Apr 20, 2011

"ಅವಳು - ನಾನು"

ತುಟಿಯ ಹಸಿವು ಸಹಿಸಲಾಗದೆ,
ಒಂದು ಶಕ್ತಿಯುತವಾದ ಮುತ್ತಿಗೆ ಪರಿತಪಿಸುವ ಅವಳು.
ಭಯ ಮಿಶ್ರಿತ ಕಂಪನದಲ್ಲಿ ಸಿಗರೇಟು ಹಚ್ಚುವ ನಾನು.

ಬೆಂಕಿಕಡ್ಡಿಯ ಬೆಂಕಿಯಂತೆ,
ನನ್ನ ಸುಡುವಂತೆ ನೋಡುವ ಅವಳು.
ನನ್ನ ಸಂಕಟ ನನಗೆ - ನಡುಗುವ ಹೋಗೆ ಬಿಡುವ ನಾನು.

'ಏನೋ ಯೋಚನೆ ಮಾಡ್ತಿದಿಯಾ, ರಾಕ್ಷಸ ?' ಅನ್ನುವ ಅವಳು.
ತಲೆ ಅಲ್ಲಾಡಿಸಿ ಮತ್ತದೇ ಹೋಗೆ ಬಿಡುವ ನಾನು.

ತುಟಿಯಂಚಿಗೆ ಬೆರಳೊಯ್ದರೆನೆ ಕಚ್ಚುವ ಹುಡುಗಿ, ಅವಳು.
'ಇನ್ನು ಮುತ್ತಿಟ್ಟರೆ ಗತಿ ಏನು ?' ಅಂದುಕೊಳ್ಳುವ ನಾನು.

ಜಿಟಿಗುಡುವ ಮಳೆಯ ಸಂಜೆ,
ಮರದಡಿಯಲ್ಲಿ ನಿಂತಿದ್ದೇವೆ ಅವಳು-ನಾನು.
ಅವಳ ಬಿಸಿಯುಸಿರ ನಡುವೆ ಇನ್ನೊಂದು ಸಿಗರೇಟು ಹಚ್ಚಿಕೊಂಡೆ ನಾನು.

ಇನ್ನೂ ಕಾಯುತ್ತಿದ್ದಾಳೆ ಅವಳು.
ಹನಿಗಳು ಮಣ್ಣಿಗೆ ಮುತ್ತಿಡ್ತಾಯಿವೆ--ಸುಮ್ನೆ ನೋಡ್ತಾಯಿದಿನಿ ನಾನು.


ಇನ್ನೇನು, ಕೆಲವು ಕ್ಷಣಗಳಲ್ಲಿ ಮಹಾಸ್ಪೋಟ -ಅವಳು.
ಖಾಲಿ ಖಾಲಿ ಬರೀ ಖಾಲಿ ನಾನು.
=====
=====


Apr 16, 2011

ಪಕ್ಕು ಮಾಮಾ... ಮತ್ತೆ ಬಂದ...!!

ನಿನ್ನೆ ಚಾರ್ಲಿ ಚಾಪ್ಲಿನ್ ೧೨೨ ನೆ ಜನ್ಮದಿನ.

ಕಷ್ಟದ ಜೀವನ ಬದುಕಿದರೂ, ಎಲ್ಲರನ್ನೂ ನಗಿಸಿದ ಹಾಸ್ಯ ಬ್ರಹ್ಮ.

ಅವನಿಗೊಂದು ಸಲಾಮು.. ಬನ್ನಿ ನೀವು ಸ್ವಲ್ಪ ನಕ್ಕು ಬಿಡಿ..!!






ಇತ್ತೀಚಿಗೆ ನಮ್ಮ 'ಪಕ್ಕು ಮಾಮಾನ' ತಲೆಯ 'ಹೊಳಪು' ಜಾಸ್ತಿ ಆಗಿದೆ.

ಮೊದಲು ಮುಂದೆ ಸೂರ್ಯೋದಯ ಹಿಂದೆ ಚಂದ್ರೋದಯದಂತಿದ್ದ ಅವರ ತಲೆ

ಈಗ ಅರ್ಧ ಎಕರೆ ಬಂಜರಾಗಿದೆ..!

ಏನ್ ಮಾಮಾ ಹೀಂಗೆ ಅಂದ್ರೆ..?

ಏ ಬಿಡ್ರೋ ಅಳಿಯಂದಿರ "ಹೇನುಗಳು ಖುಷಿಯಾಗಿರ್ತಾವೆ" ಅಂತಾರೆ..!!!

ನಿಮ್ಮ ತಲೆಕೂದಲು ಉದುರೋದಕ್ಕು ಹೇನುಗಳ ಆನಂದಕ್ಕೂ ಏನ್ ಲಿಂಕು ಮಾಮಾ..? ನೋಡ್ರೋ.. ಅರ್ಧಂಬರ್ಧ ತಲೆಕುದಲಿದ್ರೆ, ಹೇನುಗಳಿಗೆ ಆನಂದವೋ ಆನಂದ..!

ಅವು ಬೇಕೆಂದಾಗ "ಜಾರು ಬಂಡೆ ಆಡಬಹುದು, ಮರಕೋತಿ ಆಟನೂ ಆಡಬಹುದು"


*****

ಅದೊಮ್ಮೆ ಕಾಲೇಜಿನಲ್ಲಿ ' ಸಾಂಸ್ಕೃತಿಕ ' ಕಾರ್ಯಕ್ರಮ ನಡಿಯುವುದಿತ್ತು.

ಸರಿ, ಎಲ್ಲ ತಯಾರಿ ಶುರು ಆದವು ಹಾಗು ಎಲ್ಲವೂ ಸರಿಯಾಗಿ ಯೋಜಿಸಲಾಯ್ತು.

ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಂಡಿದ್ದ, 'ಪಕ್ಕು ಮಾಮಾ' ಮುಂದಾಳತ್ವ ವಹಿಸಿಕೊಂಡಿದ್ದ.

