Sep 28, 2011
"ಅಪ್ಪ-ಅಮ್ಮ & SEX"
Sep 4, 2011
'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು' ಹಾಗಂತಲೇ ಶುರುವಾಗುತ್ತಿತ್ತು ಮಾತು.
ಆ ದಿನಕ್ಕಿಂತ ಒಂದು ವಾರ ಮೊದ್ಲೇ ಒಬ್ಬ ಸ್ಟುಡೆಂಟ್ ಇಷ್ಟು ಹಣವನ್ನ ಕೊಡ್ಬೇಕು ಅಂತ ಕ್ಲಾಸ್ ನ ಸ್ಟುಡೆಂಟ್ representative announce ಮಾಡಿರ್ತಿದ್ದ. ಸರಿ, ಎಲ್ಲರು ಕೊಟ್ಟಾದಮೇಲೆ; ಮೊದಲೇ ಅಂದುಕೊಂಡ ಹಾಗೆ ಬಣ್ಣ ಬಣ್ಣದ paper cuttings, ಥರ್ಮೊಕೊಲ್, ಗಮ್ ಮತ್ತು decorationಗೆ ಬೇಕಾದ ಎಲ್ಲಾ ವಸ್ತುಗಳು ತರುವ ಕೆಲಸ.
ಪ್ರತಿ ದಿನ ಸಂಜೆ ಗುಂಪು ಗುಂಪಾಗಿ ಮಾರ್ಕೆಟ್ ಗೆ ಹೋಗಿ ನಮಗೆ ಬಂದಷ್ಟು ಚೌಕಾಸಿ ಮಾಡಿ ಆ ವಸ್ತುಗಳನ್ನ ತರ್ತಾಯಿದ್ವಿ . ನಾವು ಹೇಗೆ ಖರೀದಿ ಮಾಡ್ತಾಯಿದ್ವಿ ಅನ್ನೋದನ್ನ ನೆನಸಿಕೊಂಡ್ರೆ ಈಗ್ಲೂ ನಗು ಬರುತ್ತೆ. 'ಏ, ನಮ್ಮನೆ ಹತ್ರ ಅದು ಸಿಗುತ್ತೆ ಅಲ್ಲೇ ತೊಗೊಳೋಣ', 'ಏ ಇದು ನನ್ನ ಅಂಕಲ್ ಹತ್ರ ಇದೆ ನಾನೇ ತರ್ತೀನಿ ಬಿಡು' ಇಂತಹ ಮಾತುಗಳಲ್ಲಿ ವ್ಯಾಪಾರ ಮುಗೀತಿತ್ತು. ಒಂದು ವಸ್ತು ತರಲಿಕ್ಕೆ ಹೋದ್ರೆ ಎಂಟು-ಹತ್ತು ಜನ ಹೋಗ್ತಾಯಿದ್ವಿ. ಮಾರ್ಕೆಟ್ ನಲ್ಲಿ ಸಿಗೋದನ್ನ ಬಿಟ್ಟು ಅದೇ ವಸ್ತುವನ್ನ ಎಲ್ಲೋ ಗೆಳೆಯನ ಮನೆ ಹತ್ರ ಇರೋ ಚಿಕ್ಕ ಅಂಗಡಿಯಲ್ಲಿ ಖರೀದಿ. ಹುಡುಗಿಯರದು ಅಲಂಕಾರಕ್ಕೆ ಬೇಕಾದ ಬಣ್ಣ ಬಣ್ಣದ ರಂಗೋಲಿ ಪುಡಿ, ಸೀರೆಗಳನ್ನ ಮನೆಯಿಂದ ತರುವ department.
'ನೀನು ನಿರೂಪಣೆ ಮಾಡು, ಮಾಡ್ತಿಯ ತಾನೇ ?'
ಹೀಗೆ ಎಲ್ಲಾ ಕೆಲಸವನ್ನ ಹಂಚಿಕೊಂಡು ಶ್ರದ್ದೆಯಿಂದ ಮಾಡಿಯಾದ ಮೇಲೆ ಆ ದಿನ ಬರುತ್ತಿತ್ತು, ಆ ಮಾತು ಕೂಡ : 'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು'. standing in-front of principal is always tough job. ಗುಂಪಾಗಿ ಎಲ್ಲರು ಪ್ರಿನ್ಸಿಪಾಲ್ ರೂಮ್ ಹತ್ರ ಹೋಗಿ ನಿಂತು 'ಏ ನೀ ಹೋಗು' , 'ಏ ನೀನೆ ಹೋಗೋ' ಅಂತ ಗುಸು ಗುಸು ಅಂತಿದ್ವಿ.
ಕೆಲವೊಬ್ಬರು ಸ್ವಲ್ಪ ಗಟ್ಟಿ ಧೈರ್ಯ ಮಾಡಿ ಪ್ರಿನ್ಸಿಪಾಲ್ ರೂಮಿನ ಮುಂದೆ ನಿಂತು
'ಮೇ ಐ ಕಮ್ ಮ್ಯಾಮ್ / ಸರ್' ಅನ್ನುವಷ್ಟರಲ್ಲಿ ಜೀವ ಹಾರಿ ಹೋದ ಅನುಭವ.
'ಯೆಸ್' ಅದೇ ಗಂಭೀರ ದನಿ. ಒಳಗೆ ಹೋದ ಮೇಲೆ ಯಾರಿಗೂ ಉಸಿರು ಅಷ್ಟು ಸಲೀಸಾಗಿ ಹೊರ ಬರುತ್ತಿರಲಿಲ್ಲ. ಹೊರಗೆ ನಿಂತವರಿಗೆ ಆ ರೂಮಿನಿಂದ ಏನೋ ವಿಸ್ಮಯ ಹೊರಬರಲಿದೆಯೇನೋ ಅನ್ನುವಷ್ಟು ಕಾತುರ.
ಪ್ರಿನ್ಸಿಪಾಲ್ ಕೇಳೋದು 'ಏನ್ರೋ?'
'ನಾಳೆ. . . ನಾಳೆಗೆ ಕ್ಲಾಸ್ ರೂಮ್ decorate ಮಾಡ್ಬೇಕು. ಅದಕ್ಕೆ, '
'ಅದಕ್ಕೆ ?'
'ಕ್ಲಾಸ್ ರೂಮ್ ಕೀ ಬೇಕಿತ್ತು'
ಯಾವ ಕ್ಲಾಸ್, ಯಾವ ಸೆಕ್ಷನ್, ಯಾರು ಕ್ಲಾಸ್ ಟೀಚರ್ ಎಲ್ಲಾ ಕೇಳಿದ ಮೇಲೆ 'ಓಕೆ' - permission granted.
ಅವತ್ತಿನ ದಿನದ requestನ್ನ ಯಾರೇ ಪ್ರಿನ್ಸಿಪಾಲ್ ಆಗಿದ್ರು ಅವ್ರು 'ನೋ' ಅನ್ನಲ್ಲ. ಆದರೂ ನಮಗೆ ಪ್ರತಿ ವರ್ಷ ಪ್ರಿನ್ಸಿಪಾಲ್ ರೂಮ್ ಮುಂದೆ ನಿಂತಾಗ ಹೆದರಿಕೆ ಆಗುತಿತ್ತು ಅನ್ನೋದು ಸುಳ್ಳಲ್ಲ.
ಎಲ್ಲಾ ಹುಡುಗ ಹುಡುಗಿಯರು ಸೇರಿ ಕ್ಲಾಸ್ ರೂಮಿನ ಅಲಂಕಾರ ಮಾಡಲು ಶುರು ಮಾಡುತ್ತಿದ್ದೆವು, ಏಳು ಗಂಟೆಯ ನಂತರ ಅದೇ ಊರಿನವರು ಮನೆಗೆ ಹೋಗ್ತಾಯಿದ್ರು. ನಾವು ಹಾಸ್ಟೆಲ್ ಹುಡುಗರು- ನೈಟ್ ಡ್ಯುಟಿ. ಮಧ್ಯರಾತ್ರಿವರೆಗೂ ಅಲಂಕಾರ: ಪಕ್ಕದ ಕ್ಲಾಸ್ ರೂಮಿನವರು ಏನ್ ಮಾಡ್ತಿದಾರೆ, ಎಷ್ಟು ಕೆ.ಜಿ ಕೇಕ್ ಆರ್ಡರ್ ಮಾಡಿದಾರೆ . . .ಇಂತವುಗಳ ಬಗ್ಗೆ discussion ಕೂಡ ನಡೆಯುತ್ತಿತ್ತು. decoration ಎಲ್ಲಾ ಮುಗೀತು ಅಂದುಕೊಳ್ಳುವಷ್ಟರಲ್ಲಿ 'ಬ್ಲ್ಯಾಕ್ ಬೋರ್ಡ್ ಮೇಲೆ ಬಣ್ಣದ ಚಾಕ್ ಪೀಸ್ ಗಳಿಂದ design ಮಾಡ್ಬೇಕು, sayings ಬರೀಬೇಕು, class teacher ಹೆಸರು ಬರೀಬೇಕು'. ಅಯ್ಯೋ ಮುಗೀತು ಅಂದ್ರೆ ಇನ್ನೂ ಕೆಲಸ ಇದೆ. 'ಬೇಗ ಮಲಗ್ರೋ ಬೆಳಗ್ಗೆ ಬೇಗ ಮಾರ್ಕೆಟ್ ಗೆ ಹೋಗಿ ಹೂವು ತರ್ಬೇಕು, ಬೇಕರಿಯಿಂದ snacks, ಕೇಕ್ ತರ್ಬೇಕು'.
ಈ ಎಲ್ಲಾ ಗಲಿಬಿಲಿ, ಸಂತಸ, ಹರಟೆ, amateur ಆದ ವ್ಯಾಪಾರ, ಪಕ್ಕದ ಕ್ಲಾಸ್ ನವರ ಜೊತೆ competition ಗಳ ದಾಟಿಕೊಂಡು 'ಬೆಳಕಿನೊಂದಿಗೆ' ಬಂದುಬಿಡುತ್ತೆ ಆ ದಿನ "September 5". ಅದೊಂದು ವಿದ್ಯಾರ್ಥಿ ಜೀವನದ ಮರೆಯಲಾಗದ ಪ್ರೀತಿಯ ದಿನ "ಶಿಕ್ಷಕರ ದಿನ". ಪ್ಲೇ ಗ್ರೌಂಡಿನಲ್ಲಿ 'HAPPY TEACHERS DAY' ಅಂತ ಜೋರಾಗಿ ಕೂಗುವುದರೊಂದಿಗೆ(ಕಿರುಚುವುದರೊಂದಿಗೆ) ಶುರುವಾಗುತ್ತಿತ್ತು ಸಂಬ್ರಮ. ಅಷ್ಟು ಜೋರಾಗಿ ಗ್ರೌಂಡಿನಲ್ಲಿ ಕಿರುಚಿದರೂ ಪ್ರಿನ್ಸಿಪಾಲ್ ಒಮ್ಮೆಯೂ ಬೈದಿಲ್ಲ. ಸುಮ್ನೆ ನಿಂತು ನೋಡಿ, ನಕ್ಕು ಹೋಗುತ್ತಿದ್ದರು, ಅದೇ ಬೇರೆ ದಿನ ಆಗಿದ್ರೆ, ಬೇರೆ ಏನಾದ್ರೂ ಕಿರುಚಿದ್ರೆ ? (ಯಪ್ಪಾ, ಬದುಕೋದು ಉಂಟೆ ?)
ಅವತ್ತಿನ ದಿನದ ಸಂಬ್ರಮವೇ ಸಂಬ್ರಮ . . . ಮೊದಲು auditorium ನಲ್ಲಿ ಕಡಿಮೆ ಅಂದ್ರು ಎರಡು ತಾಸುಗಳ ಕಾರ್ಯಕ್ರಮ ಶಾಲೆಯ ಎಲ್ಲರು ಅಲ್ಲಿರ್ತಾರೆ. ನಂತರ ಅವರವರ ಕ್ಲಾಸ್ ನಲ್ಲಿ celebration, ಕ್ಲಾಸ್ ಟೀಚರಿಂದ ಕೇಕ್ ಕತ್ತರಿಸುವ ಘಳಿಗೆಯಂತೂ ಎಲ್ಲರ ಕಣ್ಣಲ್ಲಿ ಚಕ್ ಚಕ್ ಅಂತ ಕ್ಲಿಕ್ ಆಗ್ತಿತ್ತು(9th standard ವರೆಗೆ ನಮ್ಮ ಹತ್ರ ಕ್ಯಾಮರ ಇರ್ಲಿಲ್ಲ). ಅದೃಷ್ಟಕ್ಕೆ 10th standard celebration ಫೋಟೋಸ್ ನನ್ನತ್ರ ಇವೆ. ಕೆಲವರು ಶಾಲೆಯ ಬಗ್ಗೆ, ಟೀಚರ್ಸ್ ಬಗ್ಗೆ ಒಪಿನಿಯನ್ ಹೇಳ್ತಾಯಿದ್ರು, ನಂತರ ಕೆಲ ಟೀಚರ್ಸ್ ಮಾತಡ್ತಾಯಿದ್ರು ಕೊನೆಗೆ ಕ್ಲಾಸ್ ಟೀಚರ್ (ಎಲ್ಲರವು positive opinion). ನಮಗೆ subject handle ಮಾಡಿದ ಟೀಚರ್ಸ್ ಗೆ ನೆನಪಿನ / ಗೌರವದ ಕಾಣಿಕೆಯಾಗಿ ಪುಸ್ತಕಗಳನ್ನ ಕೊಡ್ತಾಯಿದ್ವಿ. ಆ ನಡುವೆ ಪ್ರಿನ್ಸಿಪಾಲ್ ಎಲ್ಲಾ ಕ್ಲಾಸ್ ಗಳನ್ನ ವಿಸಿಟ್ ಮಾಡ್ತಾಯಿದ್ರು. ಆಹಾ, ಖುಷಿಯೋ ಖುಷಿ.
ನಾವು ಹಾಸ್ಟೆಲ್ ಹುಡುಗರು ವಾರ್ಡನ್ ಗಳಿಗೆ ವಿಶ್ ಮಾಡಿ, ರಾತ್ರಿ ಊಟದ ಮುಂಚಿನ ಪ್ರಾರ್ತನೆಯ ಕೊನೆಗೆ ಅವರಿಗೆ 'ಥ್ಯಾಂಕ್ಸ್' ಹೇಳ್ತಾಯಿದ್ವಿ (ನಮ್ಮನ್ನ ವರ್ಷಾನುಗಟ್ಟಲೆ ಸಹಿಸಿಕೊಂಡಿದ್ದಕ್ಕೆ).
ಎಷ್ಟು ಚೆಂದದ ದಿನಗಳವು, ನನ್ನಲ್ಲಿ ಇನ್ನೂ ಹಸಿ ಹಸಿ . . . ನೆನೆದರೆ ಈಗಲೂ ಕಣ್ಣುಗಳು ಮೆಲ್ಲಗೆ ಹಸಿ.
ನಮ್ಮಂತ ಸೀನಿಯರ್ಸ್ ನಮ್ಮಂತ ಜೂನಿಯರ್ಸ್ ಸಲುವಾಗಿ , ಹಾಸ್ಟೆಲ್ ಬಿಲ್ಡಿಂಗ್ ನ ಕಬ್ಬಿಣದ ಗೇಟ್ ನಲ್ಲಿ '+' ಆಕಾರದಲ್ಲಿದ್ದ ಎರಡು ಸರಳುಗಳನ್ನ ಕಿತ್ತು ಕಿಂಡಿ ಮಾಡಿದ್ರು !! ಅದರ ಮೂಲಕ ಒಬ್ಬೊಬ್ಬರೇ ಹೊರ ಬಂದು, ಆದಷ್ಟು ಕತ್ತಲಲ್ಲೇ ಮೆಲ್ಲಗೆ ಓಡುತ ಹೋಗಿ (ಸೆಕ್ಯುರಿಟಿ ಕಣ್ಣಿಗೆ ಬೀಳದೆ) ಕಂಪೌಂಡ್ ಜಿಗಿದು ಸಿನಿಮಾ ನೋಡಿದ್ದು, ಗಲ್ಲಿ ಗಲ್ಲಿ ತಿರುಗಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡಿದ್ದು. ಹಾಸ್ಟೆಲ್ ನಲ್ಲಿ ಇಡುತ್ತಿದ್ದ ಒಬ್ಬ ಗಣಪನ ಮುಂದಿದ್ದ ದೀಪ ಆರದಂತೆ ಕಾಯಲು ಕನಿಷ್ಠ 15 ಜನ, 5 ದಿನ ಶಾಲೆಗೆ ಚಕ್ಕರ್ ಹೊಡೆದದ್ದು. NCC ಡ್ರೆಸ್ ನಲ್ಲಿ ಫೋಟೋ ತೆಗೆಸಿಕೊಂಡದ್ದು, ಗೋವಾ ದಲ್ಲಿನ 14 ದಿನದ ನ್ಯಾಷನಲ್ ಟ್ರೆಕ್ಕಿಂಗ್ ಕ್ಯಾಂಪ್ .
