May 2, 2011

"ಕಾವ್ಯ , ಅಮೃತ ಮತ್ತು ಗರುಡ"


ಯಾವುದೇ ಆದರೂ, ಅದನ್ನ ನೋಡುವಾಗ ನೋಡುಗನ ಮನಸ್ಥಿತಿ ಮತ್ತು ಅನುಭವ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಹುಡುಗಿಯನ್ನ ಬೇರೆ ಬೇರೆ ಹುಡುಗರು ಬೇರೆ ಬೇರೆ ಆದ ರೀತಿಯಲ್ಲಿ ವರ್ಣಿಸುತ್ತಾರೆ - ಅದೆಷ್ಟು ಸತ್ಯ, ಸುಳ್ಳು; ಮಾತು ಬ್ಯಾರೆ.

ಒಂದೇ ವಸ್ತುವಿನ ಬಗ್ಗೆ ಬೇರೆ ಬೇರೆ ಕವಿಗಳು, ಸಾಹಿತಿಗಳು ಬೇರೆ ಬೇರೆಯದೆ ರೀತಿಯಲ್ಲಿ ಬರೆಯುತ್ತಾರೆ. ಅವುಗಳಲ್ಲಿ ಯಾರದು ಎಷ್ಟು ನಿಜ ಅನ್ನುವುದಕ್ಕಿಂತ - ಅದು ಅವರು ಕಂಡುಕೊಂಡ ಸತ್ಯ ಅಷ್ಟೇ. ಓದಿದ ಮೇಲೆ ಯಾವುದು ನಮ್ಮಲ್ಲಿ ಹರಳುಗಟ್ಟಿ ನಿಲ್ಲುತ್ತದೆಯೋ ಅದು ನಮಗೆ ಹತ್ತಿರವಾದ ಸತ್ಯ. ಕನ್ನಡದಲ್ಲಿ 'ಕವಿತೆ' ಅನ್ನೋ ಪದ 'ಬೇಂದ್ರೆ' ಅನ್ನೋ ಹೆಸರನ್ನ ಥಟ್ಟಂತ ಸೂಚಿಸಿಹೊಗುವಷ್ಟರಮಟ್ಟಿಗೆ ಬೇಂದ್ರೆ ಅವರ ಬರಹ, ಬದುಕು ಎರಡು ದೊಡ್ಡವು.

ಶ್ರೀಕೃಷ್ಣ ಆಲನಹಳ್ಳಿ, ಕನ್ನಡದ ಮತ್ತೊಬ್ಬ ಪ್ರತಿಬಾವಂತ ಬರಹಗಾರ. ಆತ ಬದುಕನ್ನ ತುಂಬಾ ತೀವ್ರವಾಗಿ ಬದುಕಿದ ಅಂತಾರೆ. ಅವರ ಎಲ್ಲ ಪುಸ್ತಕಗಳೂ ಮಲಯಾಳಂ ಭಾಷೆಗೆ ಅನುವಾದಗೊಂಡಿವೆ - ಕೇರಳದವರು ಸುಲಭವಾಗಿ ಬೇರೆ ಭಾಷೆಯವರನ್ನ ಒಪ್ಪಲ್ಲ. ಶ್ರೀಕೃಷ್ಣ ಅವರು ಹಟಕ್ಕೆ ಬಿದ್ದು ಬರೀತಾಯಿದ್ರಂತೆ. ಆತ ಹತ್ತಿರವಾಗಿದ್ದು ತನ್ನ ಕೃತಿಗಳಲ್ಲಿ ಬಾಲ್ಯವನ್ನ ಕಟ್ಟಿಕೊಟ್ಟ ರೀತಿಯಿಂದ - ಆತನ ಶೈಲಿಯೇ ಬೇರೆ. ರಾಜಕಿಯವಾಗಿಯು ತಕ್ಕಮಟ್ಟಿಗೆ ತಮ್ಮನ್ನು ತೊಡಗಿಕೊಂಡಿದ್ದ ಶ್ರೀಕೃಷ್ಣ ಆಲನಹಳ್ಳಿಯವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ವಲಯದಲ್ಲಿ ನಷ್ಟವೇ ಸರಿ.

