Mar 17, 2011

ನನ್ನ ಅಜ್ಜಿ ಸಾತವ್ವ..


ಮೊನ್ನೆ ಮೊನ್ನೆ, 'ಮಹಿಳಾ ದಿನಾಚರಣೆ' ಆಯ್ತು.
ಒಬ್ಬ ಮಹಿಳೆ/ಹೆಣ್ಣು, ಒಬ್ಬ ಮನುಷ್ಯನ ಜೀವನದಲ್ಲಿ, ಒಂದು ಸಂಸಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ..

ಹೆಣ್ಣು ಒಂದು ಶಕ್ತಿ ಅಂತಾರೆ,
ಒಬ್ಬ ಗಂಡಿನ ಜೀವನದಲ್ಲಿ, ಆದರ್ಶ ಮಹಿಳೆ ಅಂತ ಒಬ್ಬಳು ಇದ್ದೆ ಇರ್ತಾಳೆ ಅನ್ನೋ ನಂಬಿಕೆ ನನ್ನದು.
ಅದು, ಅಮ್ಮ, ಅಕ್ಕ-ತಂಗಿ, ಗೆಳತಿ, ಪತ್ನಿ, ಮಗಳು..
ಮೊನ್ನೆ ಮಹಿಳಾ ದಿನಾಚರಣೆ ದಿನ ಸುಮ್ನೆ ಯೋಚನೆ ಮಾಡಿದೆ, ನನ್ನ ಜೀವನದಲ್ಲಿ ಅಂತಹ ಹೆಣ್ಣು ಯಾರು.?
ತುಂಬಾ ಯೋಚನೆ ಮಾಡಿದ ಮೇಲೆ ಅನಿಸಿದ್ದು. ಅಜ್ಜಿ..!
ನನ್ನ ಅಜ್ಜಿ ಸಾತವ್ವ ..

'ಸಾತವ್ವ-ರೇವಪ್ಪ' ದಂಪತಿಗಳ ದೊಡ್ಡ ಸಂಸಾರ, ೯ ಮಕ್ಕಳು. ಎಂಟು ಗಂಡು ಒಂದು ಹೆಣ್ಣು.
ಅವರ ಏಳನೇ ಮಗನ ಹಿರಿಮಗನೇ ನಾನು.
ಸದ್ಯಕ್ಕೆ ನನ್ನ ಅಜ್ಜಿ ಬಗ್ಗೆ ನಿಮಗೆ ಹೇಳಬೇಕು..


ನನ್ನ ಅಜ್ಜ ಮೌನಿ, ತಾನಾಯ್ತು ತನ್ನ ಕೆಲಸ ಆಯ್ತು.
ಚಟ ಅಂತ ಇದ್ದದ್ದು ಎರಡೇ ಎರಡು. ಒಂದು ಚಹಾ ಇನ್ನೊಂದು ಕಲ್ಲಸಕ್ರೆ..!
ಅಜ್ಜಿ ಮಾತು ಆದ್ರೆ, ಹರಟೆ ಅವಳದಲ್ಲ..!
ಇದ್ದ ಸ್ವಲ್ಪ ಜಮಿನಿನಲ್ಲೇ ಕಷ್ಟ-ಸುಖ ಎರಡು ಇದ್ದವು, ಆದ್ರೆ ಅಜ್ಜಿದು ಗೊಣಗೋ ಜಾಯಮಾನ ಅಲ್ಲ.
ದುಡಿಯೋ ಹೆಣ್ಣು. ಹೊಲದಲ್ಲಿ ಕೆಲಸ ಮಾಡಿದ್ರು ಅವಳದ ನಿಜವಾದ ಕೆಲಸ ಮನೆ.
ಇದ್ದ ೯ ಮಕ್ಕಳಲ್ಲಿ ಒಬ್ಬಳೇ ಮಗಳು. ನನ್ನ ಸೋದರತ್ತೆ. ೧೨ ವಯಸ್ಸಿನಲ್ಲಿ ಕಣ್ಣು ಹೋಯಿತು, ಕಾರಣ ಗೊತ್ತಾಗ್ಲಿಲ್ಲ.
ಮಗಳು ವಯಸ್ಸಿಗೆ ಬರೋ ದಿನದಲ್ಲಿ ಹೀಂಗ್ ಆಯ್ತಲ್ಲ ಅಂತ ಕುಡಲಿಲ್ಲ,
ಮಗಳಿಗೆ ಕೆಲಸ ಕಲಿಸಿದಳು ಅಜ್ಜಿ.!
ಮುಂದೆ ಕೆಲವು ವರ್ಷ ಎಲ್ಲವು ಚೆನ್ನಾಗಿತ್ತು.ಆದ್ರೆ ಒಂದಿನ ಮಗಳು ತಿರಿಹೊದಳು. ಮೊದಲ ಆಘಾತ.
ಆದರೂ ಗಟ್ಟಿಗಿತ್ತಿ,ತನ್ನ ಎಂಟು ಮಕ್ಕಳ ಬೆಳೆಸೋ ಜವಾಬ್ದಾರಿ ಹೊತ್ತಳು. ಅಜ್ಜ ಹೊಲ ಅಜ್ಜಿ ಮನೆ.

ತನ್ನ ಹಿರಿ ಮಗ ಓದಬೇಕು ಅಂತ ದೊಡ್ಡ ಆಸೆ, ಆದ್ರೆ ಆವಾಗ ಎಲ್ಲಿದ್ದವು ಶಾಲೆ..?
ಆದರು ಬಿಡಲಿಲ್ಲ ಹಿರಿಮಗನಿಗೆ ತನ್ನ ತವರಿಗೆ ಕಳಿಸಿದಳು, ತನ್ನ ತಮ್ಮನ ಮಕ್ಕಳ ಜೊತೆ ಬಿಟ್ಟು ಬಂದಳು. ಮಹಾರಾಷ್ಟ್ರದಲ್ಲಿ..!
ನನ್ನ ಅಜ್ಜಿ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದಲ್ಲಿ, ಆದ್ರೆ ಕನ್ನಡ ಮಾತೃ ಭಾಷೆ. ಅಜ್ಜನದು ಕರ್ನಾಟಕ, ಕನ್ನಡ.

ಮುಂದೆ ಊರಲ್ಲೇ ಶಾಲೆ ತೆರೆಯಿತು, ಆದ್ರೆ ಎಲ್ಲ ಮಕ್ಕಳು ಓದಲಿಲ್ಲ.
೩ ಮಕ್ಕಳು ಓದಿದರು ಉಳಿದ ೪ ಮಕ್ಕಳು ಸ್ವಲ್ಪ ಓದಿ ಹೊಲದ ದಾರಿ ಹಿಡಿದರು. ಅಜ್ಜಿಗೆ ಬೇಜಾರಿಲ್ಲ.
ಮಕ್ಕಳು ದುಡಿದು ತಿನ್ನಬೇಕು ಅಷ್ಟೇ..!
ಎಂಟು ಜನರಲ್ಲಿ ನಾಲ್ಕು ಜನ ವಿವಿಧ ಕೆಲಸದಲ್ಲಿ ಬೇರೆ ಊರು ಸೇರಿದರು, ನಾಲ್ಕು ಜನ ಊರಲ್ಲಿದಾರೆ.