ಹಾಸ್ಟೆಲ್ ನಲ್ಲಿ ನಾವು ಸ್ಟ್ರೈಕ್ ಮಾಡ್ತಿದ್ದದು ವಿಚಿತ್ರವಾಗಿತ್ತು : ಒಂದು ದಿನ ಎಲ್ಲರು ಇವತ್ತು ಬರೀ ಚಪಾತಿ ತಿನ್ಬೇಕು ಅಥವಾ ಬರೀ ಅನ್ನ ತಿನ್ಬೇಕು ಆಗ ಅದು shortage ಆಗುತ್ತೆ ಮತ್ತೆ ನಾಳೆ ಹಾಗಂತ ಪ್ರಿನ್ಸಿಪಾಲ್ ಗೆ ಕಂಪ್ಲೇಂಟ್ ಮಾಡೋದು. ಹೀಗೆ ಅಡುಗೆ ಭಟ್ಟರಿಗೆ ನಮ್ಮ ಅಸಮದಾನವನ್ನ ಮನವರಿಕೆ ಮಾಡುತ್ತಿದ್ದೆವು. ಕೆಲವೊಮ್ಮೆ ಹುಣ್ಣಿಮೆಯ ದಿನ 'ಬೆಳದಿಂಗಳ ಊಟ' ಇರುತ್ತಿತ್ತು - ಹಾಸ್ಟೆಲ್ ಮುಂದಿನ ಗ್ರೌಂಡಿನಲ್ಲಿ ಗುಂಪು ಗುಂಪಾಗಿ ಕೂತು ಒಂದೇ ತಟ್ಟೆಯಲ್ಲಿ ಊಟ. ಒಮ್ಮೆ ರಾತ್ರಿ ಸಿನಿಮಾ ನೋಡಲು ಹೋದಾಗ ವಾರ್ಡನ್ ಮಧ್ಯರಾತ್ರಿ attendance ತೊಗೊಂಡಿದ್ರು - needless to say we were punished. ನಾವು ವರ್ಷದ ಕೊನೆಯಲ್ಲಿ 'ಹಾಸ್ಟೆಲ್ ಡೇ' celebrate ಮಾಡ್ತಿದ್ವಿ with lot of cultural / funny activities. school ಕಿಡಕಿಯ ಸುಮಾರು ಐವತ್ತಕ್ಕೂ ಹೆಚ್ಚು ಗ್ಲಾಸ್ ಗಳನ್ನ ವಿನಾಕಾರಣ ಒಡೆದು ಹಾಕಿದಾಗ, ಪ್ರಿನ್ಸಿಪಾಲ್, ನಮ್ಮ ಮನೆಗೆ ಫೋನ್ ಮಾಡುವುದಾಗಿ ಹೆದರಿಸಿ, ನಮ್ಮನ್ನ suspend ಮಾಡುವ ಮಟ್ಟಿಗೆ ಯೋಚನೆ ಮಾಡಿದ್ದು ಆಗ ಹಾಸ್ಟೆಲ್ ವಾರ್ಡನ್ ದೇವರಂತೆ ಬಂದು ನಮ್ಮನ್ನ ಕಾಪಾಡಿದ್ದರು - Apology letter ಬರೆದದ್ದು ಆಯಿತು.
Exams ಹತ್ರಯಿದ್ದಾಗ ರಾತ್ರಿ ಪ್ಲೇ ಗ್ರೌಂಡಿನ ಲೈಟಿನ ಬೆಳಕಿನಲ್ಲಿ ಓದೋದು - 'ವಿಶ್ವೇಶಯ್ಯ, ಅಂಬೇಡ್ಕರ್ ಹಿಂಗೆ ಓದಿದ್ದು' ಅಂತ ನಾವು ನಾವೇ ಅಂದುಕೊಂಡು ನಗ್ತಿದ್ವಿ. ಬೆಳಗ್ಗೆ ಆರು ಗಂಟೆಗೆ, PT ಸರ್ ಬಂದು ಎಚ್ಚರಿಸಲು ರೂಮಿನ ಬಾಗಿಲು ಮುರಿದು ಹೋಗುವಂತೆ ಬಾರಿಸುತ್ತಿದ್ರು - ನಾವು ಒಮ್ಮೊಮ್ಮೆ ಎಚ್ಚರವಾಗಿದ್ರೂ ಬಾಗಿಲು ತೆರೀತಾಯಿರ್ಲಿಲ್ಲ (PT ಸರ್ ಬಂದು ಎಚ್ಚರಿಸೋದು exam time offer !!). ರೂಮಿನ ಬಾಗಿಲನ್ನ ಸ್ವಲ್ಪವೇ ಸ್ವಲ್ಪ ತೆರೆದು ಒಳಗಡೆಯಿಂದ ಕದದ ಮೇಲೆ ನಮ್ಮ ಶೂಗಳನ್ನ ಇಡುತ್ತಿದ್ದೆವು, ಯಾರಾದರು ಬಾಗಿಲು ತಳ್ಳಿಕೊಂಡು ಒಳ ಬಂದರೆ ಅವರ ತಲೆ ಮೇಲೆ 'ಶೂ' ಅಭಿಷೇಕ. ಒಮ್ಮೆಮ್ಮೆ ವಾರ್ಡನ್ ಗಳ ತಲೆ ಮೇಲೆ ಬಿದ್ದಿದ್ದವು - ಆಗ ನಮ್ಮ ಗತಿ ಏನಾಗಿರಬಹುದು?
ನೀವು ಊಹೆ ಮಾಡ್ತೀರ ಅನ್ಕೊಂಡಿದೀನಿ . . . . ನಾವು ಮಾಡಿದ್ದು ಒಂದೇ ಎರಡೇ?
ಎಲ್ಲಿದ್ದಾರೋ, ಹೇಗಿದ್ದಾರೋ ತಿಳುವಳಿಕೆ ಹೇಳಿ, ಓದು - ಬರಹ ಕಲಿಸಿಕೊಟ್ಟು,
'may god bless you' - 'wish you all the best for you future' ಅಂತ ಮನಸಿನಿಂದ ಹಾರೈಸಿ ನಮ್ಮನ್ನ ಶಾಲೆಯಿಂದ ಕಳಿಸಿಕೊಟ್ಟ :
ಗುರುಗಳು, ಸಹಿಸಿಕೊಂಡ ವಾರ್ಡನ್ ಗಳು- ಅಡುಗೆ ಭಟ್ಟರು, 'ಈಗ ಬ್ಯಾಡ ಆಮೇಲೆ ಬರ್ರಿ ಪ್ರಿನ್ಸಿಪಾಲ್ ಗರಂ ಆಗ್ಯಾರ' ಅಂತ ಹೇಳಿ ಕಳಿಸುತ್ತಿದ್ದ ಪಿವನ್, ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಬಾಗಿಲು ಬಡಿಯುತ್ತಿದ್ದ ಸೆಕ್ಯುರಿಟಿ ಗಾರ್ಡ್, ರಾತ್ರಿ ಕಂಪೌಂಡಿನ ಹೊರಗೆ ತಳ್ಳುಗಾಡಿಯಲ್ಲಿ ಅಂಗಡಿ ಇಟ್ಟುಕೊಂಡು, ಒಳಗೆ ಇರುತ್ತಿದ್ದ ನಮಗೆ ಪಲಾವ್, ಆಮ್ಲೆಟ್, ಎಗ್ ರೈಸ್ ಪಾರ್ಸಲ್ ಕೊಡುತ್ತಿದ್ದ ಆತನ ಹೆಸರೇನು ? ಇಲ್ಲ ನೆನಪಿಲ್ಲ, ಅಸಲಿಗೆ ನಾವು ಕೇಳಿಯೇ ಇಲ್ಲ. ಈ ಎಲ್ಲವನ್ನ ಜೊತೆಗೆ ಸಂಬ್ರಮಿಸಿದ ಗೆಳೆಯರು. ಎಲ್ಲೇ ಇದ್ದರೂ, ಎಲ್ಲರು ಚೆನ್ನಾಗಿರಲಿ.
ಹೇಳುತ್ತಾ ಹೋದರೆ ಇದು ಮುಗಿಯುವ ಮಾತ? ಖಂಡಿತ ಅಲ್ಲ.
ಅಪ್ಪ-ಅಮ್ಮ, ಶಾಲೆಯಲ್ಲಿ ಕಲಿಸಿದ ಟೀಚರ್ಸ್ , ತಿಳಿದೋ - ತಿಳಿಯದೋ ಏನನ್ನೋ ಕಲಿಸಿಕೊಟ್ಟ ಅಪರಿಚಿತರು ಮತ್ತು ಪರಿಚಿತರು ಹಾಗು ದಿನ ದಿನವೂ ಹೊಸದನ್ನ ತೋರಿಸುವ, ಕಲಿಸುವ ಇಷ್ಟು ಚಂದದ ಬದುಕು - ಈ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನದಂದು ಗೌರವದಿಂದ ನಮಿಸುತ್ತೇನೆ.
"ಕಲಿಯುವವರಿಗೆ ತಕ್ಕ ಗುರು ಸಿಗಲಿ - ಗುರುವಿಗೆ ತಕ್ಕ ವಿದ್ಯಾರ್ಥಿ ಸಿಗಲಿ" ಎನ್ನುವುದಷ್ಟೇ ಪ್ರಾರ್ಥನೆ.
(ಅದೆಷ್ಟೋ ಮರೆಯದೆ ಉಳಿದ ನೆನಪುಗಳಲ್ಲಿ ಇದೂ ಒಂದು)
=====
=====
Aug 23, 2011
ರಣ ಬಿಸಿಲಿನ ಬಳ್ಳಾರಿಯಲ್ಲಿ ತಣ್ಣಗೆ ಎರಡು ಯೌವನದ ಎದೆಗಳ ನಡುವೆ ಪ್ರೇಮವೊಂದು ಮೊಳಕೆಯೋಡೆದಿತ್ತು.
ತುಂಡು ಲಂಗದ ಅವಳನ್ನ, ಪಾಪದ ಗರ್ಭದಿಂದ ಹುಟ್ಟಿದ ಚಲಪತಿ ಅದಿನ್ಯಾವ ಮಟ್ಟಿಗೆ ಪ್ರೀತಿಸಿದನೆಂದರೆ ಊಟ, ನಿದ್ದೆ , ಕೆಲಸ ಉಹುಂ ಯಾವುದೆಂದರೆ ಯಾವುದು ಕೂಡ ಅವನತ್ತ ಸುಳಿಯಗೊಡಲಿಲ್ಲ . ಪತ್ರಗಳು ಅವ್ಯಾಹತವಾಗಿ ಹರಿದಾಡಿದವು. ಅವಳನ್ನ ತನ್ನ ಮಗ ಈ ಪರಿ ಪ್ರೀತಿಸುವುದನ್ನ ಕಂಡ ಚಲಪತಿಯ ತಾಯಿಯೇ "ಇಷ್ಟೊಂದು ಪ್ರೀತಿಸಬೇಡ ಮಗನೆ, ಯಾವ ಹೆಣ್ಣೂ ಇಷ್ಟು ಪ್ರೀತಿಗೆ ಅರ್ಹಳಲ್ಲ" ಅಂತ ಹೇಳುತ್ತಾಳೆ. ಆದ್ರೆ, ಅವನ ತಲೆಯ ಮೇಲೆ ಪ್ರೇಮದ ಭೂತಸವಾರಿ.
ಮುಂದುವರಿದ ದಿನಗಳಲ್ಲಿ ಆ ಹುಡುಗಿ ಚಲಪತಿಯನ್ನ ವಿನಾಕಾರಣ ದೂರಮಾಡ್ತಾಳೆ, ಬೇರೊಬ್ಬನೊಂದಿಗೆ ಮದುವೆ ಆಗ್ತಾಳೆ. ಆಗಲೇ ಚಲಪತಿ ಅವಳ ಗಂಡನ ಸಾವಿಗಾಗಿ ಕಾಯಲಾರಂಭಿಸುತ್ತಾನೆ !!
ಕಾಯುತ್ತಾ ಕಾಯುತ್ತಾ ತಾನೂ ಬೆಳೆಯುತ್ತಾನೆ - ಸಾಮಾಜಿಕವಾಗಿ, ಆರ್ಥಿಕವಾಗಿ; ಮುಂದೆಂದೋ ಒಂದು ದಿನ ಅವಳು ತನ್ನತ್ತ ಬಂದಾಗ ಯಾವುದೇ ಕೊರತೆ ಕಾಣಬಾರದಲ್ಲ ಅದಕ್ಕೆ. ತನ್ನ ಮಗ ಅವಳನ್ನಲ್ಲದೆ ಬೇರೆ ಯಾರನ್ನೂ ಮದುವೆಯಾಗಲಾರ ಅಂತ ಚಲಪತಿಯ ತಾಯಿಗೆ ಮನವರಿಕೆಯಾಗಿರೂತ್ತೆ. ಹಾಗಾಗಿ ಆಕೆ, ಮಗ ಚಲಪತಿ ದೈಹಿಕ ಸುಖವಾದರೂ ಪಡೆಯಲಿ ಅಂತ ಒಬ್ಬ ವಿಧವೆಯನ್ನ ಒಪ್ಪಿಸುತ್ತಾಳೆ - ಆ ವಿಧವೆಗೂ ಅದರಿಂದ ಲಾಭವಿರುತ್ತೆ. ಚಲಪತಿ ದೈಹಿಕ ಕ್ರಿಯೆಯಲ್ಲಿ ತೊಡಗುತ್ತಾನೆ ಕೂಡ -ಒಂದೆರಡು ಬಾರಿ. ತಾಯಿಯೇ ಮಗನ ದೈಹಿಕ ಸುಖಕ್ಕಾಗಿ ಪರಧರ್ಮದ ವಿಧವೆಯನ್ನ ತನ್ನ ಮನೆಯಲ್ಲೇ ಮಲಗಿಸುವ ಕೆಲಸ ಮಾತ್ರ ಒಂದು ತೆರನಾದ ಕಂಪನ ಉಂಟು ಮಾಡುತ್ತೆ.
ದಿನಗಳು ಉರುಳತ್ತಲೇ ಇರುತ್ತವೆ, ಮುಪ್ಪು ಮರೆಯಲ್ಲಿ ನಿಂತು ಹೊಂಚು ಹಾಕಿ ಕುಳಿತಿರುತ್ತೆ. ಚಲಪತಿ ತನ್ನನ್ನ ತಿರಸ್ಕರಿಸಿದ ಹುಡುಗಿಯ ಸಲುವಾಗಿ ಕಾಯುತ್ತಲೇ ಇರುತ್ತಾನೆ. ತನ್ನೊಳಗಿನ ನೋವನ್ನ ಯಾರಿಗಾದರೂ ಹೇಳಲು ಅವನಿಗಾಗುವುದಿಲ್ಲ. ಎಲ್ಲಾ ತಿಳಿದ ಅವನ ತಾಯಿಯೂ ಸತ್ತುಹೊಗುವಳು. ಆಗಲೇ ಚಲಪತಿಗೆ ಅನಿಸುವುದು 'ಬಾಲ್ಯ ಮತ್ತು ಯೌವನ ಮುಗಿದವು' ಅಂತ.
ಚಲಪತಿಯ ಪ್ರೇಮದೇವತೆ ತನ್ನದೇ ಸಂಸಾರ, ಪ್ರತಿಷ್ಠೆ, ಗೌರವ ಎಲ್ಲವನ್ನ ಅನುಭವಿಸುವಾಗ ತನ್ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಚಲಪತಿ ಆಕೆಗೆ ನೆನಪೇ ಆಗುವುದಿಲ್ಲ. ತನ್ನದು ತಪ್ಪು ಅಂತ ಒಪ್ಪಲು ಅವಳ ಅಹಂ ಅಡ್ಡಿಪದಿಸುತ್ತೆ. ಚಲಪತಿ ಒಬ್ಬ ಅಸ್ತಿತ್ವದಲ್ಲೇ ಇಲ್ಲದವನು, ಅವನು ಕೇವಲ ನೆರಳು ಮಾತ್ರ ಅಂದುಕೊಂಡಿರುತ್ತಾಳೆ.
ಒಂದು ದಿನ ಚಲಪತಿಗೆ ಸುದ್ದಿ ಬರುತ್ತೆ, ಅವನ ಪ್ರೀತಿಯ ಹುಡುಗಿಯ ಗಂಡ ಕೊನೆಯುಸಿರೆಳೆದ ಸುದ್ದಿಯದು. ಕೊನೆಗೂ ಚಲಪತಿ ಕಾಯುತ್ತಿದ್ದ ದಿನ ಬಂದಿತ್ತು. ಅವಳ ಗಂಡ ಸತ್ತು ಇನ್ನೂ ದಿನಗಳೇ ಕಳೆದಿರಲಿಲ್ಲ ಆಗ ಮತ್ತೊಮ್ಮೆ ಚಲಪತಿ, ಆಕೆಯ ಮುಂದೆ ನಿಂತು ಇನ್ನೂ ಜೀವಂತವಾಗಿರುವ ತನ್ನ ಪ್ರೇಮ ತೋಡಿಕೊಳ್ಳುತ್ತಾನೆ -ಬರೋಬ್ಬರಿ ಅರ್ಧಶತಮಾನಗಳ ನಂತರ !!!
ಪ್ರೇಮ ಮತ್ತು ಮುಪ್ಪು ಎರಡೂ ನಿರ್ಲಜ್ಜತೆಗೆ ದೂಡುತ್ತವೆ.
ಮುಪ್ಪಿನಲ್ಲಿ ಮತ್ತೆ ಪತ್ರಗಳು ಶುರುವಾಗುತ್ತವೆ.
ಆ ಪಕ್ವ ಹೃದಯಗಳ ಆಂತರ್ಯದಲ್ಲಿ ಮಾತಿಗೆ ಮೀರಿದ ಪ್ರೀತಿಯೊಂದು ಮಡುವುಗಟ್ಟಿ ನಿಂತಿತ್ತು . ಅಲ್ಲಿಗೆ ಮುಗಿಯುತ್ತೆ ಕಥೆ. ಎಪ್ಪತ್ತು ವಯಸ್ಸು ದಾಟಿದ ಅವರಿಬ್ಬರೂ ಒಂದಾದರೋ ಇಲ್ಲವೊ ನೀವೇ ಓದಿ ತಿಳಿಯಬೇಕು. ಚಲಪತಿಯನ್ನ ಅರ್ಧ ಶತಮಾನ ಕಾಯುವಂತೆ ಮಾಡಿದವಳ ಹೆಸರು "ಮಾಂಡೋವಿ".
