Sep 30, 2010

ಜಿಂದಗಿ ಬಡೀ ಹೋನಿ ಚಾಹಿಯೇ, ಲಂಬೀ ನಹಿ..!




ಹೌದು
, "ಜೀವನ ದೊಡ್ಡದಾಗಿರಬೇಕು, ಉದ್ದ ಅಲ್ಲಾ..!"
ಈ ಸಾಲು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯ ಬಹುದು..


ಮತ್ತೊಮ್ಮೆ ಮಗದೊಮ್ಮೆ ಓದಿದರೆ, ಕೇಳಿದರೆ, ಖಂಡಿತ ಅರ್ಥ ಆಗುತ್ತೆ..!!


ಸುಮ್ನೆ ಯೋಚನೆ ಮಾಡಿ, ನಿಮಗೆ ಒಂದು ವಾರದಿಂದ 'ನೆಗಡಿ',,
ಏನೇ ಮಾತ್ರೆ ತೊಗೊಂಡ್ರು, ಮತ್ತೊಂದು ಮಾಡಿದರು ಮೂಗಿನ ಜಲಪಾತ ನಿಲ್ತಾಯಿಲ್ಲ ..!

ನೆಗಡಿ ಬೇಡ, ಬೆನ್ನು ಇಲ್ಲಾ ಸೊಂಟ ನೋವು, ಹೋಗ್ಲಿ ಅವು ಯಾವೂ ಬೇಡಾ..
ಬೆಳಿಗ್ಗೆ ಇಂದ ಕತ್ತು ನೋವು, ಎಡ-ಬಲ, ಮೇಲೆ-ಕೆಳಗೆ, ಏನ ಮಾಡಿದ್ರು ನೋವು ನೋವು..!!


ಈ ಸಮಯದಲ್ಲಿ,
ನೀವು-ನಾವು ಕೊಡುವ ಒಂದು ಸಾಮಾನ್ಯವಾದ ಹೇಳಿಕೆ: "ಏನೇ ಬರಲಿ, ಈ ನೆಗಡಿ ಮಾತ್ರ ಬರಬಾರ್ದಪ್ಪ.."
ಅಯ್ಯೋ, "ಏನ್ ಬೇಕಾದ್ರೂ ತಡಕೊಬಹುದು, ಆದ್ರೆ ಈ ಕತ್ತು ನೋವು ಬೇಡಪ್ಪ ಬೇಡಾ.."


ಅಸಲಿಗೆ ನಮ್ಮ ಸಮಸ್ಯೆ ಏನಂದ್ರೆ ನಾವು ಕಷ್ಟಗಳಿಗೆ ಎದೆ ಒಡ್ಡಲು ತಯಾರಿಲ್ಲ ..!!
ಹಾಗೇನೆ , "ಕಷ್ಟ ನಮಗೆ ಬಂದಾಗ ಮಾತ್ರ ಕಷ್ಟ ..!!"
ಬೇರೆಯವರ ಕಷ್ಟ -ನೋವಿನ ಅರಿವು ನಮಗೆ ಅಷ್ಟಕಷ್ಟೇ ..!!!


ಒಮ್ಮೆ ಯೋಚಿಸಿ ..!
ಮನುಷ್ಯನಿಗೆ , ಇಂತದ್ದೆ ದಿನ ಅಥವಾ ಇಂತಿಷ್ಟು ದೀನಗಳೊಳಗೆ ಮ್ರತ್ಯು ನಿಶ್ಚಿತ ಅಂತ
ಗೊತ್ತಾದಾಗ
ಅವನ /ಳ ಮನಸ್ತಿತಿ
ಹೇಗಿದ್ದೀತು ..!?
ಆ ಮನುಷ್ಯ ನಾವೇ ಆಗಿದ್ದರೆ ..?
ಏನ್ ಮಾಡ್ತಿವಿ ..?? ಏನು ಮಾಡಬಹುದು ..?



ಅವನೊಬ್ಬನಿದ್ದ ,,,
"ಎಲ್ಲ್ಲೇ ಇರು ಹೇಗೆ ಇರು , ಎಂದೆದಿಗೂ ನೀ ನಗುತಲಿರು "
ನಿನ್ನ ಸುತ್ತಲಿರುವರನ್ನು ನಗಿಸುತಲಿರು .."
ಇದು ಅವನ ಸಿದ್ಧಾಂತ ..!


ಅವನು ಹೇಳುತಿದ್ದ ಮತ್ತೊಂದು ಮಾತು ,
"ನಾಳಿನ ಕಷ್ಟಗಳ ನೆನೆದು ಈ ಕ್ಷಣ , ಈ ದಿನದ ಕೊಲೆ ಮಾಡೋದು .."
ನಮ್ಮ ಅತೀ ದೊಡ್ಡ ತಪ್ಪು..! ಅದು ಪಾಪ ..!



