Dec 29, 2014

ನಾನೂ ಒಂದು ಕವಿತೆ



ಆಸೆಪಟ್ಟು ಬರೆದು 
ಬರೆದಾದ ಮೇಲೆ
ಬೆಲೆ ಸಿಗಲಾರದೇನೊ ಅಂದುಕೊಂಡು-
ಬರೆದವನೇ ನನ್ನ ಮುದುಡಿ ಬಿಸಾಡಿದ
ನಾನೊಂದು ಸಂಸ್ಕಾರವಿಲ್ಲದ ಕವಿತೆ
ಈಗ ಮೈಗೆ ಮೈ ಅಂಟಿಕೊಂಡ ಹಾಳೆಯೇ ಶಾಶ್ವತ
ಶಾಹಿಯ ಆಯುಷ್ಯವಿರುವತನಕ
ಹಾಳೆಯ ಅನುಕಂಪವಿರುವತನಕ

ಯಾರು ಕಾಣರು ನನ್ನ
ಯಾರು ಕೇಳರು ನನ್ನ
ನಾನೊಂದು ಇದ್ದು ಇಲ್ಲದ ದನಿ
ಅಕ್ಷರಶಃ ಎಲ್ಲವೂ ಇದ್ದು ಏನೂ ಇಲ್ಲದಾದ ಕರ್ಣನಂತೆ

ನಾನೆಂದೂ ನನ್ನ ಬಯಸಲಿಲ್ಲ
ನಾನು ನನ್ನ ಹಾಗೇ ಇರಲು ಬರೆದನೇ ಬಿಡಲಿಲ್ಲ
ತಿದ್ದಿದ ತೀಡಿದ ಮತ್ತೇನನ್ನೋ ಬರೆದು ಕವಿತೆಯೆಂದ

ಯಾವ ಹಂಗಿಗೂ ಜೋತುಬೀಳದೆ
ತಿದ್ದುಪಡಿಗೆ ಒಳಪಡದೆ
ಅಸ್ತಿತ್ವವಿಲ್ಲದ ನಾನು
ಹೇಗೆ ಹುಟ್ಟಿದೇನೊ ಹಾಗೆ ಇರುವ ನಾನು
ಪ್ರತಿಯೊಬ್ಬನ ಪ್ರತಿಸಲದ ಹಾಳೆಯ ಮೇಲಿನ ಮೊದಲ ಆಲಾಪ

ಎಂದಿಗೂ, ಯಾವ ರೀತಿಯಲ್ಲೂ ಪ್ರಕಟವಾಗದ ನಾನು

ಒಂದು ಮನದ ಹಸಿ ಹಸಿ ಪ್ರತಿಬಿಂಬ 
ನನಗೆ ಸಂಸ್ಕಾರ ಸಿಕ್ಕರೆ ಕವಿತೆ

ಅಲ್ಲಿಯವರೆಗೂ ನಾನು ಸಂಸ್ಕಾರವಿಲ್ಲದ ಕವಿತೆ


=====
=====

Jun 19, 2014

"ನಾ ಕಂಡ ಚೆಲುವೆ, ಮೌನಿ..!!"




"ನಾನ್ಯಾಕೆ ಹೆಣ್ಣಾಗಿ ಹುಟ್ಟಿದೆ?"

ಈ ಪ್ರಶ್ನೆ ಬಹುಷಃ ಪ್ರತಿ ಹೆಣ್ಣಿಗೂ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಡಿರುತ್ತೆ,
ಇಲ್ಲ ಹಲವು ಸಲ ತನಗೆ ತಾನೇ ಕೆಳಿರುತ್ತಾಳೆ! ತಾನು ಹೆಣ್ಣಾಗಿ ಹುಟ್ಟಬಾರದಿತ್ತು.
ಅದೊಂದು 'ಅಳುಕು' ಅವಳಿಗೆ.