ಮುಂದೆ ಮಕ್ಕಳ ಮದುವೆ, ಮೊಮ್ಮಕ್ಕಳು.. ಇದ್ದ ಜಮೀನು ಜಾಸ್ತಿ ಆಯ್ತು, ದೊಡ್ಡ ಸಂಸಾರ..
ಬೇರೆ ಊರಲ್ಲಿದ್ದ ಮಕ್ಕಳು ಹುಟ್ಟೂರು ಮರೆಯಲಿಲ್ಲ.

ಇಷ್ಟೆಲ್ಲಾ ಆದರೂ ಮನೆಯಲ್ಲಿ ಯಾವುದೇ ವಿಷಯಕ್ಕೆ ಇಲ್ಲಿ ತನಕ ಜಗಳ ಮುನಿಸು ಯಾವುದು ಇಲ್ಲ.!
ಭಿನ್ನಾಭಿಪ್ರಾಯಗಳು ಹಲವು ಸಲ ಬಂದಿದೆ, ಹಾಗೆ ಹೋಗಿದೆ.
ಮುಂದೆ ಮಕ್ಕಳಿಗೆ ಪಾಲು ಮಾಡಲಿಲ್ಲ ಅಜ್ಜಿ. ತಮ್ಮ ಇದು ನಿಂದು ಇದು ನಿಂದು. ಅಷ್ಟೇ.
ಒಬ್ಬೆ ಒಬ್ಬ ಮಗ ನನಗೆ ಇದು ಬೇಡ, ಅದೇ ಬೇಕು. ಇನ್ನಷ್ಟು ಬೇಕು..? ಊಹು..!
ಒಬ್ಬೆ ಒಬ್ಬ ಮಾತಾಡಿಲ್ಲ, ಅದಕ್ಕೂ ಕಾರಣ ಅಜ್ಜಿ. ಅವಳಮಾತೆ ಹಾಗೆ.

ತೀರ ಬಡತನ ನೋಡಿದಾಳೆ, ಕೈ ತುಂಬಾ ದುಡ್ಡು ಬಂತು, ಸೊಸೆಯಂದಿರು ಬಂದರು. ಅಜ್ಜಿ ಬದಲಾಗಲಿಲ್ಲ.
ಸೊಸೆಯಂದಿರು ಒಂದೇ ಒಂದು ದಿನ ಜಗಳ ಮಾಡಲಿಲ್ಲ. ಎಂಟೂ ಜನ..!
ನನ್ನ ಅಜ್ಜಿ, ಸೊಸೆಯಂದಿರಿಗೆ ಸೊಸೆ ಅನ್ನಲಿಲ್ಲ, ನನ್ನ ಹೆಣ್ಣ್ ಮಕ್ಳು ಅಂದ್ಲು. ಅವಳು ಅತ್ತೆ ಆಗಲಿಲ್ಲ, ಅವ್ವ ಆದಳು.

***
ಒಬ್ಬರ ನ್ಯುನ್ಯತೆ, ಅಂಗವೈಕಲ್ಯ ದ ಬಗ್ಗೆ ಮಾತಾಡಿದ್ರೆ ಅಜ್ಜಿ ಯ ಸಿಟ್ಟು ಭಯಂಕರ.
ಊರಲ್ಲಿ ಒಬ್ಬ ಕಿವುಡ ಇದ್ದ ಶರಣಪ್ಪ ಅಂತ. ಮನೆಯಲ್ಲಿ ಯಾರಾದ್ರು, ಹೇಯ್ ಅವ ಕಿವುಡ ಶರಣಪ್ಪ್....
ಅಂತ ಏನಾದ್ರೂ ಅಂದರೋ, ಅವತ್ತಿನ ಅವರ ನಸೀಬು ಖರಾಬು.!
ಇನ್ನೊಬ್ಬನಿದ್ದ ರಾಜು, ಒಂದು ಕಾಲಿಂದ ಅಂಗವಿಕಲ. ಅವನಿಗೆ, ಕುಂಟ ರಾಜ.......ಅಂದರೋ ಅವರ ಕಾಲು ಮುರಿದಂಗೆ..!!

"ಯಾಕ್ ಹಾಂಗ್ ಕರಿತಿರೋ ಖೋಡಿಗೋಳ್ಯಾ.?
ದೇವರು ಅವರಿಗ ಹಂಗ ಮಾಡ್ಯಾನ.
ನಿಮ್ಮ ಕೈಲಿ ಚೊಲೋ ಮಾಡಕ್ಕ ಆಗಂಗಿಲ್ಲ.
ಅವರ ಅಪಂಗತನ ಅವರಿಗ ಮತ್ತ ಮತ್ತ ನೆನಪ ಮಾಡಿ ಯಾಕ್ ಅವರ ಮನಸಿಗ ಬ್ಯಾಸರ ಮಾಡ್ತೀರಿ..?"
ಗೌಡ್ರ ಶರಣಪ್ಪ, ಕುಂಬಾರ ರಾಜು ಅಂತ ಕರದರ ನಿಮ್ಮ ಬಾಯಿಗ ಏನರ ಬ್ಯಾನಿ ಏನು..?

**
ಜಾತಿ:
ಅಜ್ಜಿ ಯಾವತ್ತಿಗೂ ಜಾತಿ ನೋಡಲಿಲ್ಲ.
ಕಳೆದ ೩೦ ವರ್ಷಗಳಿಂದ ದೊಡ್ಡಪ್ಪನ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿರುವ 'ಮಕಬುಲ್ ಚಾಚಾ' ಗು ಅವಳು ಅವ್ವ.

ಗಂಡು ಮೊಮ್ಮಕಳಲ್ಲಿ ೫ ಜನರ ಮದುವೆ ಆಗಿದೆ, ಅದರಲ್ಲಿ ೩ ಜನರ ಪ್ರೇಮ ವಿವಾಹ..!
ತನ್ನ ಹಿರಿಯ ಮಗನ ಮೊದಲ ಮಗ ಸತೀಶ್.
ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೋದಾಗ ಅಲ್ಲಿ ಭಾರತಿಯ ಮೂಲದ ಹುಡುಗಿಯನ್ನು ಇಷ್ಟ ಪಟ್ಟ,
ದೊಡ್ಡಪ್ಪ ಒಮ್ಮೆ ಅಜ್ಜಿನ ಕೇಳಿದರು.
ಅಜ್ಜಿ ಹೇಳಿದಳು; "ತಮ್ಮ, ಯಾವ ಜಾತಿ, ಎಷ್ಟ ಶ್ರೀಮಂತರು ಇವೆರಡು ಬ್ಯಾಡ.
ಹುಡುಗಿ ಮನೆಯವರು ನಾಕ ಮಂದ್ಯಾಗ ಎಂತಹ ಹೆಸರು ಇಟ್ಟಾರ ಅಷ್ಟ ನೋಡು ಸಾಕು..!
ನಾಲ್ಕು ಹೂವಿನ ಜೋಡಿ ಮನಿಗ ಕರ್ಕೊಂಡು ಬಾ."

ಮುಂದೆ ಎಲ್ಲರ ಸಮ್ಮುಖದಲ್ಲಿ ಅಣ್ಣನ ಮದುವೆ ಆಯ್ತು. ಅಂದ ಹಾಗೆ ನನ್ನ ಅತ್ತಿಗೆ ಬಿಹಾರದವರು, ಅವರ ತಂದೆ ವೈದ್ಯರು.
ಇನ್ನೊಬ್ಬ ಅತ್ತಿಗೆ 'ಪಂಜಾಬಿನವರು' ಮತ್ತೊಬ್ಬರು ನಮ್ಮ ಜಿಲ್ಲೆಯವರೆ.

