Dec 5, 2010

ತನ್ನ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಗುರುತಿಸಿಕೊಂಡ ಕನ್ನಡದ ಪ್ರಸಿದ್ದ ಬರಹಗಾರ "ಶ್ರೀಕೃಷ್ಣ ಆಲನಹಳ್ಳಿ"ಯವರು (ಜನನ: ೩-೪-೧೯೪೭ ನಿಧನ: ೪-೧-೧೯೮೯) ಕವಿತೆ-ಕತೆ-ಕಾದಂಬರಿ ಈ ಮೂರು ಪ್ರಕಾರಗಳಲ್ಲೀ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ಕಾಡು, ಭುಜಂಗಯ್ಯನ ದಶಾವತಾರಗಳು ಮತ್ತು ಪರಸಂಗದ ಗೆಂಡೆತಿಮ್ಮ ಮರೆಯಲು ಹೇಗೆ ತಾನೇ ಸಾಧ್ಯ ಅಲ್ಲವೆ? ಅಂತೊಬ್ಬ ಸಾಹಿತಿಯ ಕವಿತೆ ಇದೋ ನಿಮಗಾಗಿ . . . .

"ಊಟಕ್ಕೆ ಕೂತಾಗ"

ಊಟಕ್ಕೆ ಕೂತೆ- ಥಟ್ಟನೆ
ಸುರಿದ ಅನ್ನ- ಬೆಳ್ಳಗೆ
ಮಲ್ಲಿಗೆಯಂತೆ ನೋಡುನೋಡುತ್ತ
ಯಾಕೋ ಕಪ್ಪಾದಂತೆ
ಕೂತೆ- ಕ್ಷಣ
ತಪ್ಪು ಮಾಡಿದ ಹಾಗೆ

ಹೆಂಡತಿ ಕೇಳಿದಳು: 'ಯಾಕೆ?'- ಮಾತಾಡಲಿಲ್ಲ
'ಎಷ್ಟು ಬೆಳ್ಳಗಿದೆ ಅನ್ನ- ನಮ್ಮ ಗದ್ದೆಯದೆ ಭತ್ತ' ಅಂದಳು
'ಹೌದೆ' ಅಂದೆ.

ಕಣ್ಣು ತುಂಬಿತು ಗದ್ದೆ- ಉತ್ತಿ
ಬಿತ್ತಿ, ಕಳೆ ತೆಗೆದು

ಬೆಳೆದು ತೂಗಿದ ಬಂಗಾರದ ತೆನೆಗಳು
ಜೊತೆಗೆ ಕೆಸರಲ್ಲಿ ದುಡಿದವರ
ನೋವು ತುಂಬಿದ ಕಪ್ಪು ಮುಖಗಳು.