ಆದರೇ...? ಇಲ್ಲಿ ಒಂದು ಸಮಸ್ಯೆ..!

ಅದು ಅಂತಹ ದೊಡ್ಡದಲ್ಲ, ಆದರೂ ಅದನ್ನ ತಡಿಯಬೇಕು..!

ಅದು ಕಾಲೇಜಿನಲ್ಲಿರುವ 'ಶೌಚಾಲಯದ' ಸ್ವಚ್ಚತೆ..!

ಕಾರ್ಯಕ್ರಮ ಅಂದಮೇಲೆ ಜಾಸ್ತಿ ಜನ ಬರ್ತಾರೆ ಬಂದವರು ಇಲ್ಲಿಗೊಂದು ಭೇಟಿ ಕೊಡ್ತಾರೆ.

ಅವರಿಗೆ ಭೇಟಿ ಕೊಡಬೇಡಿ ಎಂದು ಹೇಳಲಿಕ್ಕೆ ಆಗದು ಆದರು ಸಚ್ಚವಾಗಿರಬೇಕು.!

ಕಷ್ಟ ಕಷ್ಟ..


ಪಕ್ಕು ಮಾಮಾನಿಗೆ ಸಹಾಯಕ್ಕೆ ಬಂದಿದ್ದು ಮತ್ತೊಬ್ಬ 'ಪ್ರತಿಭಾ-ವಂತ' ವಿದ್ಯಾರ್ಥಿ,

"ಚಪಾತಿ ಮಿತ್ರ, ನಾಗು"..!

ಕೊನೆಗೂ ನಾಗುವಿನ ಉಪಾಯ ಫಲಿಸಿತು..!

ಉಪಾಯ ಹೀಗಿತ್ತು:

"ಮಹಿಳೆಯರಿಗೆ" ಅಂತ ಬರೆದಿದ್ದ ಸುತ್ತ ಮುತ್ತ 'ಅಂದಕಾಲತ್ತಿಲ್' "ಹಿರೋಗಳ" ವಿವಧ ಭಂಗಿಯ ಕೆಲವು ಚಿತ್ರಗಳು.

"ಪುರುಷರಿಗೆ" ಅಂತ ಬರೆದಿದ್ದರ ಸುತ್ತಮುತ್ತ, ಹೂವಿನ ಮಾಲೆ ಹಿಡಿದಿದ್ದ,

ಆರತಿ ಹಿಡಿದು ನಿಂತಿದ್ದ, ಮಾದಕವಾಗಿ ನೋಡುತಿದ್ದ "ಹಿರೋಯಿನ್" ಫೋಟೋಗಳು

ಅಂಟಿಸಿದ್ದ ಅಷ್ಟೇ.!!


*****

ಅದ್ಯಾಕೋ ಗೊತ್ತಿಲ್ಲ.. ಇತ್ತೀಚಿಗೆ ಪಕ್ಕು ಮಾಮಾನ ಮೊಬೈಲಿಗೆ ಅನಾಮಧೇಯ ಕರೆಗಳು ಜಾಸ್ತಿ ಆಗ್ಬಿಟ್ಟಿದಾವೆ.!

ಕಳೆದವಾರ ಒಬ್ಬ ಪುಣ್ಯಾತ್ಮ ಫೋನ್ ಮಾಡಿ, ದುಡ್ಡು, ಡೆಲಿವರಿ,

"ಫಾರಿನ್ ಮಾಲು' ಅಂತ ಏನೇನೋ ಮತಾಡಿದ್ನಂತೆ.!

ಈಗ ನಿನ್ನೆ ನೋಡಿದ್ರೆ.......

ಹೇಯ್ ನೀವೇ ಕೇಳಿಬಿಡಿ..


ಆತ: ಹಲೋ ಸರ್ ನಮಸ್ಕಾರ..

ಪಕ್ಕು ಮಾಮಾ: ನಮಸ್ತೆ ಸಾರ್ ಹೇಳಿ...

ಆತ: ಸಾರ್ ನೀವು ಪ್ರಕಾಶ್ ಅವರಾ..?

ಪಕ್ಕು ಮಾಮಾ: ಹೌದು ಸಾರ್ ನಾನೇ.

ಆತ: ಸಾರ್ ನೀವು ಪ್ರಕಾಶ್ ಹೆಗಡೆ ಅವರಾ..?

ಪಕ್ಕು ಮಾಮಾ: ಖಂಡಿತ ಅದು ನಾನೇ.

ಆತ: ಸಾರ್ ನೀವು "ಚಪಾತಿ" ಪ್ರಕಾಶ್ ಹೆಗಡೆ ಅವರಾ..!??

ಪಕ್ಕು ಮಾಮಾ: ಹಾ..!...ಹು....! ಹು... ಸಾರ್ ನಾನೇ..

ಆತ: ಸಾರ್ ನಿಮ್ಮ ಬಗ್ಗೆ ತುಂಬಾ ಕೇಳಿದೀನಿ ಸಾರ್.

ಪಕ್ಕು ಮಾಮಾ: ಒಹ್.. ತುಂಬಾ ಧನ್ಯವಾದಗಳು ಸರ್...

ಆತ: ಸಾರ್ ಈಗ ನೀವು ನಮಗೆ ಬೇಕೇ ಬೇಕು.. ನಿಮ್ಮ ಬಗ್ಗೆ ತುಂಬಾ ಕೇಳಿದೀನಿ..!!


ಪಕ್ಕು ಮಾಮಾ: ಸಾರ್ ನಾನ್ ಬೇಕಾ..??

ಆತ: ಸಾರ್, ನೀವು ಏನು ನೆಪ ಹೇಳಂಗಿಲ್ಲ...

ಅದು ಏನಾದ್ರೂ ಆಗ್ಲಿ.. ಆದರೇ ನನಗೆ ನೀವು ಬೇಕು..

ನನಗೆ ೫೦೦ ಜನಕ್ಕೆ ಆಗೋವಷ್ಟು "ಚಪಾತಿ" ಬೇಕು.!!