'ರವಿ ಬೆಳಗೆರೆ' ಯವರ ಕಾದಂಬರಿಯಿದು 'ಮಾಂಡೋವಿ'. ಒಂದು ಬೇರೆಯದೇ ಭಾವವನ್ನುಂಟುಮಾಡುವ, ಅಲೆಯೆಬ್ಬಿಸುವ ಕಾದಂಬರಿ. ಓದದಿದ್ದರೆ ನೀವು ಓದಬೇಕು. ಮಾಂಡೋವಿ ಖಂಡಿತವಾಗಿ ಹತ್ತಿರವಾಗ್ತಾಳೆ, ಏಕಾಂತದಲ್ಲಿ ನೆನಪಾಗುತ್ತಾಳೆ. ಮಾಂಡೋವಿ (ಗೋವಾ ರಾಜ್ಯದ ಪ್ರಮುಖ ನದಿಯ ಹೆಸರು) ನಿಲ್ಲದೆ ಹರಿಯುತ್ತಾಳೆ. ಲೇಖಕ ರವಿ ಬೆಳಗೆರೆಯವರು ಸಮರ್ಥವಾಗಿ ಮಾಂಡೋವಿಯನ್ನ ತೋರಿಸುತ್ತಾ ಕೆಲವೇ ಜನ ಅನುಭವಿಸುವ ಪ್ರೇಮದ ಇನ್ನೊಂದು ಮಗ್ಗುಲನ್ನ ತೆರೆದಿಡುತ್ತಾರೆ.
ಮಾಂಡೋವಿ, ಪ್ರಖ್ಯಾತ ಲೇಖಕ 'ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್' (Gabriel José de la Concordia García Márquez) ಅವರ 'ಲವ್ ಇನ್ ದ ಟೈಮ್ ಆಫ್ ಕಾಲರ' ಕಾದಂಬರಿಯ ಪ್ರೇರಣೆ.
ಸೂಚನೆ :: ಇದು 'ಮಾಂಡೋವಿ'ಯ ವಿಶ್ಲೇಷಣೆ, ವಿಮರ್ಶೆ ಅಥವಾ ಇನ್ಯಾವುದೋ ರೀತಿಯ ತರ್ಕಗಳಿಗೆ ನೇತಾಡುವ ಬರಹವಲ್ಲ.
ಇದೊಂದು ಕೇವಲ ಕಾದಂಬರಿಯನ್ನ ಪರಿಚಯಿಸುವ ಪ್ರಯತ್ನ ಅಷ್ಟೇ.
=====
=====
Aug 11, 2011
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು
ತೀರ್ಥಕ್ಷೆತ್ರದಲ್ಲಿ ಕುಡಿದು, ಒಂದು ಗ್ಲಾಸನ್ನೋ ಬಾಟಲಿಯನ್ನೋ
ಟೇಬಲ್ಲಿಗೆ ಕುಟ್ಟಿ ಎದ್ದು ಹೋಗುವನು ಕುಡುಕನಲ್ಲ !!!
ಇಡೀ ಕುಡುಕ ಸಂತತಿಗೆ ಅವನು - ಅವಮಾನ, ಅಸಹ್ಯ
ನೇರವಾಗಿ ಮನೆಗೆ ಹೋದರಂತೂ, ಧರ್ಮದ್ರೋಹಿ
ಕುಡಿದು ಕುಡಿದು ಕುಡಿಯುತ್ತಲೇ ತೇಲಾಡುತ್ತಾ, ಓಲಾಡುತ್ತಾ,
ಹಾಡುತ್ತಾ ಆಯಾ ತಪ್ಪಿ ಬಿದ್ದು, ಆದ ನೋವನ್ನು ಮರೆಯಲು ಔಷಧಿಗಾಗಿ
ತಿರುಗಿ ಮದಿರಾಲಯಕ್ಕೆ ಬಂದು, ವಾಸ್ತು ಪ್ರಕಾರ ಟೇಬಲ್ಲು ಹುಡುಕಿ ಕೂತು
ಟಿಪ್ಸ್ ಹಣವನ್ನ ಮೊದಲೇ ಕೊಟ್ಟು, ಉಳಿದ ಹಣ ಮುಗಿಯುವ ತನಕ
"ಒಂದು ಲಾರ್ಜ್" ಅಂತಾನಲ್ಲ ಅವನು, ಸಾಕ್ಷಾತ್ ನಿಜ ಕುಡುಕ - ಕುಡುಕ ಚಕ್ರವರ್ತಿ
ಕುಡುಕರೆಂದರೆನು ಕಡಿಮೆಯೇ ? ಉಹುಂ !!
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು
=====
Jul 31, 2011
ನಾನು ಆರಾಮಾಗಿ ಹತ್ತಿದೆ ಯಾಕಂದ್ರೆ ಸೀಟು ಸಿಗೋದು ಖಾತ್ರಿಯಿರ್ಲಿಲ್ಲ, ಅದಕ್ಯಾಕ ಗುದ್ದಾಡ್ಕೊಂಡು ಹತ್ತೋದು. ರೈಲಿನಲ್ಲೂ ಒಂದೇ ಕಡೆ ಕೂತು ಪ್ರಯಾಣ ಮಾಡೋನು ಟೆಸ್ಟ್ ಲೆಸ್ ಫೆಲೋ. ಸೀಟು ಹಿಡಿದು ಒಂದೇ ಕಡೆ ಕೂತ್ಕೊಬೇಕು ಅಂದ್ರೆ ಬಸ್ಸಿಗೆ ಹೋಗಬಹುದಲ್ವಾ ?. ಆದ್ರೂ, ಪಕ್ಕದ ಸೀಟಿನಲ್ಲಿ ಯಾರು ಕೂತ್ಕೋತಾರೆ ಅನ್ನೋ ಹುಳ ತಲೇಲಿ ಇತ್ತಲ್ಲ ಅದಕ್ಕೆ ಒಮ್ಮೆ ಕಣ್ಣಾಡಿಸಿದೆ. ಖಾಲಿ ಸೀಟು ಕಂಡಿತು, ನೋಡಿದ್ರೆ ಕಿಡಕಿ ಸೀಟಿಗೆ ಯಾರೋ ಪೇಪರ್ ಇಟ್ಟಿದ್ರು 'ಛೆ' ಅಂದುಕೊಂಡು ಅದೇ ಸೀಟಿನ ತುದಿಗೆ ಕೂತು ಎದುರುಗಡೆ ನೋಡಿದೆ. ಗುಬ್ಬಚ್ಚಿ ಕಂಡಂಗೆ ಹೆಣ್ಣು ಪ್ರಾಣಿಯೊಂದು ಕಿಡಿಕಿ ಸೀಟಿನಲ್ಲಿ ಕಂಡಿತು ಮತ್ತೆ 'ಛೆ' ಅಂದುಕೊಂಡೆ ಯಾಕಂದ್ರೆ ಅವಳ ಪಕ್ಕದಲ್ಲಿ ಯಾರೋ ಪೇಪರ್, ಬ್ಯಾಗು ಇಟ್ಟಿದ್ರು. 'ದೇವ್ರೇ ಪಕ್ಕದಲ್ಲಿ ಕೇಳಿದ್ರೆ ಎದುರುಗಡೆ ಕೊಡ್ತಿಯಲ್ಲ' ಅಂತ ನನ್ನೊಳೋಗೆ ಹೇಳಿಕೊಳ್ಳುವಾಗಲೇ ಒಬ್ಬ ಅಂಕಲ್ ಬಂದು 'ನಾನಿಲ್ಲಿ ಸೀಟು ಹಾಕಿದಿನಮ್ಮ' ಅಂದ್ರು.
ಆ ಹುಡುಗ ಯಶವಂತಪುರದಲ್ಲಿ ಇಳಿದ - 'ಖದೀಮ, ಇವಳನ್ನ ರೈಲು ಹತ್ಸಲಿಕ್ಕೆ ಮೆಜೆಸ್ಟಿಕ್ ತನಕ ಬಂದಿದಾನೆ. ಅದೆಷ್ಟು ರೈಲು ಹತ್ತಿಸಿದ್ನೋ ಏನೋ, ಇವ್ಳು ಎಷ್ಟು ನಂಬಿದ್ಲೋ ಏನೋ' ಅನ್ಕೊಂಡೆ. ಯಾರೋ ಬಂದ ಹಾಗಾಯ್ತು ಅವರು ಸೀಟು ಕೇಳುವ ಮೊದ್ಲೇ ನಾನೇ ಸರ್ರನೆ ಕಿಡಕಿ ಸುಂದರಿ ಕಡೆ ಜಾರಿ, ದಾನವೀರ ಶೂರ ಕರ್ಣನಾದೆ. ನನಗೆ ಎಷ್ಟೋ ವರ್ಷಗಳನ್ನ ಕೂತಲ್ಲೇ ಕಳೆದಂಗಾಗಿತ್ತು, ಈಗ ಒಂಥಾರ ನಿರಾಳ. ರೈಲು ತನ್ನ ಪಾಡಿಗೆ ತಾನು ಹೊರಟಿತ್ತು. ದೇವ್ರೇ ಕೊನೆಗೂ ಕಣ್ಣು ಬಿಟ್ಟಲ್ಲಪ್ಪ- ಹುಡುಗಿ ನನ್ನ ಪಕ್ಕ ಬಂದ್ರು, ನಾನು ಹುಡುಗಿ ಪಕ್ಕ ಹೋದರು ಒಂದೇ, ಅಲ್ವಾ?
ಆಮೇಲೆ ಅಲ್ಲೇ ಸುತ್ತ-ಮುತ್ತಾ ಎರಡು-ಮೂರು ಸಲ ಸೀಟು ಬದಲಾಯಿಸಿದೆ. ಈವರೆಗಿನ ನನ್ನ ರೈಲು ಪ್ರಯಾಣದಲ್ಲಿ ನಾನು ತುಂಬಾ ಹೊತ್ತು ಕೂತಲ್ಲೇ ಕೂತಿದ್ದು ಅದೇ ಮೊದಲು - only because of that girl. ಬೆಂಗಳೂರಿನಿಂದ ಧಾರವಾಡಕ್ಕೆ Intercity train ನಲ್ಲಿ ಹೋದ್ರೆ ಒಂಬತ್ತು ತಾಸು ಬೇಕಾಗುತ್ತೆ. ಆ ಒಂಬತ್ತು ತಾಸಿನಲ್ಲಿ ಸುಮಾರು ಐದು ತಾಸು ನಾನು ಅವಳ ಜೊತೆಯಲ್ಲೇ ಇದ್ದೆ (ನಡುನಡುವೆ ಸುತ್ತಾದೊದನ್ನ ಬಿಟ್ಟು). ಹುಬ್ಬಳ್ಳಿ ಬಂತು ಎಲ್ಲರು ಇಳಿದು ಹೋದರು.
ಸ್ವಲ್ಪ ಹೊತ್ತು ಕೂತೆ, ನಾನಿದ್ದ ಡಬ್ಬಿ ಕೊನೆಯಿಂದ ಮೂರನೆಯದಾಗಿತ್ತು. ರೈಲ್ವೆ ಕಾರ್ಮಿಕರು ಹುಬ್ಬಳ್ಳಿಯಿಂದ ಕ್ಲೀನ್ ಮಾಡೋಕೆ ಶುರು ಮಾಡಿದ್ರು, ಧೂಳು ಅಡರುತ್ತಿತ್ತು. ಬ್ಯಾಗನ್ನು ಹೆಗಲಿಗೇರಿಸಿಕೊಂಡು ಒಂದೊಂದೇ ಡಬ್ಬಿಗಳನ್ನ ದಾಟಿದೆ. ಅಲ್ಲಿ ನಾಲ್ಕೈದು ಜನರಲ್ಲಿ ಆ ಹುಡುಗಿಯು ಇದ್ದಿದ್ದು ಗೊತ್ತಾಯ್ತು ಆದ್ರೆ ಹತ್ರ ಹೋದಾಗ ಅವಳ ಕಡೆ ನೋಡಲಿಲ್ಲ. ಧಾರವಾಡದಲ್ಲಿ ಮನೆಗೆ ಹೋದಾಗ ರಾತ್ರಿ ಹೊನ್ನೊಂದು ಹತ್ತಿರವಾಗಿತ್ತು. 'ಚೆನ್ನಾಗಿತ್ತಾ ಪ್ರಯಾಣ ?' ಮನೆಯಲ್ಲಿ ಸಾಮಾನ್ಯ ಪ್ರಶ್ನೆ.
'It was beautiful' ಹಾಗಂತ ಹೇಳ್ಬೇಕು ಇಲ್ಲಾಂದ್ರೆ ಸುಮ್ನೆ ಪ್ರಶ್ನೆ, ಗಾಬರಿ ಶುರುವಾಗ್ತವೆ.
ಮರುದಿನ ಬಟ್ಟೆ ತೊಳೆಯೋಕೆ ಹಾಕುವಾಗ ತಂಗಿ, ಶರ್ಟ್ ನಲ್ಲಿದ್ದ ಹಾಳೆ ನೋಡಿ ಏನೋ ಕವನ ಬರ್ದಿರ್ತಾನೆ ಅಂತ ಓದಿದಾಳೆ.
ನನ್ನಿಂದ ವಿರಚಿತ ಕವಿತೆ ತೋರಿಸಿ 'ಯಾರಿಗೋ ಪ್ರಪೋಸ್ ಮಾಡಿರೋ ಹಾಗಿದೆ' ಅಂದ್ಲು.
'yep, But no use' ಅಂದೆ
she said 'I think , You don't know how to approach'
'May be, I have not attended any classes of it' we both laughed.
'ಹೆಂಗಿದ್ಲು ?' she asked
"Beautiful" ಅನ್ನುತ್ತಾ ಬೈಕಿನ ಕಿಕ್ ಅನ್ನು ಜೋರಾಗಿಯೇ ಒದ್ದೆ.
who knows ? same 'window beauty' may ask me a lift now . hoping for the best.
=====
Jul 10, 2011
ಕಾತೆವಾಡದ ರಾಜ ಮನೆತನಕ್ಕೆ ತೀರಾ ಹತ್ತಿರದ, ತುಂಬಾ ಅನುಕೂಲಸ್ತ ಕುಟುಂಬದ ಹುಡುಗಿ ಅವಳು - ಗಂಗಾ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಷ್ಟಾಗಿ ಒತ್ತು ಕೊಡದ ಆ ಕಾಲದಲ್ಲಿ ಆಕೆ ಸ್ಕೂಲ್ ಗೆ ಹೋಗ್ತಾಯಿದ್ಲು. ಅವಳಿಗೆ ಆಸೆಯಿತ್ತು - ಸಿನಿಮಾ ನಟಿಯಾಗಬೇಕು ಅಂತ. ಒಮ್ಮೆ ಆಕೆಯ ಕ್ಲಾಸ್ ಮೇಟ್ ಮುಂಬೈ ನೋಡಿ ಬಂದವರು, ಮುಂಬೈ ಹಾಗಿದೆ ಗೊತ್ತಾ? ಹೀಗಿದೆ ಗೊತ್ತಾ? ಆಹಾ ಎಷ್ಟು ದೊಡ್ಡ ಕತ್ತದಗಲಿದಾವೆ ಗೊತ್ತಾ? ಅಂತೆಲ್ಲ ಮಾತಾಡಿದ್ರು. ಗಂಗಾಗೆ ತಾನು ಮುಂಬೈ ನೋಡಬೇಕು ಆನೋ ಆಸೆ ಹುಟ್ಟಿತು. ಸಿನಿಮಾ ನಟಿಯಾಗೊದಂತು ದೂರದ ಮಾತು ಅಂತ ಅವಳಿಗೆ ಗೊತ್ತಿತ್ತು ಯಾಕಂದ್ರೆ ಕೌಟುಂಬಿಕ ಹಿನ್ನಲೆ ಹಾಗಿತ್ತು / ದೊಡ್ಡದಿತ್ತು. ಆಗಲೇ ಗಂಗಾನ ತಂದೆ ರಮಣಿಕ್ ಹೆಸರಿನ ಹುಡುಗನನ್ನ ಕೆಲಸಕ್ಕೆ ನೆಮಿಸಿಕೊಳ್ಳುತ್ತಾರೆ, ಅವನು ಮುಂಬೈ ನೋಡಿದವನು ಅಂತ ಗೊತ್ತಾದ ಮೇಲೆ ಗಂಗಾ ಅವನಿಗೆ ಹತ್ರ ಆಗ್ತಾಳೆ. ಆತ ತನಗೆ ಸಿನಿಮಾಕ್ಕೆ ಹತ್ತಿರವಿರುವ ಸ್ನೇಹಿತರಿದ್ದಾರೆ ಅಂತ ಹೇಳ್ತಾನೆ - ಗಂಗಾ ನಂಬಿ ಬಿಡ್ತಾಳೆ.
ಇಬ್ಬರ ನಡುವೆ ಪ್ರೀತಿ ಬೆಳೆಯುತ್ತೆ. ಒಂದು ದಿನ ಒಡವೆ,ಹಣವನ್ನ ಕಟ್ಟಿಕೊಂಡು ಗಂಗಾ ರಮಣಿಕ್ ನೊಂದಿಗೆ ಮುಂಬೈಗೆ ಬರ್ತಾಳೆ. ಮನೆಯವರಿಗೆ ಒಂದೇ ಒಂದು ಚೀಟಿಯನ್ನು ಸಹ ಬರೆದಿಟ್ಟಿರಲ್ಲ.
ಅವಳು ತಂದ ಹಣದಲ್ಲಿ ಇಬ್ಬರು ಲಾಡ್ಜಿನಲ್ಲಿ ಉಳಿತಾರೆ, ಸಿಟಿ ಸುತ್ತಾಡ್ತಾರೆ, ದೈಹಿಕವಾಗಿ ಒಂದಾಗ್ತಾರೆ - ರಮಣಿಕ್ ಜೊತೆಯಾಗಿ ಸಂಸಾರ ಮಾಡೋಣ ಅಂತ ಹೇಳಿರ್ತಾನೆ. ಇನ್ನೇನು ಹಣವೆಲ್ಲ ಖಾಲಿಯಾಗ್ತಾಯಿದೆ ಅನ್ನುವಾಗ ಅವನು ಮನೆ ನೋಡ್ತೀನಿ ಅಲ್ಲಿಯವರೆಗೂ ನನ್ನ ಆಂಟಿ ಮನೆಲಿರು ಅಂತ ಹೇಳಿ ಗಂಗಾಳನ್ನ ತನ್ನ ಆಂಟಿ ಜೊತೆ ಕಳಿಸಿ. ಮನೆ ಹುಡುಕಲಿಕ್ಕೆ ಅಂತ ಹೋಗ್ತಾನೆ.
