Apr 12, 2011

"ಟ್ರಾಫಿಕ್ ಜಾಮಿನಲ್ಲಿ ಒಂದು, ಎರಡು, ಮೂರೂ . . ."

ನನಗೆ ಮತ್ತು ನನ್ನ ಕೆಲವು ಫ್ರೆಂಡ್ ಗಳಿಗೆ ಇಂಥದ್ದೊಂದು ಖಯಾಲಿಯಿದೆ - ಫುಟ್ ಪಾತಿನಲ್ಲಿ ಟೀ ಕುಡಿಯುತ್ತಿರುವಾಗ, ಬಸ್ಸಿಗೆ ಅಥವಾ ಇನ್ನೊಬ್ಬ ಫ್ರೆಂಡಿಗೆ ಕಾಯುತ್ತಿರುವಾಗ, ಟ್ರಾಫಿಕ್ ಜಾಮ್ ಆದಾಗ ಸುಮ್ಮನೆ ಒಂದು ಪಂಧ್ಯ ಕಟ್ತೀವಿ. ನಾವು ಸೆಲೆಕ್ಟ್ ಮಾಡಿದ ಕಾರುಗಳನ್ನ,ಹುಡುಗಿಯರನ್ನ ಎಣಿಸುವುದಷ್ಟೇ ಆ ಪಂಧ್ಯದ ಪ್ರೋಸೆಸ್ , ಈವರೆಗೂ ಅಪ್ಪಿತಪ್ಪಿಯೂ ಹುಡುಗರನ್ನ ಎಣಿಸುವ ಬಗ್ಗೆ ಯೋಚನೆ ಮಾಡಿಲ್ಲ .ಕಾರುಗಳಲ್ಲಿ ಇಂಡಿಕಾ, ಮಾರುತಿ,ಸ್ಕೋಡ ಮತ್ತು ಇತ್ಯಾದಿಗಳು; ಹಾಗೆಯೇ ಹುಡುಗಿಯರಲ್ಲಿ ಜೀನ್ಸ್ ಹುಡುಗಿ, ಚೂಡಿದಾರ್ ಹುಡುಗಿ, ಬಿಂದಿ ಹುಡುಗಿ ಮತ್ತು ಇತ್ಯಾದಿಗಳು, ರೋಡಿನುದ್ದಕ್ಕೂ ಹರಿದಾಡುವ ಇವುಗಳಲ್ಲಿ ಒಬ್ಬೊಬ್ಬರು ಯಾವುದಾದರೊಂದನ್ನ ಸೆಲೆಕ್ಟ್ ಮಾಡಿ ಕೌಂಟ್ ಮಾಡ್ತಾಯಿರ್ತಿವಿ ಕಾಯುತ್ತಿರುವ ಬಸ್ ಅಥವಾ ಫ್ರೆಂಡ್ ಬರೋವರ್ಗೂ!

ಇಂಡಿಕಾ: ಒಂದು, ಎರಡು, . . .
ಮಾರುತಿ: ಒಂದು,ಎರಡು, . . .

ಅಥವಾ

ಜೀನ್ಸ್: ಒಂದು, ಎರಡು , . . .
ಚೂಡಿ: ಒಂದು, ಎರಡು, . . . .

ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಈ ಪಂಧ್ಯ ಮುಗಿಯುತ್ತೆ, ಅಷ್ಟರಲ್ಲೇ ಅದು ಮೂಡಿಸುವ ಆನಂದದ ನಗುವಿನ ಮಾತೆ ಬೇರೆ. ಇಲ್ಲಿ ಹೆಚ್ಚು ಕೌಂಟ್ ಇದ್ದವನಿಗೆ ಏನೂ ಮಟಿರಿಯಲಿಷ್ಟಿಕ್ ಲಾಭಯಿಲ್ಲ, ಕಡಿಮೆ ಕೌಂಟ್ ಇದ್ದವ ಏನನ್ನೂ ಕಳೆದುಕೊಳ್ಳುವುದಿಲ್ಲ; ಇಬ್ಬರಿಗೂ ಅದು ಒಂದು ಪುಟ್ಟ ಸಂತೋಷದ ಕ್ಷಣವಷ್ಟೇ . ನಾವು ಕಾರನ್ನ ಯಾವಾಗ ಖರೀದಿಸ್ತಿವೋ ಗೊತ್ತಿಲ್ಲ , ಕೆಲವು ಹುಡುಗಿಯರು ಬಂದು ಹೋದರು ಆದ್ರೆ ಬಾಳಸಂಗಾತಿಯಾಗುವವಳು ಎಲ್ಲಿದ್ದಾಳೋ ಏನೋ ; ಅಸಲಿಗೆ ಅವಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಸಹ ಇಲ್ಲ ! ಅದರೂ ಕೌಂಟ್ ಮಾತ್ರ ಬಿಡಲ್ಲ .ನೀವು ಈ ರೀತಿಯ ಪಂಧ್ಯ ಬೆಂಗಳೂರಿನಲ್ಲಿ ಕಟ್ಟಿದ್ರೆ ಬೇಗ ಇಂಡಿಕಾ ಕಾರನ್ನೋ ಅಥವಾ ಜೀನ್ಸ್ ಹುಡುಗಿಯನ್ನೋ ಸೆಲೆಕ್ಟ್ ಮಾಡಿ ನೀವೇ ಗೆಲ್ತೀರ ಯಾಕೆಂದರೆ ಇವೆರಡೂ ರೋಡಿನಲ್ಲಿ ಜಾಸ್ತಿ ಕಾಣಸಿಗ್ತವೆ.

