Jan 6, 2011

ಒಂಬತ್ತು ದಿನದಲ್ಲಿ ಒಂಬತ್ತು ತಿಂಗಳ ಕತೆ...!




ಅವ್ವಾರ್ ಆರಾಮ್ರಿ..? ಹೀ ಅಂತ ನಕ್ಕು, ಸುರ್ರ್ ಅಂತ ಕೊನೆ ಗುಟುಕು ಚಹಾ ಕುಡಿದ ಮಾಮ.
ಅವನ ಹೆಸರು ತುಂಬಾ ಜನಕ್ಕೆಗೊತ್ತಿಲ್ಲ, ಎಲ್ರಿಗೂ ಮಾಮ.
ತುಂಬಾ ವರ್ಷಗಳಿಂದ ಅಲ್ಲಿ ಕಾವಲುಗಾರ, ಅದು ಆಸ್ಪತ್ರೆ.
ಆರಾಮ್, ಅಂತ ತಲೆ ಆಡಿಸುತ್ತ ಇವನು ಆಸ್ಪತ್ರೆ ಒಳಗೆ ಹೊರಟ.
ಅಲ್ಲೇ ನಿಲ್ಲು, ಅಂತ ಕಣ್ಣಲ್ಲೇ ಸನ್ನೆ ಮಾಡಿದ್ಲು, ನೆಲ ವರೆಸುತ್ತಿದ್ದ ಆಯಿ..!
೨೬ ವರ್ಷದಿಂದ ಅವಳು ಆಸ್ಪತ್ರೇಲಿ ಕೆಲಸಮಾಡ್ತಿದಾಳೆ. ಅವಳ ಹೆಸರೂ ತುಂಬಾ ಜನಕ್ಕೆ ಗೊತ್ತಿಲ್ಲ. ಅವಳನ್ನು ಕಂಡರೆ ಏನೋ ಪ್ರೀತಿ, ಎಲ್ಲರಿಗು.


ನೆಲ ಒಣಗಿದ ಮೇಲೆ ೧೦ ನೆ ವಾರ್ಡಿನತ್ತ ಹೊರಟ . ಚಹಾ ಕುಡಿತ ಕುಳಿತಿದ್ದ ಅಮ್ಮನ ಕಂಡು ಖುಷಿ ಆಯ್ತು, ಆಪರೇಶನ್ ಆಗಿಮೂರನೆ ದಿನಕ್ಕೆ ಎದ್ದು ಕುಳಿತದ್ದು ನೋಡಿ, ಏನ್ ಗಟ್ಟಿ ಇದ್ದಿವಾ..? ಅಂತ ನಕ್ಕು ಅಮ್ಮನ ಪಕ್ಕ ಕುಳಿತ. ಮಗನ ನೋಡಿ ಅಮ್ಮನಿಗೆ ಆನಂದ.

ನಾಷ್ಟಾ ಮಾಡಿದಿ ಇಲ್ಲೋ,,? ಹಾಲು ಕಾಯಿಸಿ ಇಲ್ಲೋ, ಹೂವಿನ ಗಿಡಕ್ಕ ನೀರ್ ಹಾಕಿ ಬಂದ್ಯಲ್ಲ....? ಹೀಗೆ ಮನೆಯ ಬಗ್ಗೆಪ್ರಶ್ನೆ ಶುರು ಮಾಡಿದ ಅಮ್ಮನಿಗೆ .. ನಾ ಎಲ್ಲ ಮಾಡ್ತೀನಿ ಅವಾ, ನೀ ಮನಿ ಕಾಳಜಿ ಮಾಡಬ್ಯಾಡ.. ಆರಾಮ್ ಮಾಡು.
ಅಷ್ಟರಲ್ಲಿ,
'ಡಾಕ್ಟರ್ ಬಾಯಿ ಹೊಂಟರ, ಗಂಡಸರು ಹೊರಗ ಬರ್ರಿ' ಅಂತ ನರ್ಸಮ್ಮ ಹೇಳಿ ಹೋದಳು.
ಬೆಳಿಗ್ಗೆ ಮೊದಲ ಚೆಕ್ ಅಪ್ ಗಂಟೆಗೆ.


ಹೊರಗೆ ಬಂದು ಸುಮ್ಮನೆ ಕುಳಿತ ಅವನ ಮನದೊಳಗೆ ಏನೇನೋ ಗೊಂದಲ, ತಾಯಿ ಬಗ್ಗೆ ಏನೋ ಚಿಂತೆ..!
ಅಪ್ಪ-ಅಮ್ಮ-ತಮ್ಮ, ಎಲ್ಲರ ನೆನಪು ಮಾಡಿಕೊಂಡ, ಮನದ ಪರದೆಯ ಮೇಲೆ ಬಾಲ್ಯದ ದಿನಗಳ 'ಫ್ಲ್ಯಾಶ್ ಬ್ಯಾಕ್'. ಕಳೆದ ಒಂದುವಾರದಿಂದ ಇದ್ದ ದುಗುಡ, ಅಮ್ಮನ ಗಾಬರಿ, ಅಜ್ಜಿಯ ಅಳು, ಅಪ್ಪನ-ತಮ್ಮನ ಮೌನ..
ಒಮ್ಮೆಲೇ ಕಣ್ಣಂಚಲಿ ಬಂದ ಹನಿ..!! ಮೌನ ಮೌನ..!!


***


ಯಾಕ್ ಬಿಡಲ್ಲ..? ನನ್ನ ಮಗಳ ಜೋಡಿ ನಾ ಬರಬಾರದು ಅಂದ್ರ ..?
ಏನ್ ಮನುಷ್ಯರಾದಿರಿ ನೀವು..??

ಕೆಳಗಡೆ ಇಂದ ಬಂತು ಜೋರು ಧ್ವನಿ..! ಹೋಗಿ ನೋಡಿದರೆ, ತನ್ನ ಮಗಳಿಗೆ 'ಚೆಕ್ ಅಪ್' ಮಾಡಿಸಲು ಬಂದ ಮಧ್ಯವಯಸ್ಕ ತಂದೆ, ತನ್ನನ್ನು ಒಳಗೆ ಬಿಡ್ತಿಲ್ಲ ಅಂತ ಅಲ್ಲಿದ್ದ ಸಿಸ್ಟರ್ ಮೇಲೆ ಕುಗ್ತಿದ್ದ.
ಅಷ್ಟರಲ್ಲಿ ಬಂದ ಅವನ ಅಳಿಯ, ಮಾಮ ಇದು 'ಹೆಣ್ಮಕ್ಳು ದವಾಖಾನಿ' ಅದ.
ಗಂಡಸರಿಗ
ಒಳಗ ಬಿಡಲ್ಲ, ಯಾಕ್ ಗಾಬರಿ ಆತಿರಿ..?
ತನ್ನ ಮಗಳ ಬಗ್ಗೆ ಇದ್ದ ಪ್ರೀತಿ ಕಾಳಜಿ ನೋಡಿ ಅಲ್ಲಿದ್ದ ಹೆಂಗಸರು ಖುಷೀಯಿಂದ ನಗಲು ಶುರು ಮಾಡಿದರು, ಇವನಿಗೋ ಎಲ್ಲರ 'ತಲಿ ಕೆಟ್ಟದ' ಏನ್ ಮನುಷ್ಯರಾದಿರಿ..!?


ಹೊರಗೆ ಬಂದ ಮಗಳ ಮುಖದಲ್ಲಿ ನಾಚಿಕೆ, ಖುಷಿ.. ಅವಳಿಗೆ, ಮೂರೂ ತಿಂಗಳು..!!

ಗಾಬರಿ ಇಂದ ಕೂತಿದ್ದ ತಂದೆಯ ಮುಖದಲ್ಲಿ ದೊಡ್ಡ ನಗು, ಅಲ್ಲಿದ್ದವರೆಲ್ಲ ಮತ್ತೆ ನಕ್ಕರು, ಅವನೂ ನಕ್ಕ..!



ದೂರದಲ್ಲಿ ಕುಳಿತು ಇದನ್ನೆಲ್ಲಾ ಗಮನಿಸುತ್ತಿದ ಇವನಿಗೆ, ಕ್ಷಣ ಆನಂದ. ಏನೋ ಸಂತಸ.. ಮತ್ತೆ ಮೌನ..!


ಹೊರಗೆ ಬಂದು ನೋಡಿದರೆ, ಕ್ಷಣ ಅವಾಕ್ಕ್ ಆದ, ಎನ್ ಇಷ್ಟೊಂದು ಜನ..?
ಅವ್ವಾರ್ ಆರಾಮ್ರಿ..? ಮತ್ತೆ ಕೇಳಿದ ಮಾಮ.!


ಏನ್ ಜನ ಆಗ್ಯಾರಪ್ಪೋ..? ಎಲ್ಲ ಕಡಿ ಮಂದಿ ಮಂದಿ..
ಎಲ್ಲ
ಹ್ವಾದ್ರು 'ರಶ್ ರಶ್ ಮಂದಿ'.!?
ಬಾಣತನಕ್ಕನು 'ರಶ್ ರಶ್ ಮಂದಿ', ಅಂತ ಪಕ್ಕದಲ್ಲಿ ಕುತವನಿ ಹೇಳಿದ ಮಾಮ.
ಅವ್ನು
, ಪಚಕ್ಕನೆ ಬಾಯಲ್ಲಿದ್ದ ಎಲೆ ಅಡಿಕೆ ಉಗುಳಿ, ಧೋತರ ಚುಂಗಿನಿಂದ ಬಾಯಿ ಒರೆಸಿ,
ಏನ್
ಅಂತ ಮಾತಾಡ್ತಿಯೋ,
"
ವರ್ಸಿಗೆ ಶಂಬರ್ (ನೂರು) ಮದೀ ಆಗ್ತಾವ ಮತ್ತ ಬಾಣತನ ಆಗಬ್ಯಾಡದು..?" ಅಂತ ಕೇಳಿ, ಜೋರು ನಗಲು ಶುರು ಮಾಡಿದ..!