ಬರೋ ಭಾನುವಾರ ನಮ್ಮ ಮನೆಯಲ್ಲಿ ಫಂಕ್ಷನ್ ಇದೇ.

ಪಕ್ಕು ಮಾಮಾ: (ತಲೆ ಕೆರೆಯುತ್ತ ) ಅಲ್ಲ ಸಾರ ನಾನೂ....

ಆತ: ಸಾರ್ ನೀವು ಏನು ಹೇಳಲೇ ಬೇಡಿ..

ನೋಡೀ ದೊಡ್ಡ ದೊಡ್ಡ ಜನ ಬರ್ತಾರೆ.. ದೊಡ್ಡ ಫ್ಯಾಮಿಲಿಯವರು ಬರ್ತಾರೆ,

ಅವರಿಗೆಲ್ಲ ಖುಷಿ ಆಗೋ ಹಂಗೆ ನೀವು "ಚಪಾತಿ" ಮಾಡಬೇಕು..

ಮುಟ್ಟಿದರೆ ಅಂಗೆ ರೇಷ್ಮೆ ಇದ್ದಂಗೆ, ಮಲ್ಲಿಗೆ ಹೂ ಇದ್ದಂಗೆ ಇರಬೇಕು..

ಇನ್ನೊಂದು, ಮತ್ತೊಂದು ಕೇಳಬೇಕು.. ಅಂಥ ಚಪಾತಿ ಮಾಡಬೇಕು.


ಪಕ್ಕು ಮಾಮಾ: ಅಲ್ಲ ಸಾರ್ ದಯವಿಟ್ಟು ಕೇಳಿ ಇಲ್ಲಿ.. ನಾನೂ ಆ........

ಆತ: ನೀವು ಟೆನ್ಶನ್ ಮಾಡ್ಕೋಬೇಡಿ ಸಾರ್.

ಎಲ್ಲ ಮಟೆರಿಯಲ್ ನಾವೇ ರೆಡಿ ಮಾಡಿ ಇದ್ತಿವಿ..

ಆದರೇ, "ಚಪಾತಿ" ನಿಮ್ದೆ ಬೇಕು..!

ನೀವೇ ಮಾಡಬೇಕು..

ದೊಡ್ಡ ದೊಡ್ದೊರೆಲ್ಲ ಬರ್ತಾರೆ, ಎಲ್ಲರಿಗೂ "ನಿಮ್ದೆ ಚಪಾತಿ"..

ಎಲ್ಲರು ನನಗಿನ್ನೊಂದು ಅನ್ನಬೇಕು..!


ಪಕ್ಕು ಮಾಮಾ: ಎಲ್ಲರಿಗೂ ನಂದೇ "ಚಪಾತಿ"...!!??


ಆತ: ಹಂಗ್ ಹೇಳಬೇಡಿ, ನಮಗೆ ನಿಮ್ದೆ..........


ತಲೆಕೆಟ್ಟು... ಮೊಬೈಲ್ ಆಫ್ ಮಾಡಿ ತಲೆ ತಲೆ ಚೆಚ್ಚಿಕೊಂಡ..

ಪಾಪ ನಮ್ಮ 'ಪಕ್ಕು ಮಾಮಾ' ..!!


***** ***** *****

ಕೆಲವು ಸಂಬಂಧಗಳು ಹೇಗೆ ಆಗ್ತವೆ.?

ಬಾಳ ಪಯಣದಿ ಕೆಲವರು ನಮಗೆ ಹೇಗೆ ಸಿಕ್ಕಿದರು ಯಾಕೆ ಸಿಕ್ಕಿದರು,

ಅನ್ನೋ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟ.

ಉತ್ತರ ಹುಡುಕುವುದು ಬೇಕಾಗಿಲ್ಲ ಅನ್ನೋ ಹಾಗಿರ್ತಾವೆ.

ಆ ಸಂಬಂಧದಲ್ಲಿನ ಪ್ರೀತಿ, ಭಾವನೆಗಳಿಗೆ ಮಾತು ಸೋಲುತ್ತವೆ.!

ಅಂತಹುದೊಂದು ಸಂಬಂಧ ನಮ್ಮದು ಮತ್ತು ಪ್ರಕಾಶ್ ಮಾಮಾನದು.

"ಇಟ್ಟಿಗೆ ಸಿಮೆಂಟ್' ನ "ಪ್ರಕಾಶ್ ಹೆಗಡೆ" ..!!

ಅವರ "ಹೆಸರೇ ಬೇಡ.." ಪುಸ್ತಕದಿಂದ ಅವರ ಬ್ಲಾಗಿನ ಪರಿಚಯವಾದದ್ದು,

ಒಂದು-ವರೆ ವರ್ಷದ ಹಿಂದೆ..!

ಮೊದಲ ಸಲ ಮಾತಾಡಿದಾಗ 'ಮಾಮಾ' ಅಂದೆ ಯಾಕೆ ಅಂತ ಗೊತ್ತಿಲ್ಲ..!

ನಾವಿಬ್ರು ಅವರಿಗಿಂತ ತುಂಬಾ ಚಿಕ್ಕವರು, ಆದರು ನಮ್ಮಲ್ಲಿ ಒಂದು ಗೆಳೆತನ ಇದೆ.. ಪ್ರೀತಿ ಇದೆ. ಬಿಡುವಿದ್ದಾಗ ಭೇಟಿ ಆಗ್ತೇವೆ. ಯಾವುದೋ ರಸ್ತೆಯ ಟೀ ಅಂಗಡಿಯಲ್ಲಿ,

ಜಯನಗರದ ಬಿ.ಡಿ.ಏ. ಕಾಂಪ್ಲೆಕ್ಸ್ ಕಟ್ಟೆಯ ಮೇಲೆ ಕುಳಿತು

ಯಾವುದೋ ಕಾಲದ ಗೆಳೆಯರಂತೆ ಹರಟಿದ್ದೇವೆ.

ಸಿನಿಮಾ ಹೋಗಿದ್ದೇವೆ..