ನಮ್ಮ ಮನೆಯಲ್ಲಿ ಎಲ್ಲ್ಲರು ಸೇರಿದರೆ, ಅದೊಂದು ಜಾತ್ರೆಯೆ ಸರಿ. ಬಗೆ ಬಗೆಯ ಭೋಜನ..
ಭಾಷೆಗಳೋ, ಕನ್ನಡ, ಮರಾಠಿ, ಹಿಂದಿ, ಪಂಜಾಬಿ, ಬಿಹಾರಿ, ಇಂಗ್ಲಿಷ್..
ನಮ್ಮದು ಒಂದು ತರಹ, ಸಮ್ಮಿಶ್ರ ಸಂಸಾರ :)

***
ಹೆಣ್ಣು ಮತ್ತು ಶಿಕ್ಷಣ:
ಅಜ್ಜಿಗೆ ಓದು ಬರಹ ಗೊತ್ತಿಲ್ಲ.
ಮನೆಯಲ್ಲಿ ಹೇಳುತಿದ್ದ ಮಾತು,
ಹೆಣ್ಣ ಮಕ್ಳು ಓದಬೇಕು ಕೆಲ್ಸಾನು ಮಾಡಬೇಕು ಆದ್ರ, ಹೆಣ್ತನ ಮರಿಬ್ಯಾಡದು ಅಷ್ಟೇ ನೋಡ್ರಿ.!

ಒಂದು ಮಧ್ಯಾನ ದೊಡ್ಡಮ್ಮ ಸುಮ್ನೆ ಕೂತಿದ್ದು ನೋಡಿ; "ತಂಗಿ ಯಾಕ್ ಹಂಗ ಕುಂತಿ..?
ನೋಡವ್ವ ನಾ ಸಾಲಿ ಕಲ್ತಾಕಿ ಅಲ್ಲ, ಆದರೂ ಒಂದು ಮಾತ್ ಹೇಳ್ತೀನಿ.
ಮಧ್ಯಾನ ಹೀಂಗ್ ಸುಮ್ಮನ ಕುಡು ಬದಲಿ, ಅಲ್ಲಿ ಮ್ಯಾಲಿನ ಸಾಲಿಗ ಹೋಗಿ ಹುಡುಗರಿಗ ಏನರ ಹೇಳಿ ಕೊಡು."

ಅಲ್ಲಿಯತನಕ ದೊಡ್ಡಮ್ಮನಿಗೆ ಹೊಳೆಯದಿದ್ದ ವಿಚಾರ ಅಜ್ಜಿಗೆ ಹೊಳೆದದ್ದು ನೋಡಿ ಆಶ್ಚರ್ಯ.
ದೊಡ್ಡಮ್ಮ ತಡ ಮಾಡಲಿಲ್ಲ, ಶಾಲೆಯಲ್ಲಿ ಮಾತಾಡಿ ಬಂದ್ರು.
ಬಿಡುವಿದ್ದಾಗ ಆ ಶಾಲೆಗೆ ಹೋಗಿ ತಮ್ಮ ಇಷ್ಟದ 'ಸಮಾಜ ಶಾಸ್ತ್ರ' ಹೇಳ್ತಾರೆ.
ವಾರಕ್ಕೆ ಮೂರೂ ದಿನ ತೋಟಕ್ಕೂ ಹೋಗ್ತಾರೆ. ಅವರು ಓದಿದ್ದು 'ಬಿ.ಎ.' ೩೦ ವರ್ಷಗಳ ಹಿಂದೆ.

ಇದನ್ನ ನೋಡಿ, ಚಿಕ್ಕಮ್ಮ ಅಕ್ಕ-ಪಕ್ಕ ಮನೆ ಮಕ್ಕಳಿಗೆ ಪಾಠ ಹೇಳಲಿಕ್ಕೆ ಶುರು ಮಾಡಿದರು.

ಇವೆಲ್ಲ ಆದ ಮೇಲೆ ಅಜ್ಜಿಯ ಮೇಲೆ ಸೊಸೆಯಂದಿರ ಪ್ರೀತಿ ಇನ್ನಷ್ಟು ಜಾಸ್ತಿ ಆಯ್ತು.
ಕೆಲವೊಮ್ಮೆ ಮನೆಯಲ್ಲಿನ ಗಂಡಸರ ಕಿವಿ ಮೇಲೆ ಒಂದು ಮಾತು ಬಿಳ್ತಿತ್ತು,
ನಿಮ್ಮ ಅವ್ವಗ ಇರೋ ಬುದ್ದಿ ನಿಮಗಿಲ್ ನೋಡ್ರಿ. :) ಹ ಹ.

--
ತುಂಬಾ ಶ್ರೀಮಂತ ಮನೆತನದ ಪರಿಚಯದ ದಂಪತಿಗಳು ಮನೆಗೆ ಬಂದಿದ್ದರು.
ದಂಪತಿಗಳ ಜೊತೆ, ಎಲ್ಲರ ಹರಟೆ-ಊಟ ನಡಿಯಿತು.
ಸ್ವಲ್ಪ ಹೊತ್ತು ಆದಮೇಲೆ, ಆ ದಂಪತಿಗಳು ಅಜ್ಜಿಯೊಡನೆ ಮಾತಿಗೆ ಕುಳಿತರು. ಒಮ್ಮೆಗೆ ಅಜ್ಜಿ ಅವರ ಪತ್ನಿಗೆ ಬೈಯಲು ಶುರು ಮಾಡಿದರು..!
ಎಲ್ಲರಿಗೂ ಯಾಕೆ ಅಂತ ಗೊತ್ತಾಗಲಿಲ್ಲ,

"ಹಾಲು ಹೆಚ್ಚಾಗಿದ್ರ, ಮೊಸರು, ಮಜ್ಜಗಿ, ತುಪ್ಪ ಮಾಡ್ತಾರ. ಇಲ್ಲ ದೂದ್ಖೀರ್ ಮಾಡ್ತಾರ. ಆದ್ರ ನೀವು ಹಾಲಿಂದ ಕುಂಡಿ ತೊಳ್ಕೋತಿರಿ. ಅಂತ ಮಂದಿ ನೀವು"
ಅಷ್ಟ ಹೆಚ್ಚ ಇದ್ರ ಬಡವರ್ ಮಕ್ಕಳಿಗ ಕೊಡ್ರಿ, ಮನ್ಯಾನ ಬೆಕ್ಕು ನಾಯಿಗ ಕುಡಿಸ್ರಿ, ನೀವು ಕುಂಡಿ ತೊಳ್ಕೋಳೋ ಮಂದಿ..

ಅಜ್ಜಿಯ ಪಿತ್ತ ಈ ಪರಿ ನೆತ್ತಿಗೆರಲು ಕಾರಣ ಅವರ ಪತ್ನಿಯ ಕಾಲುಂಗರ..!
ಅದು ಬಂಗಾರದಾಗಿತ್ತು.!!