ನೋಡ್ತಾ ನೋಡ್ತಾ ದಿನ ಮುಗಿತು.
ದೀನ
ಬೆಳಿಗ್ಗೆ, ಮಧ್ಯಾನ ಮನೆಯಿಂದ ತಿಂಡಿ-ಊಟ ತರೋದು,
ಅಮ್ಮನ
ನೋಡಲು ಬರುವ, ನೆಂಟರು-ಬೀಗರು, ಪರಿಚಯದವರು.. ಅವರೊಡನೆ ಅಪ್ಪ ಮಾತಾಡೋದು, ದಿನದಿಂದ ದಿನಕ್ಕೆ ಅಮ್ಮನ ಆರೋಗ್ಯ ಬೇಗ ಸುಧಾರ್ಸ್ತ ಇರೋದು ನೋಡಿ ಸಮಾಧಾನ.


ಇದರ ಮಧ್ಯೆ ಆಸ್ಪತ್ರೆಗೆ ಬರುವ ಜನರ ಮೇಲೆ, ಇವನ ಗಮನ..!
ಎಂತೆಂತಹ ಜನ, ಅವರ ಭಾವನೆಗಳು, ಖುಷಿ, ದುಃಖ.. ಇದೆಲ್ಲ ನೋಡಿ ಇವನು ಯಾವುದೋ ವಿಚಾರ, ಮನದಲ್ಲಿ ಹರಡಿಕೊಂಡು ಕುಳಿತಿದ್ದ..


***

ತನ್ನ ಮೊಮ್ಮಗಳೆಡೆಗೆ ತ್ತೊಮ್ಮೆ ನೋಡಿದ ಅಜ್ಜಿ, ಯಾಕೆವ್ವ..?
ಯಾಕ್ ಹೀಂಗ್ ಕುಂತಿ..?
ನಿನ್ನ ಗಂಡನ ಮನೆವ್ರು ಏನ್ ಕಡಿಮಿ ಮಾಡ್ಯಾರ..?

ಹೀಂಗ್ ಕಣ್ಣಾಗ್ ನೀರ್ ತರಬ್ಯಾಡೆವ್ವ, ಅಂತ ತನ್ನ ಸೆರಗಿನಿಂದ ಮೊಮ್ಮಗಳ ಕಣ್ಣೀರ ಒರೆಸಲು ಹೋದ ಅಜ್ಜಿ, ತನ್ನ ಅಳು ತಡೆಯದಾದಳು..!!

ತನ್ನ ಮಗಳ ಮಗಳು ಬಸುರಿ, ದಿನ ತನ್ನ ಮಗಳು ಬದುಕಿಲ್ಲ..
ತನ್ನ ಮಗಳು ಅಜ್ಜಿ ಆಗೋ ಮೊದಲೇ ಹೋದಳು ಅಂತ ಅಜ್ಜಿಯ ದುಖ,
ನಾನು ತಾಯಿ ಆಗಿದ್ದ ಆನಂದ ನೋಡಕ್ಕೆ ನನ್ನ ತಾಯಿ ಇಲ್ಲ ಅಂತ ಮಗಳ ದುಖ..!!




***


ತನ್ನ ತಾಯಿ ಇದ್ದ ವಾರ್ಡಿನ ಪಕ್ಕದ ವಾರ್ಡಿನಲ್ಲಿ, ನಿನ್ನೆ ಇಂದ ಹಬ್ಬದ ವಾತಾವರಣ.
ಹೊರಗಡೆ ಕೂತಿದ್ದ ಇವನು, ಅಲ್ಲಿನ ವಾತಾವರಣ ಗಮನಿಸುತ್ತಿದ್ದ.

ಅಣ್ಣ, ಅಂತ ಬಂದ ಅವಳು ಬಾಗಿಲಿನಲ್ಲಿ ನಿಂತವನನ್ನು ತಬ್ಬಿಕೊಂಡು ಅಳಲು ಶುರು ಮಾಡಿದಳು..! ವ್ಯಕ್ತಿಯ ಕಣ್ಣು ಒದ್ದೆ..!
ಅಣ್ಣ, ನೀ ಅಪ್ಪ ಆದಿಯಲ್ಲೋ, ನಾ ಸೋದರತ್ತೆ,, ಮತ್ತೆ ತಬ್ಬಿ ಕೊಂಡಳು. 'ಆನಂದ ಭಾಷ್ಪ'.
'
ಮದುವೆ ಆಗಿ ಹನ್ನೆರಡು ವರ್ಷಕ್ಕೆ' ಅವಳಣ್ಣ ತಂದೆ ಆಗಿದ್ದ, ಅವಳ ಸಂತಸಕ್ಕೆ ಪಾರವಿರಲಿಲ್ಲ..!



***


ಎಲ್ಲಿ ಅವ್ವ..?
ಬಾಗಿಲಲ್ಲಿ
ನಿಂತ ತನ್ನ ಅತ್ತೆಯನ್ನು ಕೇಳಿದ.
ಅವನ ಮುಖದಲ್ಲೊಂದು, ಗಾಬರಿ..!
ಅವರು
ಹ್ವಾದ್ರು.! ಅಂತ ಹೇಳಿದ ಅವನ ಅತ್ತೆ ಕಣ್ಣಿರು ಒರೆಸುತ್ತಾ ಒಳ ಹೋದಳು.

ತನ್ನ ಹೆಂಡತಿಗೆ ನಾಲ್ಕನೇ ಹೆರಿಗೆ,
ನಾಲ್ಕನೆಯದು
'ಹೆಣ್ಣೇ' ..!!
ಹೆಣ್ಣು ಅಂತ ಕೇಳಿದ ಅವನ ತಾಯಿ ಮತ್ತು ತಂಗಿ, ಮಗುವಿನ ಮುಖ ನೋಡದೇ ಹೊರಟು ಹೋಗಿದ್ದರು..!
ಇವನ ಮುಖದಲ್ಲಿ 'ಅಸಹಾಯಕ' ಭಾವನೆ..!!


***


ಒಂದು 'ಹೊಂಡ ಆಕ್ಟಿವ' ಮೇಲೆ ಬಂದ ಇಬ್ಬರು ಇವರೆಲ್ಲಿ ? ಇನ್ನು ಬಂದಿಲ್ಲ.!
ಅಂತ
ಒಬ್ಬರಿಗೊಬ್ಬರು ಕೇಳುತ್ತ, ಅವರು ಬರ್ತರಅಲ್ಲಿತನಕ ಇಲ್ಲೇ ಚಹಾ ಕುಡಿಯೋನ್ ಬರ್ರಿ ಅಂತ ಪಕ್ಕದ ಟೀ ಸ್ಟಾಲ್ ಮುಂದೆ ನಿಂತು ಮಾ
ತಿಗೆ ಶುರು ಹಚ್ಚಿದರು.

'ಹಾ ಅನ್ನೋದ್ರವಳಗ ದಿನ ಹೊತಾವ್ ನೋಡ್ರಿ,
ಮೊನ್ನೆ
ಮೊನ್ನೆ ಸಾಲಿಗ ಹೊಗ್ತಿದ್ವು ಇವತ್ತು ಅವರಿಗ ಮಕ್ಳು ಆಗು ಟೈಮ್ ಬಂತುನೋಡ್ರಿ..'

ಅಂತ ಅತೀ ಆನಂದದಿಂದ ಮಾತಾಡ್ತಿದ್ದವ್ರು ಬೀಗರು.

ಅವರಲ್ಲೊಬ್ಬನ ಮಗ, ಇನ್ನೊಬ್ಬನ ಮಗಳು ದಂಪತಿಗಳು.
ಅವರ
ಮಕ್ಕಳು ಹಾಗು ಮನೆಯವರು, ಹಿಂದೆ ಕಾರ್ ನಲ್ಲಿ ಬರ್ತಿದ್ರು.
ತಮ್ಮ ಮಕ್ಕಳ ಬಾಲ್ಯದ, ಶಿಕ್ಷಣದ ಬಗ್ಗೆ,

ಅವರು ಮಾಡುವ ಕೆಲಸದ ಬಗ್ಗೆ ಇಬ್ಬರಲ್ಲೂ ಒಂದು ಸಾರ್ಥಕ ಭಾವನೆ.

ಇಬ್ಬರ 'ಅಂಡರ್ಸ್ಟ್ಯಾಂ
ಡಿಂಗ್' ಅದ್ಭುತ..!!

ಒಬ್ಬರ ಮೇಲೆ ಒಬ್ಬರಿಗಿದ್ದ ಪ್ರೀತಿ-ಗೌರವ ಅಮೇಜಿಂಗ್..!!