ರಮಣಿಕ್ ನ ಆಂಟಿ ಜೊತೆ ಟ್ಯಾಕ್ಸಿಯಲ್ಲಿ ಬಂದು ಗಂಗಾ ಇಳಿಯೋದು - ಮುಂಬೈ ನಗರಿಯ 'ಕಾಮಾಟಿಪುರ', ರೆಡ್ ಲೈಟ್ ಏರಿಯ!! ಗಂಗಾಗೆ ಆ ಜಾಗ ಎಂತದು ಅಂತ ಗೊತ್ತಿರಲ್ಲ. ಆದರೂ ಯಾಕೋ ಏನೋ ಸರಿಯಿಲ್ಲ ಅನಿಸುತ್ತೆ. ಹೇಗೋ, ಇವತ್ತು ಒಂದು ದಿನ ತಾನೇ. ನಾಳೆ ನಾನು ರಮಣಿಕ್ ನ ಜೊತೆ ಹೊಸ ಮನೆಗೆ ಹೋಗ್ತೀನಿ ಅಂತ ಅನ್ಕೊತಾಳೆ, ಆದರೆ ಆಂಟಿ ಹೇಳಿದ್ದು ಕೇಳಿ ಗಂಗಾಗೆ ದಂಗುಬಡಿಯುತ್ತೆ - ರಮಣಿಕ್ ಗಂಗಾಳನ್ನ ಮಾರಾಟ ಮಾಡಿ ಹೋಗಿಬಿಟ್ಟಿರುತ್ತಾನೆ. ಇನ್ನು ಆಂಟಿ, ಆಕೆ ಆಂಟಿಯಲ್ಲ - ಘರ್ ವಾಲಿ.
ಗಂಗಾ ಜಗಳ ಮಾಡ್ತಾಳೆ, ಕಿರಿಚಾಡ್ತಾಳೆ ಅವಳಿಗೆ ಒದೆಗಳು ಬೀಳ್ತವೆ ಮತ್ತೆ ಅಳ್ತಾಳೆ. ಕೊನೆಗೆ ಎಲ್ಲಾ ರೀತಿಯಲ್ಲಿ ಯೋಚಿಸಿ ತಾನು ವೇಶ್ಯೆಯಾಗಲಿಕ್ಕೆ ತಯಾರು ಅಂತಾಳೆ - ಕಾತೆವಾಡದ ತುಂಬಾ ಅನುಕೂಲಸ್ತ ಮನೆಯ ಹುಡುಗಿ. ಮಾರಾಟಮಾಡಿದ ರಮಣಿಕ್ ಒಂದು ವಾರ ಗಂಗಾಳನ್ನ ದೈಹಿಕಾವಾಗಿ ಉಪಯೋಗಿಸಿಕೊಂಡು, ಗಂಗಾ ಇನ್ನು ಕನ್ಯೆ ಅಂತ ಹೇಳಿ ಮಾರಾಟ ಮಾಡಿರ್ತಾನೆ. ತಾನು ಕನ್ಯೆ ಅಲ್ಲ ಅಂತ ಗಂಗಾ ಕೂಡ ಘರ್ ವಾಲಿಗೆ ಹೇಳೋದಿಲ್ಲ. ಅವಳ ಜೊತೆ ಕಾಮಾಟಿಪುರದಲ್ಲಿ ಮಲಗಿದ ಮೊದಲ ಗಂಡಸಿಗೆ ಆಕೆ ಇಷ್ಟ ಆಗ್ತಾಳೆ. ಆ ಗಂಡಸು ಎಲ್ಲಾ ಮುಗಿದ ಮೇಲೆ ನಿನ್ನ ಹೆಸರೇನು ಅಂತ ಕೇಳ್ತಾನೆ. ಸ್ವಲ್ಪ ಸುಮ್ಮನಿದ್ದು ಗಂಗಾ, 'ಗಂಗೂ' ಅಂತಾಳೆ - ಬರ್ತ್ ಆಫ್ ಪ್ರೋಷ್ಟಿಟ್ಯುಟ್. ನಂತರ ಅವಳನ್ನೇ ಹುಡುಕಿಕೊಂಡು ಎಷ್ಟೋ ಜನ ಬರೋಕ್ಕೆ ಶುರುಮಾಡ್ತಾರೆ.
ಗಂಗೂ ತನ್ನ ಬುದ್ಧಿವಂತೆಕೆಯಿಂದ, ಪ್ಲ್ಯಾನ್ ಗಳಿಂದ ಬೆಳೆದ ರೀತಿ ಅಮೇಜಿಂಗ್ ಅನ್ಸಿಬಿಡುತ್ತೆ. ಮುಂದೆ ಆಕೆ ಇಡೀ ಕಾಮಾಟಿಪುರವನ್ನ ರಾಣಿಯಂತೆ ಆಳುತ್ತಾಳೆ. ಅದೆಷ್ಟೋ ಕಷ್ಟಗಳಿಂದ ವೇಶ್ಯೆಯರನ್ನ ಕಾಪಾಡ್ತಾಳೆ. ಎಲ್ಲರು ಆಕೆಗೆ 'ಅಮ್ಮ' ಅಂತಾರೆ. ವೇಶ್ಯೆಯರು ಸಮಾಜಕ್ಕೆ ಎಷ್ಟರಮಟ್ಟಿಗೆ ಅವಶ್ಯಕ ಅಂತ ಆಕೆ ಮಾಡಿದ ಭಾಷಣ ಸಭೆಯಲ್ಲಿ ನೆರೆದಿದ್ದ ರಾಜಕಾರಣಿಗಳಿಗೆ, ಸಮಾಜ ಸೇವಕರಿಗೆ, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರಿಗೆ ಸಿಡಿಲು ಬಡಿದಂತಾಗಿತ್ತು.
ಗಂಗೂಬಾಯಿ ಸೀರೆಯ ಅಂಚಿಗೆ ಬಂಗಾರದ ಪಟ್ಟಿಯಿರ್ತಾಯಿತ್ತು, ಬ್ಲೌಸಿಗೆ ಬಂಗಾರದ ಗುಂಡಿಗಳು. ಆ ಕಾಲದಲ್ಲಿ ಆಕೆಯ ಹತ್ತಿರ ಇದ್ದಿದ್ದು 'ಬೆಂತ್ಲಿ' ಕಾರಿತ್ತು. ಭಯಂಕರ ಆಸ್ತಿ. ಈಗಲೂ ಕಾಮಾಟಿಪುರದ ಎಷ್ಟೋ ಮನೆಗಳಲ್ಲಿ ಆಕೆಯನ್ನ ಪೂಜಿಸ್ತಾರೆ, ಆಕೆದೊಂದು ಫೋಟೋ ಇಟ್ಟಿರ್ತಾರೆ. ಅಲ್ಲಿಯೇ ಆಕೆದೊಂದು ಮೂರ್ತಿಯಿದೆ.
೧೯೬೦ ರಲ್ಲಿ ಒಬ್ಬ ವೇಶ್ಯೆಯಾಗಿ / ಕಾಮಾಟಿಪುರದ ಲೀಡರ್ ಆಗಿ ಭಾರತದ ಪ್ರದಾನ ಮಂತ್ರಿ ನೆಹರು ಜೊತೆ ಆಕೆ ಮೀಟಿಂಗ್ ಮಾಡಿದ್ದಳು ಅಂದ್ರೆ ನೀವು ನಂಬ್ತೀರಾ ? ನಂಬಲೇ ಬೇಕು!!
"ಯಾಕಮ್ಮ ನೀನು ವೆಶ್ಯೇಯಾದೆ ? ಒಂದು ಒಳ್ಳೆ ಕೆಲ್ಸಾ ಮಾಡೋದಲ್ವ ? ಒಳ್ಳೆ ಗಂಡನ ಜೊತೆ ಇರಬಹುದಲ್ವಾ ?" ಅಂತ ನೆಹರು ಕೇಳಿದ್ರೆ.
"ನೀವು ನನ್ನ ಶ್ರೀಮತಿ. ನೆಹರು ಅಂತ ಮಾಡಿಕೊಳ್ಳೋದಾದ್ರೆ, ನಾನು ಈಗಿನ ಕೆಲಸ ಬಿಡ್ತೀನಿ" ಅಂದಳು ಗಂಗೂಬಾಯಿ, ನೆಹರು ಕಕ್ಕಾಬಿಕ್ಕಿ.
ನೂರಾರು ಜನ ವೇಶ್ಯೆಯರನ್ನ ಮತ್ತು ರಾಜಕಾರಣಿಗಳನ್ನ, ಗೂಂಡಾಗಳನ್ನ, ಮಾದ್ಯಮದವರನ್ನ ಆಕೆ ಹ್ಯಾಂಡಲ್ ಮಾಡ್ತಿದ್ದಳು ಅಂದ್ರೆ ಅದೇನ್ ತಮಾಷೆ ಮಾತಾ?
ಮಹಾನಗರಿ ಮುಂಬೈ ಕ್ರೂರಪ್ರಪಂಚ/ ಅಂಡರ್ ವಲ್ಡ್ ನ ಇನ್ನು ಅನೇಕ ರಾಣಿಯರ ಬಗ್ಗೆ ನಿಮಗೆ ಓದಬೇಕು ಅನಿಸಿದರೆ.
ಎಸ್. ಹುಸೇನ್ ಜೈದಿ ಬರೆದಿರುವ "ಮಾಫಿಯ ಕ್ವೀನ್ಸ್ ಆಫ್ ಮುಂಬೈ" ಪುಸ್ತಕವನ್ನ ನೀವು ಓದಬೇಕು.
ಓದಿದ ಮೇಲೆ ಖಂಡಿತವಾಗಿಯೂ ಬೇರೆಯದೊಂದು ಪ್ರಪಂಚ ನಿಮಗೆ ಕಾಣುತ್ತೆ. ನೀವು ಓದ್ತೀರಾ ನನಗೊತ್ತು.
=====
=====
Jun 21, 2011
೧. 'ಇದು ನಾಯಿ ಪ್ರೀತಿ'
ನಿನ್ನ ಕೇಶರಾಶಿ ನೋಡಲು ರೋಮಾಂಚನ
ನೀ ನನ್ನತ್ತ ಬರಲು ನನ್ನೊಳಗೆ ಮಧುರ ಕಂಪನ
ಆದರೂ ಸಹಿಸಲಾರೆ ನಿನ್ನೀ ಎಂಜಲಿನ ತುಂತುರು ಸಿಂಚನ
ನನ್ನ ಮುದ್ದು ನಾಯಿಮರಿಯೇ ತಪ್ಪು ತಿಳಿಯಬೇಡ ನನ್ನ
೨. 'ಇದುವೇ ಸದ್ಮಾ'
ಮೊದ್ಲು, ಅವಳು ನನ್ನ ನೋಡಿ 'ಕಿಸ ಕಿಸ ಕಿಸಕ್' ಅಂತ ನಗ್ತಿದ್ಲು
ಆಗೆಲ್ಲ ನನ್ನ ಕಣ್ಣಿಗೆ ಫುಲ್ ಬೆಳದಿಂಗಳು
ಒಮ್ಮೆ ಫೋನ್ ಮಾಡಿ ಕರೆದಳು
ನಾ ಹೋಗ್ದೆಯಿರ್ತಿನಾ ?
ಲಗ್ನಪತ್ರ ಕೈಗಿಟ್ಟು ಮತ್ತೆ 'ಕಿಸಿ ಕಿಸಿ ಕಿಸಕ್' ಅಂತ ನಕ್ಕಳು
ನನ್ನ ಕಣ್ಣ ಮುಂದೆ ಅಮಾವಾಸ್ಯೆ ಕತ್ಲು
ಹೇಳ್ದೆ ಕೇಳ್ದೆ ಶೋಕಗೀತೆಯ ಕೋರಸ್ ಶುರುವಾತು :
'ಇದು ಸದ್ಮಾ . . . ಇದುವೇ ಸದ್ಮಾ,
ನಿನಗ್ಯಾಕ ಬೇಕಾಗಿತ್ತು ಈ ಉಸಾಬರಿ ತಮ್ಮಾ . . . '
೩. 'ಶೀಟ್ ಮ್ಯಾನ್'
ಬೆಳಗಾದ ಮೇಲೂ ಅವಳು,
ರಾತ್ರಿ ಕೊಟ್ಟ ಮುತ್ತಿನ ಗಮ್ಮತ್ತು ಇನ್ನೂ ಇತ್ತು-ಇಸ್ ಇಟ್ ? ಅಬ್ಬೋ
ಹಾಲು ಕರಿಯಲು,
ಕೊಟ್ಟಿಗೆಯತ್ತ ಹೋದೆ ತೂರಾಡುತ ಅಮಲಿನಲ್ಲಿ, ಮುತ್ತಿನ ಅಮಲಿನಲ್ಲಿ
ಲಿಪ್ಪಿಸ್ಟಿಕ್ಕಿನ ಕೆಂಪು ತುಟಿಗಳ ಗುರುತು ಇನ್ನೂ ಇತ್ತು - ಆಹಾ ಕಳ್ಳ, ಬರೀ ಮುತ್ತಿಗೆ ಟೈಟಾದ್ರೆ ಹೆಂಗೆ ?
ನೀರು ಚಿಮುಕಿಸಿ ಹಸುವಿನ ಕೆಚ್ಚಲಿಗೆ ಕೈಹಾಕುವ ಮುನ್ನವೂ,
ನನ್ನಲ್ಲಿ ಮುತ್ತಿನ ಮತ್ತೇ ಇತ್ತು - ಇದ್ಯಾಕೋ ಸ್ವಲ್ಪ ಜಾಸ್ತಿಯಾಯ್ತು.
ಕೆಚ್ಚಲಿಗೆ ಕೈಹಾಕಿದ ಕ್ಷಣಾರ್ಧದಲ್ಲಿ ಕಂಡವು ನಕ್ಷತ್ರ - ಬೆಳಗ್ಗೆ ನಕ್ಷತ್ರಗಳಾ? ಏನಾಯ್ತು?
ಕೆಚ್ಚಲಿಗೆ ಕೈಹಾಕಿದವನಿಗೆ ಹಾಲು ಸಿಗಲಿಲ್ಲ, ಅಸಲಿಗೆ ಕೆಚ್ಚಲಿದ್ದರೆ ತಾನೇ !!
ಮುತ್ತಿನ ಗುಂಗಿನಲ್ಲಿ ನಾನು ಅದರ ಲಿಂಗ ಭೇದ ಮಾಡಿದನಲ್ಲನೆಂಬ ಸಿಟ್ಟಿನಲ್ಲಿ ಝಾಡಿಸಿ ಒದ್ದುಬಿಟ್ಟಿತಲ್ಲ 'ಎತ್ತು' - ಶೀಟ್ ಮ್ಯಾನ್
=====
=====
May 21, 2011
ಏಕಾಂತದಲ್ಲಿ ಅವಳ ಮುಂದೆ ಹಾಡಬೇಕೆಂದು
ಹೂವು, ಚಂದ್ರ, ಮಳೆ, ತಂಗಾಳಿ - ಎಲ್ಲವನ್ನ ಪೋಣಿಸಿ
ಇಷ್ಟಪಟ್ಟು, ಪ್ರೀತಿಯಿಂದ ಒಂದು ಪದ ಕಟ್ಟಿದ್ದೆ.
ಆಗ,
ಹಾಡಲು ಒಂದೇ ಒಂದು ಅವಕಾಶ ಕೊಡಲಿಲ್ಲ; ಆಕೆ.
ನಾನು ಪ್ರಯತ್ನಿಸಿದೆನಾದರು, ನಾನೂ ಸುಮ್ಮನಾಗಿಬಿಟ್ಟೆ
ಕಾಲಪಲ್ಲಟಕ್ಕೆ ಯಾರ ಹಂಗು - ನನ್ನದಾ ? ಅವಳದಾ?
ಚಲಿಸುತ್ತಲೇ ಬಂತು, ನಿಲ್ಲಿಸಲು ನಾನು ಪ್ರಯತ್ನಿಸಲಿಲ್ಲ
**
ಅನಿರೀಕ್ಷಿತವಾಗಿ ಎದುರಿಗೆ ಬಂದು ನಿಂತಿದ್ದಾಳೆ,
ಅವಳಲ್ಲಿ ನಿಶ್ಯಬ್ದಕ್ಕಿಂತ ಮೆಲು ಮಾತು - ಮತ್ತೇನು ಉಳಿದಿಲ್ಲ
ಈಗ,
ಕಷ್ಟಪಟ್ಟರೂ, ಯಾಕೋ ಒಂದು ಸಾಲು ನೆನಪಾಗುತ್ತಿಲ್ಲ,
ಮರೆತ ಮಾತನ್ನ ಕೆದಕುವ ಪುರಸೊತ್ತು ನನಗಿಲ್ಲ.
ನಿಜ - ನಾನು ಒಮ್ಮೆ ಪದ ಕಟ್ಟಿದ್ದೆ.
=====
=====
May 2, 2011
"ಕಾವ್ಯ , ಅಮೃತ ಮತ್ತು ಗರುಡ"
ಯಾವುದೇ ಆದರೂ, ಅದನ್ನ ನೋಡುವಾಗ ನೋಡುಗನ ಮನಸ್ಥಿತಿ ಮತ್ತು ಅನುಭವ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಹುಡುಗಿಯನ್ನ ಬೇರೆ ಬೇರೆ ಹುಡುಗರು ಬೇರೆ ಬೇರೆ ಆದ ರೀತಿಯಲ್ಲಿ ವರ್ಣಿಸುತ್ತಾರೆ - ಅದೆಷ್ಟು ಸತ್ಯ, ಸುಳ್ಳು; ಆ ಮಾತು ಬ್ಯಾರೆ.