ಅದೆಷ್ಟು ಬದಲಾವಣೆಗಳಿಗೆ ಒಗ್ಗಬೇಕು?
ವಿವಿಧ ಹಂತದಲ್ಲಾಗುವ ದೈಹಿಕ ಬದಲಾವಣೆ, ಮಾನಸಿಕ ಅಸಮತೋಲನ.
ಹೆತ್ತವರಿಗೆ ಹೊರೆಯಾಗದೆ, ಹೋದಮನೆಯ ಹೊಸ ವಾತಾವರಣಕ್ಕೆ, ಹೊಸ ಜನಕ್ಕೆ ಇಷ್ಟವಿಲ್ಲದಿದ್ದರೂ, ಎಲ್ಲರಿಗೂ ಇಷ್ಟವಾಗುವಂತಿರಬೇಕು!!
ಈ ಮಧ್ಯ ತನ್ನಸ್ತಿಕೆ, ತನ್ನ ಆಸೆ, ಕನಸು, ಸ್ವಾತಂತ್ರ, ತವರು....
ಹಾ, "ಗಟ್ಟಿಗಿತ್ತಿ"ಯೂ  ಆಗಿರಬೇಕು.!!

ಇಲ್ಲೊಂದು ಕತೆ ಇದೆ, ನಮ್ಮ ಕುಟುಂಬಕ್ಕೆ ಆತ್ಮೀಯ ವಾಗಿರುವ ಕುಟುಂಬದ ಒಂದು ನೈಜ ಕತೆ.

ಅದೊಂದು ಅದ್ಭುತ ಕಾಲವಿತ್ತು, ಯಾವ, ಮೊಬೈಲ್, ಇಂಟರ್ನೆಟ್ ಇಲ್ಲದ್ದು. ಅವಿಭಕ್ತ ಕುಟುಂಬಗಳದ್ದು.
ಬೇಸಿಗೆ ರಜಾ, ಆಹಾ ಮಜವೋ ಮಜಾ! ಬೇರೆ ಬೇರೆ ಊರಿನಲ್ಲಿದ್ದ ಎಲ್ಲ ಕುಟುಂಬ ಸದಸ್ಯರು ಹಳ್ಳಿಗೆ ಬರುವುದು,
ಎಲ್ಲ ಮಕ್ಕಳಿಗೂ ಆ ರಜಾ ದಿನಗಳು ಹಬ್ಬವೆ ಸರಿ.

ಒಂದು ರಜೆಗೆ  ನಮ್ಮ ಕುಟುಂಬಕ್ಕೆ ಆತ್ಮಿಯವಾಗಿರುವ ಒಂದು ಕುಟುಂಬದವರು  ನಮ್ಮ ಮನೆಗೆ ಬಂದಿದ್ದರು. ಈ ಕತೆ ಅವರ ಮಗಳು 'ಮೌನಿ' ಯದು.
ಮುಂದೆ ಊರಿಗೆ ಹೋಗುವುದು ತುಂಬಾ ಕಡಿಮೆಯಾಗಿ, ಊರಿನ,  ಬಾಲ್ಯದ ಗೆಳೆಯರ ಸಂಪರ್ಕ ಕಡಿಮೆಯಾಯಿತು.


ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಊರಲ್ಲಿದ್ದೆ. ಆಗ ಮೌನಿಯ ವಿಷಯವಾಗಿ ಹಿರಿಯರೆಲ್ಲ ಬೇಸರದಿಂದ  ಮಾತಾಡ್ತಿದ್ರು.

ಅವಳಿಗೊಂದು ಸಮಸ್ಯೆ ಇದೆ, ವಾಸಿಯಾಗದ, ಔಷಧಿಯಿಲ್ಲದ ಸಮಸ್ಯೆ!!

ಅದೊಂದು ವ್ಯಾಧಿ.
ಇಂಗ್ಲಿಷ್ ನಲ್ಲಿ ಅದಕ್ಕೆ
"Mayer-Rokitansky-Küster-Hauser" syndrome  (MRKH-Syndrome) ಅಂತ ಕರಿತಾರೆ. ಅಪರೂಪಕ್ಕೆ ಹೆಣ್ಣುಮಕ್ಕಳಲ್ಲಿ ಕಂಡು ಬರುವ ಸಿಂಡ್ರೋಮ್.
ಈ ಸಿಂಡ್ರೋಮ್ ಇರುವ ಹುಡುಗಿ "ಋತುಮತಿ" ಯಾಗುವುದಿಲ್ಲ!!
ವೈದ್ಯಕೀಯ ಕಾರಣ, 'ಪೂರ್ಣ ವಿಕಸಿಸದ' ಗರ್ಭಾಶಯ ಅಥವಾ  ಗರ್ಭಾಶಯ ಇಲ್ಲದೇ ಇರುವುದು.