ಹಾಗು ಜೀವನದ ದಾರಿಯಲ್ಲಿ ಎದುರಾಗುವ ಕೆಲವು ವಿಷಯಗಳ ಬಗ್ಗೆ,

ನಮಗಾಗುವ ಗೊಂದಲಗಳ ಬಗ್ಗೆ ಕೇಳಿದಿವಿ.

ಅದಕ್ಕವರು ತಿಳಿಸಿ ಹೇಳಿದ್ದು ಇದೆ.!


ಸದಾ ನಗು, ಆರೋಗ್ಯಕರ ಹಾಸ್ಯ... ಜೀವನ ಪ್ರೀತಿ..

ಹಾಗು ಬಹು ಮುಖ್ಯವಾಗಿ ನಾವು ಅವರಲ್ಲಿ ನೋಡಿದ್ದು 'ಮಾನವೀಯ ಸಂಬಂಧದ ಮೌಲ್ಯ'.

ಒಂದು ಅಂತರದಲ್ಲಿ ನಾವು ಎಷ್ಟೋ ವಿಷಯಗಳ ಬಗ್ಗೆ ಮಾತಾಡಿದಿವಿ, ಚರ್ಚಿಸಿದ್ದಿವಿ,

ವಾದ ಮಾಡಿದಿವಿ.. ಹಾಗು ನಾವು ಕಲಿತಿದ್ದಿವಿ.

ನಮ್ಮ ಮೇಲೆ ನಮ್ಮ ಕೆಲವು ಯೋಜನೆಗಳಿಗೆ ಪ್ರೋತ್ಸಾಹದ ಜೊತೆ,

ಕಿವಿ ಮಾತು-ಬುದ್ದಿ ಮಾತು ಹೇಳಿದ್ದು, ಮೆಲ್ಲಗೆ ಗದರಿದ್ದು..

"ಏ ಹುಡುಗರ ನಿಮ್ಮದು ತಪ್ಪು ಅಲ್ಲ ನಿಮ್ಮ ವಯಸ್ಸಿನ ತಪ್ಪು,

ಅದಕ್ಕೆ ಮಂಗನಂಗ ಆಡ್ತೀರಾ" ಅಂದಿದ್ದು.


ಎಲ್ಲಿಯೂ ಅತಿಶಯೋಕ್ತಿ ಇಲ್ಲದ ಮಾತು.


ಇವರ ಬ್ಲಾಗಿನಲ್ಲಿ ಬರುವ, ನಾಗು,ಶಾರಿ, ಕುಷ್ಟ.. ನಮಗೆಲ್ಲರಿಗೂ ಆತ್ಮೀಯ.

ಹಾಗೇನೆ ಅಲ್ಲಲ್ಲಿ ಬರುವ ಬದುಕಿನ ಕಹಿ ಅನುಭವಗಳು ಕಲಿಸುವ ಪಾಠ.

ತಮ್ಮ ಬಗ್ಗೆನೇ ತಾವು ಹಾಸ್ಯ ಮಾಡಿಕೊಳ್ಳೋದು ಅದ್ಭುತ. ಹಾಗು ಅದೇ ತಿಳಿ ಹಾಸ್ಯದ ಔತಣ. ಹಾಸ್ಯ ಅಂದಾಗ ಅದು ಬೇರೆಯವರ ಕಾಲು ಎಳೆದೋ, ಇಲ್ಲ ಅಪಹಾಸ್ಯ ಅಲ್ಲ.

ಒಂದು ಆರೋಗ್ಯಕರ ಹಾಸ್ಯ ಇವರದು.

"ಮಿಲ್ತಿ ಹೈ ಜಿಂದಗಿ ಮೇ ಮೊಹಬ್ಬತ್ ಕಭಿ ಕಭಿ" ಎಂತಹ ಅನುಭವ ಹೇಳುವ ಭಾವುಕ.

ಸದಾ ಸಕಾರಾತ್ಮಕವಾಗಿ ಯೋಚಿಸುವ, ನೋಡುವ, ಮಾತಾಡುವ..

'ಪ್ರಕಾಶಣ್ಣ' ನ ಕಂಡರೆ ಎಲ್ಲರಿಗೂ ಏನೋ ಆನಂದ.


ಈಗ ಮತ್ತೊಂದು ಸಂತಸದ ದಿನ ನಮ್ಮ ಪ್ರಕಾಶ್ ಮಾಮಾನದು.

ಅವರ ಎರಡನೇ ಪುಸ್ತಕ

"ಇದೇ ಇದರ ಹೆಸರು"

ಇದೇ ತಿಂಗಳ, ಭಾನುವಾರ ೨೪ ತಾರೀಕು ಬಿಡುಗಡೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುವ ವಾಡಿಯ ಸಭಾಂಗಣದಲ್ಲಿ.

ದಯವಿಟ್ಟು ಬನ್ನಿ..

ನಮ್ಮ ಪ್ರಕಾಶ್ ಮಾಮಾ ಅವರ ಪರವಾಗಿ ಹಾಗು ನಮ್ಮ ಪರವಾಗಿ ಆತ್ಮೀಯ ಸ್ವಾಗತ.

ಪುಸ್ತಕ ಬಿಡುಗಡೆಯ ಜೊತೆ ಒಂದಿಷ್ಟು ಹಾಡು, ಹರಟೆ ಹಾಗು ನಗು ನಮ್ಮದಾಗಲಿ.



ನಮಗೆ ಇಲ್ಲಿ ಕೇವಲ ಒಬ್ಬ ಪ್ರಕಾಶ್ ಮಾಮಾ ಅಷ್ಟೇ ಅಲ್ಲ.

ಬ್ಲಾಗ್ ಅಂಗಳಕ್ಕೆ ಬಂದ ಮೇಲೆ ಕೆಲವು ಅಣ್ಣನಂತಹ/ಅಕ್ಕನಂತಹ ಗೆಳೆಯರು..