ಕಾರಿನಿಂದ ಇಳಿದವರ ಮೊಗದಲ್ಲಿ ನವೋಲ್ಲಾಸ,
ಅವರಿಬ್ಬರು
'ನವ ದಂಪತಿಗಳಂತೆ' ನಾಚುತ್ತಿದ್ದರು..
ಅವಳು ತನ್ನ ತಾಯಿ ಹಾಗು ಅತ್ತೆ ಜೊತೆ ಆಸ್ಪತ್ರೆ ಒಳಗೆ ಹೋದರು,
ಮೂವರು ಗಂಡಸರೆಲ್ಲ ಹೊರಗಡೆ ಹರಟೆ ಹೊಡೆಯುತ್ತನಿಂತು ಬಿಟ್ಟರು..

ಸ್ವಲ್ಪ ಸಮಯದಲ್ಲೇ,
ಹುಡುಗನ
ತಾಯಿ 'ಬೀಗರೇ, ಕುಬುಸ(ಸೀಮಂತ) ತಯ್ಯಾರಿ ಶುರು ಮಾಡ್ರಿ' ಅಂತ ಬಂದಳು,
ಅವಳು ತನ್ನ ಗಂಡನ ಎದೆ ಮೇಲೆ ನಾಚಿಕೆಯಿಂದ ಮುಖ ಮುಚ್ಚಿಕೊಂಡರೆ,

"ನಾವು ಮುದುಕರಾದ್ವಿ" ಅಂತ ಇಬ್ಬರು ಬೀಗರು ತಬ್ಬಿಕೊಂಡರು..!

ವಾವ್.. ರಿಯಲಿ ಅಮೇಜಿಂಗ್..!!

***

"ಗೆಳೆಯರೇ, ಕಳೆದ ತಿಂಗಳು ನನ್ನ ತಾಯಿಗೆ 'ಗರ್ಭಕೋಶದ' ಶಸ್ತ್ರ ಚಿಕಿತ್ಸೆ ಆಯ್ತು.
ನನ್ನಮ್ಮ
ದಿನ ಆಸ್ಪತ್ರೆಯಲ್ಲಿದ್ದರು. ಈಗ ಅವರ ಆರೋಗ್ಯ ಸುಧಾರ್ಸ್ತಿದೆ.
ಇದು
ನನ್ನ ಒಂಬತ್ತು ದಿನಗಳ ಅನುಭವ.
ಒಂದು ಹೊಸ ಅನುಭವ..

ಬ್ಲಾಗ್ ಎಂಬುದು ಎಂತಹ ಅದ್ಭುತ ನೋಡಿ..!
ಡಾಕ್ಟರ್
ನನ್ನ ತಾಯಿಯ ಬಗ್ಗೆ ಹೇಳಿದಾಗ ಮನೆಯಲ್ಲಿ ಎಲ್ಲರು ಗಾಭರಿ,
ಗಡ್ಡೆ
ಆಗಿದೆ ಅಂದ ತಕ್ಷಣ, ಕ್ಯಾನ್ಸರ್ ಅನ್ನೋ ಭಯ..!
ನನಗೆ
ಮೊದಲು ನೆನಪಿಗೆ ಬಂದದ್ದು ನಮ್ಮ 'ಕೊಳಲು' ಬ್ಲಾಗಿನ ಡಾ.ಡಿ.ಟಿ.ಕೆ. ಮೂರ್ತಿ ಸರ್.
ಒಂಬತ್ತು ದಿನಗಳ ಕಾಲ ನಾನವರೊಡನೆ ದಿನಕ್ಕೆರಡು ಸಲ ಮಾತಾಡಿದ್ದೇನೆ. ಅವರು ನನ್ನ ತಾಯಿಯ
ಸಮಸ್ಯೆಯ ಬಗ್ಗೆ ವಿವರಿಸಿ ನನಗೆ ಧೈರ್ಯ ನೀಡಿದ್ದು... ನನ್ನಲ್ಲಿ ಶಬ್ದಗಳಿಲ್ಲ, ಅವರಿಗೆ ನನ್ನ ಅನಂತ ನಮನಗಳು.

ಹಾಗೇನೆ, ಫೋನ್ ಮಾಡಿ ನನ್ನ ತಾಯಿಯ ಆರೋಗ್ಯ ವಿಚಾರಿಸಿದ, ಬಾಲು ಸರ್, ಪರಾಂಜಪೆ ಸರ್.. ಎನಾಗಲ್ಲಾ ಅಳಿಮಯ್ಯಾ, ಅಂತ ದಿನ ಫೋನ್ ಮಾಡಿ ನವೋಲ್ಲಾಸ ತುಂಬಿದ ಪ್ರಕಾಶ್ ಮಾಮ.
ಮೇಲ್
ಮಾಡಿದ ಆಜಾದ್ ಸರ್, ಸುಗುಣಕ್ಕ ಹಾಗು ನನ್ನೆಲ್ಲಗೆಳೆಯರಿಗೂ ನನ್ನ
ಅನಂತ ಕ್ರತಜ್ಞ್ಯತೆಗಳು..

ನನ್ನ ತಾಯಿಯನ್ನು ಪರಿಕ್ಷಿಸಿಸಿದ ಡಾಕ್ಟರ್ ಹೇಳುತ್ತಿದ್ದರು,
'ಹೆಣ್ಮಕ್ಳು ಆರೋಗ್ಯದ ಬಗ್ಗೆ ಗಮನ ಕೊಡೋದು ಕಡಿಮೆ' ಅವರಿಗೆ ಗಂಡ, ಮಕ್ಕಳ ಚಿಂತೆ..
ನೀವು
ನಿಮ್ಮವರೆನ್ನುವವರ ಆರೋಗ್ಯದಕಾಳಜಿ ಇರಲಿ.."

ಒಂದು ಹೊಸ ಜೀವ ಜಗತ್ತಿಗೆ ಬರುವ ಮುಂಚೆ ಎಷ್ತೊಂದೆಲ್ಲ ಆಗಿರುತ್ತೆ..!


ಚಿತ್ರ ಕ್ರಪೆ: ಅಂತರ್ಜಾಲ

Dec 5, 2010

ತನ್ನ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಗುರುತಿಸಿಕೊಂಡ ಕನ್ನಡದ ಪ್ರಸಿದ್ದ ಬರಹಗಾರ "ಶ್ರೀಕೃಷ್ಣ ಆಲನಹಳ್ಳಿ"ಯವರು (ಜನನ: ೩-೪-೧೯೪೭ ನಿಧನ: ೪-೧-೧೯೮೯) ಕವಿತೆ-ಕತೆ-ಕಾದಂಬರಿ ಈ ಮೂರು ಪ್ರಕಾರಗಳಲ್ಲೀ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ಕಾಡು, ಭುಜಂಗಯ್ಯನ ದಶಾವತಾರಗಳು ಮತ್ತು ಪರಸಂಗದ ಗೆಂಡೆತಿಮ್ಮ ಮರೆಯಲು ಹೇಗೆ ತಾನೇ ಸಾಧ್ಯ ಅಲ್ಲವೆ? ಅಂತೊಬ್ಬ ಸಾಹಿತಿಯ ಕವಿತೆ ಇದೋ ನಿಮಗಾಗಿ . . . .

"ಊಟಕ್ಕೆ ಕೂತಾಗ"

ಊಟಕ್ಕೆ ಕೂತೆ- ಥಟ್ಟನೆ
ಸುರಿದ ಅನ್ನ- ಬೆಳ್ಳಗೆ
ಮಲ್ಲಿಗೆಯಂತೆ ನೋಡುನೋಡುತ್ತ
ಯಾಕೋ ಕಪ್ಪಾದಂತೆ
ಕೂತೆ- ಕ್ಷಣ
ತಪ್ಪು ಮಾಡಿದ ಹಾಗೆ

ಹೆಂಡತಿ ಕೇಳಿದಳು: 'ಯಾಕೆ?'- ಮಾತಾಡಲಿಲ್ಲ
'ಎಷ್ಟು ಬೆಳ್ಳಗಿದೆ ಅನ್ನ- ನಮ್ಮ ಗದ್ದೆಯದೆ ಭತ್ತ' ಅಂದಳು
'ಹೌದೆ' ಅಂದೆ.

ಕಣ್ಣು ತುಂಬಿತು ಗದ್ದೆ- ಉತ್ತಿ
ಬಿತ್ತಿ, ಕಳೆ ತೆಗೆದು

ಬೆಳೆದು ತೂಗಿದ ಬಂಗಾರದ ತೆನೆಗಳು
ಜೊತೆಗೆ ಕೆಸರಲ್ಲಿ ದುಡಿದವರ
ನೋವು ತುಂಬಿದ ಕಪ್ಪು ಮುಖಗಳು.

