ ಹಕ್ಕಿಗೆ ಮಾತು ಕೇಳಿತು ಅದಕ್ಕೆ ಮನವರಿಕೆಯಾಯಿತು, ಅವಳ ಮಾತಿನಿಂದ ಇವನ ಮನಸ್ಸು ಕೊಲೆಯಾಗಿತ್ತು.

ಹಕ್ಕಿ ಬಿಕ್ಕಳಿಲಾರಂಭಿಸಿತ್ತು. ಕಾರ್ಪೋರಶನ್ನಿನ ಲಾರಿ ಕೊನೆಯ ಪಯಣಕೆ ಸಾಗಿತು ! !
ಹಕ್ಕಿ ಇನ್ನೂ ಅಳುತ್ತಿತ್ತು ಹಾರಿ ಹೋಗಲಿಲ್ಲ.

ಸ್ವಲ್ಪ ಹೊತ್ತಿನಲ್ಲಿ ಹುಡುಗ- ಹುಡುಗಿಯರಿಂದ ತುಂಬಿದ ಕಾಲೇಜು ಬಸ್ಸೊಂದು ಬರ್ರನೆ ಮರದ ಮುಂದೆ ತೂರಿ ಹೋಯಿತು.


ಹಕ್ಕಿ ಎದೆಯೊಡೆದು ಪ್ರಾಣಪಕ್ಷಿ ಹಾರಿ ಹೋಯಿತು. ಇವನ ಮನಸು ಬಿದ್ದಿದ್ದ ಜಾಗದಲ್ಲಿ ಹಕ್ಕಿ ಉರುಳಿ ಬಿತ್ತು.

ಬಸ್ಸಿನಲ್ಲಿ ಅದೆಷ್ಟು ಕೊಲೆಯಾದ ಮನಸುಗಳನ್ನ ನೋಡಿತೋ ಪಾಪ.

ಮರುದಿನ ಹತ್ತು ಗಂಟೆಗೆ ಎರೆಡು ನಿಮಿಷ ಹತ್ತು ಸೆಕೆಂಡು ಬಾಕಿ ಇತ್ತು, ಬೀದಿ ದೀಪ ಇನ್ನೂ ಉರಿಯುತ್ತಿತ್ತು !

ಒಂದು ಹುಡುಗ ಅದೇ ಮರಕ್ಕೆ ವರಗಿ ನಿಲ್ಲಲು ಹತ್ತಿರ ಹೋದ

ವೆಹಿಕಲ್ಲುಗಳ ಹೋಗೆಯಿಂದ, ವಿರಹಿಗಳ ಬಿಸಿಯುಸಿರಿನಿಂದ ಏರುವ ಭೂಮಿಯ ಬಿಸಿಯಿಂದ ಮರವೆಲ್ಲ ಕಪ್ಪಾಗಿತ್ತು.

ಹುಡುಗ ವರಗಿಕೊಳ್ಳದೆ ಅದರ ನೆರಳಲ್ಲಿ ಮರಕ್ಕೆ ಬೆನ್ನು ತೋರಿಸಿ ನಿಂತುಕೊಂಡ, ಬಾಯಿ ತೆರೆದ ಮ್ಯಾನ್ ಹೋಲ್ ನ ವಾಸನೆ ಸಹಿಸಿಕೊಂಡು. ಕಣ್ಣುಗಳಲ್ಲಿ ಸಾವಿರ ಕನಸುಗಳಿದ್ದವು, ತುಟಿಯ ಮೇಲೆ ಆಸೆ ಮಿತಿಯಿಲ್ಲದೆ ಹರಿದಾಡುತ್ತಿತ್ತು.

ಹೊಸ ಹಕ್ಕಿ ಬಂದು ಮರದಲಿ ಕೂತಿತು.

ಮರ ಮತ್ತೊಂದು ಪ್ರೇಮಕಥೆಗೆ, ಅಮಾಯಕ ಮನಸಿನ ಕೊಲೆಗೆ ಪ್ರತ್ಯಕ್ಷ ಸಾಕ್ಷಿಯಾಗಲು ತಯಾರಾಗಿತ್ತು.

=====
=====