ಹಿರಿಯರ ಅನುಭವದ ಪಾಠ, ಒಡನಾಟ ದೊರೆತಿದ್ದು ತುಂಬಾ ಖುಷಿ ವಿಷಯ.

ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಇರಲಿ.

ಪ್ರೀತಿ ಬೆಳೆಯಲಿ.

ಅನಿಲ್ ಬೇಡಗೆ & ನಾಗರಾಜ್.ಕೆ.


[ಪಕ್ಕು ಮಾಮನ ಚಾರ್ಲಿ ಚಾಪ್ಲಿನ್ ಚಿತ್ರ ಎಡಿಟ್ ಮಾಡಿದವರು, 'ದಿಗ್ವಾಸ್ ಹೆಗಡೆ'.

ಅವರಿಗೆ ಅನಂತ ಧನ್ಯವಾದಗಳು.]


ಮೊದಲಿನ ಪಕ್ಕು ಮಾಮಾನ ಬಗ್ಗೆ
http://pennupaper.blogspot.com/2010/07/blog-post.html

Apr 12, 2011

"ಟ್ರಾಫಿಕ್ ಜಾಮಿನಲ್ಲಿ ಒಂದು, ಎರಡು, ಮೂರೂ . . ."

ನನಗೆ ಮತ್ತು ನನ್ನ ಕೆಲವು ಫ್ರೆಂಡ್ ಗಳಿಗೆ ಇಂಥದ್ದೊಂದು ಖಯಾಲಿಯಿದೆ - ಫುಟ್ ಪಾತಿನಲ್ಲಿ ಟೀ ಕುಡಿಯುತ್ತಿರುವಾಗ, ಬಸ್ಸಿಗೆ ಅಥವಾ ಇನ್ನೊಬ್ಬ ಫ್ರೆಂಡಿಗೆ ಕಾಯುತ್ತಿರುವಾಗ, ಟ್ರಾಫಿಕ್ ಜಾಮ್ ಆದಾಗ ಸುಮ್ಮನೆ ಒಂದು ಪಂಧ್ಯ ಕಟ್ತೀವಿ. ನಾವು ಸೆಲೆಕ್ಟ್ ಮಾಡಿದ ಕಾರುಗಳನ್ನ,ಹುಡುಗಿಯರನ್ನ ಎಣಿಸುವುದಷ್ಟೇ ಆ ಪಂಧ್ಯದ ಪ್ರೋಸೆಸ್ , ಈವರೆಗೂ ಅಪ್ಪಿತಪ್ಪಿಯೂ ಹುಡುಗರನ್ನ ಎಣಿಸುವ ಬಗ್ಗೆ ಯೋಚನೆ ಮಾಡಿಲ್ಲ .ಕಾರುಗಳಲ್ಲಿ ಇಂಡಿಕಾ, ಮಾರುತಿ,ಸ್ಕೋಡ ಮತ್ತು ಇತ್ಯಾದಿಗಳು; ಹಾಗೆಯೇ ಹುಡುಗಿಯರಲ್ಲಿ ಜೀನ್ಸ್ ಹುಡುಗಿ, ಚೂಡಿದಾರ್ ಹುಡುಗಿ, ಬಿಂದಿ ಹುಡುಗಿ ಮತ್ತು ಇತ್ಯಾದಿಗಳು, ರೋಡಿನುದ್ದಕ್ಕೂ ಹರಿದಾಡುವ ಇವುಗಳಲ್ಲಿ ಒಬ್ಬೊಬ್ಬರು ಯಾವುದಾದರೊಂದನ್ನ ಸೆಲೆಕ್ಟ್ ಮಾಡಿ ಕೌಂಟ್ ಮಾಡ್ತಾಯಿರ್ತಿವಿ ಕಾಯುತ್ತಿರುವ ಬಸ್ ಅಥವಾ ಫ್ರೆಂಡ್ ಬರೋವರ್ಗೂ!

ಇಂಡಿಕಾ: ಒಂದು, ಎರಡು, . . .
ಮಾರುತಿ: ಒಂದು,ಎರಡು, . . .

ಅಥವಾ

ಜೀನ್ಸ್: ಒಂದು, ಎರಡು , . . .
ಚೂಡಿ: ಒಂದು, ಎರಡು, . . . .

ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಈ ಪಂಧ್ಯ ಮುಗಿಯುತ್ತೆ, ಅಷ್ಟರಲ್ಲೇ ಅದು ಮೂಡಿಸುವ ಆನಂದದ ನಗುವಿನ ಮಾತೆ ಬೇರೆ. ಇಲ್ಲಿ ಹೆಚ್ಚು ಕೌಂಟ್ ಇದ್ದವನಿಗೆ ಏನೂ ಮಟಿರಿಯಲಿಷ್ಟಿಕ್ ಲಾಭಯಿಲ್ಲ, ಕಡಿಮೆ ಕೌಂಟ್ ಇದ್ದವ ಏನನ್ನೂ ಕಳೆದುಕೊಳ್ಳುವುದಿಲ್ಲ; ಇಬ್ಬರಿಗೂ ಅದು ಒಂದು ಪುಟ್ಟ ಸಂತೋಷದ ಕ್ಷಣವಷ್ಟೇ . ನಾವು ಕಾರನ್ನ ಯಾವಾಗ ಖರೀದಿಸ್ತಿವೋ ಗೊತ್ತಿಲ್ಲ , ಕೆಲವು ಹುಡುಗಿಯರು ಬಂದು ಹೋದರು ಆದ್ರೆ ಬಾಳಸಂಗಾತಿಯಾಗುವವಳು ಎಲ್ಲಿದ್ದಾಳೋ ಏನೋ ; ಅಸಲಿಗೆ ಅವಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಸಹ ಇಲ್ಲ ! ಅದರೂ ಕೌಂಟ್ ಮಾತ್ರ ಬಿಡಲ್ಲ .ನೀವು ಈ ರೀತಿಯ ಪಂಧ್ಯ ಬೆಂಗಳೂರಿನಲ್ಲಿ ಕಟ್ಟಿದ್ರೆ ಬೇಗ ಇಂಡಿಕಾ ಕಾರನ್ನೋ ಅಥವಾ ಜೀನ್ಸ್ ಹುಡುಗಿಯನ್ನೋ ಸೆಲೆಕ್ಟ್ ಮಾಡಿ ನೀವೇ ಗೆಲ್ತೀರ ಯಾಕೆಂದರೆ ಇವೆರಡೂ ರೋಡಿನಲ್ಲಿ ಜಾಸ್ತಿ ಕಾಣಸಿಗ್ತವೆ.