Nov 20, 2010

"ಮಗನಾಗೋ ಮುಕುಂದ"

ಮನ ಮಡಿಯಾಗಿಸಿ
ಜೇಡಿಮಣ್ಣಲಿ ನಿನ್ನ ಬಂಧಿಸಿರುವೆ, ಪೂಜಿಸಲಲ್ಲೋ
ಮುದ್ದಿಸಲು ಮಗನೆ

ನನ್ನ ಸೆರಗೆಳೆದು
ಬೆಣ್ಣೆಗಾಗಿ ಕೈ ಚಾಚಲು ಬಾರೋ
ಕಾಡಿ-ಬೇಡಿ ಹುಸಿಮುನಿಸ
ಕಣ್ಣೀರ ತರಲು ಬಾರೋ

ನಡುಮನೆಯಲ್ಲಿ ಬೆಣ್ಣೆ
ಮುಚ್ಚಿಟ್ಟಿರುವೆ, ಕದಿಯಲು
ಕಳ್ಳ ಹೆಜ್ಜೆಯಲಿ ಬಾರೋ
ಬಂದಾರು ಬಾರೋ ಹಾಲುಗೆನ್ನೆಯ ಕಂದ

ರಗಳೆಯಾಗಲಿ
ಚೆಲ್ಲಾಟವಾಗಲಿ ಏನಾದರಾಗಲಿ,
ನಿನ್ನದೇ ಗೆಲುವಾಗಲಿ ಬಾರೋ
ನನ್ನೆದೆಯಲಿ ಹಾಲ್ಗಡಲ ಜಿನುಗಿಸಲು
ಒಡಲಿಗೆ ಚಿಗುರಾಗಿ ಜಾರೋ

ಹಠ ಬಿಟ್ಟು,
ಬಾಯ್ತುಂಬ ಅಮ್ಮಾ ಎಂದು ಕರೆಯೋ
ಮಣ್ಣ ಮುಕುಂದ,
ಮುದ್ದು ಮುಕುಂದ

=====
=====

Nov 5, 2010

"ಬಿಸಿಲ ಹನಿ"

ಹಬ್ಬದಂತೆ ಮೂಡುತ ಬಾಗುವ
ಬಣ್ಣದಬಿಲ್ಲ ನೋಡಿ ಕುಣಿದು ಕುಪ್ಪಳಿಸುವ
ಮನದಲ್ಲಿ ಬರೀ ಬಣ್ಣಗಳ ಚಿತ್ತಾರ.
ಮತ್ತೊಮ್ಮೆ ಮೂಡುವುದೇ ?- ಕೊನೆಯಿಲ್ಲದ ಕಾತರ.
ಬಣ್ಣಗಳ ಬಣ್ಣನೆಯಲ್ಲಿ, ಅಲ್ಪಾಯುಷ್ಯದ ಮಳೆಗೆ ಮೆಚ್ಚುಗೆಯಿಲ್ಲ
ಅಸಲಿಗೆ ಅದರ ಪರಿವಿಲ್ಲ.

ಬಣ್ಣದೊಡಲ ಬಗೆದಾಗ
ಕಲ್ಪನೆಗೂ ಮೀರಿದ ಹನಿಯ
ಹೊಸ ಲೋಕ ತೆರೆಯುವುದು, ತೋರುವುದು.

ಹುಚ್ಚು ಮಳೆಯಿದು
ಬಂದೆರೆಷ್ಟು, ಬಿಟ್ಟರೆಷ್ಟು- ಕೊಂಕಾಡುತಿದೆ ಬಣ್ಣ ನೋಡುವ ಕಣ್ಣು.
ಜೋರಾಗಿ ಹುಯ್ದರೆ ಮಾತ್ರ ಮಳೆಯೇ
ಬಿಸಿಲಮಳೆಗೆ ಬೆಲೆಯಿಲ್ಲವೇ ?


ಪ್ರತಿಸಲವೂ ಮಣ್ಣಿನಾಳದಲ್ಲಿ ಬಂದಿರುವಿಕೆಯನ್ನ
ಮೂಡಿಸುವಲ್ಲಿ ಸೋಲುವುದು.
ಬಿಸಿಲಮಳೆ ಸೋಲಿಗೆ ಹೆದರಿಲ್ಲ ಇದುವರೆಗೂ
ಸತತ ಪ್ರಯತ್ನವದರ ಜಾಯಮಾನ

ಹೋಗುವ ಮೊದಲು
ಅಂತ್ಯವಿಲ್ಲದ ಹಾಳೆಯ ಮೇಲೆ
ಬಣ್ಣ ತಂದು ಸಹಿಮಾಡುವುದು.
ನೋಡುವ ಕಣ್ಣುಗಳಲ್ಲಿ ಉಳಿದಿದ್ದು ಬಣ್ಣಗಳು ಮಾತ್ರ.

ತಿರಸ್ಕಾರಗೊಂಡ ಹನಿಯ
ಬೇಸರದುಸಿರ ಕೇಳಿ
ಸಮಾಧಾನಪಡಿಸಿದವರೆಷ್ಟೋ ?
ಸಿಹಿ ಹನಿಗಾಗಿ ನಾಲಿಗೆ ಚಾಚಿದವರೆಷ್ಟೋ ?
ಅಂಗಳದಲ್ಲಿ ಮನಸಾರೆ ಕಾದು ನಿಂತು
ಹಗುರ ಹನಿಗಳಲ್ಲಿ ಪುಳಕಗೊಂಡು ನೆನೆದವರೆಷ್ಟೋ ?

=====
=====

Oct 30, 2010

"ಕನ್ನಡದ ಹೂಬಾಣ"

[2008 ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ದೊರಕಿದಾಗ, ನಾನು ಇಂಜಿನಿಯರಿಂಗ್ ಓದುತ್ತಿದ್ದ ಕಾಲೇಜಿನ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಕೆಲವು ಸಾಲುಗಳನ್ನ ಬರೆದಿದ್ದೆ. ಈಗ ಅದನ್ನ ನಿಮ್ಮ ಮುಂದಿಡುತ್ತಿದ್ದೇನೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಷಯಗಳು, ಸದಾ ನಗುವಿರಲಿ ]

ದಶಕಗಳ ಪರಿಶ್ರಮದಿಂದ
ದೊರಕಿದೆ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ

ಈ ನೀರು,ಭೂಮಿ
ಗಾಳಿ, ಆಕಾಶ ನಮ್ಮದೇ
ಕನ್ನಡಮ್ಮ ನಿನಗೆ ತುಂಬು ಹೃದಯದಿಂದ ನಮನ.

ಕಾಪಾಡಿಕೊಳ್ಳಬೇಕಿದೆ
ನಮ್ಮ ಕನ್ನಡ ಭಾಷೆಯನ್ನ, ಬನ್ನಿ
ಅದಕ್ಕಾಗಿ ಜೊತೆಯಾಗಿ ಸಂಬ್ರಮಿಸೋಣ, ದುಡಿಯೋಣ.

ಎಲ್ಲರ ಮನಸಿಗೆ ಸುಮಧುರ
ಗಾಯವನ್ನುಂಟುಮಾಡಲಿ,
ಕನ್ನಡದ ಹೂಬಾಣ
ಕನ್ನಡದ ಹೂಬಾಣ

=====
=====

Oct 21, 2010

"ಪ್ರೇಮಕಾವ್ಯ"

ಅದೆಲ್ಲೋ ಕುಳಿತು
ಅದೆಲ್ಲೋ ನಿಂತು
ನಿನ್ನ ಏಕಾಂತ ಗರ್ಭವತಿಯಾದಾಗ
ನೀ ಕಂಡ ಕನಸುಗಳನ್ನ, ನಾ ಹೇಗೆ ತಾನೇ ಬಲ್ಲೆ.

ಅದೆಷ್ಟು ಸುಂದರವಾಗಿರಬೇಕು ನೀನು ಚೆಲುವೆ
ನಿನ್ನ ಬರಹವೇ ವರ್ಣಿಸಲಾಗದಷ್ಟು ಚೆಂದವಾಗಿದೆಯಲ್ಲೆ.

ಭಾವನೆಗಳ ಗಟ್ಟಿತನಕೆ,
ವಾಸ್ತವಕೆ ಹತ್ತಿರವಿರುವ ನಿನ್ನ ಕನಸುಗಳಿಗೆ
ಬೆಲೆ ಕಟ್ಟಲು ಸೋತಿರುವೆ ನಾನಿಲ್ಲಿ.

ನೀ ಬರೆದ ಪ್ರತಿ ಪ್ರೆಮಪತ್ರವೂ
ಮಹಾಪ್ರೇಮಕಾವ್ಯವಾಯಿತು ಎದೆಯಲ್ಲಿ.

ಕಾದು ಕುಳಿತಿರುವೆ
ಮತ್ತೊಂದು ಪ್ರೇಮಕಾವ್ಯದ ನಿರೀಕ್ಷೆಯಲ್ಲಿ . . . .

=====
=====

Oct 11, 2010

"ಮಳೆಗೊಂದು ಮಾತು"

ಸುರಿವ ಮಳೆಯೇ ಸಾಕು
ಏಕೆ ನಿನ್ನೀ ಹಠ ?
ನೀನೆಷ್ಟೇ ಸುರಿದರು ನನ್ನ ತಣಿಸಲಾರೆ,
ಗಾಯವನ್ನ ಗುಣಪಡಿಸಲಾರೆ.

ಭೋರ್ಗರೆದ ಮಳೆಯಿಂದ
ಹಳೆಯ ಮನೆಗಳೆಲ್ಲ ಕುಸಿದಂತೆ
ನೋವಿನ ಮನೆ ಕುಸಿಯದು.
ಮರ-ಗಿಡಗಳ ಬದುಕಿಸಲು
ಸುರಿದು ನೀನು, ಕಾಡ್ಗಿಚ್ಚನ್ನು ಆರಿಸಬಹುದು.
ದಿವ್ಯ ತಿರಸ್ಕಾರದಿಂದ, ಮನದಲಿ
ಹೊತ್ತಿ ಉರಿಯುತಿರುವ ಜ್ವಾಲೆಯ ನೀ ಆರಿಸಲಾರೆ.