ಅಜ್ಜಿಯ ಪ್ರಕಾರ ಬಂಗಾರದ ಕಾಲುಂಗುರ ದೇವಿ ಲಕ್ಷ್ಮಿ, ದೇವತೆಯರು ಮಾತ್ರ ಹಾಕೋಬೇಕು.
ಮನುಷ್ಯರೆನಿದ್ರು ಸೊಂಟದಿಂದ ಮೇಲೆ ಹಾಕಬೇಕು.!
ಕೊನೆಗೂ ಅಜ್ಜಿ ಅವರಿಗೆ ಮನೆಯಲ್ಲಿದ್ದ ಬೆಳ್ಳಿ ಕಾಲುಂಗರ ಹಾಕಿಯೇ ಬಿಟ್ಟಳು.
ಇದು ಅಜ್ಜಿಯ ಸಿಟ್ಟಿನ ಇನ್ನೊಂದು ಮುಖ.

--

ಸಂಭಂದಿಕರೊಬ್ಬರು ಮನೆಗೆ ಬಂದು ತಮ್ಮ ಸೊಸೆಗೆ ಅಬೋಶನ್ ಮಾಡಿಸಿದ್ದು ಹೇಳಿದರು, ಹಂಗಂದ್ರೆ ಶಿಶು ಭ್ರೂಣ ಹತ್ಯೆ ಅಂತ ಅಜ್ಜಿಗೆ ಗೊತ್ತಾಗಲಿಲ್ಲ.
ಆಮೇಲೆ ಅವರು ಅಜ್ಜಿಯ ಜೊತೆ ಕುಳಿತಾಗ ಅಜ್ಜಿ ಕೇಳಿಯೇ ಬಿಟ್ಟಳು, 'ನಿನ್ನ ಸೋಸಿಗ ಏನಾಗ್ಯದ. ಏನ್ ಮಾಡ್ಸಿ..?'

"ಹೊಟ್ಟಿ ತೆಗಿಸಿವಿ, ಮೊದಲಿನ ಮೂರೂ ಹೆಣ್ಣೇ ಅದಾವ ಈಗಿಂದು ಹೆಣ್ಣೇ ಅಂತಂದ್ರು, ಅದಕ್ಕ ಹೊಟ್ಟಿ ತೆಗೆಸಿವಿ."

ಹಾ...? ಅಲಾ ನಿಮ್ಮ ಜನುಮಕ್ಕ್ ಇಷ್ಟು, ನೀವೇನು ಮನುಷ್ಯರಾದಿರಿ..?
ಹೆಣ್ಣ ಅಂತ ಹೊಟ್ಟಿ ತೆಗೆಸ್ತಾರ..?
ಹಂಗಂದ್ರ ನೀ ಇಗ ಹೆಣ್ಣೇ ಆಗಿಯಲ್ಲ ನಿನಗ ಏನ್ ಮಾಡಬೇಕು..?

"ಹೆಣ್ಣಿಗ ಹೆಣ್ಣೇ ಕಿಮ್ಮತ ಕೊಟ್ಟಿಲ್ಲ ಅಂದ್ರ ಗಂಡಸರು ಕೊಡಬೇಕು ಅಂತ ಹ್ಯಾಂಗಂತಿರಿ.?"

"ಒಂದು ಕೆಲ್ಸಾ ಮಾಡು, ಮೊದಲ ನಿಮ್ಮ ಅವ್ವನ ಕುತಗಿ ಒತ್ತು, ಹಂಗೆ ನಿಮ್ಮ ಅತ್ತಿದು.
ಆಮೇಲೆ ನಿನ್ನ ಹೆಣ್ ಮಕ್ಳಿಗ, ಸೋಸೆದಿರಿಗ ಭಾವಿಗ ನೂಕು.
ಮೂರೂ ಮೊಮ್ಮಕಳು ಹೆಣ್ಣೇ ಅಲ್ಲ, ಅವುಕೆಲ್ಲ ವಿಷ ಕುಡ್ಸು. ಕಡೀಗ ನೀ ನೇಣ ಹಾಕೊಂಡು ಸಾಯಿ..!"
ಸಾಯಿ ಹೋಗ್.!!!

ಹೆಣ್ಣ ಯಾಕ್ ಬ್ಯಾಡ ನಿಮಗ.?
"ಮುಟ್ಟು, ಬಸೀರು, ಹಾಲುಣಸೋದು.. ದೇವರು ಹೆಣ್ಣಿಗೇ ಯಾಕ್ ಕೊಟ್ಟಾನ..?
ಅದು ಹೆಂಗಸರ ತಾಕತ್ತು..!!"
ಇಂತ ಭಾಗ್ಯ ಗಂಡಿಗಿಲ್ಲ.
ಇದು ಹೆಂಗಸಿನ ಭಾಗ್ಯ. ಹೆಣ್ಣಾಗಿ ಹುಟ್ಟಬೇಕಂದ್ರ ಪುಣ್ಯ ಮಾಡಿರಬೇಕು.!!

--

ಅಜ್ಜಿಯ ಪ್ರಕಾರ ಒಂದು ಸಂಸಾರದ ಸಂತೋಷಕ್ಕೆ, ಉನ್ನತಿಗೆ ಮುಖ್ಯ ಕಾರಣ ಹೆಣ್ಣು.
ಗಂಡು ಬೆಳಿಗ್ಗೆ ಇಂದ ಸಂಜೆ ತನಕ ದುಡಿತಾನೆ, ಮನೆಗೆ ಬೇಕಾದು ಆ ದುಡಿಮೆಯಿಂದಾನೆ.
ಗಂಡಸಿಗೆ ಪ್ರೀತಿ ಮರಿಯಾದೆ ಕೊಡಬೇಕು. ದುಡಿಯೋ ಜೀವ. ಅದಕ್ಕ ಪ್ರೀತಿ ಬೇಕು.
ಆದ್ರೆ, ಸಂಸಾರ ನಿಭಾಯಿಸೋದು ಮುಖ್ಯವಾಗಿ ಹೆಣ್ಣು..!
ತನ್ನ ಎಂಟು ಸೊಸೆಯಂದಿರಿಗೆ ಹೇಳಿಕೊಟ್ಟದ್ದು ಇದನ್ನೇ.

ಅವಳ "ಕ್ಲಾರಿಟಿ ಆಫ್ ಥಾಟ್ಸ್" ಅದ್ಭುತ.

ಯಾರಾದ್ರು ಮಾತಿಗೆ, ಈಗಿನ ಕಾಲದ ಮಕ್ಳು ಸರಿಯಿಲ್ಲ ಹಂಗೆ ಹಿಂಗೆ ಅಂದ್ರೆ, ಅಜ್ಜಿಯ ನೇರ ಮಾತು, ಕಾರಣ ನೀವೇ..!
ಪಾಲಕರು ಹೇಗೋ ಮಕ್ಕಳು ಹಾಗೆ, ತೀರ ಮುದ್ದು ತೀರ ಹದ್ದು ಬಸ್ತು ಎರಡು ತಪ್ಪು.
'ಮಕ್ಕಳ ಜೋಡಿ ಮಾತಾಡಬೇಕು' ಬರೇ ರೊಕ್ಕ, ಹೊಲ, ಬಂಗಾರ, ಓದು, ಜೀವನ ಅಲ್ಲ. ಮೊದಲ ಒಳ್ಳೆ ಮನುಷ್ಯ ಆಗ್ರಿ'.
ಅವ್ವ ಅಪ್ಪ ಮಕ್ಕಳ ಜೋಡಿ ಚೊಲೋ ಮಾತಾಡ್ರಿ, ಒಂದು ಕಣ್ಣ ಅಳತಿ ಒಳಗಾ ಅವರನ್ನ ನೋಡ್ರಿ.