ಫ್ರೆಂಡ್ಸ್ ಜೊತೆ ತಿರುಗಾಡುತ್ತಾ , ಹರಟುತ್ತಾ , ಕಾರಣವಿಲ್ಲದೆ ಏನನ್ನೋ ಹುಡುಕುತ್ತ , ಯಾವುದೋ ಹುಡುಗಿ ಯಾವುದೋ ಕಾರಣಕ್ಕೆ ಕಿಸಕ್ ಅಂತ ನಕ್ಕಾಗ ಸಂಬ್ರಮಿಸುತ್ತಾ ಸುತ್ತಮುತ್ತಲಿರುವ ಪಾನಿಪುರಿ, ಟೀ ಸ್ಟಾಲ್, ಚಾಟ್ಸ್ ಸೆಂಟರ್ , ಲೇಡಿಸ್ ಹಾಸ್ಟೆಲ್ (ಹೊರಗಡೆ ), ಬ್ಯಾಚುಲರ್ಸ್ ರೂಮ್ (ಒಳಗಡೆ ), ಲೇಟ್ ನೈಟ್ ಕ್ಯಾಂಟೀನ್ ಗಳಲ್ಲಿ ನಡೆಯುವ ಚಿಕ್ಕ ಚಿಕ್ಕ ಇನ್ಸಿಡೆಂಟ್ ಗಳನ್ನ ಎಂಜಾಯ್ ಮಾಡ್ತೀವಿ . ಅಷ್ಟಾಗಿ ಜನರಿರದ ಜಾಗ, ಸಂಜೆ ಗಾಳಿ , ಬಿಸಿ ಬಿಸಿ ಮಿರ್ಚಿ -ಟೀ , ಸ್ವಲ್ಪ ದೂರದಲ್ಲಿ ಕುಳಿತು ಆಪ್ತತೆ,ಸಲುಗೆಯಿಂದ ಮಾತಾಡುವ ವೃದ್ದ ದಂಪತಿಗಳು, ಕೆಲವು ಪ್ರೇಮಿಗಳ ಹುಸಿ ಕೋಪದಾಟ, ಜಗಳ, ಅಹಂ, ಎಂಜಲನ್ನ ಹಂಚಿಕೊಳ್ಳುವ ಪರಿ, ಮತ್ತಷ್ಟು ಮತ್ತಷ್ಟು; ಹೀಗೆ ಸಾಧ್ಯವಾದಷ್ಟು ಎಲ್ಲ ಸಂಗತಿಗಳನ್ನ ಆಸ್ವಾಧಿಸುವ ಪ್ರಯತ್ನ ಸಾಗುತ್ತಲೇಯಿರುತ್ತೆ.

ಎಲ್ಲ ಅಂದ -ಚೆಂದಗಳ ನೋಡುತ್ತ,ಕೇಳುತ್ತ ಇನ್ನೇನು 'ಲೈಫ್ ಈಸ್ ಬ್ಯೂಟಿಫುಲ್' ಅಂದು ಮುಗಿಸುವಷ್ಟರಲ್ಲಿ ನಮ್ಮ ಕಣ್ಣೆದುರಿಗೆ ಘಟಿಸಿಬಿಡುವ ಅಸಭ್ಯ,ಅಸಹಜ,ಅಶ್ಲೀಲ ಘಟನೆಗಳು ನಮ್ಮನ್ನ ಕದಡಿಬಿಡುತ್ತವೆ, ನಾವು ಅಸಹಾಯಕತೆ ಎಂಬ ಹೆಬ್ಬಾಗಿಲ ಮುಂದೆ ಮಂಡಿಯೂರಿ ಕೂತುಬಿಟ್ಟಿರ್ತಿವಿ. ನಮಗೆ ಆಗ ಏನೂ ಮಾಡೋಕಾಗಲ್ಲ ಮ್ಯಾಕ್ಸಿಮಮ್ ಅಂದ್ರೆ 'ಛೇ', 'ಥೂ' ಅನ್ನಬಹುದು. ಈ ರೀತಿಯೂ ಆಗುತ್ತೆ ಅಂತ ನಮಗೊಂದು ಸಣ್ಣ ಉಹೆ ಕೂಡ ಇರಲ್ಲ, ಆದ್ರೆ; ಅಂತದೊಂದು ಇನ್ಸಿಡೆಂಟ್ ಗೆ ಅನಾಮತ್ತು ಸಾಕ್ಷಿಯಾಗಿಬಿಡ್ತೀವಿ. ದಾಖಲೆಗಳಿರುವುದಿಲ್ಲ!