ಮಳೆಯೇ,
ನೀನು ರೈತನ ಕಷ್ಟ ಮರೆಮಾಡಬಹುದು,
ನನ್ನ ಕಣ್ಣಂಚಿನ ನೋವು ಮರೆಮಾಡಬಹುದು.
ನನ್ನ ಹೃದಯದೊಳಗೆ ಕಾಣದಿರುವ ಕಣ್ಣೀರ ನೀ
ಅನುಭವಿಸಲಾರೆ, ಮರೆಮಾಡಲಾರೆ.
ದಯಮಾಡಿ ಸುಮ್ಮನಾಗು

ಸತತವಾಗಿ ಸುರಿದು
ನಾನೇ ಉರಿಸಿ, ಆರಿಸಿ ಎಸೆದ
ಸಿಗರೇಟಿನ ತುಂಡುಗಳನ್ನ,
ಕಾಗದದ ದೋಣಿಯಂತೆ ತೇಲಿಸಬಹುದು.
ಆಸೆಗಳು ನುಚ್ಚುನೂರಾದ ಎದೆಯೊಳಗೆ
ನಿರಂತರವಾಗಿ ಕುದಿಯುವ ಲಾವರಸವಿದೆ !
ನೀನೆಷ್ಟೇ ಸುರಿದರೂ, ಏನೂ ಆಗದು.

ಮಳೆಯೇ ನಿನ್ನದು
ಪಲಿತಾಂಶವಿರದ ಪ್ರಯತ್ನ.
ನಿನಗೆ, ನನ್ನದೊಂದು ವ್ಯಂಗ್ಯನಗು.
ಇನ್ನು ನಿನ್ನಿಷ್ಟ.

=====
=====

Sep 30, 2010

ಜಿಂದಗಿ ಬಡೀ ಹೋನಿ ಚಾಹಿಯೇ, ಲಂಬೀ ನಹಿ..!




ಹೌದು
, "ಜೀವನ ದೊಡ್ಡದಾಗಿರಬೇಕು, ಉದ್ದ ಅಲ್ಲಾ..!"
ಈ ಸಾಲು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯ ಬಹುದು..


ಮತ್ತೊಮ್ಮೆ ಮಗದೊಮ್ಮೆ ಓದಿದರೆ, ಕೇಳಿದರೆ, ಖಂಡಿತ ಅರ್ಥ ಆಗುತ್ತೆ..!!


ಸುಮ್ನೆ ಯೋಚನೆ ಮಾಡಿ, ನಿಮಗೆ ಒಂದು ವಾರದಿಂದ 'ನೆಗಡಿ',,
ಏನೇ ಮಾತ್ರೆ ತೊಗೊಂಡ್ರು, ಮತ್ತೊಂದು ಮಾಡಿದರು ಮೂಗಿನ ಜಲಪಾತ ನಿಲ್ತಾಯಿಲ್ಲ ..!

ನೆಗಡಿ ಬೇಡ, ಬೆನ್ನು ಇಲ್ಲಾ ಸೊಂಟ ನೋವು, ಹೋಗ್ಲಿ ಅವು ಯಾವೂ ಬೇಡಾ..
ಬೆಳಿಗ್ಗೆ ಇಂದ ಕತ್ತು ನೋವು, ಎಡ-ಬಲ, ಮೇಲೆ-ಕೆಳಗೆ, ಏನ ಮಾಡಿದ್ರು ನೋವು ನೋವು..!!


ಈ ಸಮಯದಲ್ಲಿ,
ನೀವು-ನಾವು ಕೊಡುವ ಒಂದು ಸಾಮಾನ್ಯವಾದ ಹೇಳಿಕೆ: "ಏನೇ ಬರಲಿ, ಈ ನೆಗಡಿ ಮಾತ್ರ ಬರಬಾರ್ದಪ್ಪ.."
ಅಯ್ಯೋ, "ಏನ್ ಬೇಕಾದ್ರೂ ತಡಕೊಬಹುದು, ಆದ್ರೆ ಈ ಕತ್ತು ನೋವು ಬೇಡಪ್ಪ ಬೇಡಾ.."


ಅಸಲಿಗೆ ನಮ್ಮ ಸಮಸ್ಯೆ ಏನಂದ್ರೆ ನಾವು ಕಷ್ಟಗಳಿಗೆ ಎದೆ ಒಡ್ಡಲು ತಯಾರಿಲ್ಲ ..!!
ಹಾಗೇನೆ , "ಕಷ್ಟ ನಮಗೆ ಬಂದಾಗ ಮಾತ್ರ ಕಷ್ಟ ..!!"
ಬೇರೆಯವರ ಕಷ್ಟ -ನೋವಿನ ಅರಿವು ನಮಗೆ ಅಷ್ಟಕಷ್ಟೇ ..!!!


ಒಮ್ಮೆ ಯೋಚಿಸಿ ..!
ಮನುಷ್ಯನಿಗೆ , ಇಂತದ್ದೆ ದಿನ ಅಥವಾ ಇಂತಿಷ್ಟು ದೀನಗಳೊಳಗೆ ಮ್ರತ್ಯು ನಿಶ್ಚಿತ ಅಂತ
ಗೊತ್ತಾದಾಗ
ಅವನ /ಳ ಮನಸ್ತಿತಿ
ಹೇಗಿದ್ದೀತು ..!?
ಆ ಮನುಷ್ಯ ನಾವೇ ಆಗಿದ್ದರೆ ..?
ಏನ್ ಮಾಡ್ತಿವಿ ..?? ಏನು ಮಾಡಬಹುದು ..?



ಅವನೊಬ್ಬನಿದ್ದ ,,,
"ಎಲ್ಲ್ಲೇ ಇರು ಹೇಗೆ ಇರು , ಎಂದೆದಿಗೂ ನೀ ನಗುತಲಿರು "
ನಿನ್ನ ಸುತ್ತಲಿರುವರನ್ನು ನಗಿಸುತಲಿರು .."
ಇದು ಅವನ ಸಿದ್ಧಾಂತ ..!


ಅವನು ಹೇಳುತಿದ್ದ ಮತ್ತೊಂದು ಮಾತು ,
"ನಾಳಿನ ಕಷ್ಟಗಳ ನೆನೆದು ಈ ಕ್ಷಣ , ಈ ದಿನದ ಕೊಲೆ ಮಾಡೋದು .."
ನಮ್ಮ ಅತೀ ದೊಡ್ಡ ತಪ್ಪು..! ಅದು ಪಾಪ ..!



ದಿನಗಳೆದಂತೆ ಕರಗುವ ದೇಹ..
ಸಾಯಲಿಕ್ಕೆ ವರ್ಷಗಳಿದ್ದರೇನು, ದಿನಗಳಿದ್ದರೇನು. ..?
"ಸಾವು ಅನ್ನೋದು ಕ್ಷಣ ಮಾತ್ರ",
"ಬದಲಿಗೆ ಪ್ರತೀ ಕ್ಷಣ ಅದ್ಭುತವಾಗಿ ಕಳೆದರೆ ಹೇಗೆ..?
ಒಂದೊಂದು ಕ್ಷಣ ಒಂದು ಜೀವನ ಆದ್ರೆ ಹೇಗೆ ..?"



ಉಸಿರಿರುವ ತನಕ ಸಾವಿಲ್ಲ.. ಉಸಿರಿಲ್ಲದ ಮೇಲೆ ನಾವೇ ಇಲ್ಲ ..!!



ಹೀಗಿರಬೇಕಾದ್ರೆ, ಹೆದರಿಕೆ ಯಾವುದು..? ಕಷ್ಟ-ನೋವು ಅಂದ್ರೆ ಯಾವುದು..?


ಹೀಗೆಲ್ಲ ಹೇಳುತ್ತಿದ್ದ ಅವನು ಆರು ತಿಂಗಳಿನೋಳಗಡೇ ಸಾಯುವನಿದ್ದ..!!
ಅದೂ ಅವನಿಗೂ ಹೊತ್ತಿತು..!!


ಅವನಿಗಿದ್ದದ್ದು ಕ್ಯಾನ್ಸರ್..!!


ಆ ರೋಗದ ಮೇಲು ಅವನಿಗೆ ಬೇಜಾರಿಲ್ಲ ..!
ಬದಲಿಗೆ, ಅದರ ವೈಜ್ಞ್ಯನಿಕ ಹೆಸರು ಕೇಳಿ ಖುಷಿ ಪಡುತ್ತಿದ್ದ..!!
ತನ್ನ ರೋಗ ಗುಣಪಡಿಸಲಾಗದ ವೈದ್ಯರ ಮೇಲೆ ಅನುಕಂಪ ಇತ್ತು ಅವನಿಗೆ.



ಯಾರೋ ಅಪರಿಚಿತನಿಗೆ ಬೆನ್ನು ತಟ್ಟಿ, ಮಾತಾಡಿಸಿ, ತಲೆ ತಿಂದು ಪರಿಚಯ ಮಾಡಿಕೊಳ್ಳುತ್ತಿದ್ದ..
ಅವನಿಗೆ "ನನ್ನವರು" ಅನ್ನುವವರು ಯಾರು ಇರ್ಲಿಲ್ಲ, ಅದಕ್ಕೂ ಅವನಿಗೆ ಬೇಜಾರಿಲ್ಲ..!



ಹಾಗಂತ ಅವನಿಗೆ ದುಃಖ ಇರ್ಲಿಲ್ಲ ಅನ್ನೋದು ಸುಳ್ಳು..!
ಅವನಿಗೂ ದುಃಖ ಗಳಿದ್ದವು, ಅವನೊಬ್ಬ ಭಗ್ನ ಪ್ರೇಮಿ..!!
ಆದರೆ,
ಯಾರಿಗೂ ತನ್ನ ನೋವು ಹೇಳುತ್ತಿರಲಿಲ್ಲ..
ದುಃಖ ಹಂಚಿಕೊಳ್ಳುವ ವಿಷಯದಲ್ಲಿ ಅವನು ಬಲು ಸ್ವಾರ್ಥಿ..!!