ಅಜ್ಜಿ ಸುಮ್ ಸುಮ್ನೆ ಯಾವತ್ತಿಗೂ ಯಾರಿಗೂ ಬೈದೊಳಲ್ಲ, ಒಮ್ಮೆ ಬೈದರೆ ಅಕಟಕಟ..!!

ಸುಮ್ನೆ ಹರಟೆ ಹೊಡಿಯೋರನ್ನ ಕಂಡ್ರೆ ಆಗಲ್ಲ.
"ತಂಗಿದೆರ ಯಾಕ್ ಹೀಂಗ್ ಕುಂತಿರಿ ಏನರೆ ಮಾಡ್ರಿ.?
ಕಾಳು ಹಸನ್ ಮಾಡ್ರಿ, ನಾಕು ಹೊಸ ಚುಕ್ಕಿ (ರಂಗೋಲಿ) ಕಲೀರಿ, ನಾಕು ಪದ ಬಾಯಿಪಾಠ ಮಾಡ್ರಿ, ಇಲ್ಲ ಕೌದಿ ಹೊಲಿರಿ.
ಸುಮ್ಮ ಯಾಕ್ ಕುಂತಿರಿ. ಮಾಡಕ್ಕ ರಗಡ ಕೆಲ್ಸಾ ಅದಾವ್, ಯಾವ್ ಕೆಲ್ಸಾನು ಸಣ್ಣದು ಅಲ್ಲ. ಒಂದೊಂದು ಕೆಲ್ಸಾನು ವಿದ್ಯಾ ಇದ್ದಂಗ.
ಕೂಸಿನ ಕುಂಡಿ ತೊಳಿಯೋದೆ ಇರ್ಲಿ, ಕುಲಾಯಿ ಹೊಲಿಯೋದೆ ಇರ್ಲಿ.
ಅದು ಒಂದು ವಿದ್ಯೆನೆ, ಅದು ಒಂದು ಕೆಲ್ಸಾನೆ.." ಅನ್ನೋಳು.

--

ನಮ್ಮ ಮನೆಯಲ್ಲಿ ಎಲ್ಲ ಗಂಡಸರಿಗು ತಕ್ಕ ಮಟ್ಟಿಗಿನ ಅಡಿಗೆ ಗೊತ್ತು. ಅದಕ್ಕೂ ಅಜ್ಜಿನೆ ಕಾರಣ. ಅದೂ ಒಂದು ವಿದ್ಯೆ.

ಗಂಡಸರಿಗೆ ಅವಳು ಹೇಳಿದ್ದು ಎಷ್ಟೊಂದು, ಮನೆಯಲ್ಲಿ ಹೆಣ್ಣು ಮಕ್ಳು ತಿಂಗಳ ದಿನದಲ್ಲಿದ್ದಾಗ ದೇವರ ಪೂಜೆ ಮಾಡೋ ಹಾಗಿಲ್ಲ.
ಆವಾಗ ಗಂಡಸರೇ ಪೂಜೆ ಮಾಡಬೇಕು, ದೇವರು ತೊಳ್ದು, ಕುಂಕುಮ, ದೀಪ, ಉದಿನ ಕಡ್ಡಿ ಹಚ್ಹ್ಚಾಕ್ ಎಷ್ಟ್ಹೊತ್ತು ಬೇಕು ನಿಮಗ, ಮೊದ್ಲು ಅದು ಕಲೀರಿ.!
ಅವಳ ಪ್ರಕಾರ ಯಾವ ಕೆಲ್ಸಾನು ಚಿಕ್ಕದು ದೊಡ್ಡದು ಅಂತಿಲ್ಲ, ಕೆಲ್ಸಾ ಅಂದ್ರೆ ಒಂದು ವಿದ್ಯೆ.

ನಾನು ಪಿ.ಯು.ಸಿ ಫೇಲ್ ಆಗಿದ್ದೆ. ತುಂಬಾ ದಿನ ಎಲ್ಲಿಯೂ ಹೋಗಿರಲಿಲ್ಲ. ತುಂಬಾ ದಿನಗಳ ನಂತರ ಊರಿಗೆ ಹೋದಾಗ ಅಜ್ಜಿ ಪಕ್ಕ ಕೂಡಿಸಿಕೊಂಡು ಹೇಳಿದಳು,
ಕುಸ; ಕಲಿಲಿಕ್ಕ ಯಾವ ವಯಸ್ಸು ಆದ್ರ ಏನು ಹೀಂಗ ಬ್ಯಾಸರ ಮಾಡ್ಕೊಂಡು ಎಲ್ಲರ ಜೋಡಿ ಮಾತ್ ಬಿಟ್ರ ಹ್ಯಾಂಗ.

ನಿಮ್ಮ ದೊಡ್ಡಪ್ಪ ಗುರುಮೂರ್ತಿ (ಹಿರಿಮಗ) ಗೊಗಾ೦ವ್ (ಅಜ್ಜಿಯ ತವರು) ಕಳ್ಸಿದಾಗ ಅವನ ವಯಸ್ಸು ಎಷ್ಟ ಇತ್ತ ಗೊತ್ತ ನಿನಗ..?
ಬರೋಬರಿ ಹದಿನಾಲ್ಕು..! ಅವಾ ಸಾಲಿಗ ಹೋಗಿ ಓದಕ್ಕ ಶುರು ಮಾಡಿದ್ದು ಆ ವಯಸ್ಸಿನ್ಯಾಗ..!
ಅವ ಏನ್ ಆಗ್ಯಾನ ನಿನಗ ಗೊತ್ತದ..
ನನಗೆ ಆಶ್ಚರ್ಯ...!!
ನನ್ನ ದೊಡ್ಡಪ್ಪ ಓದಿದ್ದು, MA,LLB,IAS.
ಓದಿದ್ದ ನಾಲ್ಕು ಮಕ್ಕಳಲ್ಲಿ ಒಬ್ಬ, ಐ.ಎ.ಎಸ್, ಡಾಕ್ಟರ್, ಸರಕಾರೀ ನೌಕರ, ಮೆಡಿಕಲ್ ಅಂಗಡಿ.

"ಎಂಟು ಮಕ್ಕಳು-ಸೊಸೆಯಂದಿರು, ಇಪ್ಪತ್ತನಾಲ್ಕು ಮೊಮ್ಮಕ್ಕಳು. ಮೂವತ್ತೆಂಟು ಮರಿಮೊಮ್ಮಕ್ಕಳು.."
ಇವತ್ತು ನಾವೆಲ್ಲಾ ಬೇರೆ ಬೇರೆ ಊರಲ್ಲಿ ಇದಿವಿ, ಮನಸ್ಸುಗಳು ಒಂದೇ ಆಗಿವೆ. ಇದಕ್ಕೆಲ್ಲ ಮುಖ್ಯ ಕಾರಣ ಅಜ್ಜಿ.

ಅಜ್ಜ ಹೋಗಿ ಹತ್ತು ವರ್ಷ ಆಯ್ತು, ನಮ್ಮ ಕುಟುಂಬದಲ್ಲಿ ತುಂಬಾ ದುಖದ ವಿಷಯ, ಗುರುಮೂರ್ತಿ ದೊಡ್ಡಪ್ಪನ ಸಾವು.
ಎಂಟು ವರ್ಷದ ಹಿಂದೆ, ಹೃದಯಘಾತದಿಂದ ನಮ್ಮನ್ನೆಲ್ಲ ಅಗಲಿದರು.
ಹದಿನಾಲ್ಕನೇ ವಯಸ್ಸಿಗೆ ಓದಲು ಶುರು ಮಾಡಿ, ಐ.ಎ.ಎಸ್ ಅಧಿಕಾರಿ ಆಗಿ ನಿವ್ರತ್ತರಾದ ಬಳಿಕವು, "ವನರಾಯಿ" ಎಂಬ ಸಂಸ್ತೆಯಲ್ಲಿ ಸೇವೆ ಸಲ್ಲಿಸಿದರು.
'ರಗಡಿತ ಕಣ್ ವಾಳುಚೆ' ಮರಾಠಿಯಲ್ಲಿ ಅವರ ಆತ್ಮಚರಿತ್ರೆ ಇದೆ.

