Aug 23, 2011

ಕಾದಿದ್ದು ಬರೋಬ್ಬರಿ ಅರ್ಧ ಶತಮಾನ !!

ರಣ ಬಿಸಿಲಿನ ಬಳ್ಳಾರಿಯಲ್ಲಿ ತಣ್ಣಗೆ ಎರಡು ಯೌವನದ ಎದೆಗಳ ನಡುವೆ ಪ್ರೇಮವೊಂದು ಮೊಳಕೆಯೋಡೆದಿತ್ತು.
ತುಂಡು ಲಂಗದ ಅವಳನ್ನ, ಪಾಪದ ಗರ್ಭದಿಂದ ಹುಟ್ಟಿದ ಚಲಪತಿ ಅದಿನ್ಯಾವ ಮಟ್ಟಿಗೆ ಪ್ರೀತಿಸಿದನೆಂದರೆ ಊಟ, ನಿದ್ದೆ , ಕೆಲಸ ಉಹುಂ ಯಾವುದೆಂದರೆ ಯಾವುದು ಕೂಡ ಅವನತ್ತ
ಸುಳಿಯಗೊಡಲಿಲ್ಲ . ಪತ್ರಗಳು ಅವ್ಯಾಹತವಾಗಿ ಹರಿದಾಡಿದವು. ಅವಳನ್ನ ತನ್ನ ಮಗ ಈ ಪರಿ ಪ್ರೀತಿಸುವುದನ್ನ ಕಂಡ ಚಲಪತಿಯ ತಾಯಿಯೇ "ಇಷ್ಟೊಂದು ಪ್ರೀತಿಸಬೇಡ ಮಗನೆ, ಯಾವ ಹೆಣ್ಣೂ ಇಷ್ಟು ಪ್ರೀತಿಗೆ ಅರ್ಹಳಲ್ಲ" ಅಂತ ಹೇಳುತ್ತಾಳೆ. ಆದ್ರೆ, ಅವನ ತಲೆಯ ಮೇಲೆ ಪ್ರೇಮದ ಭೂತಸವಾರಿ.

ಮುಂದುವರಿದ ದಿನಗಳಲ್ಲಿ ಆ ಹುಡುಗಿ ಚಲಪತಿಯನ್ನ ವಿನಾಕಾರಣ ದೂರಮಾಡ್ತಾಳೆ, ಬೇರೊಬ್ಬನೊಂದಿಗೆ ಮದುವೆ ಆಗ್ತಾಳೆ. ಆಗಲೇ ಚಲಪತಿ ಅವಳ ಗಂಡನ ಸಾವಿಗಾಗಿ ಕಾಯಲಾರಂಭಿಸುತ್ತಾನೆ !!

ಕಾಯುತ್ತಾ ಕಾಯುತ್ತಾ ತಾನೂ ಬೆಳೆಯುತ್ತಾನೆ - ಸಾಮಾಜಿಕವಾಗಿ, ಆರ್ಥಿಕವಾಗಿ; ಮುಂದೆಂದೋ ಒಂದು ದಿನ ಅವಳು ತನ್ನತ್ತ ಬಂದಾಗ ಯಾವುದೇ ಕೊರತೆ ಕಾಣಬಾರದಲ್ಲ ಅದಕ್ಕೆ. ತನ್ನ ಮಗ ಅವಳನ್ನಲ್ಲದೆ ಬೇರೆ ಯಾರನ್ನೂ ಮದುವೆಯಾಗಲಾರ ಅಂತ ಚಲಪತಿಯ ತಾಯಿಗೆ ಮನವರಿಕೆಯಾಗಿರೂತ್ತೆ. ಹಾಗಾಗಿ ಆಕೆ, ಮಗ ಚಲಪತಿ ದೈಹಿಕ ಸುಖವಾದರೂ ಪಡೆಯಲಿ ಅಂತ ಒಬ್ಬ ವಿಧವೆಯನ್ನ ಒಪ್ಪಿಸುತ್ತಾಳೆ - ಆ ವಿಧವೆಗೂ ಅದರಿಂದ ಲಾಭವಿರುತ್ತೆ. ಚಲಪತಿ ದೈಹಿಕ ಕ್ರಿಯೆಯಲ್ಲಿ ತೊಡಗುತ್ತಾನೆ ಕೂಡ -ಒಂದೆರಡು ಬಾರಿ. ತಾಯಿಯೇ ಮಗನ ದೈಹಿಕ ಸುಖಕ್ಕಾಗಿ ಪರಧರ್ಮದ ವಿಧವೆಯನ್ನ ತನ್ನ ಮನೆಯಲ್ಲೇ ಮಲಗಿಸುವ ಕೆಲಸ ಮಾತ್ರ ಒಂದು ತೆರನಾದ ಕಂಪನ ಉಂಟು ಮಾಡುತ್ತೆ.

