Aug 25, 2013

"ಆತ್ಮಸುಂದರಿಯ ಅನ್ವೇಷಣೆಯಲ್ಲಿ ಸರಿದ ಜನ್ಮಗಳು"


ಅಂದೊಮ್ಮೆ ಹಿಂದೆ 
ಜನ್ಮಗಳ ಹಿಂದೆ ಘಟಿತ ಸುದ್ದಿ ಹೇಳುವೆ 
ಕೇಳೆ, 
ಅದು ಇಂಥದ್ದೇ ಒಂದು ಮುಸ್ಸಂಜೆ ವೇಳೆ

ಕಲ್ಲಿಗೆ ರೂಪಕೊಟ್ಟು 
ನುಣುಪುಕೊಟ್ಟು, ಜೀವಕೊಟ್ಟಿದ್ದ ಯುವಶಿಲ್ಪಿ 

ಜಗತ್ಸುಂದರಿಯ ಗಂಡ ಸಾಮ್ರಾಜ್ಯದರಸ 
ಶಿಲೆಯ ನೋಡಿ, ಮುಟ್ಟಿ ಕಲೆಯ ಕಂಡು 
ಹೊಗಳಿದ - 'ಎನ್ನರಸಿಗಿಂತ ಸೊಗಸು'
ಶಿಲ್ಪಿ ಅಂದದ್ದಿಷ್ಟೇ -'ಸಾರ್ಥಕವಾಯಿತು'

ಧರೆಯ ಸುಂದರಿಯನ್ನ ಕಲ್ಲಲ್ಲಿ ಸೃಷ್ಟಿಸಿದ ಅಹಂ 
ಅರಸನ ಮೆಚ್ಚುಗೆ, ಪಾರಿತೋಷಕ 
ಕೊಬ್ಬಿದ ಹರೆಯ - ಶಿಲ್ಪಿಯ ನರನಾಡಿಗಳಲ್ಲಿ ಜಿಂಕೆಯಂತೆ ಓಡುತ್ತಿದ್ದವು 
ಆ ಮುಸ್ಸಂಜೆ ವೇಳೆ 

ನದಿಯ ದಂಡೆಯುದ್ದಕ್ಕೂ ನಡೆದು ಬರುತ್ತಿದ್ದ 
ಹೊಸದಾರಿಯ ಹಿಡಿದು ಮನೆಗೆ ಹೋಗುತ್ತಿದ್ದ   
 
ಮಹಾಸ್ಪೋಟವಾಯಿತು :ಒಮ್ಮೆಲೇ ಬಾಯಿ ತೆರೆದು ಉಸಿರು ಹಿಡಿದ 
ಬೆಚ್ಚಿದ, ಪಾರಿತೋಷಕವನ್ನ ನದಿಗೆ ಬಿಸಾಡಿದ 
ಕುಸಿದು ಮಂಡಿಯೂರಿ,ಆತ್ಮಸುಂದರಿಗೆ ಶರಣಾದ 
ಅವಳು ಕಂಡಕೂಡಲೇ, ಇಂಥದ್ದೇ ಆ ಮುಸ್ಸಂಜೆ ವೇಳೆ 

ಈವರೆಗೆ ಕಂಡ ಸೌಂದರ್ಯ, ಸೌಂದರ್ಯವೇ ?
ಪ್ರಶ್ನೆ ಮೂಡುವುದರೊಳಗೆ ಕೂಗಿದ - 'ಸುಂದರಿ'

ಒಮ್ಮೆ ನೋಡಿದಳು, ಮುಂಗುರುಳ ಹಿಂದೆ ತುಸು ನಕ್ಕಳು 
ಶಿಲ್ಪಿ ಮಂಡಿಯೂರಿ ಸೌಂದರ್ಯ ಸವಿಯುತಿದ್ದ 
ಆಹ್ವಾನ ಕೊಟ್ಟಳು -'ಬೇಕೆಂದರೆ ಹುಡುಕಿ ಬಾ'
ನೋಡನೋಡುತ್ತಿದ್ದಂತೆ ಮರೆಯಾದಳು 

ಶಿಲ್ಪಿ, ಆಗಲೆಂಬಂತೆ ಅಮಲಿನ ನಗೆ ನಕ್ಕ 
ಹೊಸ ಮಜಲಿಗೆ ತಯಾರಾದ 
ನದಿ ದಂಡೆಯ ಮೇಲೆ, ಆ ವೇಳೆ 

ಇಬ್ಬರಿಗೂ ಜನ್ಮಗಳುರುಳಿದವು - ಹುಡುಕಾಟ ತಪಸ್ಸು 
ಇದು ಜನ್ಮಗಳ ಹಿಂದೆ ನಿನಗಾಗಿ ಶುರುವಾದ ಅನ್ವೇಷಣೆ 
ಇಂದಿಗೆ ಪಲಿತಾಂಶ - ನೀನು ಕಂಡ ಮೇಲೆ 
ಅಂಥದ್ದೇ ಒಂದು ಈ ಮುಸ್ಸಂಜೆ ವೇಳೆ 
'ಮತ್ತೆ ಮರೆಯಾಗದಿರು' - ಅನ್ವೇಷಕನ ಪ್ರಾರ್ಥನೆ 

=====
=====

Aug 14, 2013

"ಪುರಾತನ ಕಾವ್ಯದ ಆಯ್ದ ಭಾಗಗಳ ಔತಣ"


ಅಸಹಾಯಕ ವಯಸ್ಸಿನಲ್ಲಿ 
ಎಂದೋ ಮರೆಯಾದ ಅವಳ ಸವಿನೆನಪು
ಬಾಡಿದ ಕಣ್ಣುಗಳು 
ಹಸಿಯಾಗುವಷ್ಟು ಪುರಾತನ ಪ್ರೇಮದ ಬಿಸುಪು 
ಇನ್ನಾದರೂ ಬರಬಹುದೇನೋ -ನಿರೀಕ್ಷೆಯಲ್ಲಿ ಕೂತಿದ್ದೇನೆ 
ಕುಳಿತ ಪಾರ್ಕಿನ ಹೆಸರು ನೆನಪಾಗುತ್ತಿಲ್ಲ !!

++++

ಗೊಂದಲಗಳ ನಡುವೆ ಬಾಡಿಗೆ ಮನೆ ಮಾಡಿರುವೆ 
ಬಂದವು ಅವಶ್ಯಕ ಅನವಶ್ಯಕ ವಿಚಾರಗಳು 
ನನ್ನದಲ್ಲದ ಮನೆಯಲ್ಲಿ ನಾನೇ ತಂದ ವಸ್ತುಗಳ ವಿಲೇವಾರಿಯ ಬಗ್ಗೆ ಮತ್ತೆ ಗೊಂದಲಗಳಿವೆ!!
ಹೊರಸಾಗಿಸುವಂತೆಯೂಯಿಲ್ಲ ಎಲ್ಲವೂ ಇರಲೆನ್ನುವಷ್ಟು ಜಾಗವೂಯಿಲ್ಲ 

=====
=====