ಹತ್ತು ಹಲವು ಆಸ್ಪತ್ರೆಗೆ ಹೋಗಿ, ಹಲವು ವೈದ್ಯರನ್ನ ಕಂಡು ಬಂದರು, ಕಡೆಗೆ  ಹರಕೆ ಹೊತ್ತೀದರೂ ಅವಳ ಸಮಸ್ಯೆಗೆ ಪರಿಹಾರ ಸಿಗಲಿಲ್ಲ!! ಮೊದಲೇ ಹೆಸರಿಗೆ ತಕ್ಕಂತೆ ಮೌನಿ ಯಾಗಿದ್ದವಳು, ಮತ್ತಷ್ಟು ಅಂತರ್ಮುಖಿ ಯಾದಳು. ತಾನೇ ಗೃಹಬಂಧಿಯಾದಳು, ಓದು ನಿಲ್ಲಿಸದಳು. ಎಲ್ಲಿಗೂ ಹೋಗದೆ, ಯಾರೊಡನೆಯು ಬೇರೆಯದೇ..  ಕುಗ್ಗಿಹೊದಳು ಮೌನಿ!

ಅವಳಿದ್ದಾಗ; ಹುಡುಗ, ಮದುವೆ ಸಂಭ್ರಮದ ಮಾತುಗಳನ್ನು ಯಾರೂ ಮಾತಾಡುತ್ತಿರಲಿಲ್ಲ.
ಅವಳಿಗಿದ್ದ ಅತೀ ದೊಡ್ಡ ನೋವೆಂದರೆ, ತಾನು ಯಾವತ್ತು ತಾಯಿ ಯಾಗಲಾರೆನ್ನುವುದು.!!

ದುಃಖದ ಸಂಗತಿಯೆಂದರೆ, ನಮ್ಮ ಸಮಾಜದ ಯೋಚಿಸುವ ಮತ್ತು ಮಾತಾಡುವ ಪರಿ. ನೋವಾಗುವ ಸಂಗತಿ ಎಂದು ಗೊತ್ತಿದ್ದರು ಮತ್ತೆ ಮತ್ತೆ ಅದೇ ವಿಷಯ ಪ್ರಸ್ತಾಪಿಸುತ್ತರೆ. ಪರಿಚಿತರೊಬ್ಬರ ಮಗ ಅಪಘಾತದಲ್ಲಿ ನಿಧನನಾಗಿದ್ದು ಗೊತ್ತಿದ್ದೂ, ಹೇಗಾಯಿತು? ಅಂತ ಹೆತ್ತವರ ಮುಂದೆ ಕೇಳಿದಾಗ ಹೇಗಾಗಬೇಕು?




ನಮ್ಮ ಸಮಾಜದ್ದು ಮಾತು, ಬರೀ ಮಾತು. ಮತ್ತೆ  ಹಲವು ಸಾರಿ ಅದು ಹೆಣ್ಣಿನ ಸುತ್ತಲೇ ಇರುತ್ತೆ. ಹೆಣ್ಣು ದೊಡ್ಡವಳಾದ ಮೇಲೆ, ಮದುವೆ ಜಾಸ್ತಿ ವರ್ಷ ಮುಂದೂಡಿದರೆ, ಗಂಡು ನೋಡುವಾಗ, ಗಂಡಿಗೆ ಇಷ್ಟವಾಗಿದ್ದು ಅವಳು ಬೇಡ ಅಂದಾಗ!
(ಗಂಡು ಮಾತ್ರ ರಿಜೆಕ್ಟ್ ಮಾಡಬಹುದ??) ಮುಂದೆ, ಗರ್ಭಧರಿಸದೇ  ಇದ್ದಾಗ, ಅಥವಾ 'ಬಂಜೆ' ಅಂತ ಗೊತ್ತಾದಾಗ..
ಮಾತು.ಚುಚ್ಚು ಚುಚ್ಚು ಮಾತು.
ಇನ್ನು 'ದೊಡ್ಡ'ವಳಾಗಿಲ್ಲ ಅಂದ್ರೆ ಜನರ ಮಾತು ನಿಲ್ಲಿಸುವಾರ್ಯರು? ಅಂದೊಂದು ಅತೀವ ದುಃಖದ ಸಂಗತಿ.!!