ತನ್ನ ಕೊನೆಯ ದಿನಗಳನ್ನು 'ಮುಂಬಯಿ' ಯಲ್ಲಿ ಕಳೆಯಬೇಕು, ಹೊಸ ಗೆಳೆಯರೊಡನೆ ಇರಬೇಕು ಅನ್ನೋದು ಅವನ ಇಚ್ಛೆ..!
ಅವನು ಹಾಗೆ ಮಾಡಿದ..



ಮುಂಬಯಿ ಅವನಿಗೆ ಹಿಡಿಸಿತು,
ಅಲ್ಲಿ ಅವನಿಗೆ ತಾಯಿ, ತಂಗಿ, ಅತ್ತಿಗೆ , ಗುರು, ಗೆಳೆಯರು.. ಸಿಕ್ಕರು.
ತಾನು ಸಾಯುವ ಮೊದಲು ಗೆಳೆಯನಿಗೆ ಹುಡುಗಿ ನೋಡಿದ..
ಆದರೆ ಅವನ ಮದುವೆ ನೋಡಲಾಗಲಿಲ್ಲ..!


"ಒಂದು ಮಿಂಚಿನಂತೆ ಬಂದು ಹೋದ"
ಒಂದು ದೊಡ್ಡ ಬೆಳಕ ಚೆಲ್ಲಿ..!!


ಅವನ ಹೆಸರು,
"ಆನಂದ್"


******



೧೯೭೦ ರಲ್ಲಿ ತೆರೆ ಕಂಡ ಹಿಂದಿ ಚಿತ್ರ "ಆನಂದ್"
ರಾಜೇಶ್ ಖನ್ನಾ, ಮಾಡಿದ ಪಾತ್ರವೇ ಆನಂದ್ ..
ಅಮಿತಾಬ್ ಬಚ್ಚನ್ ಆವಾಗ ಸಹ ಕಲಾವಿದ..!


ಅದರ ನಿರ್ದೇಶಕ "ಹ್ರಿಶಿಕೇಶ್ ಮುಖರ್ಜೀ" ಪ್ರೀತಿಯ "ಹ್ರಿಶಿದಾ"
ಇಂದು ಅವರ ಜನ್ಮ ದಿನ..!

ಸೆಪ್ಟೆಂಬರ್ ೩೦, ೧೯೨೨ ಕೊಲ್ಕತ್ತಾ ದಲ್ಲಿ ಜನಿಸಿದ, 'ಹ್ರಿಶಿದಾ'.
'ರಸಾಯನ
ಶಾಸ್ತ್ರ' ವಿಷಯದಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದು, ಕೆಲ ಕಾಲ, "ಗಣಿತ ಹಾಗು ವಿಜ್ಞ್ಯಾನ' ಪಾಠ ಮಾಡಿದರು.



ಮೊದಲಿಗೆ "ಬಿಮಲ್ ರೋಯ್" ಜೊತೆ ಸೇರಿ ಸಿನಿಮ ಕೆಲಸ ಕಲಿತಿದ್ದು.. ಅವರು ಮೊದಲು ಮಾಡಿದ್ದು ಕ್ಯಾಮರಾಮೆನ್ ಕೆಲಸ.. ಜೊತೆಗೆ 'ಸಂಕಲನಕಾರ'.


ಮೊದಲ ಸಿನಿಮ, 'ಮುಸಾಫಿರ್' ೧೯೫೭ ರಲ್ಲಿ ತೆರೆಕಂಡಿತು, ಆದರೆ ಹೆಸರು ಮಾಡಲಿಲ್ಲ..


೧೯೫೯ ರಲ್ಲಿ 'ರಾಜ್ ಕಪೂರ್' ನಟಿಸಿದ 'ಅನಾಡಿ' ಅವರ ಎರಡನೇ ಸಿನಿಮ.
ಅದು ದೊಡ್ಡ ಹೆಸರು ಮಾಡಿತು..
'ಅನಾಡಿ' ಚಿತ್ರದ "ಜೀನಾ ಇಸೀ ಕಾ ನಾಮ್ ಹೈ" ಅದ್ಭುತವಾದ ಹಾಡು..!!



"ಆನಂದ, ಮಿಲಿ, ಚುಪ್ಕೆ ಚುಪ್ಕೆ, ಗೋಲ್ಮಾಲ, ಗುಡ್ಡಿ, ಬಾವರ್ಚಿ, ಅಭಿಮಾನ್,,,, ಆಗಿನ ದೊಡ್ಡ ಹಿಟ್ ಚಿತ್ರಗಳು.
ಒಟ್ಟು ೪೨ ಚಿತ್ರದ ನಿರ್ದೇಶನ ಮಾಡಿದ್ದು."
ಕಿರಿತೆರೆಯಲ್ಲೂ ಅವರ ಕೊಡುಗೆ ಇದೆ..!!



"ಫಿಲಂ ಫೇರ್, ರಾಷ್ಟ್ರ ಪ್ರಶಸ್ತಿ, ದಾದ ಸಾಹೇಬ್ ಫಾಲ್ಕೆ, ಪದ್ಮ ವಿಭೂಷಣ. ಪುರಸ್ಕ್ರತರು."


ಮಧ್ಯಮ ವರ್ಗದ ಕುಟುಂಬಗಳ ಕತೆ, ಗಂಡ-ಹೆಂಡತಿ, ಹಾಸ್ಯ, ಜೀವನ..
ಹೀಗೆ ಎಲ್ಲಾ ತರದ 'ಅದ್ಭತ' ಎನಿಸುವ ಚಿತ್ರ ಕೊಟ್ಟ "ಹ್ರಿಶಿದ"
೨೦೦೬ ಅಗುಸ್ಟ್ ೨೭ ರಂದು ಮುಂಬೈ ಯಲ್ಲಿ ನಿಧನ ರಾದರು.


ಇಂದು ಅವರ ಜನ್ಮದಿನದ ಪ್ರಯುಕ್ತ ಈ ಲೇಖನ.

"ಆನಂದ್" ಒಂದು ಅದ್ಭ್ತವಾದ ಚಿತ್ರ.. ಬದುಕು ಬದಲಿಸಿದ, ಬದಲಿಸುವ ಚಿತ್ರ..
ಅದೆಷ್ಟು ಸಾರಿ ನೋಡಿದೆನೋ, ಪ್ರತೀ ಸಾರಿ ನೋಡಿದಾಗ, ನಾನು ಹೊಸದಾಗಿದ್ದೇನೆ..
ಆನಂದ್, ಜೀವನಾಮೃತ .. ..!!



***

ಇವತ್ತಿಗೆ ೨೦ ವರ್ಷ ಆಯ್ತು, ಅವನು ಹೋಗಿ.. ಅಣ್ಣ "ಶಂಕ್ರಣ್ಣ", ಶಂಕರ್ ನಾಗ್.
"ಒಂದಾನೊಂದು ಕಾಲದಲ್ಲಿ, ಗಂಡುಗಲಿ.. ಕನಸುಗಾರ, ಅವನ ವೇಗ ಅದಕ್ಕೆ ಅವನೇ ಸಾಟಿ.. ಒಂದು ಮುತ್ತಿನ ಕತೆಯ ಕೊಟ್ಟು, ಜನುಮ ಜನುಮದ ಅನುಭಂದ ದಲ್ಲಿ, ಹೊಸ ಜೀವನ ನಡೆಸೆಂದ, ಗೀತಾಳ ಸಂಜು, ಮಿಂಚಿನ ಓಟಗಾರ, 'ಆಕ್ಸಿಡೆಂಟ್' ನಲ್ಲಿ ಹೋಗಿಬಿಟ್ಟ.. ನಮ್ಮೆಲ್ಲರ 'ಶಂಕರ್ ನಾಗ್"





"ಬದುಕು-ಸಾವು ಎಲ್ಲ ದೇವರ ಇಚ್ಛೆ..
ಅವನ ಲಿಖಿತ, ಯಾರು ಬದಲಿಸಲಾಗದು..
ಜೀವನದ ನಾಟಕದಲ್ಲಿ ಬಂದು ಹೋಗುವ ಪಾತ್ರಧಾರಿಗಳು ನಾವು,
ಯಾವ ಪಾತ್ರ ಎಲ್ಲಿ, ಹೇಗೆ, ಎಷ್ಟು, ಅದು ಅವನಂತೆ ಹೇಳಲಾಗದು..!"



***


ಹಲವು ಅದ್ಭುತವಾದ ಚಿತ್ರಗಳ ಕೊಟ್ಟ, ತಮ್ಮ ಚಿತ್ರಗಳಿಂದ ನಮ್ಮೆಲ್ಲರ ಬದುಕಿನಲ್ಲಿ ಬಂದ
"ಹ್ರಿಶಿಕೇಶ್ ಮುಖರ್ಜೀ - ಶಂಕರ್ ನಾಗ್" ಅವರಿಗೆ
ನನ್ನ ನಮನಗಳು..




Sep 16, 2010

"ಖಾಲಿ ಏಕೆ ಕುಳಿತೆ ?"