ಫ್ರೆಂಡ್ಸ್ ಜೊತೆ ತಿರುಗಾಡುತ್ತಾ , ಹರಟುತ್ತಾ , ಕಾರಣವಿಲ್ಲದೆ ಏನನ್ನೋ ಹುಡುಕುತ್ತ , ಯಾವುದೋ ಹುಡುಗಿ ಯಾವುದೋ ಕಾರಣಕ್ಕೆ ಕಿಸಕ್ ಅಂತ ನಕ್ಕಾಗ ಸಂಬ್ರಮಿಸುತ್ತಾ ಸುತ್ತಮುತ್ತಲಿರುವ ಪಾನಿಪುರಿ, ಟೀ ಸ್ಟಾಲ್, ಚಾಟ್ಸ್ ಸೆಂಟರ್ , ಲೇಡಿಸ್ ಹಾಸ್ಟೆಲ್ (ಹೊರಗಡೆ ), ಬ್ಯಾಚುಲರ್ಸ್ ರೂಮ್ (ಒಳಗಡೆ ), ಲೇಟ್ ನೈಟ್ ಕ್ಯಾಂಟೀನ್ ಗಳಲ್ಲಿ ನಡೆಯುವ ಚಿಕ್ಕ ಚಿಕ್ಕ ಇನ್ಸಿಡೆಂಟ್ ಗಳನ್ನ ಎಂಜಾಯ್ ಮಾಡ್ತೀವಿ . ಅಷ್ಟಾಗಿ ಜನರಿರದ ಜಾಗ, ಸಂಜೆ ಗಾಳಿ , ಬಿಸಿ ಬಿಸಿ ಮಿರ್ಚಿ -ಟೀ , ಸ್ವಲ್ಪ ದೂರದಲ್ಲಿ ಕುಳಿತು ಆಪ್ತತೆ,ಸಲುಗೆಯಿಂದ ಮಾತಾಡುವ ವೃದ್ದ ದಂಪತಿಗಳು, ಕೆಲವು ಪ್ರೇಮಿಗಳ ಹುಸಿ ಕೋಪದಾಟ, ಜಗಳ, ಅಹಂ, ಎಂಜಲನ್ನ ಹಂಚಿಕೊಳ್ಳುವ ಪರಿ, ಮತ್ತಷ್ಟು ಮತ್ತಷ್ಟು; ಹೀಗೆ ಸಾಧ್ಯವಾದಷ್ಟು ಎಲ್ಲ ಸಂಗತಿಗಳನ್ನ ಆಸ್ವಾಧಿಸುವ ಪ್ರಯತ್ನ ಸಾಗುತ್ತಲೇಯಿರುತ್ತೆ.

ಎಲ್ಲ ಅಂದ -ಚೆಂದಗಳ ನೋಡುತ್ತ,ಕೇಳುತ್ತ ಇನ್ನೇನು 'ಲೈಫ್ ಈಸ್ ಬ್ಯೂಟಿಫುಲ್' ಅಂದು ಮುಗಿಸುವಷ್ಟರಲ್ಲಿ ನಮ್ಮ ಕಣ್ಣೆದುರಿಗೆ ಘಟಿಸಿಬಿಡುವ ಅಸಭ್ಯ,ಅಸಹಜ,ಅಶ್ಲೀಲ ಘಟನೆಗಳು ನಮ್ಮನ್ನ ಕದಡಿಬಿಡುತ್ತವೆ, ನಾವು ಅಸಹಾಯಕತೆ ಎಂಬ ಹೆಬ್ಬಾಗಿಲ ಮುಂದೆ ಮಂಡಿಯೂರಿ ಕೂತುಬಿಟ್ಟಿರ್ತಿವಿ. ನಮಗೆ ಆಗ ಏನೂ ಮಾಡೋಕಾಗಲ್ಲ ಮ್ಯಾಕ್ಸಿಮಮ್ ಅಂದ್ರೆ 'ಛೇ', 'ಥೂ' ಅನ್ನಬಹುದು. ಈ ರೀತಿಯೂ ಆಗುತ್ತೆ ಅಂತ ನಮಗೊಂದು ಸಣ್ಣ ಉಹೆ ಕೂಡ ಇರಲ್ಲ, ಆದ್ರೆ; ಅಂತದೊಂದು ಇನ್ಸಿಡೆಂಟ್ ಗೆ ಅನಾಮತ್ತು ಸಾಕ್ಷಿಯಾಗಿಬಿಡ್ತೀವಿ. ದಾಖಲೆಗಳಿರುವುದಿಲ್ಲ!