ದಿನಗಳೆದಂತೆ ಕರಗುವ ದೇಹ..
ಸಾಯಲಿಕ್ಕೆ ವರ್ಷಗಳಿದ್ದರೇನು, ದಿನಗಳಿದ್ದರೇನು. ..?
"ಸಾವು ಅನ್ನೋದು ಕ್ಷಣ ಮಾತ್ರ",
"ಬದಲಿಗೆ ಪ್ರತೀ ಕ್ಷಣ ಅದ್ಭುತವಾಗಿ ಕಳೆದರೆ ಹೇಗೆ..?
ಒಂದೊಂದು ಕ್ಷಣ ಒಂದು ಜೀವನ ಆದ್ರೆ ಹೇಗೆ ..?"



ಉಸಿರಿರುವ ತನಕ ಸಾವಿಲ್ಲ.. ಉಸಿರಿಲ್ಲದ ಮೇಲೆ ನಾವೇ ಇಲ್ಲ ..!!



ಹೀಗಿರಬೇಕಾದ್ರೆ, ಹೆದರಿಕೆ ಯಾವುದು..? ಕಷ್ಟ-ನೋವು ಅಂದ್ರೆ ಯಾವುದು..?


ಹೀಗೆಲ್ಲ ಹೇಳುತ್ತಿದ್ದ ಅವನು ಆರು ತಿಂಗಳಿನೋಳಗಡೇ ಸಾಯುವನಿದ್ದ..!!
ಅದೂ ಅವನಿಗೂ ಹೊತ್ತಿತು..!!


ಅವನಿಗಿದ್ದದ್ದು ಕ್ಯಾನ್ಸರ್..!!


ಆ ರೋಗದ ಮೇಲು ಅವನಿಗೆ ಬೇಜಾರಿಲ್ಲ ..!
ಬದಲಿಗೆ, ಅದರ ವೈಜ್ಞ್ಯನಿಕ ಹೆಸರು ಕೇಳಿ ಖುಷಿ ಪಡುತ್ತಿದ್ದ..!!
ತನ್ನ ರೋಗ ಗುಣಪಡಿಸಲಾಗದ ವೈದ್ಯರ ಮೇಲೆ ಅನುಕಂಪ ಇತ್ತು ಅವನಿಗೆ.



ಯಾರೋ ಅಪರಿಚಿತನಿಗೆ ಬೆನ್ನು ತಟ್ಟಿ, ಮಾತಾಡಿಸಿ, ತಲೆ ತಿಂದು ಪರಿಚಯ ಮಾಡಿಕೊಳ್ಳುತ್ತಿದ್ದ..
ಅವನಿಗೆ "ನನ್ನವರು" ಅನ್ನುವವರು ಯಾರು ಇರ್ಲಿಲ್ಲ, ಅದಕ್ಕೂ ಅವನಿಗೆ ಬೇಜಾರಿಲ್ಲ..!



ಹಾಗಂತ ಅವನಿಗೆ ದುಃಖ ಇರ್ಲಿಲ್ಲ ಅನ್ನೋದು ಸುಳ್ಳು..!
ಅವನಿಗೂ ದುಃಖ ಗಳಿದ್ದವು, ಅವನೊಬ್ಬ ಭಗ್ನ ಪ್ರೇಮಿ..!!
ಆದರೆ,
ಯಾರಿಗೂ ತನ್ನ ನೋವು ಹೇಳುತ್ತಿರಲಿಲ್ಲ..
ದುಃಖ ಹಂಚಿಕೊಳ್ಳುವ ವಿಷಯದಲ್ಲಿ ಅವನು ಬಲು ಸ್ವಾರ್ಥಿ..!!



ತನ್ನ ಕೊನೆಯ ದಿನಗಳನ್ನು 'ಮುಂಬಯಿ' ಯಲ್ಲಿ ಕಳೆಯಬೇಕು, ಹೊಸ ಗೆಳೆಯರೊಡನೆ ಇರಬೇಕು ಅನ್ನೋದು ಅವನ ಇಚ್ಛೆ..!
ಅವನು ಹಾಗೆ ಮಾಡಿದ..