ಖಾಲಿ ಏಕೆ ಕುಳಿತೆ ?
ಕಾಡುತಿಲ್ಲವೆ ಹೊಸ ಕವಿತೆ
ಆಸೆಯ ಭಾವ,
ಭಾವಂತರಂಗದ ಕನಸುಗಳು
ಪ್ರಸವಿಸಲಿಲ್ಲವೇ ಕವಿತೆ ?
ಹುಟ್ಟಿ ಬರಲಿ ಲೋಕಪೂಜಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ತಿದ್ದಿ ತೀಡುವುದು ಅನುಭವದ ಹಣತೆ
ದಿವ್ಯ ಶಿಲ್ಪಿಯ ಬೆಳಕಿಗೆ
ಹರಳುಗಟ್ಟುವುದು ಕವಿತೆ
ಹಸಿವಿಗೆ ಶಬ್ಧಾಮೃತ ಕವಿತೆ
ಉಲ್ಲಾಸದ ಸೂರ್ಯ ರಶ್ಮಿ ಕವಿತೆ
ಖಾಲಿ ಏಕೆ ಕುಳಿತೆ ?

ಕಪ್ಪು ಬಿಳುಪು ಛಾಯಾಚಿತ್ರ
ಸಾರುವ ಭಾವ ಕವಿತೆ
ಸೌದರ್ಯ ಸಿರಿಯ ಸೆರೆಹಿಡಿವ
ಕಣ್ಣೊಳಗೆ ಭಾಷೆ ಸೋಲುವ ಕವಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ಪ್ರೇಮಸುಮದ ಘಮ ಕವಿತೆ
ಮೌನ ಆಡಲಾಗದ ಕವಿತೆ
ಮುತ್ತಾಗುವುದು ಸ್ಪರ್ಶ ಕವಿತೆ
ಭಕ್ತಿ ಕಾಣದ ಕವಿತೆ
ಹಡೆದವಳು ಕಣ್ತೆರೆದೊಡನೆ ಕಾಣುವ ದೇವತೆ
ಖಾಲಿ ಏಕೆ ಕುಳಿತೆ ?
ಪೂರ್ವಾಗ್ರಹಗಳಿಲ್ಲದೆ ಕಾಣು
ಎಲ್ಲೆಲ್ಲಿಯೂ ಕವಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ಪುಟಿದೇಳುವ ಕವಿತೆಗೆ
ದನಿಯಾಗು, ಶಬ್ಧವಾಗು
ಒಂದಾದಮೇಲೊಂದು ಮೊಳಕೆಯೊಡೆಯಲಿ ಕವಿತೆ
ಖಾಲಿ ಏಕೆ ಕುಳಿತೆ ?
ಬದುಕು ಹರಿವ ಕವಿತೆ
ಖಾಲಿ ಏಕೆ ಕುಳಿತೆ ?
ಖಾಲಿ ಏಕೆ ಕುಳಿತೆ ?

=====
=====

Sep 3, 2010

ಹೀಂಗ ಆದ್ರ ಹ್ಯಾಂಗ್...?


ನನಗ ಈ software ಮಂದಿ ಅರ್ಥ ಆಗುವಲ್ರು.
ನನ್ನ ಭಾಳ್ ಮಂದಿ ದೊಸ್ತ್ರು, ಈ software ನಾಗ ಕೆಲ್ಸಾ ಮಾಡ್ತಾರ,
ಖರೆ ಅಂದ್ರ ಅವರು ಅಲ್ಲಿ ಏನ್ ಮಾಡ್ತಾರ ಹ್ಯಾಂಗ ಮಾಡ್ತಾರ..?
ನನಗ ತಿಳಿವಲ್ದು..!!


ನನ್ನ ೬ ವರ್ಷದ ದೋಸ್ತ, ಸದ್ಯದ ರೂಮೇಟ್, ಅಣ್ಣ ನಂತಹ ಗೆಳೆಯ ಮೂರೂ ವರ್ಷದಿಂದ ಒಂದು ದೊಡ್ಡ ಕಂಪನ್ಯಾಗ ಕೆಲ್ಸಾ ಮಾಡತಾನ,
ಒಂದ ಮಾತ್ ಏನಂದ್ರ, ಅವನೀಗ ಏನು ಸೋಕಿ ಇಲ್ಲ, ಅಗ್ದಿ ಸರಳ ಜೀವನ,,
ಅಂವಾ ಒಬ್ಬ ರೈತನ ಮಗ..
ನನಗ ಅವಾಗ ಅವಾಗ ವಿಚಿತ್ರ ಕಾಣತನ,
ಅವನ ಕೆಲಸ ಏನ್ ಅಂತ ನಾ ಹೆಚ್ಚ ಕೆಳಿಕ್ಕ ಹೋಗಿಲ್ಲ..
ಮುಂಜಾನಿ ೭ ಗಂಟೆಗೆ ಹೋದ ಅಂದ್ರ ಮತ್ತ ನಮ್ಮ ಮಸಡಿ ನಾವು ನೋಡೋದು ರಾತ್ರಿ ೯ ಕ್..
ಒಮ್ಮೆ ಒಮ್ಮೆ ೯:೩೦/ ೧೦ ಗಂಟೆನೂ ಆಗತೈತಿ..
ಶನಿವಾರ - ರವಿವಾರ ಬತ್ತ ಅಂದ್ರ,
" ಭಾಳ ವರ್ಷಕ್ಕ ತವರಿಗ ಹೊಂಟ ಹೆಣ್ಣಿನ ಮುಖದಾಗಿನ ಆನಂದ್ "


ಆದ್ರ ನಾ ಇಲ್ಲಿ ಹೇಳಿಕ್ಕ ಹೊಂಟಿದ್ದ ಏನಂದ್ರ, ಸ್ವಲ್ಪ ದಿನ ಹೀಂದ ನಾ ಅವನ ಜೋಡಿ ಒಂದು ದೊಡ್ಡ ಅಂಗಡಿ ಹೋಗಿದ್ದೆ..
ಅಲ್ಲಿ ಅಂವಾ ರೊಕ್ಕ ಕೊಡು ಬದಲಿ, ಗಣಪತಿ ಹಬ್ಬಕ್ಕ/ ದೇವರು ಚಂದ ಬರೆಯು ಪಟ್ಟಿ ಬಂಡಲ್ ಇದ್ದಂತ ಒಂದು ಬಂಡಲ್ ಇಂದ ನಾಲ್ಕು ಚೀಟಿ ಹರದು ಕೊಟ್ಟ..!
ನನಗ ಅದು ಏನು ಗೊತ್ತಿಲ್ಲ..!


ಹೊರಗ ಬಂದು ಸ್ವಲ್ಪ ತಡಾ ಆದ ಮ್ಯಾಲ..
ಅಣ್ಣ ನೀ ಅವಾಗ್ಲೇ ಆ ದುಕಾನ್ ದವನಿಗೆ ಚೀಟಿ ಕೊಟ್ಟೆಲ್ಲಾ.. ಅದು ಏನು..!?
"Meal Pass " ಅಂದ..
ನನಗ ಏನು ಗೊತ್ತಾಗ್ಲಿಲ್ಲ ಅಂತ ಅವನಿಗ್ ಗೊತ್ತಾಗಿ, ನಾ ಮುಂದೆ ಕೇಳು ಮೊದಲ ಅವನೇ ಸುರು ಮಾಡಿ ವಿವರಿಸಿ ಹೇಳ್ದ..

ನನಗೆ ವಿಚಿತ್ರ..!!


"
ಅಲ್ಲೋ ಮಾರಾಯ ರೊಕ್ಕ ಕೊಟ್ಟ ಚೀಟಿ ತೊಗೊಳೋದು, ಮತ್ತ ಆ ಚೀಟಿ ರೊಕ್ಕ ಬದಲಿ ಕೊಡೋದು" ಸುಮ್ನೆ ಹೈರಾಣ ಅಲ್ಲ..?
" ಅದರ ಬದಲಿ ಸುಮ್ನೆ ರೊಕ್ಕ ಕೊಟ್ರ ಮಾತ್ ಮುಗಿತಲ್ಲಾ.." ನಾ ಹೇಳ್ದೆ.


ಅದಕ್ಕ ಅಂವಾ ಮತ್ತೊಂದಿಷ್ಟ ವಿವರಿಸಿ, ಬಿಡಿಸಿ ಹೇಳ್ದ..


ಅಲ್ಲಾ ನೀವ್ ಮಂದಿ ಎಷ್ಟ ತಲೀ ಓಡುಸ್ತಿರಿ,,,?
ಹಂಗ " ಅಗ್ದಿ ಆರಂ ಬೇಕು ಅನೌರು " ..!!
ಆರಂ ಅನ್ನೋದು ಎಲ್ಲರಿಗೂ ಬೇಕು,
ಆದ್ರ ನೀವ್ ಮಂದಿ ಭಾಳೇ ಆರಂ ಕೆಳ್ತೀರಪ್ಪ..! ಅದು ಏನ್ ಮಾಡ್ತಿರೋ..?


ನಾ ಏನೇ ಹೇಳ್ದ್ರು, ಸ್ವಲ್ಪ ವಾದ ಮಾಡಿ, ಸ್ವಲ್ಪ ನಕ್ಕು, ವಿವರಣೆ ಕೊಡ್ತಾ ಹೋದ ಅಣ್ಣ..
ಅಲ್ಲೇ ಸಮೀಪದ ಹೋಟೆಲ್ಲಿಗ ಉಟಕ್ಕ್ ಹೋದ್ವಿ..