ಘಟನೆ ೧ : ಸಿಲ್ಕ್ ಬೋರ್ಡ್-ಬೆಂಗಳೂರು; ಅಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು,ಸುಮ್ಮನೆ ರೋಡಿನ ಒಂದು ಪಕ್ಕ ನಿಂತು ಗಮನಿಸುತ್ತಿದ್ದೆ.'ಈ ಟ್ರಾಫಿಕ್ ನಲ್ಲಿ ಕಾರು-ಗೀರು ಬೇಕಾ? ಬಿಎಂಟಿಸಿ ಬಸ್ ಬೆಷ್ಟು'ಅಂದುಕೊಳ್ಳುತ್ತಿದ್ದೆ. ನಿಮಗೆಲ್ಲ ಗೊತ್ತಿರೋ ಹಾಗೆ ಆ ಟ್ರಾಫಿಕ್ ನಲ್ಲೇ ಬಲೂನುಗಳನ್ನ, ಪ್ಲಾಸ್ಟಿಕ್ ಬೊಂಬೆಗಳನ್ನ ಮಾರಾಟ ಮಾಡ್ಲಿಕ್ಕೆ ಕೆಲವು ಮಕ್ಕಳು ಬರ್ತಾರೆ. ಹಾಗೆ ಕೈಯ ತುಂಬ ಬಲೂನು ಹಿಡಿದು ಮಾರಲಿಕ್ಕೆ ಬಂದ ಸುಮಾರು ಹತ್ತು ವರ್ಷದ ಹುಡುಗನಿಗೆ ಕಾರಿನಲ್ಲಿ ಕೂತವಳು ಎರಡು ಮಾತು ಬೈಯ್ದಿದ್ದರೂ, ತನ್ನ ಪಾಡಿಗೆ ತಾನು ಸುಮ್ಮನೆ ಕೂತಿದ್ದರೂ, ಡೋರ್ ಗ್ಲಾಸ್ ಮೇಲೇರಿಸಿಕೊಂಡಿದ್ದರೂ ನಾನಿದನ್ನ ಬರೆಯುತ್ತಿರಲಿಲ್ಲ. ಕಾರಿನಲ್ಲಿ ಕೂತಿದ್ದ ಆಕೆ ಮಾಡಿದ್ದೇನು ಗೊತ್ತ?-ತಾನು ಧರಿಸಿದ್ದ ಕೆಂಪು ಬಣ್ಣದ ಟೀ -ಶರ್ಟ್ ಅನ್ನು ಮೇಲಕ್ಕೆತ್ತಿ, ಬ್ರಾ ಮುಚ್ಚಿದ ಸ್ತನಗಳನ್ನ ತೋರಿಸಿದಳು ಇನ್ನು ಹತ್ತು ಮೀರದ ಆ ಹುಡುಗನಿಗೆ. 'ಹೆಣ್ಣನ್ನ ಪೂಜಿಸುವಲ್ಲಿ ದೇವತೆಗಳಿರುತ್ತಾರೆ' ಅನ್ನೋ ಮಾತಿದೆ ಆದರೆ 'ಎಂಥಹ ಹೆಣ್ಣನ್ನ ಪೂಜಿಸಬೇಕು?' ಬಹುಶಃ ಇದು ಅವರವರ ಭಾವಕ್ಕೆ, ಬಕುತಿಗೆ ಬಿಟ್ಟ ವಿಚಾರ.

ಘಟನೆ ೨ : ವೆಸ್ಟ್ ಆಫ್ ಕಾರ್ಡ್ ರೋಡ್-ಬೆಂಗಳೂರು; ವಿಜಯನಗರದಿಂದ ರಾಜಾಜಿನಗರಕ್ಕೆ ಸಿಟಿ ಬಸ್ಸಿನಲ್ಲಿ ಹೋಗ್ತಾಯಿದ್ದಾಗ ಜೊತೆಗೆ ಯಾವ ಫ್ರೆಂಡ್ ಇರಲಿಲ್ಲವಾದ್ದರಿಂದ ಕಿಟಕಿಗೆ ತಲೆಯೋರಗಿಸಿ ಕೂತಿದ್ದೆ. ಒಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಹಸಿರು ನಿಶಾನೆಗಾಗಿ ನಿಂತಿತು ಬಸ್. ಸರಿಯಾಗಿ ಕೂತು ಬಾಲ್ಕನಿಯಿಂದ ಕೆಳಗೆ ನೋಡಿದಂತೆ ಕಿಟಕಿಯಿಂದಾಚೆ ಕಾಣುವ ಕಾರುಗಳನ್ನ ನೋಡ್ತಾಯಿದ್ದೆ, ಕಾರಿನ ಡ್ರೈವಿಂಗ್ ಸೀಟಿನಲ್ಲಿರುವ ವ್ಯಕ್ತಿಯ ಕಾಲು, ಹೊಟ್ಟೆಯ ಭಾಗ ಮಾತ್ರ ನನಗೆ ಕಾಣುತ್ತಿತ್ತು . ಹಾಗೆ ಕಾರುಗಳನ್ನ ನೋಡುತ್ತಿರುವಾಗಲೇ ; ಕೆಲವು ವಸ್ತುಗಳನ್ನ ಮಾರಲು ಬಂದ ಅಪ್ರಾಪ್ತ ಹುಡುಗಿಗೆ ಕಾರಿನಲ್ಲಿ ಕೂತ ಗಡವ ಪ್ಯಾಂಟಿನ ಜಿಪ್ಪೆಳೆದು ತನ್ನ ಗುಪ್ತಾಂಗ ತೋರಿಸುತ್ತಿದ್ದದ್ದನ್ನ ನೋಡಿದೆ. ನನ್ನ ಅಂದಾಜಿನ ಪ್ರಕಾರ ಆ ಅಮಾಯಕ ಹುಡುಗಿಗೆ ಹೆಚ್ಚು ಅಂದ್ರೆ ಹದಿನೈದು ವರ್ಷ ವಯಸ್ಸಿರಬಹುದು.