ಮುಂಬಯಿ ಅವನಿಗೆ ಹಿಡಿಸಿತು,
ಅಲ್ಲಿ ಅವನಿಗೆ ತಾಯಿ, ತಂಗಿ, ಅತ್ತಿಗೆ , ಗುರು, ಗೆಳೆಯರು.. ಸಿಕ್ಕರು.
ತಾನು ಸಾಯುವ ಮೊದಲು ಗೆಳೆಯನಿಗೆ ಹುಡುಗಿ ನೋಡಿದ..
ಆದರೆ ಅವನ ಮದುವೆ ನೋಡಲಾಗಲಿಲ್ಲ..!


"ಒಂದು ಮಿಂಚಿನಂತೆ ಬಂದು ಹೋದ"
ಒಂದು ದೊಡ್ಡ ಬೆಳಕ ಚೆಲ್ಲಿ..!!


ಅವನ ಹೆಸರು,
"ಆನಂದ್"


******



೧೯೭೦ ರಲ್ಲಿ ತೆರೆ ಕಂಡ ಹಿಂದಿ ಚಿತ್ರ "ಆನಂದ್"
ರಾಜೇಶ್ ಖನ್ನಾ, ಮಾಡಿದ ಪಾತ್ರವೇ ಆನಂದ್ ..
ಅಮಿತಾಬ್ ಬಚ್ಚನ್ ಆವಾಗ ಸಹ ಕಲಾವಿದ..!


ಅದರ ನಿರ್ದೇಶಕ "ಹ್ರಿಶಿಕೇಶ್ ಮುಖರ್ಜೀ" ಪ್ರೀತಿಯ "ಹ್ರಿಶಿದಾ"
ಇಂದು ಅವರ ಜನ್ಮ ದಿನ..!

ಸೆಪ್ಟೆಂಬರ್ ೩೦, ೧೯೨೨ ಕೊಲ್ಕತ್ತಾ ದಲ್ಲಿ ಜನಿಸಿದ, 'ಹ್ರಿಶಿದಾ'.
'ರಸಾಯನ
ಶಾಸ್ತ್ರ' ವಿಷಯದಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದು, ಕೆಲ ಕಾಲ, "ಗಣಿತ ಹಾಗು ವಿಜ್ಞ್ಯಾನ' ಪಾಠ ಮಾಡಿದರು.



ಮೊದಲಿಗೆ "ಬಿಮಲ್ ರೋಯ್" ಜೊತೆ ಸೇರಿ ಸಿನಿಮ ಕೆಲಸ ಕಲಿತಿದ್ದು.. ಅವರು ಮೊದಲು ಮಾಡಿದ್ದು ಕ್ಯಾಮರಾಮೆನ್ ಕೆಲಸ.. ಜೊತೆಗೆ 'ಸಂಕಲನಕಾರ'.


ಮೊದಲ ಸಿನಿಮ, 'ಮುಸಾಫಿರ್' ೧೯೫೭ ರಲ್ಲಿ ತೆರೆಕಂಡಿತು, ಆದರೆ ಹೆಸರು ಮಾಡಲಿಲ್ಲ..


೧೯೫೯ ರಲ್ಲಿ 'ರಾಜ್ ಕಪೂರ್' ನಟಿಸಿದ 'ಅನಾಡಿ' ಅವರ ಎರಡನೇ ಸಿನಿಮ.
ಅದು ದೊಡ್ಡ ಹೆಸರು ಮಾಡಿತು..
'ಅನಾಡಿ' ಚಿತ್ರದ "ಜೀನಾ ಇಸೀ ಕಾ ನಾಮ್ ಹೈ" ಅದ್ಭುತವಾದ ಹಾಡು..!!



"ಆನಂದ, ಮಿಲಿ, ಚುಪ್ಕೆ ಚುಪ್ಕೆ, ಗೋಲ್ಮಾಲ, ಗುಡ್ಡಿ, ಬಾವರ್ಚಿ, ಅಭಿಮಾನ್,,,, ಆಗಿನ ದೊಡ್ಡ ಹಿಟ್ ಚಿತ್ರಗಳು.
ಒಟ್ಟು ೪೨ ಚಿತ್ರದ ನಿರ್ದೇಶನ ಮಾಡಿದ್ದು."
ಕಿರಿತೆರೆಯಲ್ಲೂ ಅವರ ಕೊಡುಗೆ ಇದೆ..!!



"ಫಿಲಂ ಫೇರ್, ರಾಷ್ಟ್ರ ಪ್ರಶಸ್ತಿ, ದಾದ ಸಾಹೇಬ್ ಫಾಲ್ಕೆ, ಪದ್ಮ ವಿಭೂಷಣ. ಪುರಸ್ಕ್ರತರು."