ಊಟ ಆದ ಮ್ಯಾಲ ಮತ್ತ ನಾ ಸುರು ಮಾಡದೆ,,
ಈಗ ಎಲ್ಲ ಕಡೀ ಕಾರ್ಡ್ ಸಿಸ್ಟಮ್ ಆಗೈತಿ,

Online payment.. Income Tax, Electricity,
Phone Bill, Water Bill, Film/Bus/Train/Flight Ticket..
ಎಲ್ಲ ಕ್ರೆಡಿಟ್ / ಡೆಬಿಟ್ ಕಾರ್ಡ್..


ಅದಕ್ಕ ಅಣ್ಣ ಅಂದ, ಹೌದು ಅದೆಲ್ಲ ನಮ್ಮ ನಿಮ್ಮ ಅನುಕೂಲಕ್ಕೆ.
ಅದರಿಂದ ಎನೇನ ಲಾಭ ಐತಿ ಅಂತ ವನ್ದಿಷ್ಟ ಉದಾಹರಣೆ ಕೊಟ್ಟ.
ನಾ ಬಿಡಬೇಕಲ್ಲ..! ?

ನೀವು ಮುಂದ ಮುಂದ ಹೆಂಗ ಮಾಡ್ರಿ ಅಂದ್ರ,
' ದೇವರ ಹುಂಡಿಗ' ರೊಕ್ಕ ಹಾಕು ಬದಲು, ' ಕಾರ್ಡ್ ಸಿಸ್ಟಮ್' ಮಾಡ್ರೀ...
ಅದೂ ಕೆಲವು ಕಡೆ ಇದೆ, ಮುಂದೆ ಎಲ್ಲ ಕಡೆ ಆಗುತ್ತೆ. ಅಂದ..!!

ಹಾಂ.!
ಹಂಗಂದ್ರ, ಇನ್ನೊಂದಿಷ್ಟು ಅದಕ್ಕ ಸೇರಸ್ರಿ..

ಹಾಲಿನ ರೊಕ್ಕ, ಸಣ್ಣ ಕಿರಾಣಿ ಅಂಗಡಿ, ಕಟ್ಟಿಂಗ್ ದುಕಾನ,
ಚಪ್ಲಿ ದುಕಾನ್, ಬೀಡಾ ಅಂಗಡಿ, ಮನೀ ಬಾಡಗಿ,
ಮಕ್ಕಳ ಸಾಲಿ/ ಟ್ಯುಶನ್ ಫೀಸ್,,,

ವ್ಯವಸಾಯ ಮಾಡೋ ರೈತರಿಗೂ ಒಂದೊಂದು ಕಾರ್ಡ್ ಕೊಡ್ರಿ.. ಅಕ್ಕಿ, ಜೋಳ, ರಾಗಿ,,,
ಎಲ್ಲದಕ್ಕೂ ಮತ್ತ "ಪ್ರೀ ಪೈಡ್/ ಪೋಸ್ಟ್ ಪೈಡ್ ಮಾಡ್ರಿ...!


ಅಣ್ಣ ಒಮ್ಮ ನನಗ ನೋಡಿ, ಸಣ್ಣಗೆ ನಕ್ಕ, ಸ್ವಲ್ಪ ಸರೀ ಅನಸ್ಲಿಲ್ಲ ನನಗ..
ಆ ನಗುವು ನನಗ ಒಂತರ ಸಿಟ್ಟು ತರಸ್ತು..


ಕಡೀಗ ' Public Toilet' ನು ಬಿಡಬ್ಯಾಡ್ರಿ..

ಒಂದಕ್ಕ ಹೋದ್ರ ಇಷ್ಟು, ಸಂಡಾಸ್ ಹೋದ್ರ ಇಷ್ಟು..
ಅದರಾಗ್ 'ಮಂತ್ಹ್ಲಿ ಸ್ಕೀಮ್, ಹಂಗ ಮೂರೂ/ಆರು/ವರುಷದ ಚಂದಾದಾರರಾಗಿ.. "
ಅಂತ ಹಾಕ್ರಿ..!!


ಅದು ಒಂದ ದಿನ ಬರುತ್ತೆ.. !!
ಕಣ್ಣಲ್ಲಿ ಕಣ್ಣಿಟ್ಟು ಅಷ್ಟೇ ನಾ..? ಮುಂದೆ ಕೇಳು..


ಅಲ್ಲೇ ಇದ್ದ " ಹಳೇ ಪೇಪರ್ " ದುಕಾನ್ ನೋಡಿ, ಗಂಭೀರವಾಗಿ ಹೇಳ್ದೆ..
ಅಣ್ಣ, " ನಿಮ್ಮ ಮಂದಿ ಗ , ಹಳೇ ಪೇಪರ್ ಮಾರೋ 'ಫೆಸಿಲಿಟಿ ' ಹ್ಯಾಂಗಿರಬೇಕು ಅಂದ್ರ..


"..... group of old papers" Pvt limited.


for more details visit
www.----.com
OR
"call our 24/7 toll free no 1800 --- --- "


Give 10kg of old papers and get 11kg paper's price..


Take 10kg of old paper and get 1 kg absolutely free..!


Cash back offer, --% profit, door delivery........


ಮತ್ತ ಅಲ್ಲಿಗೆ ಬಿಡಬ್ಯಾಡ್ರಿ..
ನಾವು ಇಂತಿಂತ "ಪೇಪರ್" ಜೋಡಿ " ಟೈ ಅಪ್ " ಮಾಡಿವಿ..
ನೀವು ಆ ಪೇಪರ್ ತೊಗೊಂಡ್ರ ನಿಮಗ ವರ್ಷಕ್ಕ ಇಷ್ಟ 'ರಿಯಾಯತಿ'
ಮತ್ತ ನಾವು ಆ ಪೇಪರ್ ಗ ಜಾಸ್ತಿ ರೊಕ್ಕ ಕೊಡ್ತೀವಿ...!!


"ಅಣ್ಣ, ಇವೂ ಮಾಡ್ರಿ... ಬಿಡಬ್ಯಾಡ್ರಿ...!"


ನೋಡೋ..
ಆಗುತ್ತೆ..! ನೀ ಇಷ್ಟೊತ್ತು ಹೇಳ್ದೆ ಅಲ್ಲ ,
ಅದಕ್ಕೂ ಒಂದು ಕಾಲ ಬರುತ್ತೆ.. !!
ಚಿಕ್ಕ ಪುಟ್ಟ ಅಂಗಡಿ ಇಂದ, ರಸ್ತೆ ಪಕ್ಕ ಮಾರೋ 'ಬೋಂಡ /ಬಜ್ಜಿ ' ಅಂಗಡಿ ಇಂದ,
ಸಾರ್ವಜನಿಕ ಶೌಚಾಲಯಕ್ಕು.. ಬರುತ್ತೆ..!



ದೇವಸ್ತಾನಕ್ಕೆ ಅಂದಿಯಲ್ಲ..?

ದೇವಸ್ತಾನ ಅಲ್ಲ, ಮನೆಯಲ್ಲಿ ಆಗುವ ಚಿಕ್ಕ-ಪುಟ್ಟ ಕಾರ್ಯಕ್ರಮ,
ಮದುವೆ ಗೆ ಕಾಣಿಕೆ ಆಗಿ ದುಡ್ಡು ಕೊಡತಾರಲ್ಲಾ...?
ಅಲ್ಲಿಗೂ "ಕ್ರೆಡಿಟ್ /ಡೆಬಿಟ್ ಕಾರ್ಡ್ ಬರ್ತಾವೆ..!


ಬಿಲ್ಲಿನಿಂದ ಬಿಟ್ಟ ಬಾಣಿನ ಹಂಗ ಇತ್ತು, ಅವನ ಉತ್ತರ .. !


ಸ್ವಲ್ಪ ಹೊತ್ತು ನನಗ ಏನ್ ಹೇಳ್ಬೇಕು, ಏನ್ ಕೇಳಬೇಕು ಗೊತ್ತಾಗ್ಲಿಲ್ಲಾ.!
ಸುಮ್ನ ಅವನೀಗ ನೋಡಿ ಕೇಳ್ದೆ.. " ಮತ್ತ ಬಿಕ್ಷುಕರು..?"

ಗೊತ್ತಿಲ್ಲ ಅನ್ನೋ ಅರ್ಥ ಬರಂಗ..
ತುಟಿ ಒತ್ತಿ ಹಿಡಿದು, ಎರಡು ಹುಬ್ಬು ಒಮ್ಮೆಲೇ ಮ್ಯಾಲ ಮಾಡದ..!!


ನಾ ಸಣ್ಣಗ ಅನ್ಕೊಂಡೆ
ಅವರಿಗೊಂದೊಂದು "ಕಾರ್ಡ್ ಮಶೀನು" ಅಂತ ನಮ್ಮ ಸರಕಾರ ಕೊಟ್ಟರ,,,
ಆಶ್ಚರ್ಯ ಇಲ್ಲ ಬೀಡು..?


ಕಡೀಗ ನನ್ನ ತಲ್ಯಾಗ ಉಳದಿದ್ದ್ ಒಂದೇ,


"
ಇದೆಲ್ಲ ನಮ್ಮ ವಿಕಾಸಕ್ಕೋ, ವಿನಾಶಕ್ಕೋ..?"
ನಮ್ಮ ಜೀವನ ಎಲ್ಲಿ ಹೊಂಟೈತಿ...?



ಹೀಂಗ ಆದ್ರ ಹ್ಯಾಂಗ್...?