ಒಂದೇ ವಸ್ತುವಿನ ಬಗ್ಗೆ ಬೇರೆ ಬೇರೆ ಕವಿಗಳು, ಸಾಹಿತಿಗಳು ಬೇರೆ ಬೇರೆಯದೆ ರೀತಿಯಲ್ಲಿ ಬರೆಯುತ್ತಾರೆ. ಅವುಗಳಲ್ಲಿ ಯಾರದು ಎಷ್ಟು ನಿಜ ಅನ್ನುವುದಕ್ಕಿಂತ - ಅದು ಅವರು ಕಂಡುಕೊಂಡ ಸತ್ಯ ಅಷ್ಟೇ. ಓದಿದ ಮೇಲೆ ಯಾವುದು ನಮ್ಮಲ್ಲಿ ಹರಳುಗಟ್ಟಿ ನಿಲ್ಲುತ್ತದೆಯೋ ಅದು ನಮಗೆ ಹತ್ತಿರವಾದ ಸತ್ಯ. ಕನ್ನಡದಲ್ಲಿ 'ಕವಿತೆ' ಅನ್ನೋ ಪದ 'ಬೇಂದ್ರೆ' ಅನ್ನೋ ಹೆಸರನ್ನ ಥಟ್ಟಂತ ಸೂಚಿಸಿಹೊಗುವಷ್ಟರಮಟ್ಟಿಗೆ ಬೇಂದ್ರೆ ಅವರ ಬರಹ, ಬದುಕು ಎರಡು ದೊಡ್ಡವು.
ಶ್ರೀಕೃಷ್ಣ ಆಲನಹಳ್ಳಿ, ಕನ್ನಡದ ಮತ್ತೊಬ್ಬ ಪ್ರತಿಬಾವಂತ ಬರಹಗಾರ. ಆತ ಬದುಕನ್ನ ತುಂಬಾ ತೀವ್ರವಾಗಿ ಬದುಕಿದ ಅಂತಾರೆ. ಅವರ ಎಲ್ಲ ಪುಸ್ತಕಗಳೂ ಮಲಯಾಳಂ ಭಾಷೆಗೆ ಅನುವಾದಗೊಂಡಿವೆ - ಕೇರಳದವರು ಸುಲಭವಾಗಿ ಬೇರೆ ಭಾಷೆಯವರನ್ನ ಒಪ್ಪಲ್ಲ. ಶ್ರೀಕೃಷ್ಣ ಅವರು ಹಟಕ್ಕೆ ಬಿದ್ದು ಬರೀತಾಯಿದ್ರಂತೆ. ಆತ ಹತ್ತಿರವಾಗಿದ್ದು ತನ್ನ ಕೃತಿಗಳಲ್ಲಿ ಬಾಲ್ಯವನ್ನ ಕಟ್ಟಿಕೊಟ್ಟ ರೀತಿಯಿಂದ - ಆತನ ಶೈಲಿಯೇ ಬೇರೆ. ರಾಜಕಿಯವಾಗಿಯು ತಕ್ಕಮಟ್ಟಿಗೆ ತಮ್ಮನ್ನು ತೊಡಗಿಕೊಂಡಿದ್ದ ಶ್ರೀಕೃಷ್ಣ ಆಲನಹಳ್ಳಿಯವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ವಲಯದಲ್ಲಿ ನಷ್ಟವೇ ಸರಿ.ಬೇಂದ್ರೆ ಅವರ 'ಬೆಳಗು'
ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
ನುಣ್ಣನೆ ಎರಕಾವ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲ ತೊಯ್ದ
ಎಲೆಗಳ ಮೇಲೆ, ಹೂಗಳ ಒಳಗೆ ಅಮೃತದಾ ಬಿಂದು
ಕಂಡವು ಅಮೃತದಾ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿನ ಇಲ್ಲಿಗೆ ಇದ ತಂದು.
ಶ್ರೀಕೃಷ್ಣ ಅವರ 'ಬೆಳಗು'
ಇರುಳ ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ
ಸೂರ್ಯ: ಜಿಬುರೆಗಣ್ಣೋರಸುತ್ತಾಕಳಿಸಿ
ಕೊಬ್ಬಿದಾದು , ಕುರಿ , ಕೋಳಿ ಸಿಗಿದು ಸೀಳಿ
ಕಂದು , ನೀಲಿ , ಬಿಳಿ , ಕೆಂಪು ಖಂಡಗಳ ತೂಗಿತ್ತು
ಬಣ್ಣ ಬಣ್ಣದ ಮೂಡಣದ ಮಾಂಸದಂಗಡಿ ತೆರೆದಾಗ
ನನ್ನೂರಿನಲ್ಲಿ ಬೆಳಗಾಯಿತು.ಬೇಂದ್ರೆ ಅವರ ಅಮೃತದಾ ಬಿಂದು, ಶ್ರೀಕೃಷ್ಣ ಅವರ ಮಾಂಸದಂಗಡಿ ಕಂಡದ್ದು ಬೆಳಗಿನಲ್ಲಿ ಅನ್ನೋದು ಸತ್ಯ.
ನಿಮ್ಮ ಸತ್ಯ ನಿಮ್ಮೊಳಗಿದೆ ಅದೂ ಸತ್ಯವೇ.
(
ಶ್ರೀಕೃಷ್ಣ ಅವರ 'ಊಟಕ್ಕೆ ಕೂತಾಗ' ಈಗಾಗಲೇ ಒಮ್ಮೆ ಪೋಸ್ಟ್ ಮಾಡಿದ್ದೆ: http://pennupaper.blogspot.com/search?updated-min=2010-01-01T00%3A00%3A00-08%3A00&updated-max=2011-01-01T00%3A00%3A00-08%3A00&max-results=35 )Apr 20, 2011
"ಅವಳು - ನಾನು"
ಒಂದು ಶಕ್ತಿಯುತವಾದ ಮುತ್ತಿಗೆ ಪರಿತಪಿಸುವ ಅವಳು.
ಭಯ ಮಿಶ್ರಿತ ಕಂಪನದಲ್ಲಿ ಸಿಗರೇಟು ಹಚ್ಚುವ ನಾನು.
ಬೆಂಕಿಕಡ್ಡಿಯ ಬೆಂಕಿಯಂತೆ,
ನನ್ನ ಸುಡುವಂತೆ ನೋಡುವ ಅವಳು.
ನನ್ನ ಸಂಕಟ ನನಗೆ - ನಡುಗುವ ಹೋಗೆ ಬಿಡುವ ನಾನು.
'ಏನೋ ಯೋಚನೆ ಮಾಡ್ತಿದಿಯಾ, ರಾಕ್ಷಸ ?' ಅನ್ನುವ ಅವಳು.
ತಲೆ ಅಲ್ಲಾಡಿಸಿ ಮತ್ತದೇ ಹೋಗೆ ಬಿಡುವ ನಾನು.
ತುಟಿಯಂಚಿಗೆ ಬೆರಳೊಯ್ದರೆನೆ ಕಚ್ಚುವ ಹುಡುಗಿ, ಅವಳು.
'ಇನ್ನು ಮುತ್ತಿಟ್ಟರೆ ಗತಿ ಏನು ?' ಅಂದುಕೊಳ್ಳುವ ನಾನು.
ಜಿಟಿಗುಡುವ ಮಳೆಯ ಸಂಜೆ,
ಮರದಡಿಯಲ್ಲಿ ನಿಂತಿದ್ದೇವೆ ಅವಳು-ನಾನು.
ಅವಳ ಬಿಸಿಯುಸಿರ ನಡುವೆ ಇನ್ನೊಂದು ಸಿಗರೇಟು ಹಚ್ಚಿಕೊಂಡೆ ನಾನು.
ಇನ್ನೂ ಕಾಯುತ್ತಿದ್ದಾಳೆ ಅವಳು.
ಹನಿಗಳು ಮಣ್ಣಿಗೆ ಮುತ್ತಿಡ್ತಾಯಿವೆ--ಸುಮ್ನೆ ನೋಡ್ತಾಯಿದಿನಿ ನಾನು.
ಇನ್ನೇನು, ಕೆಲವು ಕ್ಷಣಗಳಲ್ಲಿ ಮಹಾಸ್ಪೋಟ -ಅವಳು.
ಖಾಲಿ ಖಾಲಿ ಬರೀ ಖಾಲಿ ನಾನು.
=====
=====
Apr 16, 2011

Apr 12, 2011
"ಟ್ರಾಫಿಕ್ ಜಾಮಿನಲ್ಲಿ ಒಂದು, ಎರಡು, ಮೂರೂ . . ."
ಇಂಡಿಕಾ: ಒಂದು, ಎರಡು, . . .
ಮಾರುತಿ: ಒಂದು,ಎರಡು, . . .
ಅಥವಾ
ಜೀನ್ಸ್: ಒಂದು, ಎರಡು , . . .
ಚೂಡಿ: ಒಂದು, ಎರಡು, . . . .
ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಈ ಪಂಧ್ಯ ಮುಗಿಯುತ್ತೆ, ಅಷ್ಟರಲ್ಲೇ ಅದು ಮೂಡಿಸುವ ಆನಂದದ ನಗುವಿನ ಮಾತೆ ಬೇರೆ. ಇಲ್ಲಿ ಹೆಚ್ಚು ಕೌಂಟ್ ಇದ್ದವನಿಗೆ ಏನೂ ಮಟಿರಿಯಲಿಷ್ಟಿಕ್ ಲಾಭಯಿಲ್ಲ, ಕಡಿಮೆ ಕೌಂಟ್ ಇದ್ದವ ಏನನ್ನೂ ಕಳೆದುಕೊಳ್ಳುವುದಿಲ್ಲ; ಇಬ್ಬರಿಗೂ ಅದು ಒಂದು ಪುಟ್ಟ ಸಂತೋಷದ ಕ್ಷಣವಷ್ಟೇ . ನಾವು ಕಾರನ್ನ ಯಾವಾಗ ಖರೀದಿಸ್ತಿವೋ ಗೊತ್ತಿಲ್ಲ , ಕೆಲವು ಹುಡುಗಿಯರು ಬಂದು ಹೋದರು ಆದ್ರೆ ಬಾಳಸಂಗಾತಿಯಾಗುವವಳು ಎಲ್ಲಿದ್ದಾಳೋ ಏನೋ ; ಅಸಲಿಗೆ ಅವಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಸಹ ಇಲ್ಲ ! ಅದರೂ ಕೌಂಟ್ ಮಾತ್ರ ಬಿಡಲ್ಲ .ನೀವು ಈ ರೀತಿಯ ಪಂಧ್ಯ ಬೆಂಗಳೂರಿನಲ್ಲಿ ಕಟ್ಟಿದ್ರೆ ಬೇಗ ಇಂಡಿಕಾ ಕಾರನ್ನೋ ಅಥವಾ ಜೀನ್ಸ್ ಹುಡುಗಿಯನ್ನೋ ಸೆಲೆಕ್ಟ್ ಮಾಡಿ ನೀವೇ ಗೆಲ್ತೀರ ಯಾಕೆಂದರೆ ಇವೆರಡೂ ರೋಡಿನಲ್ಲಿ ಜಾಸ್ತಿ ಕಾಣಸಿಗ್ತವೆ.
ಫ್ರೆಂಡ್ಸ್ ಜೊತೆ ತಿರುಗಾಡುತ್ತಾ , ಹರಟುತ್ತಾ , ಕಾರಣವಿಲ್ಲದೆ ಏನನ್ನೋ ಹುಡುಕುತ್ತ , ಯಾವುದೋ ಹುಡುಗಿ ಯಾವುದೋ ಕಾರಣಕ್ಕೆ ಕಿಸಕ್ ಅಂತ ನಕ್ಕಾಗ ಸಂಬ್ರಮಿಸುತ್ತಾ ಸುತ್ತಮುತ್ತಲಿರುವ ಪಾನಿಪುರಿ, ಟೀ ಸ್ಟಾಲ್, ಚಾಟ್ಸ್ ಸೆಂಟರ್ , ಲೇಡಿಸ್ ಹಾಸ್ಟೆಲ್ (ಹೊರಗಡೆ ), ಬ್ಯಾಚುಲರ್ಸ್ ರೂಮ್ (ಒಳಗಡೆ ), ಲೇಟ್ ನೈಟ್ ಕ್ಯಾಂಟೀನ್ ಗಳಲ್ಲಿ ನಡೆಯುವ ಚಿಕ್ಕ ಚಿಕ್ಕ ಇನ್ಸಿಡೆಂಟ್ ಗಳನ್ನ ಎಂಜಾಯ್ ಮಾಡ್ತೀವಿ . ಅಷ್ಟಾಗಿ ಜನರಿರದ ಜಾಗ, ಸಂಜೆ ಗಾಳಿ , ಬಿಸಿ ಬಿಸಿ ಮಿರ್ಚಿ -ಟೀ , ಸ್ವಲ್ಪ ದೂರದಲ್ಲಿ ಕುಳಿತು ಆಪ್ತತೆ,ಸಲುಗೆಯಿಂದ ಮಾತಾಡುವ ವೃದ್ದ ದಂಪತಿಗಳು, ಕೆಲವು ಪ್ರೇಮಿಗಳ ಹುಸಿ ಕೋಪದಾಟ, ಜಗಳ, ಅಹಂ, ಎಂಜಲನ್ನ ಹಂಚಿಕೊಳ್ಳುವ ಪರಿ, ಮತ್ತಷ್ಟು ಮತ್ತಷ್ಟು; ಹೀಗೆ ಸಾಧ್ಯವಾದಷ್ಟು ಎಲ್ಲ ಸಂಗತಿಗಳನ್ನ ಆಸ್ವಾಧಿಸುವ ಪ್ರಯತ್ನ ಸಾಗುತ್ತಲೇಯಿರುತ್ತೆ.
ಎಲ್ಲ ಅಂದ -ಚೆಂದಗಳ ನೋಡುತ್ತ,ಕೇಳುತ್ತ ಇನ್ನೇನು 'ಲೈಫ್ ಈಸ್ ಬ್ಯೂಟಿಫುಲ್' ಅಂದು ಮುಗಿಸುವಷ್ಟರಲ್ಲಿ ನಮ್ಮ ಕಣ್ಣೆದುರಿಗೆ ಘಟಿಸಿಬಿಡುವ ಅಸಭ್ಯ,ಅಸಹಜ,ಅಶ್ಲೀಲ ಘಟನೆಗಳು ನಮ್ಮನ್ನ ಕದಡಿಬಿಡುತ್ತವೆ, ನಾವು ಅಸಹಾಯಕತೆ ಎಂಬ ಹೆಬ್ಬಾಗಿಲ ಮುಂದೆ ಮಂಡಿಯೂರಿ ಕೂತುಬಿಟ್ಟಿರ್ತಿವಿ. ನಮಗೆ ಆಗ ಏನೂ ಮಾಡೋಕಾಗಲ್ಲ ಮ್ಯಾಕ್ಸಿಮಮ್ ಅಂದ್ರೆ 'ಛೇ', 'ಥೂ' ಅನ್ನಬಹುದು. ಈ ರೀತಿಯೂ ಆಗುತ್ತೆ ಅಂತ ನಮಗೊಂದು ಸಣ್ಣ ಉಹೆ ಕೂಡ ಇರಲ್ಲ, ಆದ್ರೆ; ಅಂತದೊಂದು ಇನ್ಸಿಡೆಂಟ್ ಗೆ ಅನಾಮತ್ತು ಸಾಕ್ಷಿಯಾಗಿಬಿಡ್ತೀವಿ. ದಾಖಲೆಗಳಿರುವುದಿಲ್ಲ!
ಘಟನೆ ೧ : ಸಿಲ್ಕ್ ಬೋರ್ಡ್-ಬೆಂಗಳೂರು; ಅಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು,ಸುಮ್ಮನೆ ರೋಡಿನ ಒಂದು ಪಕ್ಕ ನಿಂತು ಗಮನಿಸುತ್ತಿದ್ದೆ.'ಈ ಟ್ರಾಫಿಕ್ ನಲ್ಲಿ ಕಾರು-ಗೀರು ಬೇಕಾ? ಬಿಎಂಟಿಸಿ ಬಸ್ ಬೆಷ್ಟು'ಅಂದುಕೊಳ್ಳುತ್ತಿದ್ದೆ. ನಿಮಗೆಲ್ಲ ಗೊತ್ತಿರೋ ಹಾಗೆ ಆ ಟ್ರಾಫಿಕ್ ನಲ್ಲೇ ಬಲೂನುಗಳನ್ನ, ಪ್ಲಾಸ್ಟಿಕ್ ಬೊಂಬೆಗಳನ್ನ ಮಾರಾಟ ಮಾಡ್ಲಿಕ್ಕೆ ಕೆಲವು ಮಕ್ಕಳು ಬರ್ತಾರೆ. ಹಾಗೆ ಕೈಯ ತುಂಬ ಬಲೂನು ಹಿಡಿದು ಮಾರಲಿಕ್ಕೆ ಬಂದ ಸುಮಾರು ಹತ್ತು ವರ್ಷದ ಹುಡುಗನಿಗೆ ಕಾರಿನಲ್ಲಿ ಕೂತವಳು ಎರಡು ಮಾತು ಬೈಯ್ದಿದ್ದರೂ, ತನ್ನ ಪಾಡಿಗೆ ತಾನು ಸುಮ್ಮನೆ ಕೂತಿದ್ದರೂ, ಡೋರ್ ಗ್ಲಾಸ್ ಮೇಲೇರಿಸಿಕೊಂಡಿದ್ದರೂ ನಾನಿದನ್ನ ಬರೆಯುತ್ತಿರಲಿಲ್ಲ. ಕಾರಿನಲ್ಲಿ ಕೂತಿದ್ದ ಆಕೆ ಮಾಡಿದ್ದೇನು ಗೊತ್ತ?-ತಾನು ಧರಿಸಿದ್ದ ಕೆಂಪು ಬಣ್ಣದ ಟೀ -ಶರ್ಟ್ ಅನ್ನು ಮೇಲಕ್ಕೆತ್ತಿ, ಬ್ರಾ ಮುಚ್ಚಿದ ಸ್ತನಗಳನ್ನ ತೋರಿಸಿದಳು ಇನ್ನು ಹತ್ತು ಮೀರದ ಆ ಹುಡುಗನಿಗೆ. 'ಹೆಣ್ಣನ್ನ ಪೂಜಿಸುವಲ್ಲಿ ದೇವತೆಗಳಿರುತ್ತಾರೆ' ಅನ್ನೋ ಮಾತಿದೆ ಆದರೆ 'ಎಂಥಹ ಹೆಣ್ಣನ್ನ ಪೂಜಿಸಬೇಕು?' ಬಹುಶಃ ಇದು ಅವರವರ ಭಾವಕ್ಕೆ, ಬಕುತಿಗೆ ಬಿಟ್ಟ ವಿಚಾರ.