ಓದಿದ್ದು ಮರಾಠಿ ಮಾಧ್ಯಮದಲ್ಲಾದರು ಕನ್ನಡ ಮರೆಯಲಿಲ್ಲ, ಕರ್ನಾಟಕ ಅಂದರೆ ಅವರು ತಪ್ಪದೆ ಹೇಳುತ್ತಿದ್ದು ಇಬ್ಬರ ಹೆಸರು.
'ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗು ಡಾ.ರಾಜಕುಮಾರ್. '
ನಮ್ಮ ಅಜ್ಜಿಗೆ ತುಂಬಾ ನೋವಿನ ಸಂಗತಿ ದೊಡ್ಡಪ್ಪನ ಸಾವು, ಕಣ್ಣ ಮುಂದ ಮಗ ಸತ್ತ ಅನ್ನೋದು.

ಬದುಕಿದ್ದಿದ್ದರೆ ದೊಡ್ಡಪ್ಪನಿಗೆ ೭೭ ವಯಸ್ಸು ಆಗಿರ್ತಿತ್ತು. ಅಜ್ಜಿಗೆ ತೊಂಬತ್ತು ದಾಟಿ ಎಷ್ತಾಯ್ತೋ ಗೊತ್ತಿಲ್ಲ.
ಸ್ವಲ್ಪ ಕಣ್ಣು ಮಂಜಾಗಿದೆ, ಕಿವಿ ಸ್ವಲ್ಪ ಮಂದವಾಗಿದೆ, ಅಷ್ಟೇ. ಅವಳು ಇನ್ನು ಬಲು ಗಟ್ಟಿ.
ನನಗೆ, ನಮ್ಮ ಈಡಿ ಕುಟುಂಬಕ್ಕೆ ಅವಳು ಮಾಡಿದ್ದು ತುಂಬಾ ಇದೆ.
ಹೆಣ್ಣು ಅಂದಾಗ, ನನ್ನ ಅಜ್ಜಿ ನನಗೆ ಆದರ್ಶ. ನಮ್ಮ ಕುಟುಂಬಕ್ಕೂ.
ನನ್ನ ಅಜ್ಜಿ ಸಾತವ್ವ. ಅಜ್ಜಿ ಅಂದ್ರೆ ನನಗೆ ತುಂಬಾ ಇಷ್ಟ..
ಅವಳಿಗೆ ನನ್ನ ಅನಂತ ನಮನಗಳು.

ಮಹಿಳಾ ದಿನಾಚರಣೆಯ ಶುಭಾಶಯಗಳು.
*****

-ಅನಿಲ್ ಬೇಡಗೆ

28 comments:

 1. ಅನಿಲ್,
  ತುಂಬಾ ಚೆನ್ನಾಗಿದೆ, ನಿಜ ಜೀವನದಲ್ಲಿ ಇಂತಹ ಎಷ್ಟೋ ಹೆಂಗಳೆಯರು ನಮ್ಮಂತವರಿಗೆ ಮಾದರಿಯಾಗಿದ್ದಾರೆ. ನಿಮ್ಮ ಅಜ್ಜಿ ನಿಜಕ್ಕೂ ಗ್ರೇಟ್... ನಿಮ್ಮ ಅಜ್ಜಿಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

  ReplyDelete
 2. ನಿಮ್ಮ ಅಜ್ಜಿಯ ಬದುಕು ಮತ್ತು ಜೀವನದರ್ಶನ ಬಲು ದೊಡ್ಡದು. ಅವರು ನೂರ್ಕಾಲ ಚೆನ್ನಾಗಿರಲಿ, ಹಾಗೆಯೇ ನಿಮ್ಮ ಸಮ್ಮಿಶ್ರ ಸ೦ಸಾರ ಕೂಡ. ಮಹಿಳಾ ದಿನದ ಸ೦ದರ್ಭ ಅವರ ಬಗ್ಗೆ ನೀವು ಬರೆದ ಲೇಖನ ಚೆನ್ನಾಗಿದೆ.

  ReplyDelete
 3. saatavvananthaa heerijeevada parichaya maadisi badukige ondu sphoorthi tumbiddiri. intaha jeevigalu mane belesuvalli maaduva tyaga nijakku adbhuta. tamma ajjiyavarige namma ananta namaskaaragalu. lekhana tumbaa aatmeeyavaagide. kannaali tumbi banda bahudinada nantarada odu.
  nanage nanna taayiya nenapee aayitu. saatajjiyalli nanna ammanannu kande.
  -sitaram

  ReplyDelete
 4. ಅನಿಲರೆ,
  ನಿಮ್ಮ ಅಜ್ಜಿ ಓರ್ವ ಅದ್ಭುತ ಜೀವ!ಅವರ ಬಗೆಗೆ ತುಂಬ ಚೆನ್ನಾಗಿ ತಿಳಿಸಿದ್ದೀರಿ. ಅವರಿಗೆ ನನ್ನ ಅನಂತ ನಮನಗಳು.