ಮನೋವಿಕಾರತೆಯನ್ನು ತೋರ್ಪಡಿಸುವ ಈ ಎರಡು ಘಟನೆಗಳನ್ನ ನಾನು ಕಣ್ಣಾರೆ ನೋಡಿದ್ದೇನೆ. ಸ್ತನಗಳನ್ನ ತೋರಿಸಿದ ಹೆಣ್ಣು ಮತ್ತು ತನ್ನ ಗುಪ್ತಾಂಗ ತೋರಿಸಿದ ಗಂಡು ಇಬ್ಬರೂ ಕಾರಿನಲ್ಲಿದ್ದರು ಅಂದ್ರೆ ಅವರು ತಕ್ಕ ಮಟ್ಟಿಗೆ ಒಳ್ಳೆಯ ವೃತ್ತಿಯಲ್ಲಿರುತ್ತಾರೆ, ಸಾರ್ವಜನಿಕ ರಸ್ತೆಗಳಲ್ಲಿ ಹೀಗೆ ಅಸಭ್ಯವಾಗಿ ವರ್ತಿಸುವ ಇವರು ತಾವು ಕೆಲಸ ಮಾಡುವಲ್ಲಿ ಹೇಗಿರ್ತಾರೆ? ತಮ್ಮ ಮನೆಗಳಲ್ಲಿ ಹೇಗಿರ್ತಾರೆ? ಇವರ್ಯಾಕೆ ಹೀಗೆ? ಆ ಎಳೆ ಮಕ್ಕಳ ಮೇಲೆ ಇದೆಂತಹ ಕಾಮದರ್ಪ? ಆ ಮಕ್ಕಳ ಮನಸಿನ ಮೇಲೆ ಇದೆಂತಹ ಪರಿಣಾಮ ಬೀರುತ್ತೆ? ಆ ಮಕ್ಕಳು ವಸ್ತುಗಳನ್ನ ಮಾರಲು ಬಂದಾಗ ಹೀಗೆ ಅಸಭ್ಯವಾಗಿ,ಅಶ್ಲೀಲವಾಗಿ ವರ್ತಿಸುವ ಅವಶ್ಯಕತೆ ಇತ್ತಾ?

ತಲ್ಲಣ, ಅಶ್ಲೀಲತೆ, ಯೋಚನೆ , ಕನಸು, ಆನಂದ, ಕಣ್ಣೀರು, ಮೊದಲ ಭೇಟಿ, ತಿರಸ್ಕಾರ, ಬೇರೊಬ್ಬನೊಂದಿಗೆ ಅವಳ ಮದುವೆ, ಗೆಳೆಯರ ಗುಂಪು, ಟೀ - ಸಿಗರೇಟು, ಅವಳನ್ನ ಅದೆಷ್ಟೇ ಮರೆತೆನೆಂದರೂ ನೆನಪಾಗುವ ಬಚ್ಚಿಟ್ಟುಕೊಂಡ ಅವಳ ಫೋಟೋ, ಪ್ರತಿಬಾರಿ ಬೇರೆಯದೇ ಮುಖ ತೋರಿಸುವ ಜಗತ್ತು -ನಾಗರೀಕ ಸಮಾಜ, 'ನೀನು ಅಸಹಾಯಕ ' ಅಂತ ಸಾರಿ ಹೇಳುವ ಬದುಕು ; ತಲೆಯ ತುಂಬಾ ಚಿತ್ರ -ವಿಚಿತ್ರ ಭಾವಗಳ ಟ್ರಾಫಿಕ್ ಜಾಮ್.

ಇದೆಲ್ಲದರ ನಡುವೆ ; ಜೊತೆಗೆ ಓದಿದ ಹುಡುಗಿಯ ಮದುವೆಯಲ್ಲಿ ಸಡಗರದಿಂದ ಅಕ್ಷತೆ ಹಾಕುವ ಕೈಗಳ ಮಧ್ಯ ಶಕ್ತಿಗುಂದಿದ, ನಿರಾಶೆಗೊಂಡ ಗೆಳೆಯನ ಕೈಯೊಂದನ್ನ ನೋಡಿದ ಕೂಡಲೇ ಕರುಳು ಹಿಂಡಿದ ಅನುಭವ. ಹಾಡದೆ ಉಳಿದ ಗೆಳೆಯನ ಯಶಸ್ವಿಯಾಗದ ಪ್ರೇಮಗಾನದ ಆಲಾಪನೆಯಲ್ಲಿಯೇ; ಅವಳು ಈಗ ತಾನೇ ತಾಳಿ ಕಟ್ಟಿದ ಸಂಗಾತಿಯೊಂದಿಗೆ ಪಯಣಿಸುವ, ಗುಲಾಬಿ ಹೂವಿನಿಂದ ಅಲಂಕೃತಗೊಂಡ ಸ್ಕೋಡ ಕಾರಿನ ಹತ್ತಿರವೇ ನಡೆದು ಹೋಗಿ ಮತ್ತದೇ ಸಿಟಿ ಬಸ್ಸಿಗಾಗಿ ಕಾಯುತ್ತಾ ನಿಲ್ಲುವ ಮುನ್ನ- ಗೆಳೆಯ ಕಡೆಯ ಸಲ ಎಂಬಂತೆ ಕಲ್ಯಾಣ ಮಂಟಪವನ್ನೊಮ್ಮೆ ತಿರುಗಿ ನೋಡಿದ. 'ಸಾಕು ಬಾ ' ಎಂಬರ್ಥದಲ್ಲಿ ಅವನ ಭುಜದ ಮೇಲೆ ಕೈ ಹಾಕಿ ರೋಡಿನ ಕಡೆ ತಿರುಗಿಸಿಕೊಳ್ಳುವಾಗ ನನ್ನ ಕಣ್ಣೂ ಹಸಿ .