ಘಟನೆ ೨ : ವೆಸ್ಟ್ ಆಫ್ ಕಾರ್ಡ್ ರೋಡ್-ಬೆಂಗಳೂರು; ವಿಜಯನಗರದಿಂದ ರಾಜಾಜಿನಗರಕ್ಕೆ ಸಿಟಿ ಬಸ್ಸಿನಲ್ಲಿ ಹೋಗ್ತಾಯಿದ್ದಾಗ ಜೊತೆಗೆ ಯಾವ ಫ್ರೆಂಡ್ ಇರಲಿಲ್ಲವಾದ್ದರಿಂದ ಕಿಟಕಿಗೆ ತಲೆಯೋರಗಿಸಿ ಕೂತಿದ್ದೆ. ಒಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಹಸಿರು ನಿಶಾನೆಗಾಗಿ ನಿಂತಿತು ಬಸ್. ಸರಿಯಾಗಿ ಕೂತು ಬಾಲ್ಕನಿಯಿಂದ ಕೆಳಗೆ ನೋಡಿದಂತೆ ಕಿಟಕಿಯಿಂದಾಚೆ ಕಾಣುವ ಕಾರುಗಳನ್ನ ನೋಡ್ತಾಯಿದ್ದೆ, ಕಾರಿನ ಡ್ರೈವಿಂಗ್ ಸೀಟಿನಲ್ಲಿರುವ ವ್ಯಕ್ತಿಯ ಕಾಲು, ಹೊಟ್ಟೆಯ ಭಾಗ ಮಾತ್ರ ನನಗೆ ಕಾಣುತ್ತಿತ್ತು . ಹಾಗೆ ಕಾರುಗಳನ್ನ ನೋಡುತ್ತಿರುವಾಗಲೇ ; ಕೆಲವು ವಸ್ತುಗಳನ್ನ ಮಾರಲು ಬಂದ ಅಪ್ರಾಪ್ತ ಹುಡುಗಿಗೆ ಕಾರಿನಲ್ಲಿ ಕೂತ ಗಡವ ಪ್ಯಾಂಟಿನ ಜಿಪ್ಪೆಳೆದು ತನ್ನ ಗುಪ್ತಾಂಗ ತೋರಿಸುತ್ತಿದ್ದದ್ದನ್ನ ನೋಡಿದೆ. ನನ್ನ ಅಂದಾಜಿನ ಪ್ರಕಾರ ಆ ಅಮಾಯಕ ಹುಡುಗಿಗೆ ಹೆಚ್ಚು ಅಂದ್ರೆ ಹದಿನೈದು ವರ್ಷ ವಯಸ್ಸಿರಬಹುದು.
ಮನೋವಿಕಾರತೆಯನ್ನು ತೋರ್ಪಡಿಸುವ ಈ ಎರಡು ಘಟನೆಗಳನ್ನ ನಾನು ಕಣ್ಣಾರೆ ನೋಡಿದ್ದೇನೆ. ಸ್ತನಗಳನ್ನ ತೋರಿಸಿದ ಹೆಣ್ಣು ಮತ್ತು ತನ್ನ ಗುಪ್ತಾಂಗ ತೋರಿಸಿದ ಗಂಡು ಇಬ್ಬರೂ ಕಾರಿನಲ್ಲಿದ್ದರು ಅಂದ್ರೆ ಅವರು ತಕ್ಕ ಮಟ್ಟಿಗೆ ಒಳ್ಳೆಯ ವೃತ್ತಿಯಲ್ಲಿರುತ್ತಾರೆ, ಸಾರ್ವಜನಿಕ ರಸ್ತೆಗಳಲ್ಲಿ ಹೀಗೆ ಅಸಭ್ಯವಾಗಿ ವರ್ತಿಸುವ ಇವರು ತಾವು ಕೆಲಸ ಮಾಡುವಲ್ಲಿ ಹೇಗಿರ್ತಾರೆ? ತಮ್ಮ ಮನೆಗಳಲ್ಲಿ ಹೇಗಿರ್ತಾರೆ? ಇವರ್ಯಾಕೆ ಹೀಗೆ? ಆ ಎಳೆ ಮಕ್ಕಳ ಮೇಲೆ ಇದೆಂತಹ ಕಾಮದರ್ಪ? ಆ ಮಕ್ಕಳ ಮನಸಿನ ಮೇಲೆ ಇದೆಂತಹ ಪರಿಣಾಮ ಬೀರುತ್ತೆ? ಆ ಮಕ್ಕಳು ವಸ್ತುಗಳನ್ನ ಮಾರಲು ಬಂದಾಗ ಹೀಗೆ ಅಸಭ್ಯವಾಗಿ,ಅಶ್ಲೀಲವಾಗಿ ವರ್ತಿಸುವ ಅವಶ್ಯಕತೆ ಇತ್ತಾ?
ತಲ್ಲಣ, ಅಶ್ಲೀಲತೆ, ಯೋಚನೆ , ಕನಸು, ಆನಂದ, ಕಣ್ಣೀರು, ಮೊದಲ ಭೇಟಿ, ತಿರಸ್ಕಾರ, ಬೇರೊಬ್ಬನೊಂದಿಗೆ ಅವಳ ಮದುವೆ, ಗೆಳೆಯರ ಗುಂಪು, ಟೀ - ಸಿಗರೇಟು, ಅವಳನ್ನ ಅದೆಷ್ಟೇ ಮರೆತೆನೆಂದರೂ ನೆನಪಾಗುವ ಬಚ್ಚಿಟ್ಟುಕೊಂಡ ಅವಳ ಫೋಟೋ, ಪ್ರತಿಬಾರಿ ಬೇರೆಯದೇ ಮುಖ ತೋರಿಸುವ ಜಗತ್ತು -ನಾಗರೀಕ ಸಮಾಜ, 'ನೀನು ಅಸಹಾಯಕ ' ಅಂತ ಸಾರಿ ಹೇಳುವ ಬದುಕು ; ತಲೆಯ ತುಂಬಾ ಚಿತ್ರ -ವಿಚಿತ್ರ ಭಾವಗಳ ಟ್ರಾಫಿಕ್ ಜಾಮ್.
ಇದೆಲ್ಲದರ ನಡುವೆ ; ಜೊತೆಗೆ ಓದಿದ ಹುಡುಗಿಯ ಮದುವೆಯಲ್ಲಿ ಸಡಗರದಿಂದ ಅಕ್ಷತೆ ಹಾಕುವ ಕೈಗಳ ಮಧ್ಯ ಶಕ್ತಿಗುಂದಿದ, ನಿರಾಶೆಗೊಂಡ ಗೆಳೆಯನ ಕೈಯೊಂದನ್ನ ನೋಡಿದ ಕೂಡಲೇ ಕರುಳು ಹಿಂಡಿದ ಅನುಭವ. ಹಾಡದೆ ಉಳಿದ ಗೆಳೆಯನ ಯಶಸ್ವಿಯಾಗದ ಪ್ರೇಮಗಾನದ ಆಲಾಪನೆಯಲ್ಲಿಯೇ; ಅವಳು ಈಗ ತಾನೇ ತಾಳಿ ಕಟ್ಟಿದ ಸಂಗಾತಿಯೊಂದಿಗೆ ಪಯಣಿಸುವ, ಗುಲಾಬಿ ಹೂವಿನಿಂದ ಅಲಂಕೃತಗೊಂಡ ಸ್ಕೋಡ ಕಾರಿನ ಹತ್ತಿರವೇ ನಡೆದು ಹೋಗಿ ಮತ್ತದೇ ಸಿಟಿ ಬಸ್ಸಿಗಾಗಿ ಕಾಯುತ್ತಾ ನಿಲ್ಲುವ ಮುನ್ನ- ಗೆಳೆಯ ಕಡೆಯ ಸಲ ಎಂಬಂತೆ ಕಲ್ಯಾಣ ಮಂಟಪವನ್ನೊಮ್ಮೆ ತಿರುಗಿ ನೋಡಿದ. 'ಸಾಕು ಬಾ ' ಎಂಬರ್ಥದಲ್ಲಿ ಅವನ ಭುಜದ ಮೇಲೆ ಕೈ ಹಾಕಿ ರೋಡಿನ ಕಡೆ ತಿರುಗಿಸಿಕೊಳ್ಳುವಾಗ ನನ್ನ ಕಣ್ಣೂ ಹಸಿ .
ಅದೆಷ್ಟೇ ಕಷ್ಟ ಆದರೂ, ಅದೆಷ್ಟೇ ಅಂದ -ಚೆಂದ ಅಥವಾ ಅಸಭ್ಯವೋ, ಅಸಹಜವೋ ಕಂಡರೂ ನಾವು ಒಂದು ಹನಿ ಸಂತೋಷಕ್ಕಾಗಿ ಮೋಡಕ್ಕೆ ನಾಲಿಗೆ ಚಾಚ್ತೀವಿ, ಕಣ್ಣು ತೆರೆದು ಕರೀತಿವಿ -'ನೀನು ಬಾ , ಗೆಳೆಯ '.
ಮತ್ತೆ ಮತ್ತೆ ಕೌಂಟ್ ಮಾಡ್ತೀವಿ -
ಇಂಡಿಕಾ: ಒಂದು, ಎರಡು, ಮೂರು. . .
ಮಾರುತಿ: ಒಂದು,ಎರಡು, ಮೂರು. . .
Mar 30, 2011
Mar 17, 2011
ನನ್ನ ಅಜ್ಜಿ ಸಾತವ್ವ..
ಮೊನ್ನೆ ಮೊನ್ನೆ, 'ಮಹಿಳಾ ದಿನಾಚರಣೆ' ಆಯ್ತು.
ಒಬ್ಬ ಮಹಿಳೆ/ಹೆಣ್ಣು, ಒಬ್ಬ ಮನುಷ್ಯನ ಜೀವನದಲ್ಲಿ, ಒಂದು ಸಂಸಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ..
ಹೆಣ್ಣು ಒಂದು ಶಕ್ತಿ ಅಂತಾರೆ,
ಒಬ್ಬ ಗಂಡಿನ ಜೀವನದಲ್ಲಿ, ಆದರ್ಶ ಮಹಿಳೆ ಅಂತ ಒಬ್ಬಳು ಇದ್ದೆ ಇರ್ತಾಳೆ ಅನ್ನೋ ನಂಬಿಕೆ ನನ್ನದು.
ಅದು, ಅಮ್ಮ, ಅಕ್ಕ-ತಂಗಿ, ಗೆಳತಿ, ಪತ್ನಿ, ಮಗಳು..
ಮೊನ್ನೆ ಮಹಿಳಾ ದಿನಾಚರಣೆ ದಿನ ಸುಮ್ನೆ ಯೋಚನೆ ಮಾಡಿದೆ, ನನ್ನ ಜೀವನದಲ್ಲಿ ಅಂತಹ ಹೆಣ್ಣು ಯಾರು.?
ತುಂಬಾ ಯೋಚನೆ ಮಾಡಿದ ಮೇಲೆ ಅನಿಸಿದ್ದು. ಅಜ್ಜಿ..!
ನನ್ನ ಅಜ್ಜಿ ಸಾತವ್ವ ..
'ಸಾತವ್ವ-ರೇವಪ್ಪ' ದಂಪತಿಗಳ ದೊಡ್ಡ ಸಂಸಾರ, ೯ ಮಕ್ಕಳು. ಎಂಟು ಗಂಡು ಒಂದು ಹೆಣ್ಣು.
ಅವರ ಏಳನೇ ಮಗನ ಹಿರಿಮಗನೇ ನಾನು.
ಸದ್ಯಕ್ಕೆ ನನ್ನ ಅಜ್ಜಿ ಬಗ್ಗೆ ನಿಮಗೆ ಹೇಳಬೇಕು..

ನನ್ನ ಅಜ್ಜ ಮೌನಿ, ತಾನಾಯ್ತು ತನ್ನ ಕೆಲಸ ಆಯ್ತು.
ಚಟ ಅಂತ ಇದ್ದದ್ದು ಎರಡೇ ಎರಡು. ಒಂದು ಚಹಾ ಇನ್ನೊಂದು ಕಲ್ಲಸಕ್ರೆ..!
ಅಜ್ಜಿ ಮಾತು ಆದ್ರೆ, ಹರಟೆ ಅವಳದಲ್ಲ..!
ಇದ್ದ ಸ್ವಲ್ಪ ಜಮಿನಿನಲ್ಲೇ ಕಷ್ಟ-ಸುಖ ಎರಡು ಇದ್ದವು, ಆದ್ರೆ ಅಜ್ಜಿದು ಗೊಣಗೋ ಜಾಯಮಾನ ಅಲ್ಲ.
ದುಡಿಯೋ ಹೆಣ್ಣು. ಹೊಲದಲ್ಲಿ ಕೆಲಸ ಮಾಡಿದ್ರು ಅವಳದ ನಿಜವಾದ ಕೆಲಸ ಮನೆ.
ಇದ್ದ ೯ ಮಕ್ಕಳಲ್ಲಿ ಒಬ್ಬಳೇ ಮಗಳು. ನನ್ನ ಸೋದರತ್ತೆ. ೧೨ ವಯಸ್ಸಿನಲ್ಲಿ ಕಣ್ಣು ಹೋಯಿತು, ಕಾರಣ ಗೊತ್ತಾಗ್ಲಿಲ್ಲ.
ಮಗಳು ವಯಸ್ಸಿಗೆ ಬರೋ ದಿನದಲ್ಲಿ ಹೀಂಗ್ ಆಯ್ತಲ್ಲ ಅಂತ ಕುಡಲಿಲ್ಲ,
ಮಗಳಿಗೆ ಕೆಲಸ ಕಲಿಸಿದಳು ಅಜ್ಜಿ.!
ಮುಂದೆ ಕೆಲವು ವರ್ಷ ಎಲ್ಲವು ಚೆನ್ನಾಗಿತ್ತು.ಆದ್ರೆ ಒಂದಿನ ಮಗಳು ತಿರಿಹೊದಳು. ಮೊದಲ ಆಘಾತ.
ಆದರೂ ಗಟ್ಟಿಗಿತ್ತಿ,ತನ್ನ ಎಂಟು ಮಕ್ಕಳ ಬೆಳೆಸೋ ಜವಾಬ್ದಾರಿ ಹೊತ್ತಳು. ಅಜ್ಜ ಹೊಲ ಅಜ್ಜಿ ಮನೆ.
ತನ್ನ ಹಿರಿ ಮಗ ಓದಬೇಕು ಅಂತ ದೊಡ್ಡ ಆಸೆ, ಆದ್ರೆ ಆವಾಗ ಎಲ್ಲಿದ್ದವು ಶಾಲೆ..?
ಆದರು ಬಿಡಲಿಲ್ಲ ಹಿರಿಮಗನಿಗೆ ತನ್ನ ತವರಿಗೆ ಕಳಿಸಿದಳು, ತನ್ನ ತಮ್ಮನ ಮಕ್ಕಳ ಜೊತೆ ಬಿಟ್ಟು ಬಂದಳು. ಮಹಾರಾಷ್ಟ್ರದಲ್ಲಿ..!
ನನ್ನ ಅಜ್ಜಿ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದಲ್ಲಿ, ಆದ್ರೆ ಕನ್ನಡ ಮಾತೃ ಭಾಷೆ. ಅಜ್ಜನದು ಕರ್ನಾಟಕ, ಕನ್ನಡ.
ಮುಂದೆ ಊರಲ್ಲೇ ಶಾಲೆ ತೆರೆಯಿತು, ಆದ್ರೆ ಎಲ್ಲ ಮಕ್ಕಳು ಓದಲಿಲ್ಲ.
೩ ಮಕ್ಕಳು ಓದಿದರು ಉಳಿದ ೪ ಮಕ್ಕಳು ಸ್ವಲ್ಪ ಓದಿ ಹೊಲದ ದಾರಿ ಹಿಡಿದರು. ಅಜ್ಜಿಗೆ ಬೇಜಾರಿಲ್ಲ.
ಮಕ್ಕಳು ದುಡಿದು ತಿನ್ನಬೇಕು ಅಷ್ಟೇ..!
ಎಂಟು ಜನರಲ್ಲಿ ನಾಲ್ಕು ಜನ ವಿವಿಧ ಕೆಲಸದಲ್ಲಿ ಬೇರೆ ಊರು ಸೇರಿದರು, ನಾಲ್ಕು ಜನ ಊರಲ್ಲಿದಾರೆ.
ಮುಂದೆ ಮಕ್ಕಳ ಮದುವೆ, ಮೊಮ್ಮಕ್ಕಳು.. ಇದ್ದ ಜಮೀನು ಜಾಸ್ತಿ ಆಯ್ತು, ದೊಡ್ಡ ಸಂಸಾರ..
ಬೇರೆ ಊರಲ್ಲಿದ್ದ ಮಕ್ಕಳು ಹುಟ್ಟೂರು ಮರೆಯಲಿಲ್ಲ.
ಇಷ್ಟೆಲ್ಲಾ ಆದರೂ ಮನೆಯಲ್ಲಿ ಯಾವುದೇ ವಿಷಯಕ್ಕೆ ಇಲ್ಲಿ ತನಕ ಜಗಳ ಮುನಿಸು ಯಾವುದು ಇಲ್ಲ.!
ಭಿನ್ನಾಭಿಪ್ರಾಯಗಳು ಹಲವು ಸಲ ಬಂದಿದೆ, ಹಾಗೆ ಹೋಗಿದೆ.
ಮುಂದೆ ಮಕ್ಕಳಿಗೆ ಪಾಲು ಮಾಡಲಿಲ್ಲ ಅಜ್ಜಿ. ತಮ್ಮ ಇದು ನಿಂದು ಇದು ನಿಂದು. ಅಷ್ಟೇ.
ಒಬ್ಬೆ ಒಬ್ಬ ಮಗ ನನಗೆ ಇದು ಬೇಡ, ಅದೇ ಬೇಕು. ಇನ್ನಷ್ಟು ಬೇಕು..? ಊಹು..!