ಮಧ್ಯಮ ವರ್ಗದ ಕುಟುಂಬಗಳ ಕತೆ, ಗಂಡ-ಹೆಂಡತಿ, ಹಾಸ್ಯ, ಜೀವನ..
ಹೀಗೆ ಎಲ್ಲಾ ತರದ 'ಅದ್ಭತ' ಎನಿಸುವ ಚಿತ್ರ ಕೊಟ್ಟ "ಹ್ರಿಶಿದ"
೨೦೦೬ ಅಗುಸ್ಟ್ ೨೭ ರಂದು ಮುಂಬೈ ಯಲ್ಲಿ ನಿಧನ ರಾದರು.


ಇಂದು ಅವರ ಜನ್ಮದಿನದ ಪ್ರಯುಕ್ತ ಈ ಲೇಖನ.

"ಆನಂದ್" ಒಂದು ಅದ್ಭ್ತವಾದ ಚಿತ್ರ.. ಬದುಕು ಬದಲಿಸಿದ, ಬದಲಿಸುವ ಚಿತ್ರ..
ಅದೆಷ್ಟು ಸಾರಿ ನೋಡಿದೆನೋ, ಪ್ರತೀ ಸಾರಿ ನೋಡಿದಾಗ, ನಾನು ಹೊಸದಾಗಿದ್ದೇನೆ..
ಆನಂದ್, ಜೀವನಾಮೃತ .. ..!!



***

ಇವತ್ತಿಗೆ ೨೦ ವರ್ಷ ಆಯ್ತು, ಅವನು ಹೋಗಿ.. ಅಣ್ಣ "ಶಂಕ್ರಣ್ಣ", ಶಂಕರ್ ನಾಗ್.
"ಒಂದಾನೊಂದು ಕಾಲದಲ್ಲಿ, ಗಂಡುಗಲಿ.. ಕನಸುಗಾರ, ಅವನ ವೇಗ ಅದಕ್ಕೆ ಅವನೇ ಸಾಟಿ.. ಒಂದು ಮುತ್ತಿನ ಕತೆಯ ಕೊಟ್ಟು, ಜನುಮ ಜನುಮದ ಅನುಭಂದ ದಲ್ಲಿ, ಹೊಸ ಜೀವನ ನಡೆಸೆಂದ, ಗೀತಾಳ ಸಂಜು, ಮಿಂಚಿನ ಓಟಗಾರ, 'ಆಕ್ಸಿಡೆಂಟ್' ನಲ್ಲಿ ಹೋಗಿಬಿಟ್ಟ.. ನಮ್ಮೆಲ್ಲರ 'ಶಂಕರ್ ನಾಗ್"





"ಬದುಕು-ಸಾವು ಎಲ್ಲ ದೇವರ ಇಚ್ಛೆ..
ಅವನ ಲಿಖಿತ, ಯಾರು ಬದಲಿಸಲಾಗದು..
ಜೀವನದ ನಾಟಕದಲ್ಲಿ ಬಂದು ಹೋಗುವ ಪಾತ್ರಧಾರಿಗಳು ನಾವು,
ಯಾವ ಪಾತ್ರ ಎಲ್ಲಿ, ಹೇಗೆ, ಎಷ್ಟು, ಅದು ಅವನಂತೆ ಹೇಳಲಾಗದು..!"



***


ಹಲವು ಅದ್ಭುತವಾದ ಚಿತ್ರಗಳ ಕೊಟ್ಟ, ತಮ್ಮ ಚಿತ್ರಗಳಿಂದ ನಮ್ಮೆಲ್ಲರ ಬದುಕಿನಲ್ಲಿ ಬಂದ
"ಹ್ರಿಶಿಕೇಶ್ ಮುಖರ್ಜೀ - ಶಂಕರ್ ನಾಗ್" ಅವರಿಗೆ
ನನ್ನ ನಮನಗಳು..




Sep 16, 2010

"ಖಾಲಿ ಏಕೆ ಕುಳಿತೆ ?"

ಖಾಲಿ ಏಕೆ ಕುಳಿತೆ ?
ಕಾಡುತಿಲ್ಲವೆ ಹೊಸ ಕವಿತೆ
ಆಸೆಯ ಭಾವ,
ಭಾವಂತರಂಗದ ಕನಸುಗಳು
ಪ್ರಸವಿಸಲಿಲ್ಲವೇ ಕವಿತೆ ?
ಹುಟ್ಟಿ ಬರಲಿ ಲೋಕಪೂಜಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ತಿದ್ದಿ ತೀಡುವುದು ಅನುಭವದ ಹಣತೆ
ದಿವ್ಯ ಶಿಲ್ಪಿಯ ಬೆಳಕಿಗೆ
ಹರಳುಗಟ್ಟುವುದು ಕವಿತೆ
ಹಸಿವಿಗೆ ಶಬ್ಧಾಮೃತ ಕವಿತೆ
ಉಲ್ಲಾಸದ ಸೂರ್ಯ ರಶ್ಮಿ ಕವಿತೆ
ಖಾಲಿ ಏಕೆ ಕುಳಿತೆ ?