ಹಿರಿಯ ಕವಿಗಳಾದ ಎಚ್ ಎಸ್ ವೆಂಕಟೇಶ್ ಮೂರ್ತಿಯವರು ಹೇಳುವಂತೆ 'ಪ್ರಾಚೀನ ಸಾಹಿತ್ಯದಿಂದ ಇಂದಿನವರೆಗೂ ಕವಿತೆಗಳಿಗೆ ಸ್ಪಂದನೆ ಕಡಿಮೆಯೇ'. ಕಾರಣ, ಕವಿತೆ ಆಳಕ್ಕಿಳಿದರೆ ಮಾತ್ರ ತನ್ನನ್ನ ತೆರೆದುಕೊಳ್ಳುತ್ತೆ, ಪರಿಮಳವನ್ನ ಸೂಸುತ್ತೆ. 'ಸತ್ಯವನ್ನ ಸಮರ್ಪಕವಾಗಿ ಸೆರೆಹಿಡಿಯುವ ಒಂದೇ ಒಂದು ಸಾಹಿತ್ಯ ಪ್ರಕಾರ ಅಂದ್ರೆ ಅದು ಕವಿತೆ' ಹಾಗಂತ ಖ್ಯಾತ ವಿಮರ್ಶಕರಾದ ಡಿ ಆರ್ ನಾಗರಾಜ್ ಅವರು ತಮ್ಮ 'ಅಮೃತ ಮತ್ತು ಗರುಡ' ಪುಸ್ತಕದಲ್ಲಿ ಬರೀತಾರೆ.

'ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ' - ಬೇಂದ್ರೆಯವರ ಈ ಸಾಲನ್ನೇ, 'ಅಮೃತ ಮತ್ತು ಗರುಡ' ಅಂತ ನಾಗರಾಜ್ ಅವರು ತಮ್ಮ ಪುಸ್ತಕಕ್ಕೆ ಹೆಸರಾಗಿ ಬಳಸಿಕೊಂಡರು. ಈ ಕಾವ್ಯಕ್ಕೂ, ಗರುಡನಿಗು ಮತ್ತು ಅಮೃತಕ್ಕೂ ಏನು ಸಂಬಂಧ ಅಂದ್ರೆ: ಗರುಡ ಶಕ್ತಿಯ ಸಂಕೇತ, ಸ್ವರ್ಗದಲ್ಲಿದೆ ಅಂತ ನಂಬಲಾದ ಅಮೃತ ಸ್ನೇಹ,ಪ್ರೀತಿ, ಮಮತೆ, ವಾತ್ಸಲ್ಯಗಳ ಸಂಕೇತ. ಭೂಮಿಯಲ್ಲಿ- ಸಮಾಜದಲ್ಲಿ- ಅಮೃತದ ಕೊರತೆ ಕಂಡಾಗ, ಅದನ್ನ ನಾನು ತರ್ತೇನೆ ಅಂತ ತನ್ನೆಲ್ಲ ಶಕ್ತಿಯನ್ನ ಒಗ್ಗೂಡಿಸಿಕೊಂಡು ಸ್ವರ್ಗಕ್ಕೆ ಹಾರುವುದು ಗರುಡ (ಗರುಡ ಪುರಾಣದಲ್ಲಿ, ಸರ್ಪಗಳಿಂದ ತಾಯಿಯನ್ನ ಕಾಪಾಡಲು ಗರುಡ ಅಮೃತವನ್ನ ತರಲೆಂದು ಸ್ವರ್ಗಕ್ಕೆ ಹಾರುತ್ತಾನೆ). ಸಾಹಿತ್ಯ ಪ್ರಕಾರಗಳಲ್ಲಿ ಗರುಡ ಅಂದ್ರೆ ಕಾವ್ಯ ಅಂತಾರೆ ಬೇಂದ್ರೆಯವರು . ಯಾವ ಕಾಲದ ಗರುಡ ಪುರಾಣ, ಯಾವ ಕಾಲದ ಬೇಂದ್ರೆ; ಇಡೀ ಗರುಡ ಪುರಾಣವನ್ನ ಒಂದೇ ಒಂದು ಸಾಲಿನಲ್ಲಿ ಕಾವ್ಯಕ್ಕೆ ಹೋಲಿಸಿ ಬರೆದರಲ್ಲ ಎಂಥಾ 'ಶಬ್ದ ಗಾರುಡಿಗ'.