ಅದೆಷ್ಟೇ ಕಷ್ಟ ಆದರೂ, ಅದೆಷ್ಟೇ ಅಂದ -ಚೆಂದ ಅಥವಾ ಅಸಭ್ಯವೋ, ಅಸಹಜವೋ ಕಂಡರೂ ನಾವು ಒಂದು ಹನಿ ಸಂತೋಷಕ್ಕಾಗಿ ಮೋಡಕ್ಕೆ ನಾಲಿಗೆ ಚಾಚ್ತೀವಿ, ಕಣ್ಣು ತೆರೆದು ಕರೀತಿವಿ -'ನೀನು ಬಾ , ಗೆಳೆಯ '.
ಮತ್ತೆ ಮತ್ತೆ ಕೌಂಟ್ ಮಾಡ್ತೀವಿ -

ಇಂಡಿಕಾ: ಒಂದು, ಎರಡು, ಮೂರು. . .
ಮಾರುತಿ: ಒಂದು,ಎರಡು, ಮೂರು. . .

26 comments:

  1. ನಾಗ್...ನಿಜ ನಿಮ್ಮ ಮಾತು ನಮ್ಮ ಮೆಟ್ರೋ ಸಂಸ್ಕೃತಿಯ ತಿರುವು ಬಹಳ ಅಪಾಯಕಾರಿ ಆಗ್ತಿದೆ..ಪಬ್, ಡಬ್ ಅನ್ನೋ ಸ್ಂಸ್ಕೃತಿಯ ಕೌಟುಂಬಿಕ ಹಿನ್ನೆಲೆಯ ಹೆಣ್ಣು ಮಗಳು ಅಥವಾ ಲಂಗಿಲ್ಲದೇ ಬೆಳೆದ ಗಂಡು ಮಕ್ಕಳಿಗೆ ಇವು ಬಹಳ ಸಹಜ ಅನಿಸಿರಬಹುದು...ನಮಗೆ ಅಶ್ಲೀಲ ಮತ್ತು ಅತಿರೇಕ, ಅದೇ ಹಳ್ಳಿ ಮುಗ್ಧರು ನೋಡಿದ್ರೆ...ಹುಚ್ಚ ಅನ್ನೋದಂತೂ ನಿಜ....ನಮ್ಮ ಅಂತಹುಗಳನ್ನು ನೋಡುವ ದೃಷ್ಠಿ ನೋಡು ಹೇಗೆ ಬದಲಾಗುತ್ತೆ...?? ಇದಕ್ಕೆ ಕಾರಣರು ನಾವೇ...ಏನನ್ನೋ ಸಾಧಿಸುವ ಭರದಲ್ಲಿ ಅಮೂಲ್ಯವಾದ ನಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ...ಸಭ್ಯತೆ ಮೀರುತ್ತಿದ್ದೇವೆ.....
    ಈ ದೃಶ್ಯಗಳು ಇನ್ನೂ ಸಾಮಾನ್ಯ ಆಗುವ ಬರುವ ದಿನಗಳನ್ನು ಕಲ್ಪಿಸಿಕೊಂಡರೆ ಭಯವೆನಿಸುತ್ತೆ....
    ಚನ್ನಾಗಿದೆ...ವೈಚಾರಿಕತೆಗೆ ಮಂಥನಕ್ಕೆ ಲೇಖನ...

    ReplyDelete
  2. ನಾಗರಾಜ್;'ಟ್ರ್ಯಾಫಿಕ್ ಜಾಮ್ ನಲ್ಲಿ ಒಂದು ,ಎರಡು ,ಮೂರು,'ನಿಜಕ್ಕೂ ಅದ್ಭುತ ಹಾಗೂ ಅಪರೂಪದ ಸುಂದರ ಬರಹ.ಒಂದೆಡೆ ಮನ ಕಲಕುವಂತಹ ಸಾಲು ಗಳಿದ್ದರೆ,ಕೆಲವು ಅತ್ಯಂತ ಚೇತೋಹಾರಿಯಾಗಿವೆ.ಒಟ್ಟಾರೆ ಬೆಂಗಳೂರಿನ ಅನುಭವಗಳ ಒಂದು ಸುಂದರ ಮಿನಿ ಚಿತ್ರಣ.ತಪ್ಪದೆ ಯಾವುದಾದರೂ ಪತ್ರಿಕೆಗೆ ಕಳಿಸಿ.

    ReplyDelete
  3. ನಾಗರಾಜ್..

    ಚಿಂತನೆಗೆ ಹಚ್ಚುವ ಬರಹ..
    ತುಂಬಾ ಚೆನ್ನಾಗಿ ಮೂಡಿ ಬಂದಿದೆ...