ಕಪ್ಪು ಬಿಳುಪು ಛಾಯಾಚಿತ್ರ
ಸಾರುವ ಭಾವ ಕವಿತೆ
ಸೌದರ್ಯ ಸಿರಿಯ ಸೆರೆಹಿಡಿವ
ಕಣ್ಣೊಳಗೆ ಭಾಷೆ ಸೋಲುವ ಕವಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ಪ್ರೇಮಸುಮದ ಘಮ ಕವಿತೆ
ಮೌನ ಆಡಲಾಗದ ಕವಿತೆ
ಮುತ್ತಾಗುವುದು ಸ್ಪರ್ಶ ಕವಿತೆ
ಭಕ್ತಿ ಕಾಣದ ಕವಿತೆ
ಹಡೆದವಳು ಕಣ್ತೆರೆದೊಡನೆ ಕಾಣುವ ದೇವತೆ
ಖಾಲಿ ಏಕೆ ಕುಳಿತೆ ?
ಪೂರ್ವಾಗ್ರಹಗಳಿಲ್ಲದೆ ಕಾಣು
ಎಲ್ಲೆಲ್ಲಿಯೂ ಕವಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ಪುಟಿದೇಳುವ ಕವಿತೆಗೆ
ದನಿಯಾಗು, ಶಬ್ಧವಾಗು
ಒಂದಾದಮೇಲೊಂದು ಮೊಳಕೆಯೊಡೆಯಲಿ ಕವಿತೆ
ಖಾಲಿ ಏಕೆ ಕುಳಿತೆ ?
ಬದುಕು ಹರಿವ ಕವಿತೆ
ಖಾಲಿ ಏಕೆ ಕುಳಿತೆ ?
ಖಾಲಿ ಏಕೆ ಕುಳಿತೆ ?

=====
=====

Sep 3, 2010

ಹೀಂಗ ಆದ್ರ ಹ್ಯಾಂಗ್...?


ನನಗ ಈ software ಮಂದಿ ಅರ್ಥ ಆಗುವಲ್ರು.
ನನ್ನ ಭಾಳ್ ಮಂದಿ ದೊಸ್ತ್ರು, ಈ software ನಾಗ ಕೆಲ್ಸಾ ಮಾಡ್ತಾರ,
ಖರೆ ಅಂದ್ರ ಅವರು ಅಲ್ಲಿ ಏನ್ ಮಾಡ್ತಾರ ಹ್ಯಾಂಗ ಮಾಡ್ತಾರ..?
ನನಗ ತಿಳಿವಲ್ದು..!!


ನನ್ನ ೬ ವರ್ಷದ ದೋಸ್ತ, ಸದ್ಯದ ರೂಮೇಟ್, ಅಣ್ಣ ನಂತಹ ಗೆಳೆಯ ಮೂರೂ ವರ್ಷದಿಂದ ಒಂದು ದೊಡ್ಡ ಕಂಪನ್ಯಾಗ ಕೆಲ್ಸಾ ಮಾಡತಾನ,
ಒಂದ ಮಾತ್ ಏನಂದ್ರ, ಅವನೀಗ ಏನು ಸೋಕಿ ಇಲ್ಲ, ಅಗ್ದಿ ಸರಳ ಜೀವನ,,
ಅಂವಾ ಒಬ್ಬ ರೈತನ ಮಗ..
ನನಗ ಅವಾಗ ಅವಾಗ ವಿಚಿತ್ರ ಕಾಣತನ,
ಅವನ ಕೆಲಸ ಏನ್ ಅಂತ ನಾ ಹೆಚ್ಚ ಕೆಳಿಕ್ಕ ಹೋಗಿಲ್ಲ..
ಮುಂಜಾನಿ ೭ ಗಂಟೆಗೆ ಹೋದ ಅಂದ್ರ ಮತ್ತ ನಮ್ಮ ಮಸಡಿ ನಾವು ನೋಡೋದು ರಾತ್ರಿ ೯ ಕ್..
ಒಮ್ಮೆ ಒಮ್ಮೆ ೯:೩೦/ ೧೦ ಗಂಟೆನೂ ಆಗತೈತಿ..
ಶನಿವಾರ - ರವಿವಾರ ಬತ್ತ ಅಂದ್ರ,
" ಭಾಳ ವರ್ಷಕ್ಕ ತವರಿಗ ಹೊಂಟ ಹೆಣ್ಣಿನ ಮುಖದಾಗಿನ ಆನಂದ್ "