ಘಟನೆ ೧ : ಸಿಲ್ಕ್ ಬೋರ್ಡ್-ಬೆಂಗಳೂರು; ಅಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು,ಸುಮ್ಮನೆ ರೋಡಿನ ಒಂದು ಪಕ್ಕ ನಿಂತು ಗಮನಿಸುತ್ತಿದ್ದೆ.'ಈ ಟ್ರಾಫಿಕ್ ನಲ್ಲಿ ಕಾರು-ಗೀರು ಬೇಕಾ? ಬಿಎಂಟಿಸಿ ಬಸ್ ಬೆಷ್ಟು'ಅಂದುಕೊಳ್ಳುತ್ತಿದ್ದೆ. ನಿಮಗೆಲ್ಲ ಗೊತ್ತಿರೋ ಹಾಗೆ ಆ ಟ್ರಾಫಿಕ್ ನಲ್ಲೇ ಬಲೂನುಗಳನ್ನ, ಪ್ಲಾಸ್ಟಿಕ್ ಬೊಂಬೆಗಳನ್ನ ಮಾರಾಟ ಮಾಡ್ಲಿಕ್ಕೆ ಕೆಲವು ಮಕ್ಕಳು ಬರ್ತಾರೆ. ಹಾಗೆ ಕೈಯ ತುಂಬ ಬಲೂನು ಹಿಡಿದು ಮಾರಲಿಕ್ಕೆ ಬಂದ ಸುಮಾರು ಹತ್ತು ವರ್ಷದ ಹುಡುಗನಿಗೆ ಕಾರಿನಲ್ಲಿ ಕೂತವಳು ಎರಡು ಮಾತು ಬೈಯ್ದಿದ್ದರೂ, ತನ್ನ ಪಾಡಿಗೆ ತಾನು ಸುಮ್ಮನೆ ಕೂತಿದ್ದರೂ, ಡೋರ್ ಗ್ಲಾಸ್ ಮೇಲೇರಿಸಿಕೊಂಡಿದ್ದರೂ ನಾನಿದನ್ನ ಬರೆಯುತ್ತಿರಲಿಲ್ಲ. ಕಾರಿನಲ್ಲಿ ಕೂತಿದ್ದ ಆಕೆ ಮಾಡಿದ್ದೇನು ಗೊತ್ತ?-ತಾನು ಧರಿಸಿದ್ದ ಕೆಂಪು ಬಣ್ಣದ ಟೀ -ಶರ್ಟ್ ಅನ್ನು ಮೇಲಕ್ಕೆತ್ತಿ, ಬ್ರಾ ಮುಚ್ಚಿದ ಸ್ತನಗಳನ್ನ ತೋರಿಸಿದಳು ಇನ್ನು ಹತ್ತು ಮೀರದ ಆ ಹುಡುಗನಿಗೆ. 'ಹೆಣ್ಣನ್ನ ಪೂಜಿಸುವಲ್ಲಿ ದೇವತೆಗಳಿರುತ್ತಾರೆ' ಅನ್ನೋ ಮಾತಿದೆ ಆದರೆ 'ಎಂಥಹ ಹೆಣ್ಣನ್ನ ಪೂಜಿಸಬೇಕು?' ಬಹುಶಃ ಇದು ಅವರವರ ಭಾವಕ್ಕೆ, ಬಕುತಿಗೆ ಬಿಟ್ಟ ವಿಚಾರ.

ಘಟನೆ ೨ : ವೆಸ್ಟ್ ಆಫ್ ಕಾರ್ಡ್ ರೋಡ್-ಬೆಂಗಳೂರು; ವಿಜಯನಗರದಿಂದ ರಾಜಾಜಿನಗರಕ್ಕೆ ಸಿಟಿ ಬಸ್ಸಿನಲ್ಲಿ ಹೋಗ್ತಾಯಿದ್ದಾಗ ಜೊತೆಗೆ ಯಾವ ಫ್ರೆಂಡ್ ಇರಲಿಲ್ಲವಾದ್ದರಿಂದ ಕಿಟಕಿಗೆ ತಲೆಯೋರಗಿಸಿ ಕೂತಿದ್ದೆ. ಒಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಹಸಿರು ನಿಶಾನೆಗಾಗಿ ನಿಂತಿತು ಬಸ್. ಸರಿಯಾಗಿ ಕೂತು ಬಾಲ್ಕನಿಯಿಂದ ಕೆಳಗೆ ನೋಡಿದಂತೆ ಕಿಟಕಿಯಿಂದಾಚೆ ಕಾಣುವ ಕಾರುಗಳನ್ನ ನೋಡ್ತಾಯಿದ್ದೆ, ಕಾರಿನ ಡ್ರೈವಿಂಗ್ ಸೀಟಿನಲ್ಲಿರುವ ವ್ಯಕ್ತಿಯ ಕಾಲು, ಹೊಟ್ಟೆಯ ಭಾಗ ಮಾತ್ರ ನನಗೆ ಕಾಣುತ್ತಿತ್ತು . ಹಾಗೆ ಕಾರುಗಳನ್ನ ನೋಡುತ್ತಿರುವಾಗಲೇ ; ಕೆಲವು ವಸ್ತುಗಳನ್ನ ಮಾರಲು ಬಂದ ಅಪ್ರಾಪ್ತ ಹುಡುಗಿಗೆ ಕಾರಿನಲ್ಲಿ ಕೂತ ಗಡವ ಪ್ಯಾಂಟಿನ ಜಿಪ್ಪೆಳೆದು ತನ್ನ ಗುಪ್ತಾಂಗ ತೋರಿಸುತ್ತಿದ್ದದ್ದನ್ನ ನೋಡಿದೆ. ನನ್ನ ಅಂದಾಜಿನ ಪ್ರಕಾರ ಆ ಅಮಾಯಕ ಹುಡುಗಿಗೆ ಹೆಚ್ಚು ಅಂದ್ರೆ ಹದಿನೈದು ವರ್ಷ ವಯಸ್ಸಿರಬಹುದು.