    ReplyDelete
  4. @ಆಜಾದ್ ಸರ್, ಮೂರ್ತಿ ಸರ್, ಪ್ರಕಾಶ್ ಮಾಮ :: ನಿಮ್ಮೆಲರ ಕಾಮೆಂಟ್ ಗೆ ತುಂಬಾ ತುಂಬಾ ಥ್ಯಾಂಕ್ಸ್. ಹಳ್ಳಿಗಳಲ್ಲಿ, ದೊಡ್ಡದಲ್ಲದ ಊರುಗಳಲ್ಲಿ, ಕೆಲವು ಲಿಮಿಟೇಶನ್ ಗಳಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ / ಹುಡುಗಿಯರಿಗೆ ಮಹಾನಗರಗಳು ಮೊದಮೊದಲು ಹೆದರಿಸುತ್ತವೆ. ಕಣ್ಣು ತುಂಬಾ ಕನಸು ಹೊತ್ತು ಬಂದಾಗ ಏನು ಮಾಡಲು ಒಂದು ತೆರನಾದ ಹಿಂಜರಿಕೆಯಿರುತ್ತೆ. ಒಳೋಳಗಿನ ತಲ್ಲಣಗಳಿಗೆ ನಿಮ್ಮಂತ ಹಿರಿಯರ ಸ್ಪಂದನೆ, ಮುನ್ನೆಡೆವಂತೆ ಹೇಳುವ ಪ್ರೋತ್ಸಾಹದ ಮಾತುಗಳು ಅವಶ್ಯಕ, ಆ ವಿಷಯದಲ್ಲಿ ನೀವು ಬತ್ತದ ಸೆಲೆ. ಮತ್ತೊಮ್ಮೆ ನಿಮಗೆ ಥ್ಯಾಂಕ್ಸ್.
    ಪ್ರೀತಿಯಿಂದ ನಾಗರಾಜ್

    ReplyDelete
  5. ನಾಗರಾಜ್ ,
    ವಿಚಾರ ಮಂಥನಕ್ಕೆ ಎಡೆ ಮಾಡುವ ಲೇಖನ. ಇದು ಬೆಂಗಳೂರಿನಲ್ಲಿ ಕಾಣುತ್ತಿರುವ ನಗ್ನ ಸತ್ಯ....

    ReplyDelete
  6. so nagaraj you are giving a totally differnt picture of bangalore. i dont know what to say

    ReplyDelete
  7. ನಾಗರಾಜ್,
    ನಿಮ್ಮ ಬರಹದಲ್ಲಿನ ಎರಡು ವಿಭಿನ್ನ ಅನುಭವಗಳು ವಿಚಿತ್ರವೆನಿಸಿದವು. ಸಭ್ಯ ನಾಗರಿಕರೆನಿಸಿಕೊಳ್ಳುವ ಮಂದಿಯ ಇ೦ತಹ ಪ್ರವೃತ್ತಿ (ನೀವು ಉಲ್ಲೇಖಿಸಿ ದ೦ತೆ "ಕಾಮದರ್ಪ") ಆಜಾದ್ ಭಾಯಿ ಹೇಳಿದ೦ತೆ ಮೆಟ್ರೋ ಸ೦ಸ್ಕ್ರತಿಯ ಕೊಡುಗೆ ಇರಬಹುದು.ಇದು ಅತ್ಯ೦ತ ಹೇಯ. ನಾವೆಲ್ಲಾ ಕಾರುಗಳ ನ೦ಬರ್ ಎಣಿಸಿ ಕೊನೆಗೆ ಬರುವ sum total ಮೊದಲೇ ಊಹಿಸಿ ಹೇಳುವ ಸ್ಪರ್ಧೆ ಇಟ್ಟುಕೊಳ್ಳುತ್ತಿದ್ದೆವು. ಅದು ಅ೦ಬಾಸಡರ್ ಕಾರಿನ ಕಾಲ. ಮಾರುತಿ-ಇ೦ಡಿಕಾ ಗಳು ಹುಟ್ಟಿರಲಿಲ್ಲ. ಚೆನ್ನಾಗಿದೆ ಬರಹ.

    ReplyDelete
  8. ಇದು ಬೃಹತ್ ಬೆಂಗಳೂರು,ಇಲ್ಲಿ ನಮ್ಮ ಸಂಸ್ಕೃತಿ ಮತ್ತು ಅದರ ಮೌಲ್ಯಕ್ಕೆ ಬೆಲೆ ಇಲ್ಲದಂತಾಗಿದೆ,ಅದಕ್ಕೆ ಈ ಎರಡು ನಿದರ್ಶನಗಳು ಸಾಕು...
    ಇಲ್ಲಿ ಇನ್ನು ಏನೇನನ್ನು ನೋಡಬೇಕಾಗಿದೆಯೋ ಏನೋ?