ಆದ್ರ ನಾ ಇಲ್ಲಿ ಹೇಳಿಕ್ಕ ಹೊಂಟಿದ್ದ ಏನಂದ್ರ, ಸ್ವಲ್ಪ ದಿನ ಹೀಂದ ನಾ ಅವನ ಜೋಡಿ ಒಂದು ದೊಡ್ಡ ಅಂಗಡಿ ಹೋಗಿದ್ದೆ..
ಅಲ್ಲಿ ಅಂವಾ ರೊಕ್ಕ ಕೊಡು ಬದಲಿ, ಗಣಪತಿ ಹಬ್ಬಕ್ಕ/ ದೇವರು ಚಂದ ಬರೆಯು ಪಟ್ಟಿ ಬಂಡಲ್ ಇದ್ದಂತ ಒಂದು ಬಂಡಲ್ ಇಂದ ನಾಲ್ಕು ಚೀಟಿ ಹರದು ಕೊಟ್ಟ..!
ನನಗ ಅದು ಏನು ಗೊತ್ತಿಲ್ಲ..!


ಹೊರಗ ಬಂದು ಸ್ವಲ್ಪ ತಡಾ ಆದ ಮ್ಯಾಲ..
ಅಣ್ಣ ನೀ ಅವಾಗ್ಲೇ ಆ ದುಕಾನ್ ದವನಿಗೆ ಚೀಟಿ ಕೊಟ್ಟೆಲ್ಲಾ.. ಅದು ಏನು..!?
"Meal Pass " ಅಂದ..
ನನಗ ಏನು ಗೊತ್ತಾಗ್ಲಿಲ್ಲ ಅಂತ ಅವನಿಗ್ ಗೊತ್ತಾಗಿ, ನಾ ಮುಂದೆ ಕೇಳು ಮೊದಲ ಅವನೇ ಸುರು ಮಾಡಿ ವಿವರಿಸಿ ಹೇಳ್ದ..

ನನಗೆ ವಿಚಿತ್ರ..!!


"
ಅಲ್ಲೋ ಮಾರಾಯ ರೊಕ್ಕ ಕೊಟ್ಟ ಚೀಟಿ ತೊಗೊಳೋದು, ಮತ್ತ ಆ ಚೀಟಿ ರೊಕ್ಕ ಬದಲಿ ಕೊಡೋದು" ಸುಮ್ನೆ ಹೈರಾಣ ಅಲ್ಲ..?
" ಅದರ ಬದಲಿ ಸುಮ್ನೆ ರೊಕ್ಕ ಕೊಟ್ರ ಮಾತ್ ಮುಗಿತಲ್ಲಾ.." ನಾ ಹೇಳ್ದೆ.


ಅದಕ್ಕ ಅಂವಾ ಮತ್ತೊಂದಿಷ್ಟ ವಿವರಿಸಿ, ಬಿಡಿಸಿ ಹೇಳ್ದ..


ಅಲ್ಲಾ ನೀವ್ ಮಂದಿ ಎಷ್ಟ ತಲೀ ಓಡುಸ್ತಿರಿ,,,?
ಹಂಗ " ಅಗ್ದಿ ಆರಂ ಬೇಕು ಅನೌರು " ..!!
ಆರಂ ಅನ್ನೋದು ಎಲ್ಲರಿಗೂ ಬೇಕು,
ಆದ್ರ ನೀವ್ ಮಂದಿ ಭಾಳೇ ಆರಂ ಕೆಳ್ತೀರಪ್ಪ..! ಅದು ಏನ್ ಮಾಡ್ತಿರೋ..?


ನಾ ಏನೇ ಹೇಳ್ದ್ರು, ಸ್ವಲ್ಪ ವಾದ ಮಾಡಿ, ಸ್ವಲ್ಪ ನಕ್ಕು, ವಿವರಣೆ ಕೊಡ್ತಾ ಹೋದ ಅಣ್ಣ..
ಅಲ್ಲೇ ಸಮೀಪದ ಹೋಟೆಲ್ಲಿಗ ಉಟಕ್ಕ್ ಹೋದ್ವಿ..


ಊಟ ಆದ ಮ್ಯಾಲ ಮತ್ತ ನಾ ಸುರು ಮಾಡದೆ,,
ಈಗ ಎಲ್ಲ ಕಡೀ ಕಾರ್ಡ್ ಸಿಸ್ಟಮ್ ಆಗೈತಿ,

Online payment.. Income Tax, Electricity,
Phone Bill, Water Bill, Film/Bus/Train/Flight Ticket..
ಎಲ್ಲ ಕ್ರೆಡಿಟ್ / ಡೆಬಿಟ್ ಕಾರ್ಡ್..