ದಿನಗಳು ಉರುಳತ್ತಲೇ ಇರುತ್ತವೆ, ಮುಪ್ಪು ಮರೆಯಲ್ಲಿ ನಿಂತು ಹೊಂಚು ಹಾಕಿ ಕುಳಿತಿರುತ್ತೆ. ಚಲಪತಿ ತನ್ನನ್ನ ತಿರಸ್ಕರಿಸಿದ ಹುಡುಗಿಯ ಸಲುವಾಗಿ ಕಾಯುತ್ತಲೇ ಇರುತ್ತಾನೆ. ತನ್ನೊಳಗಿನ ನೋವನ್ನ ಯಾರಿಗಾದರೂ ಹೇಳಲು ಅವನಿಗಾಗುವುದಿಲ್ಲ. ಎಲ್ಲಾ ತಿಳಿದ ಅವನ ತಾಯಿಯೂ ಸತ್ತುಹೊಗುವಳು. ಆಗಲೇ ಚಲಪತಿಗೆ ಅನಿಸುವುದು 'ಬಾಲ್ಯ ಮತ್ತು ಯೌವನ ಮುಗಿದವು' ಅಂತ.

ಚಲಪತಿಯ ಪ್ರೇಮದೇವತೆ ತನ್ನದೇ ಸಂಸಾರ, ಪ್ರತಿಷ್ಠೆ, ಗೌರವ ಎಲ್ಲವನ್ನ ಅನುಭವಿಸುವಾಗ ತನ್ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಚಲಪತಿ ಆಕೆಗೆ ನೆನಪೇ ಆಗುವುದಿಲ್ಲ. ತನ್ನದು ತಪ್ಪು ಅಂತ ಒಪ್ಪಲು ಅವಳ ಅಹಂ ಅಡ್ಡಿಪದಿಸುತ್ತೆ. ಚಲಪತಿ ಒಬ್ಬ ಅಸ್ತಿತ್ವದಲ್ಲೇ ಇಲ್ಲದವನು, ಅವನು ಕೇವಲ ನೆರಳು ಮಾತ್ರ ಅಂದುಕೊಂಡಿರುತ್ತಾಳೆ.

ಒಂದು ದಿನ ಚಲಪತಿಗೆ ಸುದ್ದಿ ಬರುತ್ತೆ, ಅವನ ಪ್ರೀತಿಯ ಹುಡುಗಿಯ ಗಂಡ ಕೊನೆಯುಸಿರೆಳೆದ ಸುದ್ದಿಯದು. ಕೊನೆಗೂ ಚಲಪತಿ ಕಾಯುತ್ತಿದ್ದ ದಿನ ಬಂದಿತ್ತು. ಅವಳ ಗಂಡ ಸತ್ತು ಇನ್ನೂ ದಿನಗಳೇ ಕಳೆದಿರಲಿಲ್ಲ ಆಗ ಮತ್ತೊಮ್ಮೆ ಚಲಪತಿ, ಆಕೆಯ ಮುಂದೆ ನಿಂತು ಇನ್ನೂ ಜೀವಂತವಾಗಿರುವ ತನ್ನ ಪ್ರೇಮ ತೋಡಿಕೊಳ್ಳುತ್ತಾನೆ -ಬರೋಬ್ಬರಿ ಅರ್ಧಶತಮಾನಗಳ ನಂತರ !!!
ಪ್ರೇಮ ಮತ್ತು ಮುಪ್ಪು ಎರಡೂ ನಿರ್ಲಜ್ಜತೆಗೆ ದೂಡುತ್ತವೆ.

ಮುಪ್ಪಿನಲ್ಲಿ ಮತ್ತೆ ಪತ್ರಗಳು ಶುರುವಾಗುತ್ತವೆ.
ಆ ಪಕ್ವ ಹೃದಯಗಳ ಆಂತರ್ಯದಲ್ಲಿ ಮಾತಿಗೆ ಮೀರಿದ ಪ್ರೀತಿಯೊಂದು ಮಡುವುಗಟ್ಟಿ ನಿಂತಿತ್ತು . ಅಲ್ಲಿಗೆ ಮುಗಿಯುತ್ತೆ ಕಥೆ. ಎಪ್ಪತ್ತು ವಯಸ್ಸು ದಾಟಿದ ಅವರಿಬ್ಬರೂ ಒಂದಾದರೋ ಇಲ್ಲವೊ ನೀವೇ ಓದಿ ತಿಳಿಯಬೇಕು. ಚಲಪತಿಯನ್ನ ಅರ್ಧ ಶತಮಾನ ಕಾಯುವಂತೆ ಮಾಡಿದವಳ ಹೆಸರು "ಮಾಂಡೋವಿ".