ಬೇಂದ್ರೆ ಮತ್ತು ಶ್ರೀಕೃಷ್ಣ ಅವರು ಬೆಳಗನ್ನ ಬೇರೆ ಬೇರೆ ರೀತಿ ಸೆರೆಹಿಡಿದಿದ್ದಾರೆ. ನಮಗೆಲ್ಲ ಇರೋದು ಒಂದೇ ಬೆಳಗು ಆದರೆ ಕಂಡುಕೊಂಡ ಸತ್ಯ ಮಾತ್ರ !! ??. ಸತ್ಯ ಅನ್ನೋದು ಎಲ್ಲರಿಗೂ ಗೊತ್ತಾಗುವಂತಹದ್ದಲ್ಲ, ಅದು ಎಲ್ಲರಿಗೂ ಗೊತ್ತಾಗಲೂಬಾರದು; ಯಾರು ಸತ್ಯಕ್ಕಾಗಿ ಹುಡುಕುತ್ತಾರೋ, ಅದಕ್ಕಾಗಿ ಆಳಕ್ಕಿಳಿಯುತ್ತಾರೋ ಅವರಿಗೆ ಮಾತ್ರ ದಕ್ಕುವಂತಹದ್ದದು! ಹಾಗಾಗಿ ಕವಿತೆಗಳು ಸುಲಭವಾಗಿ ಯಾರಿಗೂ ಅರ್ಥವಾಗೋಲ್ಲ, ಮಾರುಕಟ್ಟೆಯಲ್ಲಿ ಕವನ ಸಂಕಲನಗಳು ಮಾರಾಟವಾಗುವುದು ಕಡಿಮೆಯೇ - ಬೆಲೆ ಕಡಿಮೆಯಿದ್ದರೂ ಕೂಡ!

ಬೇಂದ್ರೆ ಅವರ 'ಬೆಳಗು'

ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ

ನುಣ್ಣನೆ ಎರಕಾವ ಹೊಯ್ದ

ಬಾಗಿಲ ತೆರೆದು ಬೆಳಕು ಹರಿದು

ಜಗವೆಲ್ಲ ತೊಯ್ದ

ಎಲೆಗಳ ಮೇಲೆ, ಹೂಗಳ ಒಳಗೆ ಅಮೃತದಾ ಬಿಂದು

ಕಂಡವು ಅಮೃತದಾ ಬಿಂದು

ಯಾರಿರಿಸಿಹರು ಮುಗಿಲಿನ ಮೇಲಿನ ಇಲ್ಲಿಗೆ ಇದ ತಂದು.


ಶ್ರೀಕೃಷ್ಣ ಅವರ 'ಬೆಳಗು'

ಇರುಳ ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ

ಸೂರ್ಯ: ಜಿಬುರೆಗಣ್ಣೋರಸುತ್ತಾಕಳಿಸಿ

ಕೊಬ್ಬಿದಾದು , ಕುರಿ , ಕೋಳಿ ಸಿಗಿದು ಸೀಳಿ

ಕಂದು , ನೀಲಿ , ಬಿಳಿ , ಕೆಂಪು ಖಂಡಗಳ ತೂಗಿತ್ತು

ಬಣ್ಣ ಬಣ್ಣದ ಮೂಡಣದ ಮಾಂಸದಂಗಡಿ ತೆರೆದಾಗ

ನನ್ನೂರಿನಲ್ಲಿ ಬೆಳಗಾಯಿತು.