    ReplyDelete
  9. ನಾಗು,
    ನಿಮ್ಮ ಎರಡು ಬರಹಳಲ್ಲಿ ವಿಭಿನ್ನತೆ ಇದೆ.... ನಿಜಕ್ಕೂ ಭಯವಾಯಿತು ಈ ರೀತಿಯ ಜನರೂ ಇದ್ದಾರ ಎಂದು. ನನಗೆ ಇನ್ನೂ ನೆನಪು ಚಿಕ್ಕವರಿದ್ದಾಗ ಬೆಂಗಳೂರು ಎಷ್ಟು ಚೆಂದವಾಗಿತ್ತು ಜನ ಸಂದಣಿ ಇಲ್ಲ, ವಾಹನಗಳ ಕಾರುಬಾರಿಲ್ಲ ಎಲ್ಲೆಲ್ಲೂ ಪ್ರಶಾಂತತೆ ಮನೆ ಮಾಡಿತ್ತು. ಬೆಂಗಳೂರಿಗರಿಗೆ ಸ್ವರ್ಗವಂತಿತ್ತು ಆದರೆ ಈಗ ಬೆಂಗಳೂರಿಗರೇ ಇಲ್ಲದಂತಾಗಿ ಬಿಟ್ಟಿದೆ. ಹೊಸ ಸಂಸ್ಕೃತಿಯ ಭರಾಟೆಯಲ್ಲಿ ಎಲ್ಲಿಂದಲೋ ಬಂದು ನೆಲೆಸಿ, ಹೊಸ ಹೊಸ ಮುಖಗಳನ್ನು ಹೇಗೆ ನೋಡುತ್ತ ಬಂದಿದ್ದೇವೋ ಹಾಗೆ ಹೊಸತನದ ಒಳ್ಳೆತನ ಅಲ್ಲದ ವಿಚಿತ್ರ ಸಂಸ್ಕೃತಿ ಜೊತೆಗೆ ವಿಕೃತ ಮನೋಭಾವಗಳೂ ಹೆಚ್ಚಾಗುತ್ತಲಿವೆ... ಇದಕ್ಕೆ ಜನರೇ ಕಾರಣ ಇಲ್ಲಿ ಯಾವ ಸಂಸ್ಕೃತಿಯನ್ನೂ ಧೂಷಿಸಲಾಗದು... ನಾವುಗಳೇ ಸಂಸ್ಕೃತಿಗಳನ್ನ ಕಲಿಯುತ್ತಲಿರುವರು ನಮಗೆ ಕೆಟ್ಟದ್ದು ಒಳ್ಳೇಯದ್ದು ಯಾವುದು ಎಂದು ತಿಳಿಯುವ ಶಕ್ತಿ, ಜ್ಞಾನ ಇದೆ ಅದನ್ನ ಸರಿದಾರಿಯಲ್ಲಿ ತರಬೇಕಿದೆ ಅಷ್ಟೆ...
    ಬದಲಾವಣೆ ಇರಬೇಕು ಅದು ಒಳ್ಳೆಯತನದಲ್ಲಿದ್ದರೆ ಚೆಂದ.... ವಿಕೃತಬಾವ ನಿಜಕ್ಕೂ ಭಯ ಮೂಡಿಸಿದೆ....

    ReplyDelete
  10. ನಾಗರಾಜ,
    ನೀವು ಬರೆದ ಘಟನೆಗಳನ್ನು ಓದಿ, ನನಗೆ shock ಆಗ್ತಾ ಇದೆ. ನಮ್ಮ ನಾಗರಿಕತೆ ಇಷ್ಟು ಅಸಭ್ಯವಾಗಿದೆಯೆ?

    ReplyDelete
  11. ನಿಜ ನಾಗು.. ನಿಜಕ್ಕೂ ನಮ್ಮಂತಹ ಹುಡುಗರಿಗೆ ಭಯ ಹುಟ್ಟಿಸುವಂತ ಸಂಗತಿಗಳಿವು...
    ಇಂತಹ ವಿಚಿತ್ರ ವಿಚಿತ್ರ ಸಂಗತಿಗಳನ್ನು ನನ್ನ ಸ್ನೇಹಿತರಿಂದಲೂ ಕೇಳಿದ್ದೇನೆ...
    ಈಗ್ಲೆ ಹಿಂಗೆ.. ಮುಂದೆ ಹ್ಯಾಂಗೋ ಅನ್ನೋ ಭಯ....

    ನಿನ್ನ ಬರಹದ ಬಗ್ಗೆ ಎರಡನೇ ಮಾತಿಲ್ಲ....

    ReplyDelete
  12. @ಭಾಶೆ : Even, me too
    @ಶ್ರೀದರ್ : ಸ್ಪಂದಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್
    @ಉಮೇಶ್ ದೇಸಾಯಿ ಸರ್ : It sounds different but unfortunately execution is there, while writing this post i was not getting how to say.
    @ಪರಾಂಜಪೆ ಸರ್ : ಥ್ಯಾಂಕ್ಸ್ ಸರ್, ಅಂಬಾಸಿಡರ್ ಕಾರುಗಳು ಕಡಿಮೆಯಾದಂತೆ ಜನರಲ್ಲಿ ಕಾಮನ್ ಸೆನ್ಸು ಕಡಿಮೆಯಾಗ್ತಿದಿಯೇನೋ ಸರ್ !!
    @ಗಿರೀಶ್ : ಥ್ಯಾಂಕ್ಸ್
    @ಸುಗುಣಕ್ಕ : ಬೆಂಗಳೂರಿನ ಬೆಳವಣಿಗೆ / ಬದಲಾವಣೆ ಒಳ್ಳೆಯತನದಲ್ಲಿದ್ದರೆ ನೀವು ಹೇಳಿದ ಹಾಗೆ ಸಂತೋಷವೇ
    ಪ್ರೀತಿಯಿಂದ ನಾಗರಾಜ್

    ReplyDelete
  13. @ಸುನಾಥ ಸರ್ : ಈ ರೀತಿಯ ಅಸಭ್ಯ ಘಟನೆಗಳು ನಡಿತಾನೆಯಿವೆ ಸರ್.