ಅದಕ್ಕ ಅಣ್ಣ ಅಂದ, ಹೌದು ಅದೆಲ್ಲ ನಮ್ಮ ನಿಮ್ಮ ಅನುಕೂಲಕ್ಕೆ.
ಅದರಿಂದ ಎನೇನ ಲಾಭ ಐತಿ ಅಂತ ವನ್ದಿಷ್ಟ ಉದಾಹರಣೆ ಕೊಟ್ಟ.
ನಾ ಬಿಡಬೇಕಲ್ಲ..! ?

ನೀವು ಮುಂದ ಮುಂದ ಹೆಂಗ ಮಾಡ್ರಿ ಅಂದ್ರ,
' ದೇವರ ಹುಂಡಿಗ' ರೊಕ್ಕ ಹಾಕು ಬದಲು, ' ಕಾರ್ಡ್ ಸಿಸ್ಟಮ್' ಮಾಡ್ರೀ...
ಅದೂ ಕೆಲವು ಕಡೆ ಇದೆ, ಮುಂದೆ ಎಲ್ಲ ಕಡೆ ಆಗುತ್ತೆ. ಅಂದ..!!

ಹಾಂ.!
ಹಂಗಂದ್ರ, ಇನ್ನೊಂದಿಷ್ಟು ಅದಕ್ಕ ಸೇರಸ್ರಿ..

ಹಾಲಿನ ರೊಕ್ಕ, ಸಣ್ಣ ಕಿರಾಣಿ ಅಂಗಡಿ, ಕಟ್ಟಿಂಗ್ ದುಕಾನ,
ಚಪ್ಲಿ ದುಕಾನ್, ಬೀಡಾ ಅಂಗಡಿ, ಮನೀ ಬಾಡಗಿ,
ಮಕ್ಕಳ ಸಾಲಿ/ ಟ್ಯುಶನ್ ಫೀಸ್,,,

ವ್ಯವಸಾಯ ಮಾಡೋ ರೈತರಿಗೂ ಒಂದೊಂದು ಕಾರ್ಡ್ ಕೊಡ್ರಿ.. ಅಕ್ಕಿ, ಜೋಳ, ರಾಗಿ,,,
ಎಲ್ಲದಕ್ಕೂ ಮತ್ತ "ಪ್ರೀ ಪೈಡ್/ ಪೋಸ್ಟ್ ಪೈಡ್ ಮಾಡ್ರಿ...!


ಅಣ್ಣ ಒಮ್ಮ ನನಗ ನೋಡಿ, ಸಣ್ಣಗೆ ನಕ್ಕ, ಸ್ವಲ್ಪ ಸರೀ ಅನಸ್ಲಿಲ್ಲ ನನಗ..
ಆ ನಗುವು ನನಗ ಒಂತರ ಸಿಟ್ಟು ತರಸ್ತು..


ಕಡೀಗ ' Public Toilet' ನು ಬಿಡಬ್ಯಾಡ್ರಿ..

ಒಂದಕ್ಕ ಹೋದ್ರ ಇಷ್ಟು, ಸಂಡಾಸ್ ಹೋದ್ರ ಇಷ್ಟು..
ಅದರಾಗ್ 'ಮಂತ್ಹ್ಲಿ ಸ್ಕೀಮ್, ಹಂಗ ಮೂರೂ/ಆರು/ವರುಷದ ಚಂದಾದಾರರಾಗಿ.. "
ಅಂತ ಹಾಕ್ರಿ..!!


ಅದು ಒಂದ ದಿನ ಬರುತ್ತೆ.. !!
ಕಣ್ಣಲ್ಲಿ ಕಣ್ಣಿಟ್ಟು ಅಷ್ಟೇ ನಾ..? ಮುಂದೆ ಕೇಳು..


ಅಲ್ಲೇ ಇದ್ದ " ಹಳೇ ಪೇಪರ್ " ದುಕಾನ್ ನೋಡಿ, ಗಂಭೀರವಾಗಿ ಹೇಳ್ದೆ..
ಅಣ್ಣ, " ನಿಮ್ಮ ಮಂದಿ ಗ , ಹಳೇ ಪೇಪರ್ ಮಾರೋ 'ಫೆಸಿಲಿಟಿ ' ಹ್ಯಾಂಗಿರಬೇಕು ಅಂದ್ರ..


"..... group of old papers" Pvt limited.


for more details visit
www.----.com
OR
"call our 24/7 toll free no 1800 --- --- "


Give 10kg of old papers and get 11kg paper's price..