  ReplyDelete
 5. ಅನಿಲ್, ಹಳ್ಳಿಯ ಜನರ ಅದರಲ್ಲೂ ಉತ್ತರಕರ್ನಾಟಕದ ಜನರ ಬದುಕಿನ ನಿಷ್ಠೆ ಮತ್ತು ಶ್ರದ್ಧೆಗಳನ್ನು ಹತ್ತಿರದಿಂದ ಬಲ್ಲವ ನಾನು. ತಮಗಿಲ್ಲದಿದ್ದರೂ ಅತಿಥಿಗಳಿಗೆ ಇದ್ದುದನ್ನೇ ಬಡಿಸುವ ಸುಸಂಸ್ಕೃತ ಜನ ಅವರು. ಒಬ್ಬ ಮುದುಕಿ ಹಾಡು ಹೇಳ್ಕೋತಾ ನಮ್ಮೂರಿಗೆ ಬಂದಿದ್ಳು. ಆಕೆ ನಿರ್ಗತಿಕಳು. ಕೈಯ್ಯಲ್ಲಿ ಒಂದು ಚಿಕ್ಕ ಕೈಹಾರ್ಮೋನಿಯಮ್ ಬಿಟ್ಟರೆ ಆಕೆಯ ಹಳೆ ಬಟ್ಟೆ ಮತ್ತು ಒಂದೆರಡು ಪಾತ್ರೆಗಳ ಜೋಳಿಗೆ ಬಗಲೊಳಗಿತ್ತು. ಇಂಪಾಗಿ ಹಾಡಿದಮೇಲೆ ಆಕೆ " ಅಣಾ ನೋಡ್ರೀಪಾ ಏನಾದ್ರೂ ಮಿಕ್ಕಿದ್ದು ಪಕ್ಕಿದ್ದು ಸ್ವಲ್ಪ ಕೊಡ್ರಲ್ಲಾ ಅಜ್ಜೀಗೆ, ವಯಸ್ಸಾಗೇತಿ, ಚಳಿ ಬೇರೆ " ಎನ್ನುತ್ತಾ ನಗುತ್ತಿದ್ದಳು. ದಿನಗಳನ್ನು ಕಷ್ಟದಲ್ಲೇ ಕಳೆಯುತ್ತಿದ್ದರೂ ಪರರಿಗೆ ಅದನ್ನು ನೋವಿನಿಂದ ತೋರ್ಗೊಡದೆ ನಕ್ಕು ತಿಳಿಸುತ್ತಿದ್ದಳು. [ಇದನ್ನು ಕೇವಲ ಉದಹರಿಸಲು ಬಳಸಿದ್ದಕ್ಕೆ ಬೇಸರಿಸಬೇಡಿ] ಬದುಕು ನಾವೆಲ್ಲಾ ಲೆಕ್ಕಹಾಕುವಷ್ಟು ಸುಲಭ ಎಂದಿಗೂ ಅಲ್ಲ. ಇದನ್ನೆಲ್ಲಾ ನಂಬಿಯೇ ಪೂರ್ವಜರು ಹೇಳಿದ್ದು ’ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂದು. ನಟ/ನಟಿಯರನ್ನು ನೋಡುವಾಗ ನಮಗೂ ಮಿಂಚುವ ಆಸೆಯಾಗುತ್ತದೆಯಲ್ಲವೇ ? ಆದರೆ ಎಷ್ಟೋ ನಟನಟಿಯರಿಗೆ ಆ ರಂಗಕ್ಕೆ ಯಾಕಾದರೂ ಬಂದೆವಪ್ಪಾ ಅನಿಸುತ್ತಿರುತ್ತದೆ. ದುಡಿಮೆ ದೇವರ ದಯೆ, ಜೀವನ ನಮ್ಮ ಆಯ್ಕೆಯಲ್ಲ ಬದಲಾಗಿ ಅನಿವಾರ್ಯತೆ. ಸಿಕ್ಕಿದ್ದ ಕೆಲಸವನ್ನು ಸಮರ್ಪಕವಾಗಿ ಮಾಡುವುದು ಜೀವನ ನಾಟಕದ ಪಾತ್ರಪೋಷಣೆ ಚೆನ್ನಾಗಿ ಮಾಡುವುದು ಒಂದು ಯಜ್ಞ. ಜಾಸ್ತಿ ಓದದಿದ್ದರೂ ಮೌಲ್ಯಗಳಿಗೆ ಮೌಲ್ಯಕೊಟ್ಟು ಬದುಕಿದ ನಿಮ್ಮ ಅಜ್ಜಿ-ಅಜ್ಜ ಭಾಗ್ಯವಂತರು, ಪುಣ್ಯವಂತರು. ದೊಡ್ಡ ಸಂಸಾರ ಒತ್ತಟ್ಟಿಗೆ ನಡೆಸುವುದು ಇಂದು ಕಷ್ಟದ ಕೆಲಸ. ಅರ್ಧ ಹೆಂಗಸರೇ ಹಾಗೆ ಇರಲು ಬಿಡುವುದಿಲ್ಲ. ಈಗಂತೂ ಧಾರಾವಾಹಿಗಳ ಸಂಸ್ಕೃತಿ! ಆದಾಗ್ಯೂ ನೀವೆಲ್ಲಾ ಒಟ್ಟಿಗೆ ಇರುವುದು ಸಂತಸದ ಸಂಗತಿ. ಹಿರಿ-ಕಿರಿಯರೆಲ್ಲರೂ ಶತಾಯುಷಿಗಳಾಗಲಿ ಎಂದು ಹಾರೈಸುತ್ತೇನೆ.

  ReplyDelete
 6. anil sorry for commenting late. the narration is so hearttouching.
  yes your ajji is great.

  ReplyDelete
 7. ಅನಿಲ್;ಇಂತಹ ಅದ್ಭುತ ,ಉತ್ತಮ,ಉದಾತ್ತ ಜೀವಿಯ ಬಗ್ಗೆ ಹೇಳಲು ಮಾತು ಹೊರಡದೆ ಮೂಕನಾಗಿದ್ದೇನೆ.ಹೆಣ್ಣು ನಿಜಕ್ಕೂ ಸಂಸಾರದ ಕಣ್ಣು ಆಲ್ಲವೇ?

  ReplyDelete
 8. ಅನಿಲ...

  ಸಾರ್ಥಕ ಬದುಕು ಅಂದರೆ ಇದು...
  ನಮ್ಮ ಹಳ್ಳಿಗಳಲ್ಲಿ ಪ್ರತಿ ಮನೆಗಳಲ್ಲಿ ಇಂದಿಗೂ ಇಂಥಹ ಅಜ್ಜ, ಅಜ್ಜಿಯರಿದ್ದಾರೆ..
  ಅವರ ಅನುಭವವೇ.. ಅಮೃತ..

  ಅವರೊಡನೆಯ ಮಾತುಕತೆ ಒಂದು ಒಳ್ಳೆಯ ಪುಸ್ತಕ ಓದಿದಹಾಗೆ..

  ನಿಮ್ಮ ಅಜ್ಜಿಯವರಿಗೆ ನಮಸ್ಕಾರಗಳನ್ನು ತಿಳಿಸಿ...

  ಈ ಲೇಖನದ ಮೂಲಕ ನಮ್ಮ ಹಿರಿಯರನ್ನೂ ನೆನಪಿಸಿದ್ದಕ್ಕೆ ಧನ್ಯವಾದಗಳು..

  ReplyDelete
 9. ನಿಮ್ಮ ಅಜ್ಜಿ ನಿಜಕ್ಕೂ ಗ್ರೇಟ್ ಅನಿಲ್. ನಿಮ್ಮ ವಂಶ ವೃಕ್ಷದ ಮೂಲ ಬೇರು. ಅವರ ಜೀವನ ನಮಗೆಲ್ಲ ಒಂದು ಆದರ್ಶ ಅಲ್ವಾ ...ಮಹಿಳಾ ದಿನಾಚರಣೆಗೆ ಸೂಕ್ತ ಲೇಖನ. ನಿಮ್ಮ ನಿರೂಪಣೆ ಕೂಡ ತುಂಬಾ ಚೆನ್ನಾಗಿದೆ ಅನಿಲ್. ತುಂಬಾ ಇಷ್ಟವಾಯ್ತು.

  ReplyDelete
 10. ನಿಮ್ಮ ಅಜ್ಜಿಯ ಬಗ್ಗೆ ಓದುತ್ತಾ ಹೋದ೦ತೆ ಅವರ ವಿಶಾಲ ಮನೋಭಾವ, ಸಾತ್ವಿಕ ಕೋಪ, ನೇರವಾದ ಸ್ವಭಾವ ಬಹಳ ಮೆಚ್ಚಿಗೆಯಾಯ್ತು. ಇ೦ಥಾ ಅಜ್ಜಿಯ ಮಾರ್ಗದರ್ಶನದಲ್ಲಿ ಬೆಳೆದ ನೀವೇ ಧನ್ಯರು.