'ರವಿ ಬೆಳಗೆರೆ' ಯವರ ಕಾದಂಬರಿಯಿದು 'ಮಾಂಡೋವಿ'. ಒಂದು ಬೇರೆಯದೇ ಭಾವವನ್ನುಂಟುಮಾಡುವ, ಅಲೆಯೆಬ್ಬಿಸುವ ಕಾದಂಬರಿ. ಓದದಿದ್ದರೆ ನೀವು ಓದಬೇಕು. ಮಾಂಡೋವಿ ಖಂಡಿತವಾಗಿ ಹತ್ತಿರವಾಗ್ತಾಳೆ, ಏಕಾಂತದಲ್ಲಿ ನೆನಪಾಗುತ್ತಾಳೆ. ಮಾಂಡೋವಿ (ಗೋವಾ ರಾಜ್ಯದ ಪ್ರಮುಖ ನದಿಯ ಹೆಸರು) ನಿಲ್ಲದೆ ಹರಿಯುತ್ತಾಳೆ. ಲೇಖಕ ರವಿ ಬೆಳಗೆರೆಯವರು ಸಮರ್ಥವಾಗಿ ಮಾಂಡೋವಿಯನ್ನ ತೋರಿಸುತ್ತಾ ಕೆಲವೇ ಜನ ಅನುಭವಿಸುವ ಪ್ರೇಮದ ಇನ್ನೊಂದು ಮಗ್ಗುಲನ್ನ ತೆರೆದಿಡುತ್ತಾರೆ.

ಮಾಂಡೋವಿ, ಪ್ರಖ್ಯಾತ ಲೇಖಕ
'ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್' (Gabriel José de la Concordia García Márquez) ಅವರ 'ಲವ್ ಇನ್ ದ ಟೈಮ್ ಆಫ್ ಕಾಲರ' ಕಾದಂಬರಿಯ ಪ್ರೇರಣೆ.

ಸೂಚನೆ :: ಇದು 'ಮಾಂಡೋವಿ'ಯ ವಿಶ್ಲೇಷಣೆ, ವಿಮರ್ಶೆ ಅಥವಾ ಇನ್ಯಾವುದೋ ರೀತಿಯ ತರ್ಕಗಳಿಗೆ ನೇತಾಡುವ ಬರಹವಲ್ಲ.
ಇದೊಂದು ಕೇವಲ ಕಾದಂಬರಿಯನ್ನ ಪರಿಚಯಿಸುವ ಪ್ರಯತ್ನ ಅಷ್ಟೇ.

=====
=====


12 comments:

  1. NRK;ಮಾಂಡೋವಿ ಕಾದಂಬರಿಯನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.ಪರಿಚಯ ಲೇಖನ ಚೆನ್ನಾಗಿ ಮೂಡಿಬಂದಿದೆ.

    ReplyDelete
  2. ನಾಗರಾಜ್ - ಪುಸ್ತಕ ಪರಿಚಯ ಚೆನ್ನಾಗಿ ಮಾಡಿದ್ದೀರಿ. ನಾನು ಓದಿದ್ದೇನೆ.

    ReplyDelete
  3. ಪರಿಚಯಲೇಖನಕ್ಕಾಗಿ ಧನ್ಯವಾದಗಳು.

    ReplyDelete
  4. nice introduction nagaraj. nanu odiddene. nivu svnata bariri.

    ReplyDelete
  5. introduction interesting aagide.. will definitely read. thank u :)

    ReplyDelete
  6. ನಾನೂ ನೀವು ಹೇಳಿದ್ದಕ್ಕೆ ಓದುತ್ತೇನೆ. ಧನ್ಯವಾದಗಳು ಲೇಖನಕ್ಕೆ..

    ಮತ್ತೆ ಕುಡುಕರ ಕವನವೂ ಚೆನ್ನಾಗಿದೆ.. :) ಹಬ್ಬದ ಶುಭಾಶಯಗಳು .

    ಫ್ರೀ ಇದ್ದಾಗ ನಮ್ಮ ಕಡೆಗೆ ಬನ್ನಿ .:)

    ReplyDelete