ಒಬ್ಬೆ ಒಬ್ಬ ಮಾತಾಡಿಲ್ಲ, ಅದಕ್ಕೂ ಕಾರಣ ಅಜ್ಜಿ. ಅವಳಮಾತೆ ಹಾಗೆ.
ತೀರ ಬಡತನ ನೋಡಿದಾಳೆ, ಕೈ ತುಂಬಾ ದುಡ್ಡು ಬಂತು, ಸೊಸೆಯಂದಿರು ಬಂದರು. ಅಜ್ಜಿ ಬದಲಾಗಲಿಲ್ಲ.
ಸೊಸೆಯಂದಿರು ಒಂದೇ ಒಂದು ದಿನ ಜಗಳ ಮಾಡಲಿಲ್ಲ. ಎಂಟೂ ಜನ..!
ನನ್ನ ಅಜ್ಜಿ, ಸೊಸೆಯಂದಿರಿಗೆ ಸೊಸೆ ಅನ್ನಲಿಲ್ಲ, ನನ್ನ ಹೆಣ್ಣ್ ಮಕ್ಳು ಅಂದ್ಲು. ಅವಳು ಅತ್ತೆ ಆಗಲಿಲ್ಲ, ಅವ್ವ ಆದಳು.
***
ಒಬ್ಬರ ನ್ಯುನ್ಯತೆ, ಅಂಗವೈಕಲ್ಯ ದ ಬಗ್ಗೆ ಮಾತಾಡಿದ್ರೆ ಅಜ್ಜಿ ಯ ಸಿಟ್ಟು ಭಯಂಕರ.
ಊರಲ್ಲಿ ಒಬ್ಬ ಕಿವುಡ ಇದ್ದ ಶರಣಪ್ಪ ಅಂತ. ಮನೆಯಲ್ಲಿ ಯಾರಾದ್ರು, ಹೇಯ್ ಅವ ಕಿವುಡ ಶರಣಪ್ಪ್....
ಅಂತ ಏನಾದ್ರೂ ಅಂದರೋ, ಅವತ್ತಿನ ಅವರ ನಸೀಬು ಖರಾಬು.!
ಇನ್ನೊಬ್ಬನಿದ್ದ ರಾಜು, ಒಂದು ಕಾಲಿಂದ ಅಂಗವಿಕಲ. ಅವನಿಗೆ, ಕುಂಟ ರಾಜ.......ಅಂದರೋ ಅವರ ಕಾಲು ಮುರಿದಂಗೆ..!!
"ಯಾಕ್ ಹಾಂಗ್ ಕರಿತಿರೋ ಖೋಡಿಗೋಳ್ಯಾ.?
ದೇವರು ಅವರಿಗ ಹಂಗ ಮಾಡ್ಯಾನ.
ನಿಮ್ಮ ಕೈಲಿ ಚೊಲೋ ಮಾಡಕ್ಕ ಆಗಂಗಿಲ್ಲ.
ಅವರ ಅಪಂಗತನ ಅವರಿಗ ಮತ್ತ ಮತ್ತ ನೆನಪ ಮಾಡಿ ಯಾಕ್ ಅವರ ಮನಸಿಗ ಬ್ಯಾಸರ ಮಾಡ್ತೀರಿ..?"
ಗೌಡ್ರ ಶರಣಪ್ಪ, ಕುಂಬಾರ ರಾಜು ಅಂತ ಕರದರ ನಿಮ್ಮ ಬಾಯಿಗ ಏನರ ಬ್ಯಾನಿ ಏನು..?
**
ಜಾತಿ:
ಅಜ್ಜಿ ಯಾವತ್ತಿಗೂ ಜಾತಿ ನೋಡಲಿಲ್ಲ.
ಕಳೆದ ೩೦ ವರ್ಷಗಳಿಂದ ದೊಡ್ಡಪ್ಪನ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿರುವ 'ಮಕಬುಲ್ ಚಾಚಾ' ಗು ಅವಳು ಅವ್ವ.
ಗಂಡು ಮೊಮ್ಮಕಳಲ್ಲಿ ೫ ಜನರ ಮದುವೆ ಆಗಿದೆ, ಅದರಲ್ಲಿ ೩ ಜನರ ಪ್ರೇಮ ವಿವಾಹ..!
ತನ್ನ ಹಿರಿಯ ಮಗನ ಮೊದಲ ಮಗ ಸತೀಶ್.
ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೋದಾಗ ಅಲ್ಲಿ ಭಾರತಿಯ ಮೂಲದ ಹುಡುಗಿಯನ್ನು ಇಷ್ಟ ಪಟ್ಟ,
ದೊಡ್ಡಪ್ಪ ಒಮ್ಮೆ ಅಜ್ಜಿನ ಕೇಳಿದರು.
ಅಜ್ಜಿ ಹೇಳಿದಳು; "ತಮ್ಮ, ಯಾವ ಜಾತಿ, ಎಷ್ಟ ಶ್ರೀಮಂತರು ಇವೆರಡು ಬ್ಯಾಡ.
ಹುಡುಗಿ ಮನೆಯವರು ನಾಕ ಮಂದ್ಯಾಗ ಎಂತಹ ಹೆಸರು ಇಟ್ಟಾರ ಅಷ್ಟ ನೋಡು ಸಾಕು..!
ನಾಲ್ಕು ಹೂವಿನ ಜೋಡಿ ಮನಿಗ ಕರ್ಕೊಂಡು ಬಾ."
ಮುಂದೆ ಎಲ್ಲರ ಸಮ್ಮುಖದಲ್ಲಿ ಅಣ್ಣನ ಮದುವೆ ಆಯ್ತು. ಅಂದ ಹಾಗೆ ನನ್ನ ಅತ್ತಿಗೆ ಬಿಹಾರದವರು, ಅವರ ತಂದೆ ವೈದ್ಯರು.
ಇನ್ನೊಬ್ಬ ಅತ್ತಿಗೆ 'ಪಂಜಾಬಿನವರು' ಮತ್ತೊಬ್ಬರು ನಮ್ಮ ಜಿಲ್ಲೆಯವರೆ.
ನಮ್ಮ ಮನೆಯಲ್ಲಿ ಎಲ್ಲ್ಲರು ಸೇರಿದರೆ, ಅದೊಂದು ಜಾತ್ರೆಯೆ ಸರಿ. ಬಗೆ ಬಗೆಯ ಭೋಜನ..
ಭಾಷೆಗಳೋ, ಕನ್ನಡ, ಮರಾಠಿ, ಹಿಂದಿ, ಪಂಜಾಬಿ, ಬಿಹಾರಿ, ಇಂಗ್ಲಿಷ್..
ನಮ್ಮದು ಒಂದು ತರಹ, ಸಮ್ಮಿಶ್ರ ಸಂಸಾರ :)
***
ಹೆಣ್ಣು ಮತ್ತು ಶಿಕ್ಷಣ:
ಅಜ್ಜಿಗೆ ಓದು ಬರಹ ಗೊತ್ತಿಲ್ಲ.
ಮನೆಯಲ್ಲಿ ಹೇಳುತಿದ್ದ ಮಾತು,
ಹೆಣ್ಣ ಮಕ್ಳು ಓದಬೇಕು ಕೆಲ್ಸಾನು ಮಾಡಬೇಕು ಆದ್ರ, ಹೆಣ್ತನ ಮರಿಬ್ಯಾಡದು ಅಷ್ಟೇ ನೋಡ್ರಿ.!
ಒಂದು ಮಧ್ಯಾನ ದೊಡ್ಡಮ್ಮ ಸುಮ್ನೆ ಕೂತಿದ್ದು ನೋಡಿ; "ತಂಗಿ ಯಾಕ್ ಹಂಗ ಕುಂತಿ..?
ನೋಡವ್ವ ನಾ ಸಾಲಿ ಕಲ್ತಾಕಿ ಅಲ್ಲ, ಆದರೂ ಒಂದು ಮಾತ್ ಹೇಳ್ತೀನಿ.
ಮಧ್ಯಾನ ಹೀಂಗ್ ಸುಮ್ಮನ ಕುಡು ಬದಲಿ, ಅಲ್ಲಿ ಮ್ಯಾಲಿನ ಸಾಲಿಗ ಹೋಗಿ ಹುಡುಗರಿಗ ಏನರ ಹೇಳಿ ಕೊಡು."
ಅಲ್ಲಿಯತನಕ ದೊಡ್ಡಮ್ಮನಿಗೆ ಹೊಳೆಯದಿದ್ದ ವಿಚಾರ ಅಜ್ಜಿಗೆ ಹೊಳೆದದ್ದು ನೋಡಿ ಆಶ್ಚರ್ಯ.
ದೊಡ್ಡಮ್ಮ ತಡ ಮಾಡಲಿಲ್ಲ, ಶಾಲೆಯಲ್ಲಿ ಮಾತಾಡಿ ಬಂದ್ರು.
ಬಿಡುವಿದ್ದಾಗ ಆ ಶಾಲೆಗೆ ಹೋಗಿ ತಮ್ಮ ಇಷ್ಟದ 'ಸಮಾಜ ಶಾಸ್ತ್ರ' ಹೇಳ್ತಾರೆ.
ವಾರಕ್ಕೆ ಮೂರೂ ದಿನ ತೋಟಕ್ಕೂ ಹೋಗ್ತಾರೆ. ಅವರು ಓದಿದ್ದು 'ಬಿ.ಎ.' ೩೦ ವರ್ಷಗಳ ಹಿಂದೆ.
ಇದನ್ನ ನೋಡಿ, ಚಿಕ್ಕಮ್ಮ ಅಕ್ಕ-ಪಕ್ಕ ಮನೆ ಮಕ್ಕಳಿಗೆ ಪಾಠ ಹೇಳಲಿಕ್ಕೆ ಶುರು ಮಾಡಿದರು.
ಇವೆಲ್ಲ ಆದ ಮೇಲೆ ಅಜ್ಜಿಯ ಮೇಲೆ ಸೊಸೆಯಂದಿರ ಪ್ರೀತಿ ಇನ್ನಷ್ಟು ಜಾಸ್ತಿ ಆಯ್ತು.
ಕೆಲವೊಮ್ಮೆ ಮನೆಯಲ್ಲಿನ ಗಂಡಸರ ಕಿವಿ ಮೇಲೆ ಒಂದು ಮಾತು ಬಿಳ್ತಿತ್ತು,
ನಿಮ್ಮ ಅವ್ವಗ ಇರೋ ಬುದ್ದಿ ನಿಮಗಿಲ್ ನೋಡ್ರಿ. :) ಹ ಹ.
--
ತುಂಬಾ ಶ್ರೀಮಂತ ಮನೆತನದ ಪರಿಚಯದ ದಂಪತಿಗಳು ಮನೆಗೆ ಬಂದಿದ್ದರು.
ದಂಪತಿಗಳ ಜೊತೆ, ಎಲ್ಲರ ಹರಟೆ-ಊಟ ನಡಿಯಿತು.
ಸ್ವಲ್ಪ ಹೊತ್ತು ಆದಮೇಲೆ, ಆ ದಂಪತಿಗಳು ಅಜ್ಜಿಯೊಡನೆ ಮಾತಿಗೆ ಕುಳಿತರು. ಒಮ್ಮೆಗೆ ಅಜ್ಜಿ ಅವರ ಪತ್ನಿಗೆ ಬೈಯಲು ಶುರು ಮಾಡಿದರು..!
ಎಲ್ಲರಿಗೂ ಯಾಕೆ ಅಂತ ಗೊತ್ತಾಗಲಿಲ್ಲ,
"ಹಾಲು ಹೆಚ್ಚಾಗಿದ್ರ, ಮೊಸರು, ಮಜ್ಜಗಿ, ತುಪ್ಪ ಮಾಡ್ತಾರ. ಇಲ್ಲ ದೂದ್ಖೀರ್ ಮಾಡ್ತಾರ. ಆದ್ರ ನೀವು ಹಾಲಿಂದ ಕುಂಡಿ ತೊಳ್ಕೋತಿರಿ. ಅಂತ ಮಂದಿ ನೀವು"
ಅಷ್ಟ ಹೆಚ್ಚ ಇದ್ರ ಬಡವರ್ ಮಕ್ಕಳಿಗ ಕೊಡ್ರಿ, ಮನ್ಯಾನ ಬೆಕ್ಕು ನಾಯಿಗ ಕುಡಿಸ್ರಿ, ನೀವು ಕುಂಡಿ ತೊಳ್ಕೋಳೋ ಮಂದಿ..
ಅಜ್ಜಿಯ ಪಿತ್ತ ಈ ಪರಿ ನೆತ್ತಿಗೆರಲು ಕಾರಣ ಅವರ ಪತ್ನಿಯ ಕಾಲುಂಗರ..!
ಅದು ಬಂಗಾರದಾಗಿತ್ತು.!!
ಅಜ್ಜಿಯ ಪ್ರಕಾರ ಬಂಗಾರದ ಕಾಲುಂಗುರ ದೇವಿ ಲಕ್ಷ್ಮಿ, ದೇವತೆಯರು ಮಾತ್ರ ಹಾಕೋಬೇಕು.
ಮನುಷ್ಯರೆನಿದ್ರು ಸೊಂಟದಿಂದ ಮೇಲೆ ಹಾಕಬೇಕು.!
ಕೊನೆಗೂ ಅಜ್ಜಿ ಅವರಿಗೆ ಮನೆಯಲ್ಲಿದ್ದ ಬೆಳ್ಳಿ ಕಾಲುಂಗರ ಹಾಕಿಯೇ ಬಿಟ್ಟಳು.
ಇದು ಅಜ್ಜಿಯ ಸಿಟ್ಟಿನ ಇನ್ನೊಂದು ಮುಖ.
--
ಸಂಭಂದಿಕರೊಬ್ಬರು ಮನೆಗೆ ಬಂದು ತಮ್ಮ ಸೊಸೆಗೆ ಅಬೋಶನ್ ಮಾಡಿಸಿದ್ದು ಹೇಳಿದರು, ಹಂಗಂದ್ರೆ ಶಿಶು ಭ್ರೂಣ ಹತ್ಯೆ ಅಂತ ಅಜ್ಜಿಗೆ ಗೊತ್ತಾಗಲಿಲ್ಲ.
ಆಮೇಲೆ ಅವರು ಅಜ್ಜಿಯ ಜೊತೆ ಕುಳಿತಾಗ ಅಜ್ಜಿ ಕೇಳಿಯೇ ಬಿಟ್ಟಳು, 'ನಿನ್ನ ಸೋಸಿಗ ಏನಾಗ್ಯದ. ಏನ್ ಮಾಡ್ಸಿ..?'
"ಹೊಟ್ಟಿ ತೆಗಿಸಿವಿ, ಮೊದಲಿನ ಮೂರೂ ಹೆಣ್ಣೇ ಅದಾವ ಈಗಿಂದು ಹೆಣ್ಣೇ ಅಂತಂದ್ರು, ಅದಕ್ಕ ಹೊಟ್ಟಿ ತೆಗೆಸಿವಿ."
ಹಾ...? ಅಲಾ ನಿಮ್ಮ ಜನುಮಕ್ಕ್ ಇಷ್ಟು, ನೀವೇನು ಮನುಷ್ಯರಾದಿರಿ..?
ಹೆಣ್ಣ ಅಂತ ಹೊಟ್ಟಿ ತೆಗೆಸ್ತಾರ..?
ಹಂಗಂದ್ರ ನೀ ಇಗ ಹೆಣ್ಣೇ ಆಗಿಯಲ್ಲ ನಿನಗ ಏನ್ ಮಾಡಬೇಕು..?
"ಹೆಣ್ಣಿಗ ಹೆಣ್ಣೇ ಕಿಮ್ಮತ ಕೊಟ್ಟಿಲ್ಲ ಅಂದ್ರ ಗಂಡಸರು ಕೊಡಬೇಕು ಅಂತ ಹ್ಯಾಂಗಂತಿರಿ.?"
"ಒಂದು ಕೆಲ್ಸಾ ಮಾಡು, ಮೊದಲ ನಿಮ್ಮ ಅವ್ವನ ಕುತಗಿ ಒತ್ತು, ಹಂಗೆ ನಿಮ್ಮ ಅತ್ತಿದು.
ಆಮೇಲೆ ನಿನ್ನ ಹೆಣ್ ಮಕ್ಳಿಗ, ಸೋಸೆದಿರಿಗ ಭಾವಿಗ ನೂಕು.
ಮೂರೂ ಮೊಮ್ಮಕಳು ಹೆಣ್ಣೇ ಅಲ್ಲ, ಅವುಕೆಲ್ಲ ವಿಷ ಕುಡ್ಸು. ಕಡೀಗ ನೀ ನೇಣ ಹಾಕೊಂಡು ಸಾಯಿ..!"
ಸಾಯಿ ಹೋಗ್.!!!
ಹೆಣ್ಣ ಯಾಕ್ ಬ್ಯಾಡ ನಿಮಗ.?
"ಮುಟ್ಟು, ಬಸೀರು, ಹಾಲುಣಸೋದು.. ದೇವರು ಹೆಣ್ಣಿಗೇ ಯಾಕ್ ಕೊಟ್ಟಾನ..?
ಅದು ಹೆಂಗಸರ ತಾಕತ್ತು..!!"
ಇಂತ ಭಾಗ್ಯ ಗಂಡಿಗಿಲ್ಲ.
ಇದು ಹೆಂಗಸಿನ ಭಾಗ್ಯ. ಹೆಣ್ಣಾಗಿ ಹುಟ್ಟಬೇಕಂದ್ರ ಪುಣ್ಯ ಮಾಡಿರಬೇಕು.!!
--
ಅಜ್ಜಿಯ ಪ್ರಕಾರ ಒಂದು ಸಂಸಾರದ ಸಂತೋಷಕ್ಕೆ, ಉನ್ನತಿಗೆ ಮುಖ್ಯ ಕಾರಣ ಹೆಣ್ಣು.
ಗಂಡು ಬೆಳಿಗ್ಗೆ ಇಂದ ಸಂಜೆ ತನಕ ದುಡಿತಾನೆ, ಮನೆಗೆ ಬೇಕಾದು ಆ ದುಡಿಮೆಯಿಂದಾನೆ.
