
ಇಂದು ೩೧ ಜನವರಿ 'ವರಕವಿ ಅಂಬಿಕಾತನಯದತ್ತ' (ದತ್ತಾತ್ರೇಯ ರಾಮಚಂದ್ರ ಬೇಂದ್ರೆ) ಅವರ ಜನ್ಮದಿನ (ಜನನ: ೩೧-೦೧-೧೮೯೬, ಧಾರವಾಡ. ಮರಣ: ೨೬-೧೦- ೧೯೮೧,ಮುಂಬೈ)
ಆ ಮಹಾಚೇತನ ಹಳ್ಳಿ ಸೊಗಡಿನ ಕನ್ನಡ ಭಾಷೆಗೊಂದು ಚೆಂದದ ಹೊಸ ಆಯಾಮ ನೀಡಿ ತಮ್ಮೆಲ್ಲ ಕವನಗಳಲ್ಲಿ ತೀವ್ರವಾಗಿ ಬಳಸಿಕೊಂಡರು.
ಕವಿ ಶ್ರೇಷ್ಠ ಬೇಂದ್ರೆಯವರಿಗೆ ಸಾಹಿತ್ಯ ರಸಿಕರೆಲ್ಲರ ಪರವಾಗಿ ತುಂಬು ಹೃದಯದ ಶುಭಾಷಯಗಳು.
'ಅಂಬಿಕಾತನಯನಿಗೆ ಕರೆಯೋಲೆ'
ಕನ್ನಡ ತಾಯಿ ಹರಕೆ ಹೊತ್ತು ಹಡೆದ ಮಗ ನೀನು
ಪಾಠ ಹೇಳಿಕೊಟ್ಟು, ಕವನ ಬರೆದುಕೊಟ್ಟು,
ಹಕ್ಕಿ ಪಿಕ್ಕಿ ಗಿಡ ಮರ ಮಂಜು ಮುಸುಕು
ಚಿಟ್ಟೆ ನದಿ ಹಳ್ಳ ಕೊಳ್ಳ ದೇವರು ದಿಂಡರು
ಹಬ್ಬ ಹರಿದಿನಗಳಿಗೊಂದು ಬದುಕು ಕಟ್ಟಿಕೊಡುತ್ತಾ
ಮುಗಿಲನೇರಿ ಹೊರಟು ಹೋದೆಯಲ್ಲ ಸೂರ್ಯ ಚಂದ್ರ ಚುಕ್ಕಿಗಳ
ಮುಟ್ಟಲು, ಸ್ವರ್ಗದಲೊಂದು ಕಾವ್ಯ ಲೋಕ ಕಟ್ಟಲು.
'ಕೃಷ್ಣ ಕುಮಾರಿ'ಯನ್ನ 'ಉಯ್ಯಾಲೆ'ಯಲ್ಲಿ ಕೂರಿಸಿ
ಸುಖವಾದ 'ಸಖಿಗೀತ'ವನ್ನು ಹಾಡಿದೆ
ನಿನ್ನ 'ಹಾಡು-ಪಾಡು'ಗಳಿಗೆ ಅವಳ 'ಹೃದಯ ಸಮುದ್ರ'ದಲ್ಲಿ
'ಕಾಮಕಸ್ತೂರಿ' , 'ಮುಗಿಲ ಮಲ್ಲಿಗೆ' ಅರಳುವಂತೆ ಮಾಡಿದೆ.
'ಕನ್ನಡ ಮೇಘದೂತ'ನ 'ಗರಿ'ಯಿಂದ 'ನಾಕುತಂತಿ'ಯ ಮೀಟಿದೆ
ಇಂದಿಗೂ 'ನಾದಲೀಲೆ' 'ಜೀವಲಹರಿ'ಯಾಗಿ 'ಮುಕ್ತಕಂಠ'ದಿಂದ ಹೊರಹೊಮ್ಮುತಿದೆ.
'ಮತ್ತೆ ಶ್ರಾವಣ ಬಂತು' ಅನ್ನುವ ಹಾಗೆ ಮತ್ತೆ ಬಾ.
ಕವಿ ಸಾಮ್ರಾಟನೆ ನಿನಗೆ ಸಾವಿರ ಸಾವಿರ 'ನಮನ'.
ಮತ್ತೆ ಬಾ ಸಾಧನಕೇರಿಗೆ, ನೀನಿಲ್ಲದೆ ಸೊರಗಿಹೊಗುತಿರುವ ಈ ಮಣ್ಣಿಗೆ.
=====
=====