Take 10kg of old paper and get 1 kg absolutely free..!


Cash back offer, --% profit, door delivery........


ಮತ್ತ ಅಲ್ಲಿಗೆ ಬಿಡಬ್ಯಾಡ್ರಿ..
ನಾವು ಇಂತಿಂತ "ಪೇಪರ್" ಜೋಡಿ " ಟೈ ಅಪ್ " ಮಾಡಿವಿ..
ನೀವು ಆ ಪೇಪರ್ ತೊಗೊಂಡ್ರ ನಿಮಗ ವರ್ಷಕ್ಕ ಇಷ್ಟ 'ರಿಯಾಯತಿ'
ಮತ್ತ ನಾವು ಆ ಪೇಪರ್ ಗ ಜಾಸ್ತಿ ರೊಕ್ಕ ಕೊಡ್ತೀವಿ...!!


"ಅಣ್ಣ, ಇವೂ ಮಾಡ್ರಿ... ಬಿಡಬ್ಯಾಡ್ರಿ...!"


ನೋಡೋ..
ಆಗುತ್ತೆ..! ನೀ ಇಷ್ಟೊತ್ತು ಹೇಳ್ದೆ ಅಲ್ಲ ,
ಅದಕ್ಕೂ ಒಂದು ಕಾಲ ಬರುತ್ತೆ.. !!
ಚಿಕ್ಕ ಪುಟ್ಟ ಅಂಗಡಿ ಇಂದ, ರಸ್ತೆ ಪಕ್ಕ ಮಾರೋ 'ಬೋಂಡ /ಬಜ್ಜಿ ' ಅಂಗಡಿ ಇಂದ,
ಸಾರ್ವಜನಿಕ ಶೌಚಾಲಯಕ್ಕು.. ಬರುತ್ತೆ..!



ದೇವಸ್ತಾನಕ್ಕೆ ಅಂದಿಯಲ್ಲ..?

ದೇವಸ್ತಾನ ಅಲ್ಲ, ಮನೆಯಲ್ಲಿ ಆಗುವ ಚಿಕ್ಕ-ಪುಟ್ಟ ಕಾರ್ಯಕ್ರಮ,
ಮದುವೆ ಗೆ ಕಾಣಿಕೆ ಆಗಿ ದುಡ್ಡು ಕೊಡತಾರಲ್ಲಾ...?
ಅಲ್ಲಿಗೂ "ಕ್ರೆಡಿಟ್ /ಡೆಬಿಟ್ ಕಾರ್ಡ್ ಬರ್ತಾವೆ..!


ಬಿಲ್ಲಿನಿಂದ ಬಿಟ್ಟ ಬಾಣಿನ ಹಂಗ ಇತ್ತು, ಅವನ ಉತ್ತರ .. !


ಸ್ವಲ್ಪ ಹೊತ್ತು ನನಗ ಏನ್ ಹೇಳ್ಬೇಕು, ಏನ್ ಕೇಳಬೇಕು ಗೊತ್ತಾಗ್ಲಿಲ್ಲಾ.!
ಸುಮ್ನ ಅವನೀಗ ನೋಡಿ ಕೇಳ್ದೆ.. " ಮತ್ತ ಬಿಕ್ಷುಕರು..?"

ಗೊತ್ತಿಲ್ಲ ಅನ್ನೋ ಅರ್ಥ ಬರಂಗ..
ತುಟಿ ಒತ್ತಿ ಹಿಡಿದು, ಎರಡು ಹುಬ್ಬು ಒಮ್ಮೆಲೇ ಮ್ಯಾಲ ಮಾಡದ..!!


ನಾ ಸಣ್ಣಗ ಅನ್ಕೊಂಡೆ
ಅವರಿಗೊಂದೊಂದು "ಕಾರ್ಡ್ ಮಶೀನು" ಅಂತ ನಮ್ಮ ಸರಕಾರ ಕೊಟ್ಟರ,,,
ಆಶ್ಚರ್ಯ ಇಲ್ಲ ಬೀಡು..?


ಕಡೀಗ ನನ್ನ ತಲ್ಯಾಗ ಉಳದಿದ್ದ್ ಒಂದೇ,


"
ಇದೆಲ್ಲ ನಮ್ಮ ವಿಕಾಸಕ್ಕೋ, ವಿನಾಶಕ್ಕೋ..?"
ನಮ್ಮ ಜೀವನ ಎಲ್ಲಿ ಹೊಂಟೈತಿ...?



ಹೀಂಗ ಆದ್ರ ಹ್ಯಾಂಗ್...?