  ReplyDelete
 11. bmbasheer12@gmail.comMarch 27, 2011 at 10:36 AM

  ಆ ಅಜ್ಜಿಯ ಆಶೀರ್ವಾದ ನನ್ನ ಮೇಲಿರಲಿ. -ಬಿ.ಎಂ. ಬಶೀರ್

  ReplyDelete
 12. ಅನಿಲ...ನಿನಗೆಂತಾ ಮಾರಾಯಾ ನಮಗೂ ಅಷ್ಟೇ..ಹಳ್ಳೀಲಿ ಅಜ್ಜೀರಿಗೆ ಇರ್ರೋ ಡಿಮ್ಯಾಂಡು (ಇದ್ದಿದ್ದು ರಾದರ್) ಈವಾಗ ಅಜ್ಜಿರನ್ನ ಕ್ಯಾರೇ ಅನ್ನೊಲ್ಲ...ಹಹಹಹ್
  ಹೌದು ಅವರ ಅನುಭವ ಸಮ್ಚಿಯಿಂದ ಬಹುಮುಖ್ಯ ಕ್ಲೂ ಗಳು ಹೊರಬರ್ತಾವೆ ಕೆಲವೊಮ್ಮೆ...ಚನ್ನಾಗಿದೆ ಪರಿಚಯ ಮತ್ತು ನಮನ ಒಟ್ಟಿಗೆ...

  ReplyDelete
 13. ಲೇಖನ ತುಂಬ ಚೆನ್ನಾಗಿದೆ .
  ಖುಷಿ ಆಯಿತು, ಅಜ್ಜಿಯಾ ಆದರ್ಶ ಬದುಕಿನ ಬಗ್ಗೆ ನಮಗೂ ತಿಳಿಸಿದಕ್ಕೆ.
  ಅಜ್ಜಿಯಾ ವಿಚಾರ ಸಂಗ್ರಹ ,ದೈರ್ಯ ,wah ಅದ್ಬುತ . ........:)

  ReplyDelete
 14. @ಮನಸು: ಸುಗುಣಕ್ಕ, ಹೌದು ನನ್ನ ಅಜ್ಜಿ ತರಹ ತುಂಬಾ ಜನ ನಮಗೆಲ್ಲ ಮಾದರಿ ಆಗಿದ್ದಾರೆ.
  ಹಾಗೂ ಅವರದು ಒಂದು ಆದರ್ಶ ಜೀವನ. ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete
 15. @ಪರಾಂಜಪೆ ಸರ್: ಧನ್ಯವಾದಗಳು ಸರ್.

  ReplyDelete
 16. @ಶಿವಪ್ರಕಾಶ್; ಥ್ಯಾಂಕ್ಸ್ ದೋಸ್ತ :)

  ReplyDelete
 17. @ಸೀತಾರಾಂ ಸರ್: ನಿಮ್ಮ ಕಾಮೆಂಟಿಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ..!
  ಸ್ವಲ್ಪ ಭಾವುಕನಾದೆ..!!
  ಅನಂತ ಧನ್ಯವಾದದಳು.

  ReplyDelete
 18. @ಸುನಾಥ ಬಾಬಾ: ನಿಮಗೆ ಅನಂತ ನಮನಗಳು..:)

  ReplyDelete
 19. @ವಿ.ಆರ್. ಭಟ್ ಸರ್: ಹೌದು ಸರ್ ನೀವು ಹೇಳಿದ ಹಾಗೇನೆ ನಾನು ಸಹ ಹಲವು ಮನೆಗಳಲ್ಲಿನ ವಾತಾವರಣ ನೋಡಿದ್ದೇನೆ.
  ನಮ್ಮ ಮುಂದಿನ ಭವಿಷ್ಯದ ಬಗ್ಗೆ, ನಮ್ಮ ಸಂಸ್ಕ್ರತಿ ಬಗ್ಗೆ ಕೆಲವು ಸಲ ಅಸಹಾಯಕ ಭಾವನೆ ಕಾಡುತ್ತೆ.
  ಆದರೂ, ಎಲ್ಲವು ನಮ್ಮ ಕೈಯಲ್ಲೇ ಇದೇ..
  ಲೇಖನ ಮೆಚ್ಚಿದ್ದಕ್ಕೆ ಅನಂತ ನಮನಗಳು.

  ReplyDelete
 20. @ದೇಸಾಯಿ ಸರ್: ನಿಮ್ಮೆಲ್ಲರ ಪ್ರತಿಕ್ರಿಯೆಗೆ ಭಾವುಕನಾಗಿದ್ದೇನೆ.
  ಧನ್ಯವಾದಗಳು.

  ReplyDelete
 21. @ಮೂರ್ತಿ ಸರ್: ಈ ಲೇಖನ ಬರೆಯುವಾಗ, ಮುಂದಿನ ಅಕ್ಷರ ಏನು ಬರೆಯಲಿ ಎಂದು ಸುಮ್ಮನಾಗಿದ್ದೇನೆ, ಭಾವುಕನಾಗಿದ್ದೇನೆ.
  ನನ್ನ ಅಜ್ಜಿ, ನಮಗೆಲ್ಲ ಆದರ್ಶ.
  ಅನಂತ ನಮನಗಳು.

  ReplyDelete
 22. @ಪ್ರಕಾಶ್ ಮಾಮಾ; ಹೌದು ಹಿರಿಯರೊಡನೆ ಕೆಲವು ಸಮಯದ ಮಾತು ಒಂದು ಪುಸ್ತಕ ಓದಿದ್ದ ಹಾಗೇನೆ.
  ಅವರ ಅನುಭವದ ಪಾಠ ನಮಗೆಲ್ಲ ಮಾರ್ಗದರ್ಶನ ಆಗಬಹುದು.
  ನನ್ನ ಅಜ್ಜಿಯ ಬಗ್ಗೆ ಎಲ್ಲರ ಮೆಚ್ಚುಗೆಗೆ ಮೂಕನಾಗಿದ್ದೇನೆ.
  ಧನ್ಯವಾದಗಳು.

  ReplyDelete
 23. ಓ ಮನಸೇ ನೀನೇಕೆ ಹೀಗೆ..;
  ಚೇತನ ಅಕ್ಕ: ನನ್ನ ಅಜ್ಜಿಯ ಬಗ್ಗೆ ನಿಮ್ಮೆಲ್ಲರ ಅಭಿಪ್ರಾಯಕ್ಕೆ ನನ್ನಲ್ಲಿ ಪದಗಳಿಲ್ಲ.
  ಧನ್ಯವಾದಗಳು.

  ReplyDelete
 24. @ಪ್ರಭಾಮಣಿ ನಾಗರಾಜ್: ಅನಂತ ಧನ್ಯವಾದಗಳು ಮೇಡಂ.

  ReplyDelete
 25. @ಬಿ. ಎಂ. ಬಷೀರ್: ನಮಸ್ತೆ ಸರ್, "ಪೆನ್ನುಪೇಪರ್" ಗೆ ಸ್ವಾಗತ..
  ಖಂಡಿತ ಅಜ್ಜಿಯ ಪ್ರೀತಿ, ಆಶಿರ್ವಾದ ಇರುತ್ತೆ ಸರ್.
  ಬರುತ್ತಿರಿ.
  ಧನ್ಯವಾದಗಳು.

  ReplyDelete
 26. @ಜಲಾನಯನ: ತುಂಬಾ ತುಂಬಾ ಥ್ಯಾಂಕ್ಸ್ ಆಜಾದ್ ಸರ್..:)

  ReplyDelete
 27. @ಕಾವ್ಯ: ತುಂಬಾ ತುಂಬಾ ಧನ್ಯವಾದಗಳು. :)

  ReplyDelete