ಗಂಡಸಿಗೆ ಪ್ರೀತಿ ಮರಿಯಾದೆ ಕೊಡಬೇಕು. ದುಡಿಯೋ ಜೀವ. ಅದಕ್ಕ ಪ್ರೀತಿ ಬೇಕು.
ಆದ್ರೆ, ಸಂಸಾರ ನಿಭಾಯಿಸೋದು ಮುಖ್ಯವಾಗಿ ಹೆಣ್ಣು..!
ತನ್ನ ಎಂಟು ಸೊಸೆಯಂದಿರಿಗೆ ಹೇಳಿಕೊಟ್ಟದ್ದು ಇದನ್ನೇ.
ಅವಳ "ಕ್ಲಾರಿಟಿ ಆಫ್ ಥಾಟ್ಸ್" ಅದ್ಭುತ.
ಯಾರಾದ್ರು ಮಾತಿಗೆ, ಈಗಿನ ಕಾಲದ ಮಕ್ಳು ಸರಿಯಿಲ್ಲ ಹಂಗೆ ಹಿಂಗೆ ಅಂದ್ರೆ, ಅಜ್ಜಿಯ ನೇರ ಮಾತು, ಕಾರಣ ನೀವೇ..!
ಪಾಲಕರು ಹೇಗೋ ಮಕ್ಕಳು ಹಾಗೆ, ತೀರ ಮುದ್ದು ತೀರ ಹದ್ದು ಬಸ್ತು ಎರಡು ತಪ್ಪು.
'ಮಕ್ಕಳ ಜೋಡಿ ಮಾತಾಡಬೇಕು' ಬರೇ ರೊಕ್ಕ, ಹೊಲ, ಬಂಗಾರ, ಓದು, ಜೀವನ ಅಲ್ಲ. ಮೊದಲ ಒಳ್ಳೆ ಮನುಷ್ಯ ಆಗ್ರಿ'.
ಅವ್ವ ಅಪ್ಪ ಮಕ್ಕಳ ಜೋಡಿ ಚೊಲೋ ಮಾತಾಡ್ರಿ, ಒಂದು ಕಣ್ಣ ಅಳತಿ ಒಳಗಾ ಅವರನ್ನ ನೋಡ್ರಿ.
ಅಜ್ಜಿ ಸುಮ್ ಸುಮ್ನೆ ಯಾವತ್ತಿಗೂ ಯಾರಿಗೂ ಬೈದೊಳಲ್ಲ, ಒಮ್ಮೆ ಬೈದರೆ ಅಕಟಕಟ..!!
ಸುಮ್ನೆ ಹರಟೆ ಹೊಡಿಯೋರನ್ನ ಕಂಡ್ರೆ ಆಗಲ್ಲ.
"ತಂಗಿದೆರ ಯಾಕ್ ಹೀಂಗ್ ಕುಂತಿರಿ ಏನರೆ ಮಾಡ್ರಿ.?
ಕಾಳು ಹಸನ್ ಮಾಡ್ರಿ, ನಾಕು ಹೊಸ ಚುಕ್ಕಿ (ರಂಗೋಲಿ) ಕಲೀರಿ, ನಾಕು ಪದ ಬಾಯಿಪಾಠ ಮಾಡ್ರಿ, ಇಲ್ಲ ಕೌದಿ ಹೊಲಿರಿ.
ಸುಮ್ಮ ಯಾಕ್ ಕುಂತಿರಿ. ಮಾಡಕ್ಕ ರಗಡ ಕೆಲ್ಸಾ ಅದಾವ್, ಯಾವ್ ಕೆಲ್ಸಾನು ಸಣ್ಣದು ಅಲ್ಲ. ಒಂದೊಂದು ಕೆಲ್ಸಾನು ವಿದ್ಯಾ ಇದ್ದಂಗ.
ಕೂಸಿನ ಕುಂಡಿ ತೊಳಿಯೋದೆ ಇರ್ಲಿ, ಕುಲಾಯಿ ಹೊಲಿಯೋದೆ ಇರ್ಲಿ.
ಅದು ಒಂದು ವಿದ್ಯೆನೆ, ಅದು ಒಂದು ಕೆಲ್ಸಾನೆ.." ಅನ್ನೋಳು.
--
ನಮ್ಮ ಮನೆಯಲ್ಲಿ ಎಲ್ಲ ಗಂಡಸರಿಗು ತಕ್ಕ ಮಟ್ಟಿಗಿನ ಅಡಿಗೆ ಗೊತ್ತು. ಅದಕ್ಕೂ ಅಜ್ಜಿನೆ ಕಾರಣ. ಅದೂ ಒಂದು ವಿದ್ಯೆ.
ಗಂಡಸರಿಗೆ ಅವಳು ಹೇಳಿದ್ದು ಎಷ್ಟೊಂದು, ಮನೆಯಲ್ಲಿ ಹೆಣ್ಣು ಮಕ್ಳು ತಿಂಗಳ ದಿನದಲ್ಲಿದ್ದಾಗ ದೇವರ ಪೂಜೆ ಮಾಡೋ ಹಾಗಿಲ್ಲ.
ಆವಾಗ ಗಂಡಸರೇ ಪೂಜೆ ಮಾಡಬೇಕು, ದೇವರು ತೊಳ್ದು, ಕುಂಕುಮ, ದೀಪ, ಉದಿನ ಕಡ್ಡಿ ಹಚ್ಹ್ಚಾಕ್ ಎಷ್ಟ್ಹೊತ್ತು ಬೇಕು ನಿಮಗ, ಮೊದ್ಲು ಅದು ಕಲೀರಿ.!
ಅವಳ ಪ್ರಕಾರ ಯಾವ ಕೆಲ್ಸಾನು ಚಿಕ್ಕದು ದೊಡ್ಡದು ಅಂತಿಲ್ಲ, ಕೆಲ್ಸಾ ಅಂದ್ರೆ ಒಂದು ವಿದ್ಯೆ.
ನಾನು ಪಿ.ಯು.ಸಿ ಫೇಲ್ ಆಗಿದ್ದೆ. ತುಂಬಾ ದಿನ ಎಲ್ಲಿಯೂ ಹೋಗಿರಲಿಲ್ಲ. ತುಂಬಾ ದಿನಗಳ ನಂತರ ಊರಿಗೆ ಹೋದಾಗ ಅಜ್ಜಿ ಪಕ್ಕ ಕೂಡಿಸಿಕೊಂಡು ಹೇಳಿದಳು,
ಕುಸ; ಕಲಿಲಿಕ್ಕ ಯಾವ ವಯಸ್ಸು ಆದ್ರ ಏನು ಹೀಂಗ ಬ್ಯಾಸರ ಮಾಡ್ಕೊಂಡು ಎಲ್ಲರ ಜೋಡಿ ಮಾತ್ ಬಿಟ್ರ ಹ್ಯಾಂಗ.
ನಿಮ್ಮ ದೊಡ್ಡಪ್ಪ ಗುರುಮೂರ್ತಿ (ಹಿರಿಮಗ) ಗೊಗಾ೦ವ್ (ಅಜ್ಜಿಯ ತವರು) ಕಳ್ಸಿದಾಗ ಅವನ ವಯಸ್ಸು ಎಷ್ಟ ಇತ್ತ ಗೊತ್ತ ನಿನಗ..?
ಬರೋಬರಿ ಹದಿನಾಲ್ಕು..! ಅವಾ ಸಾಲಿಗ ಹೋಗಿ ಓದಕ್ಕ ಶುರು ಮಾಡಿದ್ದು ಆ ವಯಸ್ಸಿನ್ಯಾಗ..!
ಅವ ಏನ್ ಆಗ್ಯಾನ ನಿನಗ ಗೊತ್ತದ..
ನನಗೆ ಆಶ್ಚರ್ಯ...!!
ನನ್ನ ದೊಡ್ಡಪ್ಪ ಓದಿದ್ದು, MA,LLB,IAS.
ಓದಿದ್ದ ನಾಲ್ಕು ಮಕ್ಕಳಲ್ಲಿ ಒಬ್ಬ, ಐ.ಎ.ಎಸ್, ಡಾಕ್ಟರ್, ಸರಕಾರೀ ನೌಕರ, ಮೆಡಿಕಲ್ ಅಂಗಡಿ.
"ಎಂಟು ಮಕ್ಕಳು-ಸೊಸೆಯಂದಿರು, ಇಪ್ಪತ್ತನಾಲ್ಕು ಮೊಮ್ಮಕ್ಕಳು. ಮೂವತ್ತೆಂಟು ಮರಿಮೊಮ್ಮಕ್ಕಳು.."
ಇವತ್ತು ನಾವೆಲ್ಲಾ ಬೇರೆ ಬೇರೆ ಊರಲ್ಲಿ ಇದಿವಿ, ಮನಸ್ಸುಗಳು ಒಂದೇ ಆಗಿವೆ. ಇದಕ್ಕೆಲ್ಲ ಮುಖ್ಯ ಕಾರಣ ಅಜ್ಜಿ.
ಅಜ್ಜ ಹೋಗಿ ಹತ್ತು ವರ್ಷ ಆಯ್ತು, ನಮ್ಮ ಕುಟುಂಬದಲ್ಲಿ ತುಂಬಾ ದುಖದ ವಿಷಯ, ಗುರುಮೂರ್ತಿ ದೊಡ್ಡಪ್ಪನ ಸಾವು.
ಎಂಟು ವರ್ಷದ ಹಿಂದೆ, ಹೃದಯಘಾತದಿಂದ ನಮ್ಮನ್ನೆಲ್ಲ ಅಗಲಿದರು.
ಹದಿನಾಲ್ಕನೇ ವಯಸ್ಸಿಗೆ ಓದಲು ಶುರು ಮಾಡಿ, ಐ.ಎ.ಎಸ್ ಅಧಿಕಾರಿ ಆಗಿ ನಿವ್ರತ್ತರಾದ ಬಳಿಕವು, "ವನರಾಯಿ" ಎಂಬ ಸಂಸ್ತೆಯಲ್ಲಿ ಸೇವೆ ಸಲ್ಲಿಸಿದರು.
'ರಗಡಿತ ಕಣ್ ವಾಳುಚೆ' ಮರಾಠಿಯಲ್ಲಿ ಅವರ ಆತ್ಮಚರಿತ್ರೆ ಇದೆ.
ಓದಿದ್ದು ಮರಾಠಿ ಮಾಧ್ಯಮದಲ್ಲಾದರು ಕನ್ನಡ ಮರೆಯಲಿಲ್ಲ, ಕರ್ನಾಟಕ ಅಂದರೆ ಅವರು ತಪ್ಪದೆ ಹೇಳುತ್ತಿದ್ದು ಇಬ್ಬರ ಹೆಸರು.
'ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗು ಡಾ.ರಾಜಕುಮಾರ್. '
ನಮ್ಮ ಅಜ್ಜಿಗೆ ತುಂಬಾ ನೋವಿನ ಸಂಗತಿ ದೊಡ್ಡಪ್ಪನ ಸಾವು, ಕಣ್ಣ ಮುಂದ ಮಗ ಸತ್ತ ಅನ್ನೋದು.
ಬದುಕಿದ್ದಿದ್ದರೆ ದೊಡ್ಡಪ್ಪನಿಗೆ ೭೭ ವಯಸ್ಸು ಆಗಿರ್ತಿತ್ತು. ಅಜ್ಜಿಗೆ ತೊಂಬತ್ತು ದಾಟಿ ಎಷ್ತಾಯ್ತೋ ಗೊತ್ತಿಲ್ಲ.
ಸ್ವಲ್ಪ ಕಣ್ಣು ಮಂಜಾಗಿದೆ, ಕಿವಿ ಸ್ವಲ್ಪ ಮಂದವಾಗಿದೆ, ಅಷ್ಟೇ. ಅವಳು ಇನ್ನು ಬಲು ಗಟ್ಟಿ.
ನನಗೆ, ನಮ್ಮ ಈಡಿ ಕುಟುಂಬಕ್ಕೆ ಅವಳು ಮಾಡಿದ್ದು ತುಂಬಾ ಇದೆ.
ಹೆಣ್ಣು ಅಂದಾಗ, ನನ್ನ ಅಜ್ಜಿ ನನಗೆ ಆದರ್ಶ. ನಮ್ಮ ಕುಟುಂಬಕ್ಕೂ.
ನನ್ನ ಅಜ್ಜಿ ಸಾತವ್ವ. ಅಜ್ಜಿ ಅಂದ್ರೆ ನನಗೆ ತುಂಬಾ ಇಷ್ಟ..
ಅವಳಿಗೆ ನನ್ನ ಅನಂತ ನಮನಗಳು.
ಮಹಿಳಾ ದಿನಾಚರಣೆಯ ಶುಭಾಶಯಗಳು.
*****
-ಅನಿಲ್ ಬೇಡಗೆ
Mar 9, 2011
ಮೊಣಕಾಲಿನವರೆಗೆ ಪ್ಯಾಂಟು ಮಡಿಚಿ
ಈ ಕಿನಾರೆಯುದ್ದಕ್ಕೂ ನಡೆಯುತ್ತಿದ್ದೆವು
ಕಟ್ಟ ಕಡೆ ಅಲೆಗಳಲ್ಲಿ ಅವಳಿರುತ್ತಿದ್ದಳು
ಅವಳ ಕೈಹಿಡಿದು ನಾನು ಒಣ ಮರಳಲ್ಲಿ ನಡೆಯುತ್ತಿದ್ದೆ;
ಉಳಿಯುತ್ತಿದ್ದವು ನನ್ನ ಒಂಟಿ ಹೆಜ್ಜೆಗಳು
**
ಅಲೆಗಳು ಸೂಚನೆ ಕೊಟ್ಟಿದ್ದವು ಮೊದಲು
ನನ್ನೋಳಗಾಗ : ತಣ್ಣಗಿರಲಿ ನನ್ನವಳ ಅಂಗಾಲು
ಅದೇ ಕಿನಾರೆಯಲ್ಲಿ ನಾನೊಬ್ಬನೇ ನಡೆದು ಬಂದೆ
ಈಗಲೂ ನನ್ನ ಒಂಟಿ ಹೆಜ್ಜೆಗಳು
**
ಕಡೆಯ ಅಲೆಗಳಲ್ಲಿ ಕಾಲಿಳಿಬಿಟ್ಟು,
ಖಾಲಿ ನೀಲಿ ನೋಡುತ್ತಾ ಮಲಗಿರುವೆ
ನನ್ನ ಪಾದದ ಬಿಸಿಗೆ ಅದೆಷ್ಟೋ ಮರಳ ಹರಳುಗಳು ಒಣಗುತಿವೆ
ಅವಳು ಜೋತೆಗಿದ್ದಾಗಿನಂತೆ,
ಈಗಲೂ ಮನೆಗೆ ಹೋಗಬೇಕು !
ನನ್ನ ಅಪ್ಪಿಕೊಳ್ಳಲು ಬರುತ್ತಲಿದೆ ರಾತ್ರಿ
ಅವಳಿಗಿಂದು ಮೊದಲರಾತ್ರಿ
ಅದೆಲ್ಲಿಯದೋ ಗಟ್ಟಿಮೇಳ, ಶಹನಾಯಿ ಸದ್ದು
ಇನ್ನೂ ಕೇಳುತ್ತಲೇಯಿದೆ
ಸುಮ್ಮನೆ ಬೆಚ್ಚನೆಯ ಕಣ್ಣೀರು ಜಾರುತಿದೆ
=====
=====
Mar 2, 2011
ಕಾದಿರುವಳು ರಾಧೆ
ನೆನಪಿನಲೆಗಳ ಮುಂದೆ
ತನ್ನ ತಾ ಮರೆತು, ಒಂದಾಗುತಿಹಳು
ಸಂಜೆಗೆಂಪಿನೊಳಗೆ
ತುಸು ಬೇಗನೆ ಬಂದಿಲ್ಲಿ ದಾರಿ ನೋಡುವಳು
ಅವನು 'ಏಕಿಷ್ಟು ಬೇಗನೆ ಬರುವೆಯೆಂದರೆ'
ಇವಳದು ಅದೇ ರಾಗ:
'ಕಾಯಿಸುವವನಿಗೇನು ಗೊತ್ತು
ಕಾಯುವ ಸುಖ'
**
ಹತ್ತಿರ ಹತ್ತಿರ ಇನ್ನೂ ಹತ್ತಿರ ಬರುವನು
ಗೋಧೂಳಿಯ ಘಮದ ಸುಮ.
ಅವನ ಮೀಸೆಯಂಚಲ್ಲಿ ಧೂಳು ಧೂಳು ಪರಾಗ !
ಪ್ರತಿಸಂಜೆ ರಾಧೆಯಲ್ಲಿ ಹೊಸ ಪುಳಕ
ಬಂದ ಗೊಲ್ಲ, ಇವಳ ಗಲ್ಲ ತಟ್ಟಿ,
ಉತ್ತರ ಗೊತ್ತಿದ್ದರೂ ಕೇಳುವ: 'ತುಂಬಾ ಹೊತ್ತಾಯಿತಾ?'
ಅಲೆಗಳಾಗ ಶಾಂತ ಶಾಂತ
ಮೆಲ್ಲಗೆ ಅವನ ನೋಡುವಳು-
ರಾಧೆಯ ಬೆರಗುಗಣ್ಣಿನಲ್ಲಿ ಸುಕೋಮಲ ಕೋಪ, ಕೋಪಶಮನ, ಉರಿ !
**
ಕಾದು ಕಾದು
ಎಲ್ಲವನು ತೋರಿ
ತಾನೇ ಕಾಣದಾಗುವಳು-ರಾಧೆ.
ಮತ್ತೆ ಮತ್ತೆ ಕಾಯುವಳು
ಅಲೆಗಳಾ ಮುಂದೆ !
ರಾಧೆ ರಾಧೆ ಎಲ್ಲರಲೂ ಹರಿವ ಸುಧೆ
ಅವಳು, ಅವಳ ಅಭಿಸಾರ- ನಿರಂತರ . . . .
=====
=====