ಹೆಣ್ಣು ಹುಟ್ಟು ತಾಯಿ.!!
ನೀವು ಗಮನಿಸಿ, ಚಿಕ್ಕ ಹುಡುಗಿ ಬೊಂಬೆ ಜೊತೆ ಆಡುವದನ್ನ ಆ ಹುಡುಗಿ
ಬೊಂಬೆಗೆ ಊಟ ಮಾಡಿಸ್ತಾಳೆ, ತಲೆ ಬಾಚೋದು,
ಅದಕ್ಕೆ ಅಮ್ಮನಂತೆ ಮಲಗಿಸೊದು..
ತಾಯಿ ಗುಣ ಹೆಣ್ಣಿನಲ್ಲಿ ಜನ್ಮತಃ ಬರುವಂತಹುದು!!



ಆದರೂ,ನಾವ್ಯಾಕೆ ಹೀಗೆ?



ಒಂದು ಮಾತಿದೆ;
" Every Problem has a Solution. If there is no Solution, then it's not a Problem"


ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೆ ಇದೆ, ಸ್ವಲ್ಪ ತಾಳ್ಮೆ, ಪ್ರೀತಿ, ಕಾಳಜಿ ಹಾಗೂ ಆತ್ಮೀಯವಾದ ಮಾತು ಸಾಕು,
ಒಂದು ಸಮಸ್ಯೆಗೆ ಸಮಾಧಾನಕ್ಕೆ.

ಹಾಗೆ, ಮೌನಿಯು ಒಂದು ಪರಿಹಾರ ಹುಡುಕಿ ಕೊಂಡಳು.
ಒಂದು ಮಗುವನ್ನ "ದತ್ತು" ತೆಗೆದುಕೊಬೇಕು, ತಾನದಕ್ಕೆ ತಾಯಾಗಿ ಪೋಷಿಸಬೇಕು!
ಆದರೆ, ಅರ್ಧಕ್ಕೆ ಓದು ನಿಲ್ಲಿಸಿ ಆರ್ಥಿಕವಾಗಿ ಸಶಕ್ತ ಳಲ್ಲದ ಕಾರಣ ಅವಳಿಗೆ ಮಗುವನ್ನ ದತ್ತು ಕೊಡಲಿಲ್ಲ.


But, MIRACLES do Happen!! ಪವಾಡಗಳು ಖಂಡಿತ ಆಗುತ್ತವೆ!!

ಬದುಕು ಸಂತಸದ, ಆಶ್ಚರ್ಯಗಳ ಕಪಾಟು! 

ಮೂರು ತಿಂಗಳ ಹಿಂದೆ ನಮ್ಮ ಮನೆಗೊಬ್ಬ ಹಿರಿಯರು ಬಂದಿದ್ದರು, ಒಂದು ಪ್ರಸ್ತಾಪವಿತ್ತು!! 
ಅವರಲ್ಲಿ ಒಬ್ಬ ಹುಡುಗನಿದ್ದಾನೆ, ಅವನಿಗೆ ಮದುವೆ ಆಗಿ ಒಬ್ಬ ಮಗಳಿದ್ದಾಳೆ. 
ಆದರೆ, ವಿಧಿ.. ಅವನ ಹೆಂಡತಿಗೆ  ಕಾಯಿಲೆ!! ಕೆಲವೆ ಕೆಲವು ತಿಂಗಳ ಬದುಕು..

ಅವಳ ಕಡೆಯ ಆಸೆ ತನ್ನ ಮಗಳಿಗೊಬ್ಬಳು ತಾಯಿ ಸಿಗಬೇಕು! ಮಗಳನ್ನು ತಬ್ಬಲಿ ಮಾಡಿ ಹೋಗಲಾರೆ, 
"ತನ್ನ ಮಗಳಿಗೆ ತಾನೇ ಇನ್ನೊಬ್ಬ  ತಾಯಿಯ ಮಡಿಲಿಗೆ ಹಾಕಬೇಕು"



ವಿಷಯ ಗೊತ್ತಾದಂತೆ ಮೌನಿ ಖುಷಿ ಖುಷಿಯಾಗಿ  ಒಪ್ಪಿದಳು. 