    @ಶಿವಪ್ರಕಾಶ್ : ಹೌದು,ಹೆದರಿಕೆ ತರಿಸುವ ಘಟನೆಗಳೇ ಇವು. ಹೀಗಾದಾಗ ಏನ್ಮಾಡೋದು?ಅದಕ್ಕೆ ನಾನು -'ನಾವು ಅಸಹಾಯಕತೆಯೆಂಬ ಹೆಬ್ಬಾಗಿಲ ಮುಂದೆ ಮಂಡಿಯೂರಿ ಕೂತುಬಿಟ್ಟಿರ್ತಿವಿ' ಅಂತ ಬರೆದದ್ದು .

    ReplyDelete
  14. ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ

    ReplyDelete
  15. ಛೇ! ನಮ್ಮ ಬೆಂಗಳೂರಿನಲ್ಲಿ ಇಂಥ ಘಟನೆಗಳು ನಡೆಯುತ್ತವೆ ಎಂದು ಭಾವಿಸಿರಲಿಲ್ಲ! ದಿಗ್ಭ್ರಾಂತನಾದೆ! ಬಹಳಾ ಬೇಜಾರಾಯಿತು!

    ReplyDelete
  16. ನಾಗರಾಜ್ ಅವ್ರೆ,

    ನಿಜಕ್ಕೂ ಆಶ್ಚರ್ಯವಾಯಿತು, ಹೀಗೂ ಉಂಟೆ ??? ಪ್ರಜ್ಞಾವಂತ ನಾಗರೀಕರೇ ಹೀಗೆ ಮಾಡುತ್ತಾರೆ ಎಂದರೆ ಇನ್ನು ಉಳಿದವರ ಬಗ್ಗೆ ಏನು ಹೇಳಬಹುದು ?? ತುಂಬಾ ಸುಂದರ ಬರಹ.....

    ReplyDelete
  17. ಹ್ಹ ಹ್ಹ ಹ್ಹಾ...
    ನಮ್ಮದೂ ಇಂಥಾದ್ದೊಂದು ಆಟ ಇತ್ತು....
    ಆದರೆ ಇಂಡಿಕಾ ಒಂದು ಎರಡು ಮೂರು ಅಲ್ಲಾ....

    ಮರೆತಿದ್ದನ್ನು ನೆನಪಿಸಿದಿರಿ...

    ಚನ್ನಾಗಿದೆ.

    ReplyDelete
  18. @ಮಹೇಶ್ ಸರ್ : ನಮ್ಮ ಬೆಂಗಳೂರಿನಲ್ಲೂ ಇದು ಇದೆ ಅಷ್ಟೇ,
    ಉಳಿದ ಹಾಗೆ ಬೆಂಗಳೂರು ಚೆಂದವೇ

    @ವಿಜಯಶ್ರೀ ಮೇಡಂ : ಥ್ಯಾಂಕ್ಸ್

    @ಪ್ರದೀಪ್ : sorry to say, This is happened.

    @ಅಶೋಕ್ ಸರ್: ಹೌದು, ಹೀಗೂ ಉಂಟು. ಥ್ಯಾಂಕ್ಸ್

    ReplyDelete
  19. ಗೆಳೆಯರ ತುಂಟಾಟ , ಅಸಭ್ಯ ಜನಗಲ ವರ್ತನೆ - ಇವುಗಳ ಮಿಶ್ರಣ ಚೆನ್ನಾಗಿದೆ .
    ಜೀವನವೇ ಚಿತ್ರ -ವಿಚಿತ್ರ ಭಾವನೆಗಳ ಟ್ರಾಫಿಕ್ ಜಾಮ್ .

    ReplyDelete
  20. ನಾಗರಾಜ್, ಜೀವನದ ಟ್ರಾಫಿಕ್ನಲ್ಲಿ ಈ ತರಹದ ಘಟನೆಗಳು ಮನಸನ್ನು ಜಾಮ್ ಮಾಡಿ ಬಿಡುತ್ತವೆ, ಮುಂದಿನ ಬಗ್ಗೆ ಯೋಚಿಸುವಂತೆ ಮಾಡುತ್ತದೆ....
    ಹಾಗೆ ಗೆಳೆಯರ ಜೊತೆ ಹರಟೆ, ಬೆಟ್ಟಿಂಗ್, ತಮಾಷೆ..etc ಇದ್ದರೇನೆ ಜೀವನಕ್ಕೊಂದು ಹುರುಪು, ಅಲ್ಲವೇ ? :)
    ಚಂದದ ಹಾಗು ಚಿಂತನೆಗೆ ಈಡು ಮಾಡುವಂತಹ ಬರಹ.

    ReplyDelete
  21. @Kanasu kangala huduga, Kavya, HegdeG :: Thanks a lot.

    ReplyDelete
  22. really shocking......
    idellaa film nalli maatra endukonDidde...

    nimma baravaNige shaili ishTa aaytu......

    ReplyDelete
  23. I observed two things of the writing the edge of anger and the edge of failure!!! despite our efforts we seem helpless anno nimma vakya...super!!!

    ReplyDelete
  24. @Dinakaranna: Ya,its really shocking. Thank you

    @Ashu: Thank you for analyzation.

    ReplyDelete