ಬೇಂದ್ರೆ ಅವರ ಅಮೃತದಾ ಬಿಂದು, ಶ್ರೀಕೃಷ್ಣ ಅವರ ಮಾಂಸದಂಗಡಿ ಕಂಡದ್ದು ಬೆಳಗಿನಲ್ಲಿ ಅನ್ನೋದು ಸತ್ಯ.

ನಿಮ್ಮ ಸತ್ಯ ನಿಮ್ಮೊಳಗಿದೆ ಅದೂ ಸತ್ಯವೇ.


(

ಶ್ರೀಕೃಷ್ಣ ಅವರ 'ಊಟಕ್ಕೆ ಕೂತಾಗ' ಈಗಾಗಲೇ ಒಮ್ಮೆ ಪೋಸ್ಟ್ ಮಾಡಿದ್ದೆ: http://pennupaper.blogspot.com/search?updated-min=2010-01-01T00%3A00%3A00-08%3A00&updated-max=2011-01-01T00%3A00%3A00-08%3A00&max-results=35 )

9 comments:

  1. ಒಂದೇ ವಸ್ತು ಇಬ್ಬರು ಸಾಹಿತಿಗಳಿಗೆ ಹೇಗೆ ಕಾಣಬಲ್ಲದು ಎನ್ನುವದನ್ನು ಸಮರ್ಥವಾಗಿ ತೋರಿಸಿದ್ದೀರಿ. ಅಭಿನಂದನೆಗಳು.

    ReplyDelete
  2. ಕಾವ್ಯಗಳ ಮೇಲೆ ಕವಿಗಳ ಕಲಾ ಕೈಚಳಕವನ್ನು ಚೆನ್ನಾಗಿ ವರ್ಣಿಸಿದ್ದೀರ, ನಿಮ್ಮ ಬ್ಲಾಗಿನ HEADDING ನೋಡಿ ಯಾವ್ದೋ ಕಥೆ ಇರಬೇಕೇನೋ ಅಂತ ಅಂದುಕೊಂಡಿದ್ದೆ .
    ಕಾವ್ಯ , ಗರುಡ ಮತ್ತು ಅಮೃತದ ಸಂಬಂಧ ಇಂದು ತಿಳಿಯಿತು.
    ಮಾಹಿತಿ ಹಂಚಿದ್ದಕ್ಕೆ ಧನ್ಯವಾದಗಳು .

    ReplyDelete
  3. ನಾಗರಾಜ್ ಕಾವ್ಯದ ಮೇಲೆ ಒಂದು ಉತ್ತಮ ಲೇಖನ. ಒಂದು ವಸ್ತು ಇಬ್ಬರಿಗೆ ಅಥವ ಅನೇಕರಿಗೆ ಹೇಗೆ ವಿಭಿನ್ನವಾಗುವುದು ಎನ್ನುವುದನ್ನು ಚೆನ್ನಾಗಿ ವಿವರಿಸಿದ್ದೀರಿ. ಅಷ್ಟೇ ಅಲ್ಲದೇ ಅಲನಹಳ್ಳಿ ಕೃಷ್ಣರವರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..

    ReplyDelete
  4. @Sitaram sir, Sandeep and Shivanna :: Thank you

    ReplyDelete
  5. ಕಾವ್ಯ, ಅಮೃತ,ಗರುಡ -ಬಗ್ಗೆ ಮೂಡಿ ಬಂದ ವರ್ಣನೆ ಚೆನ್ನಾಗಿದೆ ...:)
    ಹೌದು , ಒಂದೇ ಪದ- ಒಬೋಬ್ಬರಿಗು ಒಂದೊಂದು ,ಭಾವ ಕೊಡತ್ತೆ...:)

    ReplyDelete