ಮೊದಲಿನಿಂದಲೂ ಕಡಿಮೆ ಮಾತಿನವಳಾಗಿದ್ದ ಮೌನಿಗೆ ತನ್ನ ಚೆಲುವಿನ ಬಗ್ಗೆ ಏನೋ ಕೀಳರಿಮೆ ಇತ್ತು.

ಆದರೆ ಅವತ್ತು ಕೇಳಬೇಕಿತ್ತು  ಅವಳ ಮಾತನ್ನ, ನೋಡಬೇಕಿತ್ತು ಅವಳ ಖುಷಿಯನ್ನ, ಸಂತಸದ ಕ್ಷಣವನ್ನ. 

ರೇಷ್ಮೆ ಸೀರೆಯಲ್ಲಿ, "ಮದುಮಗಳಾಗಿ" ಬಂದ ಮೌನಿ.. 
"ನಾ ಕಂಡ ಚೆಲುವೆ ಮೌನಿ" ಯನ್ನ 


Life is Beautiful :) 

***



Jaclyn Schultz
      
ಕೆಲವು  ವಿಷಯಗಳಿಗೆ ನಾವು ವಿದೇಶಿಯರನ್ನು ಮೆಚ್ಚಬೇಕು!!

ಇಂತಹ ಸಮಸ್ಯೆ ಇರುವವರಿಗೆ ಅಮೇರಿಕಾದಲ್ಲಿ, 
ವೈದ್ಯರಿಂದ ಆ ಸಮಸ್ಯೆ ಇರುವ  ಮತ್ತೊಬ್ಬರಿಂದ ಕೌನ್ಸಲಿಂಗ್ ಮಾಡುತ್ತಾರೆ, ಅದು ಸ್ವಲ್ಪ ಧೈರ್ಯ ಮತ್ತು  ಆತ್ಮವಿಶ್ವಾಸ ತುಂಬಲು ಸಹಕಾರಿ.
ಇಂತಹುದೇ ಸಮಸ್ಯೆ ಇನೊಬ್ಬ ಹುಡುಗಿಗೂ ಇದೆ.


ಇವತ್ತು ಅದೇ ಹುಡುಗಿ ಜಗತ್ತು ಕಂಡ ಚೆಲುವೆ,
ಮಿಸ್ ಮಿಚಿಗನ್
 "ಜ್ಯಾಕ್ಲಿನ್ ಶೊಲ್ಟ್ಚ"
(Jaclyn Schultz)

 ಅಮೇರಿಕದಲ್ಲಿ ಈ ಸಮಸ್ಯೆ ಇರುವ 75000 ಹೆಣ್ಣುಮಕ್ಕಳಿದ್ದಾರೆ ,
 ಹಾಗೇನೆ ಈ  ಸಮಸ್ಯೆಗೆ ಸಂಭಂಧಪಟ್ಟ
 ಒಂದು ಸಂಘಟನೆ
 "Beautiful You MRKH Foundation"  ಇದೆ.
ಅಂದಹಾಗೆ  ಇದರ ಪ್ರತಿನಿಧಿ  (Spokesperson) ಜ್ಯಾಕ್ಲೀನ್ !!


ಇನ್ನು ನಮ್ಮ ದೇಶದಲ್ಲಿ ಅದೆಷ್ಟು ಮಹಿಳೆಯರಿದ್ದಾರೋ?

ಅವರೆಲ್ಲರಿಗೂ  ಒಂದು ಹೊಸ ಭರವಸೆ, ಬದುಕು ಸಿಗಲಿ ಎನ್ನುವದೇ ಆಶಯ, ಹಾರೈಕೆ!!


***
ಮೂರು ವರ್ಷಗಳ ನಂತರ ಬ್ಲಾಗಿಗೆ ಮರಳಿದ್ದೇನೆ, ಎಲ್ಲರ ಬ್ಲಾಗಿಗೂ ಶೀಘ್ರದಲ್ಲೇ ಭೇಟಿ ಕೊಡುವೆ!

ಪ್ರೀತಿ ಬೆಳೆಯಲಿ, ಸದಾ ನಗುವಿರಲಿ
ಅನಿಲ್ ಬೇಡಗೆ.


ಚಿತ್ರ ಕ್ರಪೆ : ಅಂತರ್ಜಾಲ