ಮನೋವಿಕಾರತೆಯನ್ನು ತೋರ್ಪಡಿಸುವ ಈ ಎರಡು ಘಟನೆಗಳನ್ನ ನಾನು ಕಣ್ಣಾರೆ ನೋಡಿದ್ದೇನೆ. ಸ್ತನಗಳನ್ನ ತೋರಿಸಿದ ಹೆಣ್ಣು ಮತ್ತು ತನ್ನ ಗುಪ್ತಾಂಗ ತೋರಿಸಿದ ಗಂಡು ಇಬ್ಬರೂ ಕಾರಿನಲ್ಲಿದ್ದರು ಅಂದ್ರೆ ಅವರು ತಕ್ಕ ಮಟ್ಟಿಗೆ ಒಳ್ಳೆಯ ವೃತ್ತಿಯಲ್ಲಿರುತ್ತಾರೆ, ಸಾರ್ವಜನಿಕ ರಸ್ತೆಗಳಲ್ಲಿ ಹೀಗೆ ಅಸಭ್ಯವಾಗಿ ವರ್ತಿಸುವ ಇವರು ತಾವು ಕೆಲಸ ಮಾಡುವಲ್ಲಿ ಹೇಗಿರ್ತಾರೆ? ತಮ್ಮ ಮನೆಗಳಲ್ಲಿ ಹೇಗಿರ್ತಾರೆ? ಇವರ್ಯಾಕೆ ಹೀಗೆ? ಆ ಎಳೆ ಮಕ್ಕಳ ಮೇಲೆ ಇದೆಂತಹ ಕಾಮದರ್ಪ? ಆ ಮಕ್ಕಳ ಮನಸಿನ ಮೇಲೆ ಇದೆಂತಹ ಪರಿಣಾಮ ಬೀರುತ್ತೆ? ಆ ಮಕ್ಕಳು ವಸ್ತುಗಳನ್ನ ಮಾರಲು ಬಂದಾಗ ಹೀಗೆ ಅಸಭ್ಯವಾಗಿ,ಅಶ್ಲೀಲವಾಗಿ ವರ್ತಿಸುವ ಅವಶ್ಯಕತೆ ಇತ್ತಾ?

ತಲ್ಲಣ, ಅಶ್ಲೀಲತೆ, ಯೋಚನೆ , ಕನಸು, ಆನಂದ, ಕಣ್ಣೀರು, ಮೊದಲ ಭೇಟಿ, ತಿರಸ್ಕಾರ, ಬೇರೊಬ್ಬನೊಂದಿಗೆ ಅವಳ ಮದುವೆ, ಗೆಳೆಯರ ಗುಂಪು, ಟೀ - ಸಿಗರೇಟು, ಅವಳನ್ನ ಅದೆಷ್ಟೇ ಮರೆತೆನೆಂದರೂ ನೆನಪಾಗುವ ಬಚ್ಚಿಟ್ಟುಕೊಂಡ ಅವಳ ಫೋಟೋ, ಪ್ರತಿಬಾರಿ ಬೇರೆಯದೇ ಮುಖ ತೋರಿಸುವ ಜಗತ್ತು -ನಾಗರೀಕ ಸಮಾಜ, 'ನೀನು ಅಸಹಾಯಕ ' ಅಂತ ಸಾರಿ ಹೇಳುವ ಬದುಕು ; ತಲೆಯ ತುಂಬಾ ಚಿತ್ರ -ವಿಚಿತ್ರ ಭಾವಗಳ ಟ್ರಾಫಿಕ್ ಜಾಮ್.

ಇದೆಲ್ಲದರ ನಡುವೆ ; ಜೊತೆಗೆ ಓದಿದ ಹುಡುಗಿಯ ಮದುವೆಯಲ್ಲಿ ಸಡಗರದಿಂದ ಅಕ್ಷತೆ ಹಾಕುವ ಕೈಗಳ ಮಧ್ಯ ಶಕ್ತಿಗುಂದಿದ, ನಿರಾಶೆಗೊಂಡ ಗೆಳೆಯನ ಕೈಯೊಂದನ್ನ ನೋಡಿದ ಕೂಡಲೇ ಕರುಳು ಹಿಂಡಿದ ಅನುಭವ. ಹಾಡದೆ ಉಳಿದ ಗೆಳೆಯನ ಯಶಸ್ವಿಯಾಗದ ಪ್ರೇಮಗಾನದ ಆಲಾಪನೆಯಲ್ಲಿಯೇ; ಅವಳು ಈಗ ತಾನೇ ತಾಳಿ ಕಟ್ಟಿದ ಸಂಗಾತಿಯೊಂದಿಗೆ ಪಯಣಿಸುವ, ಗುಲಾಬಿ ಹೂವಿನಿಂದ ಅಲಂಕೃತಗೊಂಡ ಸ್ಕೋಡ ಕಾರಿನ ಹತ್ತಿರವೇ ನಡೆದು ಹೋಗಿ ಮತ್ತದೇ ಸಿಟಿ ಬಸ್ಸಿಗಾಗಿ ಕಾಯುತ್ತಾ ನಿಲ್ಲುವ ಮುನ್ನ- ಗೆಳೆಯ ಕಡೆಯ ಸಲ ಎಂಬಂತೆ ಕಲ್ಯಾಣ ಮಂಟಪವನ್ನೊಮ್ಮೆ ತಿರುಗಿ ನೋಡಿದ. 'ಸಾಕು ಬಾ ' ಎಂಬರ್ಥದಲ್ಲಿ ಅವನ ಭುಜದ ಮೇಲೆ ಕೈ ಹಾಕಿ ರೋಡಿನ ಕಡೆ ತಿರುಗಿಸಿಕೊಳ್ಳುವಾಗ ನನ್ನ ಕಣ್ಣೂ ಹಸಿ .

ಅದೆಷ್ಟೇ ಕಷ್ಟ ಆದರೂ, ಅದೆಷ್ಟೇ ಅಂದ -ಚೆಂದ ಅಥವಾ ಅಸಭ್ಯವೋ, ಅಸಹಜವೋ ಕಂಡರೂ ನಾವು ಒಂದು ಹನಿ ಸಂತೋಷಕ್ಕಾಗಿ ಮೋಡಕ್ಕೆ ನಾಲಿಗೆ ಚಾಚ್ತೀವಿ, ಕಣ್ಣು ತೆರೆದು ಕರೀತಿವಿ -'ನೀನು ಬಾ , ಗೆಳೆಯ '.
ಮತ್ತೆ ಮತ್ತೆ ಕೌಂಟ್ ಮಾಡ್ತೀವಿ -

ಇಂಡಿಕಾ: ಒಂದು, ಎರಡು, ಮೂರು. . .
ಮಾರುತಿ: ಒಂದು,ಎರಡು, ಮೂರು. . .